
ಮಹಿಳಾ ದಿನಾಚರಣೆಯ ಶುಭಾಷಯಗಳು
WOMEN'S DAY SPECIAL | ನಿನಗೆ ಬೇರೆ ಹೆಸರು ಬೇಕೆ? ಸ್ತ್ರೀ ಎಂದರೆ ಅಷ್ಟೇ ಸಾಕೆ?
ಮಹಿಳೆಯರ ಹೋರಾಟವನ್ನು ಗೌರವಿಸಲು ಮತ್ತು ಅವರ ಕನಸುಗಳ ಸಾಕಾರಕ್ಕೆ ಅವಕಾಶ ನೀಡುತ್ತದೆ. ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರ ಕವಿ ವಾಣಿ- ದ ಫೆಡರಲ್ ಕರ್ನಾಟಕದ ಆಶಯ ಕೂಡಾ...
ಮಹಿಳೆ ಭಾವಜೀವಿಯೂ ಹೌದು.. ಶಕ್ತಿಯೂ ಹೌದು. ಪ್ರತಿ ಮುಂಜಾವಿನಲ್ಲಿ ಹೊಸ ಕನಸು, ಹೊಸ ಭರವಸೆಯೊಂದಿಗೆ ನಾಳೆಗಳ ಆರಂಭಿಸುವ ಹೆಣ್ಣಿಗೆ ಅದು ಬರೀ ಜೀವನವಷ್ಟೇ ಅಲ್ಲ, ದಣಿವರಿಯದ ನಿತ್ಯ ಹೋರಾಟ. ಹೆಜ್ಜೆ ಹೆಜ್ಜೆಗೂ ಎದುರಾಗುವ ಸವಾಲು, ಸಂಕಷ್ಟಗಳ ಮಧ್ಯೆ ಸತಿಯಾಗಿ, ತಾಯಿಯಾಗಿ, ಮಗಳಾಗಿ, ಗೆಳತಿಯಾಗಿ ಪಾತ್ರ ನಿರ್ವಹಿಸುವ ಮೂಲಕ ಸಮಾಜದ ಕಣ್ಣಾಗಿ ಬೆಳಗುತ್ತಿದ್ದಾಳೆ. ಕುಟುಂಬದ ನೊಗ ಹೊರುವ ಜೊತೆಗೆ ವಿವಿಧ ಕ್ಷೇತ್ರಗಳಲ್ಲೂ ಹೆಣ್ಣು ತನ್ನ ಸಾಮರ್ಥ್ಯವನ್ನು ಒರೆಗೆ ಹಚ್ಚುತ್ತಿದ್ದಾಳೆ. ಆಕೆಯ ಸವಾಲಿನ ಜೀವನವೇ, ಸಮಾಜಕ್ಕೆ ಪ್ರೇರಣಾದಾಯಕವಾಗಿದೆ.
ಇಂದು (ಮಾ.8) ಪ್ರಪಂಚದಾದ್ಯಂತ ಮಹಿಳಾ ದಿನದ ಸಂಭ್ರಮ. ಮಹಿಳೆಯರ ಶಕ್ತಿ ಮತ್ತು ಸಾಧನೆಗಳನ್ನು ಗೌರವಿಸುವ ದಿನವೂ ಆಗಿದೆ. ಮಹಿಳೆಯರ ಹೋರಾಟವನ್ನು ಗೌರವಿಸಲು ಮತ್ತು ಅವರ ಕನಸುಗಳ ಸಾಕಾರಕ್ಕೆ ಅವಕಾಶ ನೀಡುತ್ತದೆ.
ಮಹಿಳೆಯರು ಎಷ್ಟು ವಿಶೇಷ ಎಂಬ ಅರಿವು ಮೂಡಿಸುತ್ತದೆ. ಸ್ವಾತಂತ್ರ್ಯದ ನಂತರ ಭಾರತದಲ್ಲಿ ನಿರಂತರ ಸುಧಾರಣೆಗಳ ಮೂಲಕ ಪುರುಷರಂತೆ ಮಹಿಳೆಯರೂ ಸಬಲೀಕರಣಗೊಂಡಿದ್ದಾರೆ. ಇಂದು ಮಹಿಳೆಯರು ಸ್ವಾವಲಂಬಿ ಮತ್ತು ಸ್ವತಂತ್ರರು.
ಕೆಲವೊಮ್ಮೆ ಮಹಿಳೆಯರು ಊಹಿಸದ ಕಷ್ಟಗಳಿಗೆ ಸಿಲುಕಿಕೊಳ್ಳಬೇಕಾಗುತ್ತದೆ. ಆಧುನಿಕ ಕಾಲದ ಮಹಿಳೆಯರು ತನ್ನ ಮನೆಯ ಹೊಸ್ತಿಲಿನಿಂದ ಹೊರಬಂದು ದುಡಿಯುವ ಮಹಿಳೆಯರ ಸಾಲಿನಲ್ಲಿ ತಮ್ಮನ್ನು ತಾವು ಅರ್ಪಿಸಿಕೊಂಡಾಗ ಮಹಿಳೆಯ ಶಕ್ತಿ ಇನ್ನಷ್ಟು ಬಲಗೊಳ್ಳುತ್ತದೆ.
