ಮೈಸೂರಿನಲ್ಲಿ ವಾಸ್ತವ್ಯ| ಪ್ರಧಾನಿ ಮೋದಿ ಹೊಟೆಲ್ ಬಿಲ್ ಬಾಕಿ ಭರಿಸಲು ರಾಜ್ಯ ಸರ್ಕಾರ ನಿರ್ಧಾರ
x

ಮೈಸೂರಿನಲ್ಲಿ ವಾಸ್ತವ್ಯ| ಪ್ರಧಾನಿ ಮೋದಿ ಹೊಟೆಲ್ ಬಿಲ್ ಬಾಕಿ ಭರಿಸಲು ರಾಜ್ಯ ಸರ್ಕಾರ ನಿರ್ಧಾರ

2023ರ ಏಪ್ರಿಲ್ ನಲ್ಲಿ ಈ ಕಾರ್ಯಕ್ರಮ ನಡೆದಾಗ, ವಿಧಾನಸಭಾ ಚುನಾವಣೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿತ್ತು ಹೀಗಾಗಿ ರಾಜ್ಯ ಸರ್ಕಾರ ಭಾಗಿ ಆಗಿರಲಿಲ್ಲ. ರಾಜ್ಯ ಲಾಂಛನದ ಬಳಕೆಯೂ ಆಗಿರಲಿಲ್ಲ. ಇದು ಸಂಪೂರ್ಣ ಎನ್.ಟಿ.ಸಿ.ಎ. ಕಾರ್ಯಕ್ರಮವಾಗಿತ್ತು. ಪ್ರಧಾನಿ ರಾಜ್ಯಕ್ಕೆ ಬಂದಿದ್ದ ಹಿನ್ನೆಲೆಯಲ್ಲಿ ಆತಿಥ್ಯ ನಿರ್ವಹಣೆಗಾಗಿ ಸ್ಥಳೀಯವಾಗಿ ರಚಿಸಲಾಗಿದ್ದ ಸಮಿತಿಯಲ್ಲಿ ರಾಜ್ಯದ ಅರಣ್ಯ ಇಲಾಖೆಯ ಅಧಿಕಾರಿಗಳು ಇದ್ದರು


ಕಳೆದ ವರ್ಷ ಏಪ್ರಿಲ್ ನಲ್ಲಿ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್.ಟಿ.ಸಿ.ಎ) ವತಿಯಿಂದ ರಾಜ್ಯದಲ್ಲಿ ಆಯೋಜಿಸಲಾಗಿದ್ದ ಹುಲಿ ಯೋಜನೆ– 50 ಮೈಸೂರಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಆತಿಥ್ಯದ ಬಿಲ್ ಬಾಕಿಯನ್ನು ಸೌಹಾರ್ದಯುತವಾಗಿ ಇತ್ಯರ್ಥಪಡಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಹುಲಿ ಯೋಜನೆಗೆ 50 ವರ್ಷ ತುಂಬಿದ ಅಂಗವಾಗಿ 2023ರ ಏಪ್ರಿಲ್ ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಲು ಮೈಸೂರಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಆತಿಥ್ಯದ ಬಿಲ್ ಬಾಕಿಯನ್ನು ರಾಜ್ಯ ಸರ್ಕಾರವೇ ಭರಿಸಲಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸ್ಪಷ್ಟಪಡಿಸಿದ್ದಾರೆ.

2023ರ ಏಪ್ರಿಲ್ ನಲ್ಲಿ ಈ ಕಾರ್ಯಕ್ರಮ ನಡೆದಾಗ, ವಿಧಾನಸಭಾ ಚುನಾವಣೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿತ್ತು ಹೀಗಾಗಿ ರಾಜ್ಯ ಸರ್ಕಾರ ಭಾಗಿ ಆಗಿರಲಿಲ್ಲ. ರಾಜ್ಯ ಲಾಂಛನದ ಬಳಕೆಯೂ ಆಗಿರಲಿಲ್ಲ. ಇದು ಸಂಪೂರ್ಣ ಎನ್.ಟಿ.ಸಿ.ಎ. ಕಾರ್ಯಕ್ರಮವಾಗಿತ್ತು. ಪ್ರಧಾನಿ ರಾಜ್ಯಕ್ಕೆ ಬಂದಿದ್ದ ಹಿನ್ನೆಲೆಯಲ್ಲಿ ಆತಿಥ್ಯ ನಿರ್ವಹಣೆಗಾಗಿ ಸ್ಥಳೀಯವಾಗಿ ರಚಿಸಲಾಗಿದ್ದ ಸಮಿತಿಯಲ್ಲಿ ರಾಜ್ಯದ ಅರಣ್ಯ ಇಲಾಖೆಯ ಅಧಿಕಾರಿಗಳು ಇದ್ದರು. ವಾಸ್ತವವಾಗಿ ಈ ಕಾರ್ಯಕ್ರಮಕ್ಕೆ ಆಗುವ ಸಂಪೂರ್ಣ ವೆಚ್ಚವನ್ನು ಭರಿಸುವುದಾಗಿ ಎನ್.ಟಿ.ಸಿ.ಎ. ಹೇಳಿತ್ತು ಎಂದು ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದ್ದಾರೆ.

