
ಪ್ಲಾಸ್ಟಿಕ್ ಕವರ್ ಬಳಕೆಯಿಂದ ಇಡ್ಲಿಯಲ್ಲಿ ಹಾನಿಕಾರಕ ವಸ್ತು ಕಂಡು ಬಂದಿದೆ
Cancer Cause | ಇಡ್ಲಿಗೆ ಬಳಸುವ ಪ್ಲಾಸ್ಟಿಕ್ ನಿಷೇಧ; ಹೋಟೆಲ್‌ಗಳ ಮೇಲೆ ಅಧಿಕಾರಿಗಳ ದಾಳಿ
ಬೆಂಗಳೂರಿನ ಹಲವು ಹೋಟೆಲ್‌ಗಳಲ್ಲಿ ಶುಕ್ರವಾರ ತಪಾಸಣೆ ನಡೆಸಿದ ಅಧಿಕಾರಿಗಳು ಇಡ್ಲಿಗೆ ಕವರ್ ಬಳಕೆ ಮಾಡುತ್ತಿರುವ ಬಗ್ಗೆ ಪರಿಶೀಲನೆ ನಡೆಸಿದರು.
ಇಡ್ಲಿ ತಯಾರಿಕೆಯಲ್ಲಿ ಪ್ಲಾಸ್ಟಿಕ್ ಕವರ್ ಬಳಕೆಗೆ ರಾಜ್ಯ ಸರ್ಕಾರ ನಿಷೇಧ ಹೇರಿದ ಬೆನ್ನಲ್ಲೇ ಆರೋಗ್ಯ ಇಲಾಖೆ ಅಧಿಕಾರಿಗಳು ಶುಕ್ರವಾರ ಬೆಂಗಳೂರಿನ ವಿವಿಧೆಡೆ ಹೋಟೆಲ್‌ಗಳ ಮೇಲೆ ದಾಳಿ ನಡೆಸಿದ್ದು, ಪರಿಶೀಲನೆ ನಡೆಸಿದ್ದಾರೆ.
ಇಡ್ಲಿಯಲ್ಲಿನ ಹಾನಿಕಾರಕ ಅಂಶವು ಕ್ಯಾನ್ಸರ್‌ಗೆ ಕಾರಣವಾಗಬಹುದು ಎಂಬುದು ಆರೋಗ್ಯ ಇಲಾಖೆಯ ಪ್ರಯೋಗದ ವರದಿಯಲ್ಲಿ ತಿಳಿದುಬಂದಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಗುರುವಾರವಷ್ಟೇ ಹೋಟೆಲ್, ಉಪಾಹಾರ ಕೇಂದ್ರಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಿತ್ತು.
ಆರೋಗ್ಯ ಇಲಾಖೆ ಅಧಿಕಾರಿಗಳು ಬೆಂಗಳೂರಿನ ಹಲವು ಕಡೆಗಳಲ್ಲಿ ಹೋಟೆಲ್‌ಗಳಲ್ಲಿ ತಪಾಸಣೆ ನಡೆಸಿದರು. ಈ ವೇಳೆ ಅಪಾರ ಪ್ರಮಾಣದ ಪ್ಲಾಸ್ಟಿಕ್ ಕವರ್‌ಗಳು ದೊರೆತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಹಾಗೂ ಆಹಾರ ಇಲಾಖೆ ಇತ್ತೀಚೆಗೆ ವಿವಿಧ ಹೋಟೆಲ್‌ಗಳಿಂದ 251 ಇಡ್ಲಿ ಸ್ಯಾಂಪಲ್‌ಗಳನ್ನು ಸಂಗ್ರಹಿಸಿತ್ತು. ಇದರಲ್ಲಿ 51 ಇಡ್ಲಿ ಸ್ಯಾಂಪಲ್‌ಗಳು ಅಸುರಕ್ಷಿತ ಎಂಬುದು ಪ್ರಯೋಗಾಲಯದ ವರದಿಯಿಂದ ತಿಳಿದು ಬಂದಿತ್ತು. ಪರೀಕ್ಷೆಗೆ ಒಳಪಡಿಸಿದ ಇಡ್ಲಿಯಲ್ಲಿ ಕ್ಯಾನ್ಸರ್ ಕಾರಕ ಕಾರ್ಸಿನೋಜಿನಿಕ್ ಅಂಶ ಪತ್ತೆಯಾಗಿದೆ. ಪ್ಲಾಸ್ಟಿಕ್ ಬಳಕೆಯಿಂದಲೇ ಇಡ್ಲಿಯಲ್ಲಿ ಕಾರ್ಸಿನೋಜೆನಿಕ್ ಅಂಶ ಸೇರಿದೆ ಎಂದು ವರದಿ ಹೇಳಿತ್ತು.
