MLA Munirathnas bail application dismissed after allegations of rape by her accomplice
x

ಶಾಸಕ ಮುನಿರತ್ನ

ಸಹಚರರಿಂದಲೇ ಅತ್ಯಾಚಾರ ಮಾಡಿಸಿದ ಆರೋಪ, ಶಾಸಕ ಮುನಿರತ್ನ ಜಾಮೀನು ಅರ್ಜಿ ವಜಾ

ಆರೋಪಿ ಮುನಿರತ್ನ ಸಂತ್ರಸ್ತ ಮಹಿಳೆಗೆ ಜೀವ ಬೆದರಿಕೆಯೊಡ್ಡಿದ್ದಾರೆ. ಆರೋಪಿ ಪ್ರಭಾವಿಯಾಗಿದ್ದು ತನಿಖೆಗೆ ಅಡ್ಡಿಪಡಿಸುವ ಸಾಧ್ಯತೆ ಇದೆ. ಆದ್ದರಿಂದ ನಿರೀಕ್ಷಣಾ ಜಾಮೀನು ನೀಡಬಾರದು ಎಂದು ವಕೀಲರು ವಾದ ಮಂಡಿಸಿದ್ದಾರೆ.


ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಮಾಡಿಸಿ ಜೀವ ಬೆದರಿಕೆಯೊಡ್ಡಿದ ಆರೋಪ ಎದುರಿಸುತ್ತಿರುವ ಶಾಸಕ ಮುನಿರತ್ನ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿದೆ. ಈ ಪ್ರಕರಣದಲ್ಲಿ ಬಂಧನಭೀತಿ ಎದುರಿಸುತ್ತಿರುವ ಮುನಿರತ್ನ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸಂತೋಷ್ ಗಜಾನನ ಭಟ್ ಅವರು ವಜಾಗೊಳಿಸಿದ್ದಾರೆ.

ಸಂತ್ರಸ್ತೆ ಪರ ಹಿರಿಯ ವಕೀಲ ಸಿ.ಎಚ್. ಹನುಮಂತರಾಯ ಅವರು ವಾದ ಮಂಡಿಸಿದ್ದು, ಆರೋಪಿ ಮುನಿರತ್ನ ಸಂತ್ರಸ್ತ ಮಹಿಳೆಗೆ ಜೀವ ಬೆದರಿಕೆಯೊಡ್ಡಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಈ ಸಂಬಂಧ ಆರ್‌ಎಂಸಿ ಯಾರ್ಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಪ್ರಭಾವಿಯಾಗಿದ್ದು, ತನಿಖೆಗೆ ಅಡ್ಡಿಪಡಿಸುವ ಸಾಧ್ಯತೆ ಇದೆ. ಆದ್ದರಿಂದ ನಿರೀಕ್ಷಣಾ ಜಾಮೀನು ನೀಡಬಾರದು ಎಂದು ನ್ಯಾಯಾಲಯವನ್ನು ಕೋರಿದ್ದರು.

ಸಂತ್ರಸ್ತೆ ಪರ ವಾದವನ್ನು ಮಾನ್ಯ ಮಾಡಿದ ನ್ಯಾಯಾಲಯ, ಮುನಿರತ್ನ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ. ಪ್ರಕರಣದ ಎರಡನೇ ಆರೋಪಿಗಳಾದ ನಂದಿನಿ ಲೇಔಟ್‌ನ ವಸಂತ, ಚನ್ನಕೇಶವ, ಮತ್ತು ಆಶ್ರಯನಗರದ ಕಮಲ್ ಅವರ ನಿರೀಕ್ಷಣಾ ಜಾಮೀನು ಅರ್ಜಿಗಳನ್ನೂ ನ್ಯಾಯಾಲಯ ವಜಾಗೊಳಿಸಿದೆ.

ಶಾಸಕ ಮುನಿರತ್ನ ಕಾಂಗ್ರೆಸ್‌ನಲ್ಲಿದ್ದಾಗ ಈ ಪ್ರಕರಣ ನಡೆದಿದೆ. ಮಹಿಳೆಯ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸಿ ಜೈಲಿಗೆ ಕಳಿಸಿದ್ದರು ಎಂದು ದೂರಿನಲ್ಲಿ ಹೇಳಲಾಗಿದೆ. 2023ರ ಜೂನ್ 11 ರಂದು ಜೆ.ಪಿ. ಪಾರ್ಕ್ ಬಳಿಯಿರುವ ಶಾಸಕರ ಕಚೇರಿಯ ಎರಡನೇ ಮಹಡಿಗೆ ಮಹಿಳೆಯನ್ನು ಕರೆದೊಯ್ದು ಬೆತ್ತಲೆಗೊಳಿಸಿ, ತನ್ನ ಇಬ್ಬರು ಸಹಚರರಿಂದ ಸಾಮೂಹಿಕ ಅತ್ಯಾಚಾರ ನಡೆಸಿ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.

ಜತೆಗೆ, ಅಪಾಯಕಾರಿ ಕಾಯಿಲೆ ಬರುವ ಚುಚ್ಚುಮದ್ದು ನೀಡಿ, ವಿಚಾರ ಎಲ್ಲಿಯೂ ಬಾಯಿ ಬಿಡದಂತೆ ಶಾಸಕ ಮುನಿರತ್ನ ಬೆದರಿಕೆ ಹಾಕಿದ್ದರು ಎಂದು ಆರ್‌ಎಂಸಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸದ್ಯ, ಸಿಐಡಿ ಎಸ್‌ಐಟಿ ತಂಡ ಈ ಪ್ರಕರಣದ ತನಿಖೆ ನಡೆಸುತ್ತಿದೆ.

Read More
Next Story