ಅಕ್ರಮ ಮರಳು ದಂಧೆ ತಡೆಯಲು ಹೋದ ಮಹಿಳಾ ಅಧಿಕಾರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಶಾಸಕ ಸಂಗಮೇಶ್‌ ಪುತ್ರ
x
ಮಹಿಳಾ ಅಧಿಕಾರಿಗೆ ಅವಾಚ್ಯ ಪದ ಬಳಿಸಿದ ಕಾಂಗ್ರೆಸ್​ ಶಾಸಕ ಸಂಗಮೇಶ್‌ ಪುತ್ರ ಬಸವೇಶ್

ಅಕ್ರಮ ಮರಳು ದಂಧೆ ತಡೆಯಲು ಹೋದ ಮಹಿಳಾ ಅಧಿಕಾರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಶಾಸಕ ಸಂಗಮೇಶ್‌ ಪುತ್ರ

ಶಾಸಕ ಬಿಕೆ ಸಂಗಮೇಶ್​ ಪುತ್ರ ಮಹಿಳಾ ಅಧಿಕಾರಿಗೆ ದೂರವಾಣಿ ಕರೆಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಮಹಿಳಾ ಅಧಿಕಾರಿಗೆ ಅಶ್ಲೀಲವಾಗಿ ಬೈದಿರುವ ವಿಡಿಯೋ ವೈರಲ್ ಆಗಿದೆ.


ಭದ್ರಾವತಿಯ ಭದ್ರಾ ನದಿತಟದಲ್ಲಿ ನಡೆಯುತ್ತಿದ್ದ ಅಕ್ರಮ ಮರುಳು ಗಣಿಗಾರಿಕೆ ಸಂಬಂಧ ಸೋಮವಾರ ಮಧ್ಯರಾತ್ರಿ ದಾಳಿ ನಡೆಸಿದ ಗಣಿ ಇಲಾಖೆ ಮಹಿಳಾ ವಿಜ್ಞಾನಿಗೆ ಕಾಂಗ್ರೆಸ್‌ ಶಾಸಕ ಬಿ.ಕೆ. ಸಂಗಮೇಶ್‌ ಅವರ ಪುತ್ರ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ವಿಡಿಯೋ ವೈರಲ್‌ ಆಗಿದೆ.

ಶಾಸಕ ಬಿಕೆ ಸಂಗಮೇಶ್​ ಪುತ್ರ ಮಹಿಳಾ ಅಧಿಕಾರಿಗೆ ದೂರವಾಣಿ ಕರೆ ಮಾಡಿ ತೀರಾ ಅಸಹ್ಯವಾದ ಶಬ್ದಗಳಿಂದ ನಿಂದಿಸಿದ್ದಾನೆ. ಈಗ ಮಹಿಳಾ ಅಧಿಕಾರಿ ಜ್ಯೋತಿ ಎಂಬವರಿಗೆ ಅಶ್ಲೀಲವಾಗಿ ಬೈದಿರುವ ವಿಡಿಯೋ ವೈರಲ್ ಆಗಿದೆ.

ಈ ಸಂಬಂಧ ಮಹಿಳಾ ಅಧಿಕಾರಿ ಜ್ಯೋತಿ , ಭದ್ರಾವತಿ ವಿಭಾಗದ ಪೊಲೀಸ್‌ ಉಪಾಧೀಕ್ಷಕರಿಗೆ ಶಾಸಕ ಸಂಗಮೇಶ್‌ ಪುತ್ರ ಬಸವೇಶ್‌ ವಿರುದ್ಧ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಮಹಿಳಾ ಅಧಿಕಾರಿಗೆ ನಿಂದಿಸಿದ ಶಾಸಕ ಸಂಗಮೇಶ್ ಪುತ್ರನ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿ, ಪ್ರತಿಭಟನೆ ನಡೆಸಿದೆ. ಶಾಸಕ ಸಂಗಮೇಶ್ ಪುತ್ರನ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ.

