![Namma Metro fare hike | ಮೆಟ್ರೋಗಿಂತ ಬೈಕ್ ಅಗ್ಗ ಎಂದ ಪ್ರಯಾಣಿಕರು: ದರ ಏರಿಕೆಗೆ ಆಕ್ರೋಶ! Namma Metro fare hike | ಮೆಟ್ರೋಗಿಂತ ಬೈಕ್ ಅಗ್ಗ ಎಂದ ಪ್ರಯಾಣಿಕರು: ದರ ಏರಿಕೆಗೆ ಆಕ್ರೋಶ!](https://karnataka.thefederal.com/h-upload/2025/02/10/511785-namma-metro1.webp)
Namma Metro fare hike | ಮೆಟ್ರೋಗಿಂತ ಬೈಕ್ ಅಗ್ಗ ಎಂದ ಪ್ರಯಾಣಿಕರು: ದರ ಏರಿಕೆಗೆ ಆಕ್ರೋಶ!
Namma Metro fare hike : ದೇಶದ ಇತರ ನಗರಗಳ ಮೆಟ್ರೋ ಪ್ರಯಾಣ ದರಕ್ಕೆ ಹೋಲಿಸಿದರೆ ಬೆಂಗಳೂರಿನಲ್ಲೇ ಅತಿಹೆಚ್ಚು ದರ ವಸೂಲಿ ಮಾಡಲಾಗುತ್ತಿದೆ ಎಂದು ಪ್ರಯಾಣಿಕರು ಸಾಮಾಜಿಕ ಮಾಧ್ಯಮಗಳ ಮೂಲಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಭಾನುವಾರದಿಂದ ಜಾರಿಗೆ ಬಂದಿರುವ ಮೆಟ್ರೋ ಪ್ರಯಾಣ ದರ ಏರಿಕೆಯು ಪ್ರಯಾಣಿಕರ ಮೇಲೆ ತೀವ್ರ ಪರಿಣಾಮ ಬೀರಿದೆ. ಬಿಎಂಆರ್‌ಸಿಎಲ್ 40% ರಷ್ಟು ದರ ಏರಿಕೆ ಮಾಡಲಾಗುತ್ತದೆ ಎಂದು ಹೇಳಿತ್ತು. ಆದರೆ ಇದೀಗ ