
Namma Metro Fare Hike | ಭಾರೀ ದರ ಏರಿಕೆ ಎಫೆಕ್ಟ್: ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆ ಕುಸಿತ
ಮೆಟ್ರೋ ಪ್ರಯಾಣ ದರ ಏರಿಕೆಯಿಂದಾಗಿ ಪ್ರಯಾಣಿಕರ ಮೇಲೆ ಹೆಚ್ಚಿನ ಪರಿಣಾಮ ಬೀರಿದ್ದು, ಪರಿಣಾಮವಾಗಿ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ.
ಕಳೆದ ಭಾನುವಾರದಿಂದ ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆಯಾಗಿದ್ದು, ಈ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ಮೆಟ್ರೋ ಪ್ರಯಾಣದರ ಏರಿಯು ಕಡಿಮೆ ದೂರದ ಪ್ರಯಾಣಿಕರ ಮೇಲೆ ಹೆಚ್ಚಿನ ಪರಿಣಾಮ ಬೀರಿದ್ದು, ಕೆಲವು ಸ್ಥಳಗಳಲ್ಲಿ ಶೇ.80 ರಿಂದ 100ರಷ್ಟು ಹೆಚ್ಚಿನ ದರವನ್ನು ಪಾವತಿಸಬೇಕಾಗಿದೆ.
ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ಶೇ50 ರಷ್ಟು ಪ್ರಯಾಣ ದರ ಹೆಚ್ಚಳ ಮಾಡಲಾಗಿದೆ ಎಂದು ಹೇಳಿಕೊಂಡಿದ್ದರೂ, ಮಧ್ಯಮ ಮತ್ತು ಕಡಿಮೆ ಅಂತರದ ನಿಲ್ದಾಣಗಳ ನಡುವೆ ಪ್ರಯಾಣಿಸುವ ಪ್ರಯಾಣಿಕರು ಶೇಕಡಾ 80ಕ್ಕೂ ಅಧಿಕ ದರ ಹೆಚ್ಚಳಕ್ಕೆ ಈಡಾಗಿದ್ದಾರೆ.
ಶೇ.6ರಷ್ಟು ಕುಸಿತ ಕಂಡ ಪ್ರಯಾಣಿಕರ ಸಂಖ್ಯೆ
ಈ ನಡುವೆ ಮೆಟ್ರೋ ಪ್ರಯಾಣ ದರವನ್ನು ದಿಢೀರನೇ ಭಾರೀ ಪ್ರಮಾಣದಲ್ಲಿ ಏರಿಕೆ ಮಾಡಿದ ಪರಿಣಾಮ ಮೆಟ್ರೋ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಕುಸಿತವಾಗಿದೆ.
ಫೆಬ್ರವರಿ 10ರಂದು (ಸೋಮವಾರ) 8,28,149 ಜನರು ಹಾಗೂ ಫೆಬ್ರವರಿ 11ರಂದು (ಮಂಗಳವಾರ) 7,78,774 ಮಂದಿ ಮೆಟ್ರೊ ಪ್ರಯಾಣ ಮಾಡಿದ್ದಾರೆ. ಜನವರಿ 13ರ ಮಕರ ಸಂಕ್ರಾಂತಿ ರಜಾದಿನವನ್ನು ಹೊರತುಪಡಿಸಿ, ಈ ವರ್ಷದ ಉಳಿದ ನಾಲ್ಕು ಸೋಮವಾರಗಳಿಗೆ ಹೋಲಿಸಿದರೆ, ಫೆಬ್ರವರಿ 10ರಂದು ಪ್ರಯಾಣಿಸಿದವರ ಸಂಖ್ಯೆ ಶೇ.6ರಷ್ಟು ಕಡಿಮೆಯಾಗಿದೆ.
ಏರೋ ಇಂಡಿಯಾ 2025 ಇರುವುದರಿಂದ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಹೇಳಿದ್ದಾರೆ. ಆದರೆ ದರ ಪರಿಷ್ಕರಣೆಯ ನಂತರ ಕನಿಷ್ಠ ಟಿಕೆಟ್ ದರ 10 ರೂಪಾಯಿಗಳಾಗಿದ್ದು, ಗರಿಷ್ಠ ಟಿಕೆಟ್ ದರವನ್ನು ಶೇ.50 ರಷ್ಟು ಹೆಚ್ಚಿಸಲಾಗಿದ್ದು, 60 ರೂಪಾಯಿಗಳಿಂದ 90 ರೂಪಾಯಿಗಳಿಗೆ ಏರಿಕೆಯಾಗಿರುವುದೇ ಮೆಟ್ರೋ ಪ್ರಯಾಣಿಕರ ಕುಸಿತಕ್ಕೆ ಕಾರಣ ಎನ್ನಲಾಗಿದೆ.
ಸ್ಮಾರ್ಟ್ ಕಾರ್ಡ್ ದರ ಕೂಡ ಏರಿಕೆ
ದರ ಏರಿಕೆ ಮಾತ್ರವಲ್ಲದೆ, ಸ್ಮಾರ್ಟ್ ಕಾರ್ಡ್‌ಗಳಲ್ಲಿನ ಕನಿಷ್ಠ ಉಳಿತಾಯ ಮಿತಿಯನ್ನು ₹50ರಿಂದ ₹90ಕ್ಕೆ ಏರಿಸಿರುವ ಬಗ್ಗೆಯೂ ಟೀಕೆಗಳು ಕೇಳಿ ಬಂದಿವೆ. ಒಂದು ಬಾರಿಯ ಪ್ರಯಾಣಕ್ಕೆ ಬೇಕಾಗುವ ಗರಿಷ್ಠ ದರದಷ್ಟು ಮೊತ್ತ ಕಾರ್ಡ್‌ನಲ್ಲಿ ಇರಬೇಕು ಎಂದು ನಿಗಮದ ಅಧಿಕಾರಿಗಳು ಹೇಳಿದ್ದಾರೆ.
ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ ಮೊದಲು ಮೆಟ್ರೋ ದರ ಶೇ.105.15ರಷ್ಟು ಅಥವಾ ವರ್ಷದಿಂದ ವರ್ಷಕ್ಕೆ ಶೇ.14.02ರಷ್ಟು ಹೆಚ್ಚಳ ಮಾಡುವಂತೆ ಮನವಿ ಮಾಡಿತ್ತು. ಆದರೂ ದರ ನಿಗದಿ ಸಮಿತಿಯು ಶೇ.51.5 ರಷ್ಟು ಅಥವಾ ವರ್ಷದಿಂದ ವರ್ಷಕ್ಕೆ ಶೇ.6.87ರಷ್ಟು ಕಡಿಮೆ ಹೆಚ್ಚಳವನ್ನು ಶಿಫಾರಸು ಮಾಡಿದೆ.
ಸಾಲ ಪಾವತಿ ಬಾಧ್ಯತೆಗಳನ್ನು ಪೂರೈಸಲು, ಹೆಚ್ಚುತ್ತಿರುವ ಕಾರ್ಯಾಚರಣೆ ವೆಚ್ಚವನ್ನು ನಿರ್ವಹಿಸಲು ದರ ಪರಿಷ್ಕರಣೆ ಅನಿವಾರ್ಯವಾಗಿದೆ ಎಂದು ಬಿಎಂಆರ್‌ಸಿಎಲ್ ಒತ್ತಿ ಹೇಳಿದೆ. ನಮ್ಮ ಮೆಟ್ರೋ ಜೂನ್ 2017 ರಲ್ಲಿ ತನ್ನ ಪ್ರಯಾಣ ದರವನ್ನು ಹೆಚ್ಚಿಸಿತ್ತು.
ಮಾರ್ಚ್ 2017 ಮತ್ತು ಮಾರ್ಚ್ 2024 ರ ನಡುವೆ, ಬಿಎಂಆರ್‌ಸಿಎಲ್ ಸಿಬ್ಬಂದಿ ವೆಚ್ಚ ಗಮನಾರ್ಹವಾಗಿ ಹೆಚ್ಚಾಗಿದೆ. ಸಿಬ್ಬಂದಿ ವೆಚ್ಚವು ಶೇ. 42 ರಷ್ಟು ಹೆಚ್ಚಾಗಿದೆ. ಇಂಧನ ವೆಚ್ಚವು ಶೇ.34 ರಷ್ಟು ಹೆಚ್ಚಾಗಿದೆ. ನಿರ್ವಹಣೆ ಮತ್ತು ಆಡಳಿತ ವೆಚ್ಚಗಳು 366% ರಷ್ಟು ದುಬಾರಿಯಾಗಿದೆ ಎಂದು ಬಿಎಂಆರ್‌ಸಿಎಲ್ ಭಾರೀ ದರ ಏರಿಕೆಗೆ ಸಮರ್ಥನೆ ನೀಡಿತ್ತು.
2024-25 ರಿಂದ 2029-30 ರ ನಡುವೆ ಬಿಎಂಆರ್‌ಸಿಎಲ್ 10,422.2 ಕೋಟಿ ರೂ. ಸಾಲವನ್ನು ಹಿಂದಿರುಗಿಸಬೇಕಾಗುತ್ತದೆ. ಬೆಂಗಳೂರು ಮತ್ತು ದೆಹಲಿ ಮಹಾನಗರಗಳ ನಡುವಿನ ಹೋಲಿಕೆಗಳು ಸೂಕ್ತವಲ್ಲ ಎಂದೂ ಬಿಎಂಆರ್‌ಸಿಎಲ್ ಪ್ರತಿಪಾದಿಸಿದೆ.
ಆದರೆ, ನಿರ್ವಹಣಾ ವೆಚ್ಚ ಮತ್ತು ಹೊಸ ಯೋಜನೆಗಳಿಗಾಗಿ ಮಾಡಿರುವ ಸಾಲದ ನೆಪವೊಡ್ಡಿ ಪ್ರಯಾಣಿಕರ ಮೇಲೆ ಹೊರೆ ಹಾಕುವುದು ಎಷ್ಟು ಸರಿ? ಅಷ್ಟಕ್ಕೂ ನಮ್ಮ ಮೆಟ್ರೋ ಯೋಜನೆಗಾಗಿಯೇ ಸರ್ಕಾರದ ಅನುದಾನವಲ್ಲದೆ, ಇಂಧನ ಮತ್ತು ಲೇಔಟ್ ಸೆಸ್ ಸಂಗ್ರಹಿಸಲಾಗುತ್ತಿದೆ. ಅಷ್ಟಾಗಿಯೂ ಮತ್ತೆ ಪ್ರಯಾಣಿಕರನ್ನು ಲೂಟಿ ಮಾಡುವುದು ನ್ಯಾಯಸಮ್ಮತವಲ್ಲ ಎಂಬುದು ಪ್ರಯಾಣಿಕರ ಆಕ್ರೋಶ.