ಕಾರ್ಯಕ್ರಮಕ್ಕೆ ಆಗಿರುವ ವೆಚ್ಚ 6 ಕೋಟಿ 33 ಲಕ್ಷ. ಈ ಪೈಕಿ 3 ಕೋಟಿ ರೂಪಾಯಿ ಬಂದಿದ್ದು, ಇನ್ನೂ 3ಕೋಟಿ 33 ಲಕ್ಷ ರೂ. ಬಾಕಿ ಬರಬೇಕಿದೆ. ಇದರಲ್ಲಿ ರಾಡಿಸನ್ ಬ್ಲೂ ಆತಿಥ್ಯವೆಚ್ಚ ಸುಮಾರು 80 ಲಕ್ಷ ರೂ. ಸೇರಿದೆ ಎಂದು ಸಚಿವರು ಶನಿವಾರ ತಿಳಿಸಿದ್ದರು. ಈ ಬಗ್ಗೆ ನಮ್ಮ ಇಲಾಖೆಯ ಅಧಿಕಾರಿಗಳು ಹಲವು ಬಾರಿ ಪತ್ರ ಬರೆದಿದ್ದರೂ, ಫೋನ್ ಮಾಡಿದ್ದರೂ ಎನ್.ಟಿ.ಸಿ.ಎ. (ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ) ಈ ಬಾಕಿ ಹಣ ನೀಡಿಲ್ಲ. ಈಗ ವಿಷಯ ತಮ್ಮ ಗಮನಕ್ಕೆ ಬಂದಿದ್ದು, ಸೌಹಾರ್ದಯುತವಾಗಿ ಪರಿಹರಿಸಲು ಪ್ರಯತ್ನಿಸುವುದಾಗಿಯೂ ಸಚಿವರು ಹೇಳಿದ್ದರು.

ಈಗ ಗೊಂದಲ ನಿವಾರಿಸಲು ರಾಜ್ಯ ಸರ್ಕಾರವೇ ಮೈಸೂರಿನ ರಾಡಿಸನ್ ಬ್ಲೂ ಹೊಟೆಲ್ ಬಿಲ್ ಬಾಕಿ ಪಾವತಿಸಲು ನಿರ್ಧರಿಸಿದೆ ಎಂದು ಸಚಿವರು ಸೋಮವಾರ ತಿಳಿಸಿದ್ದಾರೆ."ಈ ಕಾರ್ಯಕ್ರಮಕ್ಕೆ ಒಟ್ಟಾರೆ 6 ಕೋಟಿ 33 ಲಕ್ಷ ರೂ. ವೆಚ್ಚವಾಗಿದ್ದು, ಎನ್.ಟಿ.ಸಿ.ಎ. ರಾಜ್ಯಕ್ಕೆ 3 ಕೋಟಿ ರೂ. ಪಾವತಿಸಿದೆ. ಉಳಿದ ಹಣ ಪಾವತಿಸಿಲ್ಲ. ಹೀಗಾಗಿ ಮೈಸೂರಿನ ರಾಡಿಸನ್ ಬ್ಲೂ ಹೊಟೆಲ್ ನವರು ಕಾರ್ಯಕ್ರಮದ ಆಯೋಜನೆಗೆ ಸ್ಥಳೀಯ ಬೆಂಬಲ ನೀಡಿದ್ದ ಅರಣ್ಯ ಇಲಾಖೆಗೆ ಪತ್ರ ಬರೆದಿದ್ದಾರೆ," ಎಂದರು. "ರಾಜ್ಯ ಸರ್ಕಾರವೇ ಆತಿಥ್ಯದ 80 ಲಕ್ಷ ರೂ. ಹಣ ಪಾವತಿಸುವ ಮೂಲಕ ವಿವಾದಕ್ಕೆ ತೆರೆ ಎಳೆಯಲಿದೆ," ಎಂದೂ ಹೇಳಿದರು.

Read More
Next Story