ಪ್ರಕರಣ ಸಂಬಂಧ ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಕುಮಾರ ಮಂಜುಳಾ ಮಾತನಾಡಿ, ಈಗಾಗಲೇ ಶಾಸಕ ಸಂಗೇಶ್ವರ ಪುತ್ರ ಬಸವೇಶ್ 45 ದಿನ ಜೈಲಿನಲ್ಲಿ ಇದ್ದು ಬಂದಿದ್ದಾರೆ. ಪಾಗಲ್ ಬಸವೇಶ್​ರ ತಲೆ ಕೆಟ್ಟಿದೆ. ಶಾಸಕ ಹಾಗೂ ಅವರು ಪುತ್ರನ ವರ್ತನೆಗೆ ಭದ್ರಾವತಿ ಬೇಸತ್ತಿದೆ. ಎಸ್ಪಿ ಅವರು ಓರ್ವ ಸಿಬ್ಬಂದಿಯನ್ನು ಅಮಾನತು ಮಾಡಿದ್ದರು‌. ಆದರೆ, ಅದೇ ಅಧಿಕಾರಿಯನ್ನು ಅದೇ ಹುದ್ದೆಗೆ ಶಾಸಕ ಸಂಗಮೇಶ ತರುತ್ತಾರೆ. ಎಸ್ಪಿ ಆದೇಶಕ್ಕೆ ಬೆಲೆ ಇಲ್ಲವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಇಡಿ ರಾಜ್ಯದಲ್ಲಿ ಇಂತಹ ಹತ್ತಾರು ಪ್ರಕರಣಗಳು ನಡೆಯುತ್ತಿವೆ. ಮಹಿಳಾ ಅಧಿಕಾರಿ ದೂರು ಕೊಡುವ ಮೊದಲೇ ಶಾಸಕನ ಪುತ್ರನ ಚೇಲಾಗಳು ಅಧಿಕಾರಿ ವಿರುದ್ದ ಜಾತಿ ನಿಂದನೆ ಕೇಸ್ ಮಾಡಿದ್ದಾರೆ. ಶಾಸಕರ ಪುತ್ರ ಬಸವೇಶ ಅವರನ್ನ ಬಂಧಿಸುವ ತನಕ ಹೋರಾಟ ನಿರಂತರವಾಗಿರುತ್ತದೆ ಎಂದು ಎಚ್ಚರಿಕೆ ನೀಡಿದರು.

ದಕ್ಷ, ಪ್ರಾಮಾಣಿಕ ಅಧಿಕಾರಿಗಳಿಗೆ ರಕ್ಷಣೆಯೇ ಇಲ್ಲ

ಈ ಕುರಿತು ಪ್ರತಿಪಕ್ಷಗಳಾದ ಜೆಡಿಎಸ್ ಹಾಗೂ ಬಿಜೆಪಿ ತೀವ್ರವಾಗಿ ಕಿಡಿಕಾರಿದೆ. ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ವಿಡಿಯೋ ಪೋಸ್ಟ್ ಮಾಡಿರುವ ಜೆಡಿಎಸ್, ಕಾಂಗ್ರೆಸ್ ಸರ್ಕಾರದಲ್ಲಿ ದಕ್ಷ, ಪ್ರಾಮಾಣಿಕ ಅಧಿಕಾರಿಗಳಿಗೆ ರಕ್ಷಣೆಯೇ ಇಲ್ಲವಾಗಿದೆ ಎಂದು ಕಿಡಿಕಾರಿದೆ.

ಭದ್ರಾವತಿಯಲ್ಲಿ ಒಂದು ಪೈಸೆ ಅಭಿವೃದ್ಧಿ ಕೆಲಸ ಮಾಡದ ನಾಲಾಯಕ್‌ ಕಾಂಗ್ರೆಸ್‌ ಶಾಸಕ ಸಂಗಮೇಶ್‌ ಹಾಗೂ ಅವರ ಮಗ ಬಿ.ಎಸ್.‌ ಬಸವೇಶ ತಾಲ್ಲೂಕಿನಲ್ಲಿ ಅಕ್ರಮ ಮರಳುಗಾರಿಕೆ, ಗೂಂಡಾಗಿರಿ ಮಾಡಿಕೊಂಡು ಲೂಟಿ ಹೊಡೆಯುತ್ತಿದ್ದಾರೆ. ಅಕ್ರಮ ಮರಳುಗಾರಿಕೆಯನ್ನು ತಡೆಯಲು ಬಂದ ಕರ್ತವ್ಯನಿರತ ಮಹಿಳಾ ಅಧಿಕಾರಿಗೆ ಶಾಸಕ ಸಂಗಮೇಶ್‌ ಅವರ ಪುತ್ರ ಫೋನಿನಲ್ಲಿ ಬೆದರಿಕೆ, ಧಮ್ಕಿ ಹಾಕಿ, ಅಶ್ಲೀಲ ಶಬ್ಧಗಳಿಂದ ನಿಂದಿಸಿರುವುದು ಅಕ್ಷಮ್ಯ ಅಪರಾಧ ಎಂದು ಜೆಡಿಎಸ್‌ ಟೀಕಿಸಿದೆ.

ಮಹಿಳಾ ಆಯೋಗ ಏನು ಮಾಡುತ್ತಿದೆ

ರಾಜ್ಯದಲ್ಲಿರುವ ಮಹಿಳಾ ಆಯೋಗ ಏನು ಮಾಡುತ್ತಿದೆ ? ಮಹಿಳೆಯ ಗೌರವಕ್ಕೆ ಧಕ್ಕೆ ತಂದಿರುವ ಹೆಣ್ಣುನಿಂದಕ ಶಾಸಕರ ಪುತ್ರನ ವಿರುದ್ಧ ಸರ್ಕಾರ ತಕ್ಷಣವೇ ಪ್ರಕರಣ ದಾಖಲಿಸಿ, ಬಂಧಿಸಬೇಕು ಎಂದು ಜೆಡಿಎಸ್ ಪಕ್ಷವು ಆಗ್ರಹಿಸುತ್ತದೆ. ಸಿದ್ದರಾಮಯ್ಯ, ಗೃಹ ಸಚಿವ ಪರಮೇಶ್ವರ್ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ಅವರೇ ತಾವು ಈಗ ಮಹಿಳಾ ಅಧಿಕಾರಿಯ ರಕ್ಷಣೆಗೆ ನಿಂತು ನ್ಯಾಯ ಒದಗಿಸಬೇಕಿದೆ ಎಂದು ಆಗ್ರಹಿಸಿದೆ.

