![BJP Infighting | ನಾನು ಯಾವುದೇ ಬಣದಲ್ಲಿಲ್ಲ, ನಾಗಬನದಲ್ಲಿದ್ದೇನೆ: ಶಾಸಕ ಸುನೀಲ್ ಕುಮಾರ್ BJP Infighting | ನಾನು ಯಾವುದೇ ಬಣದಲ್ಲಿಲ್ಲ, ನಾಗಬನದಲ್ಲಿದ್ದೇನೆ: ಶಾಸಕ ಸುನೀಲ್ ಕುಮಾರ್](https://karnataka.thefederal.com/h-upload/2025/02/06/510989-sunil-kumar-karkala.webp)
BJP Infighting | ನಾನು ಯಾವುದೇ ಬಣದಲ್ಲಿಲ್ಲ, ನಾಗಬನದಲ್ಲಿದ್ದೇನೆ: ಶಾಸಕ ಸುನೀಲ್ ಕುಮಾರ್
ಬಿಜೆಪಿ ಬಣ ರಾಜಕಾರಣದ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ; ನಾನು ಯಾವುದೇ ಬಣದಲ್ಲಿಲ್ಲ ಎಂದು ಸ್ಪಷ್ಟಪಡಿಸಿದರು.
ನಾನು ಯಾವುದೇ ಬಣದಲ್ಲಿಲ್ಲ. ನಾಗಬನದಲ್ಲಿದ್ದೇನೆ. ನಾನು ಪಕ್ಷ ಹೇಳಿದಂತೆ ಕೇಳುವವನು. ನಾನು ಪಕ್ಷದ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದೇನೆ. ಹೈಕಮಾಂಡ್ ಸೂಚನೆಗೆ ಬದ್ಧನಾಗಿದ್ದೇನೆ. ಪಕ್ಷದ ಒಳಗಿನ ಸಮಸ್ಯೆ ಸರಿಪಡಿಸಲು ಕಾರ್ಯಕರ್ತನಾಗಿ, ಶಾಸಕನಾಗಿ, ಪದಾಧಿಕಾರಿಯಾಗಿ ಆಂತರಿಕವಾಗಿ ನಮ್ಮ ಪ್ರಯತ್ನ ಮಾಡುತ್ತೇವೆ ಎಂದು ಕಾರ್ಕಳ ಶಾಸಕ ಸುನೀಲ್ ಕುಮಾರ್ ಹೇಳಿದ್ದಾರೆ.
ಉಡುಪಿಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆಯ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಬಣ ರಾಜಕಾರಣದ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ; ನಾನು ಯಾವುದೇ ಬಣದಲ್ಲಿಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯ ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಬೇಕು ಎಂದು ಯತ್ನಾಳ್ ಬಣದ ಒತ್ತಡ ದಿನೇದಿನೆ ಹೆಚ್ಚಾಗುತ್ತಲೇ ಇದೆ. ಆದರೆ ಇದೆಲ್ಲದರ ನಡುವೆ ತಾವು ಯಾವುದೇ ಬಣದಲ್ಲಿ ಇಲ್ಲ ಎಂದು ಸುನೀಲ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ರಾಜ್ಯಾಧ್ಯಕ್ಷರ ಚುನಾವಣೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮಾಧ್ಯಮದಲ್ಲಿ ಮಾತ್ರ ರಾಜ್ಯಾಧ್ಯಕ್ಷರ ಚುನಾವಣೆ ಚರ್ಚೆಯಾಗುತ್ತಿದೆ. ಪಕ್ಷದೊಳಗೆ ಅಂತಹ ಯಾವುದೇ ಚರ್ಚೆಗಳು ಇಲ್ಲ. ದೇಶದಲ್ಲಿ ಎಲ್ಲಾದರೂ ರಾಜ್ಯಾಧ್ಯಕ್ಷರ ಚುನಾವಣೆ ಆಗಿದೆಯಾ?. ಮಾಧ್ಯಮಗಳು ಬಹಳ ವೈಭವೀಕರಿಸುತ್ತಿವೆ. ಇನ್ನೊಂದು ವಾರದಲ್ಲಿ ಎಲ್ಲವೂ ಬಗೆಹರಿಸಲಾಗುತ್ತದೆ. ಇರುವ ಎಲ್ಲಾ ಸಣ್ಣಪುಟ್ಟ ಗೊಂದಲಗಳು ಬಗೆಹರಿಯುತ್ತವೆ. ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಾರ್ಕಳದಿಂದ ಜನಾಂದೋಲನ ಆರಂಭವಾಗಿದೆ. ಬೀದರ್ ತನಕ ಹೋರಾಟಗಳು ನಡೆಲಿವೆ ಎಂದರು.