ಹೋಟೆಲ್‌ಗಳಲ್ಲಿ ಇಡ್ಲಿ ತಯಾರಿಕೆಗೆ ಮೊದಲು ಹತ್ತಿ ಬಟ್ಟೆ ಬಳಸಲಾಗುತ್ತಿತ್ತು. ಆದರೆ, ಹೆಚ್ಚಿನ ಹೋಟೆಲ್‌ಗಳಲ್ಲಿ ಪ್ಲಾಸ್ಟಿಕ್ ಬಳಸಲಾಗುತ್ತಿದೆ. ಇದರಿಂದ ಕ್ಯಾನ್ಸರ್‌ಗೆ ಕಾರಣವಾದ ಕಾರ್ಸಿನೋಜೆನಿಕ್ ಅಂಶ ಪತ್ತೆಯಾಗಿದೆ ಎಂಬ ಆತಂಕಕಾರಿ ಮಾಹಿತಿ ಹೊರಬಿದ್ದಿತ್ತು.
ರಾಜ್ಯದಲ್ಲಿ ಕಬಾಬ್, ಗೋಬಿ ಮಂಚೂರಿ ಹಾಗೂ ಕ್ಯಾಂಡಿಗಳಲ್ಲಿ ಬಳಸುವ ಕೃತಕ ಬಣ್ಣದಲ್ಲೂ ಕ್ಯಾನ್ಸರ್‌ಕಾರಕ ವಸ್ತುಗಳು ಇರುವುದು ಪತ್ತೆಯಾಗಿತ್ತು. ಆ ಬಳಿಕ ಕೃತಕ ಬಣ್ಣ ಬಳಸುವುದನ್ನು ಸರ್ಕಾರ ನಿಷೇಧಿಸಿತ್ತು.
ಬಟಾಣಿಗೂ ಕೃತಕ ಬಣ್ಣ
ಇಡ್ಲಿ ಮಾತ್ರವಲ್ಲದೇ ಬಟಾಣಿಯಲ್ಲೂ ಕೃತಕ ಬಣ್ಣ ಬಳಸುತ್ತಿದ್ದು, ಆರೋಗ್ಯಕ್ಕೆ ಹಾನಿಕಾರಕ ಎಂಬುದು ಬೆಳಕಿಗೆ ಬಂದಿದೆ. ಈ ಸಂಬಂಧ ಕೂಡ ಆಹಾರ ಇಲಾಖೆ ಅಧಿಕಾರಿಗಳು 36 ಮಾದರಿಗಳನ್ನು ಸಂಗ್ರಹಿಸಿದ್ದು, 28 ಸ್ಯಾಂಪಲ್ಗಳಲ್ಲಿ ಬಣ್ಣ ಲೇಪನ ಇರುವುದು ಪತ್ತೆ ಆಗಿದೆ ಎಂದು ತಿಳಿದುಬಂದಿದೆ.
ಕೃತಕ ಬಣ್ಣ ಬೆರಕೆ ಮಾಡುವವರ ಮೇಲೆ ಕ್ರಮ ತೆಗೆದುಕೊಳ್ಳುವ ಭರವಸೆಯನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ನೀಡಿದ್ದಾರೆ.