ಮಹಿಳೆಯರಿಗೆ ರಕ್ಷಣೆಯಿಲ್ಲ - ಮಹಿಳಾ ಅಧಿಕಾರಿಗಳಿಗೆ ಗೌರವವಿಲ್ಲ

ಈ ಬಗ್ಗೆ ಬಿಜೆಪಿ ಕೂಡ ತನ್ನ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು, “ಮಹಿಳೆಯರಿಗೆ ರಕ್ಷಣೆಯಿಲ್ಲ - ಮಹಿಳಾ ಅಧಿಕಾರಿಗಳಿಗೆ ಗೌರವವಿಲ್ಲ” ಇದು ಕಾಂಗ್ರೆಸ್ ಸರ್ಕಾರದ ಮಹಿಳಾ ನೀತಿ!! ಶಿವಮೊಗ್ಗ ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮಹಿಳಾ ಅಧಿಕಾರಿ ಅಕ್ರಮ ಮರಳು ಗಣಿಗಾರಿಕೆಯನ್ನು ತಡೆಯಲು ಸ್ಥಳಕ್ಕೆ ಹೋದಾಗ ಭದ್ರಾವತಿ ಕಾಂಗ್ರೆಸ್‌ ಶಾಸಕ ಬಿ.ಕೆ.ಸಂಗಮೇಶ್‌ ಪುತ್ರ ಬಸವೇಶ ಬಳಸಿದ ಭಾಷೆ ಅತ್ಯಂತ ಖಂಡನೀಯ ಎಂದು ಹೇಳಿದೆ.

ಸಿಎಂ ಸಿದ್ದರಾಮಯ್ಯ ಅವರೆ, ಡಿಸಿಎಂ ಡಿಕೆ.ಶಿವಕುಮಾರ್ ಅವರೆ, ಮಹಿಳಾ ಅಧಿಕಾರಿಗಳಿಗೆ ಅವಾಚ್ಯವಾಗಿ ನಿಂದಿಸುವುದು ನಿಮ್ಮ ಕಾಂಗ್ರೆಸ್‌ ಸಂಸ್ಕೃತಿ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಭದ್ರಾವತಿಯನ್ನು ರಿಪಬ್ಲಿಕ್‌ ಮಾಡಿ ಆಟಾಟೋಪ ಮೆರೆಯುತ್ತಿರುವ ಶಾಸಕರ ಪುತ್ರ ಬಸವೇಶ್‌ರನ್ನು ಬಂಧಿಸಿ, ಗಡಿಪಾರು ಮಾಡಿ ಎಂದು ಬಿಜೆಪಿ ಒತ್ತಾಯಿಸಿದೆ.

ಶಾಸಕನ ಮಗನಾಗಲೀ ಆಥವಾ ಮಂತ್ರಿಯ ಮಗ, ಹಾಗೆ ಮಾತಾಡಕೂಡದು: ರಾಜಣ್ಣ

ಈ ಬಗ್ಗೆ ಸಹಕಾರಿ ಸಚಿವ ಕೆ.ಎನ್‌. ರಾಜಣ್ಣ ಪ್ರತಿಕ್ರಿಯೆ ನೀಡಿದ್ದು, ಭದ್ರಾವತಿಯ ಕಾಂಗ್ರೆಸ್ ಶಾಸಕ ಬಿ.ಕೆ. ಸಂಗಮೇಶ್ ‘ಪುತ್ರರತ್ನ’ ಬಸವೇಶ್ ನಿನ್ನೆ ಭದ್ರಾವತಿಯ ಗಣಿ ಹಾಗೂ ಭೂ ವಿಜ್ಞಾನ ಇಲಾಖೆಯ ಮಹಿಳಾ ಅಧಿಕಾರಿಯೊಬ್ಬರಿಗೆ ಕೆಟ್ಟ ಪದಗಳನ್ನು ಬಳಸಿ ಬೈದಾಡಿರುವ ಸಂಗತಿ ಕನ್ನಡಿಗರಿಗೆಲ್ಲ ಗೊತ್ತಿದೆ. ಒಂದು ಸುಸಂಸ್ಕೃತ ಕುಟುಂಬ ಯೋಚಿಸಲೂ ಸಾಧ್ಯವಿಲ್ಲದಂಥ ಕೆಟ್ಟ ಪದಗಳನ್ನು ಬಸವೇಶ್ ಅಧಿಕಾರಿಯ ವಿರುದ್ಧ ಬಳಸಿದ್ದಾನೆ. ಶಾಸಕನ ಮಗನಾಗಲೀ ಆಥವಾ ಮಂತ್ರಿಯ ಮಗ, ಹಾಗೆ ಮಾತಾಡಕೂಡದು, ಬಸವೇಶ್ ವಿರುದ್ಧ ಕಾನೂನು ರೀತ್ಯಾ ಕ್ರಮ ಜರುಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

Read More
Next Story