Namma Metro Fare Hike | ಮೆಟ್ರೋ ಒನ್ ಡೇ, 3 ಡೇ, 5ಡೇ ಪಾಸ್ ದರವೂ ದುಪ್ಪಟ್ಟು
x
ನಮ್ಮ ಮೆಟ್ರೋ

Namma Metro Fare Hike | ಮೆಟ್ರೋ ಒನ್ ಡೇ, 3 ಡೇ, 5ಡೇ ಪಾಸ್ ದರವೂ ದುಪ್ಪಟ್ಟು

Namma Metro Fare Hike | ಮೆಟ್ರೋ ದರ ಯಥೇಚ್ಚವಾಗಿ ಏರಿಕೆಯಾಗಿರುವುದರಿಂದ ಪ್ರಯಾಣಿಕರು ಆಕ್ರೋಶಗೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಶುರು ಮಾಡಿದ್ದಾರೆ.


ಇತ್ತೀಚೆಗೆ ಬೆಂಗಳೂರಿನ ʻನಮ್ಮ ಮೆಟ್ರೋʼ ಪ್ರಯಾಣ ದರ ಸುಮಾರು ಶೇಕಡಾ 50 %ರಿಂದ 100% ನಷ್ಟು ಹೆಚ್ಚಿಸಲಾಗಿದ್ದು,ಮೆಟ್ರೋ ಸೌಲಭ್ಯ ಲಭ್ಯವಿರುವ ದೇಶದ ಎಲ್ಲಾ ಪ್ರಮುಖ ನಗರಗಳಿಗೆ ಹೋಲಿಸಿದರೆ ಬೆಂಗಳೂರು ಮೆಟ್ರೋ ಪ್ರಯಾಣ ದರವು ಅತ್ಯಧಿಕವಾಗಿದೆ ಎಂದು ಹೇಳಲಾಗುತ್ತಿದೆ. ಸರ್ಕಾರದ ಈ ನಿರ್ಧಾರ ಭಾರೀ ಜನಾಕ್ರೋಶಕ್ಕೆ ಕಾರಣವಾಗಿದೆ.

ದುಪ್ಪಟ್ಟಾದ ಮೆಟ್ರೋ ಪಾಸ್‌ ದರ

ಪ್ರಯಾಣ ದರ ಏರಿಕೆ ಬೆನ್ನಲ್ಲೇ ಇದೀಗ ಬಿಎಂಆರ್​ಸಿಎಲ್​, ಒನ್ ಡೇ, 3 ಡೇ, 5ಡೇ ಪಾಸ್ ದರವನ್ನು ಕೂಡ ಮನಸೋಇಚ್ಛೆ ಏರಿಕೆ ಮಾಡಿರುವ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ.

ಮೆಟ್ರೋ ದಿನದ ಪಾಸ್ ಗೆ ಈ ಮೊದಲು 150 ರೂ ಇತ್ತು. 3 ದಿನದ ಪಾಸ್ 350 ರೂ. ಹಾಗೂ 5 ದಿನದ ಪಾಸ್ ಗೆ 550 ಇತ್ತು. ಆದರೆ ಇದೀಗ ಈ ಪಾಸ್​​ಗಳ ದರ ದುಪ್ಪಟ್ಟಾಗಿದೆ. ಈಗ ಪ್ರಸ್ತುತ 1 ದಿನದ ಪಾಸ್ ದರ 150ರಿಂದ 300 ರೂ.ಗೆ ಏರಿಕೆಯಾಗಿದ್ದರೆ, 3 ದಿನದ ಪಾಸ್ 350ರಿಂದ 600 ರೂಪಾಯಿಗೆ ಏರಿಕೆಯಾಗಿದೆ. ಇನ್ನು ಐದು ದಿನಗಳ ಪಾಸ್ 550 ರೂ.ನಿಂದ 800 ರೂಪಾಯಿವರೆಗೆ ಏರಿಕೆ ಮಾಡಲಾಗಿದೆ.

ಮೆಟ್ರೋ ದರ ಯಥೇಚ್ಚಾಗಿ ಏರಿಕೆಯಾಗಿರುವುದರಿಂದ ಪ್ರಯಾಣಿಕರು ಆಕ್ರೋಶಗೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಶುರು ಮಾಡಿದ್ದಾರೆ. ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವ ಯಾವ ಸ್ಟೇಜ್​ಗಳಲ್ಲಿ ದುಪ್ಪಟ್ಟು ದರ ಏರಿಕೆ ಮಾಡಲಾಗಿದೆ ಎಂದು ಪರಿಶೀಲಿಸಿ ಕೂಡಲೇ ಕಡಿತಗೊಳಿಸುವಂತೆ ಬಿಎಂಆರ್​ಸಿಎಲ್​ಗೆ ಸೂಚನೆ ನೀಡಿದ್ದಾರೆ.

ಇಂದು ಮಹತ್ವದ ಸಭೆ

ಮೆಟ್ರೋ ದರ ಏರಿಕೆಯ ಸಂಬಂಧ ಬಿಎಂಆರ್​ಸಿಎಲ್​ ಅಧಿಕಾರಿಗಳು ಮಹತ್ವದ ಸಭೆ ಕರೆದಿದ್ದು, ಈ ದರ ಏರಿಕೆ ಸಂಬಂಧ ಸಂಪೂರ್ಣ ಮಾಹಿತಿಯನ್ನು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ನೀಡಲಿದ್ದಾರೆ. ಬಳಿಕ ಗುರುವಾರ (ಫೆಬ್ರವರಿ 13) ಮಧ್ಯಾಹ್ನ 2.30ಕ್ಕೆ ಬಿಎಂಆರ್​ಸಿಎಲ್​ ಎಂಡಿ ಮಹೇಶ್ವರ ರಾವ್ ಸುದ್ದಿಗೋಷ್ಠಿ ನಡೆಸಲಿದ್ದು, ದರ ಏರಿಕೆ ಸಂಬಂಧ ಸ್ಪಷ್ಟನೆ ನೀಡಲಿದ್ದಾರೆ ಎಂದು ತಿಳಿದುಬಂದಿದೆ.

Read More
Next Story