ಗಾಡಿಯಲ್ಲಿ ತರಕಾರಿ ಮಾರಾಟ ಮಾಡುವುದರಿಂದ ಹಿಡಿದು ದೊಡ್ಡ ಉದ್ಯಮ ನಡೆಸುವವರೆಗೂ ಮಹಿಳಾ ಸಬಲೀಕರಣಕ್ಕೆ ವ್ಯಾಪ್ತಿ ಹೆಚ್ಚಿದೆ. ಮಹಿಳೆಯರು ಸ್ವಂತ ಉದ್ಯಮ ಆರಂಭಿಸುವ ಉತ್ಸಾಹ ಹೆಚ್ಚಿಸಿದ್ದಾರೆ. ಸ್ಟಾರ್ಟ್ಅಪ್ ಗಳ ಆರಂಭ, ಸ್ವಾವಲಂಬಿ ಜೀವನದ ಮೂಲಕ ಆರ್ಥಿಕ ಗುಲಾಮಗಿರಿಯಿಂದ ಮಹಿಳೆಯರನ್ನು ಮುಕ್ತಗೊಳಿಸಿದೆ.
ಮಳೆಯರು ತಮ್ಮ ಭಾವನಾತ್ಮಕ ಶಕ್ತಿಯಿಂದ ಜನರನ್ನು ಒಗ್ಗೂಡಿಸುವ ಪ್ರಯತ್ನ ಮಾಡುತ್ತಾರೆ. ಮಹಿಳೆಯರು ಅಪ್ರತಿಮ ಬುದ್ಧಿಶಾಲಿಗಳೂ ಹೌದು. ಯಾವುದೇ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುವ, ನಿರ್ವಹಿಸುವ, ಕಾರ್ಯರೂಪಕ್ಕೆ ತರುವಲ್ಲಿ ನಿಸ್ಸೀಮರು. ನಾಯಕತ್ವಕ್ಕೂ ಸೈ ಎನಿಸಿದ್ದಾರೆ.
ಮಹಿಳೆಯು ಯಾವುದೇ ಜವಾಬ್ದಾರಿಯನ್ನು ತನ್ನ ಹೃದಯ, ಬುದ್ದಿಯಿಂದ ನಿರ್ವಹಿಸುತ್ತಾಳೆ. ಆದ್ದರಿಂದಲೇ ಕುಟುಂಬದಲ್ಲಿ ಏನಾದರೂ ಭಿನ್ನಾಭಿಪ್ರಾಯ ಬಂದಲ್ಲಿ ಅವುಗಳನ್ನು ನಿವಾರಿಸುವ ದಾರಿಯನ್ನು ಮಹಿಳೆ ಕಂಡುಕೊಳ್ಳುತ್ತಾಳೆ.
ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರ ಕವಿ ವಾಣಿ ದ ಫೆಡರಲ್ ಕರ್ನಾಟಕದ ಆಶಯ ಕೂಡಾ... ಆ ಕವಿವಾಣಿ ಇಲ್ಲಿದೆ..
ಆಕಾಶದ ನೀಲಿಯಲ್ಲಿ
ಚಂದ್ರ ತಾರೆ ತೊಟ್ಟಿಲಲ್ಲಿ
ಬೆಳಕನಿಟ್ಟು ತೂಗಿದಾಕೆ
ನಿನಗೆ ಬೇರೆ ಹೆಸರು ಬೇಕೆ
ಸ್ತ್ರೀ ಎಂದರೆ ಅಷ್ಟೇ ಸಾಕೆ
ಹಸುರನುಟ್ಟ ಬೆಟ್ಟಗಳಲಿ
ಮೊಲೆಹಾಲಿನ ಹೊಳೆಯನಿಳಿಸಿ
ಬಯಲ ಹಸುರ ನಗಿಸಿದಾಕೆ
ನಿನಗೆ ಬೇರೆ ಹೆಸರು ಬೇಕೆ?
ಸ್ತ್ರೀ ಎಂದರೆ ಅಷ್ಟೇ ಸಾಕೆ?
ಮರ ಗಿಡ ಹೂ ಮುಂಗುರುಳನು
ತಂಗಾಳಿಯ ಬೆರಳ ಸವರಿ
ಹಕ್ಕಿ ಗಿಲಕಿ ಹಿಡಿಸಿದಾಕೆ
ನಿನಗೆ ಬೇರೆ ಹೆಸರು ಬೇಕೆ?
ಸ್ತ್ರೀ ಎಂದರೆ ಅಷ್ಟೇ ಸಾಕೆ?
ಮನೆಮನೆಯಲಿ ದೀಪ ಮುಡಿಸಿ
ಹೊತ್ತು ಹೊತ್ತಿಗೆ ಅನ್ನ ಉಣಿಸಿ
ತಂದೆ ಮಗುವ ತಬ್ಬಿದಾಕೆ
ನಿನಗೆ ಬೇರೆ ಹೆಸರು ಬೇಕೆ?
ಸ್ತ್ರೀ ಎಂದರೆ ಅಷ್ಟೇ ಸಾಕೆ?
ದುಡಿಯುವ, ದುಡಿದು ಬೆವರುವ, ಬೆವರಿ ಬದುಕ ಪೊರೆಯುವ ಮಹಿಳೆಗೆ ದ ಪೆಡರಲ್ ಕರ್ನಾಟಕದ ದೃಶ್ಯ ನಮನ.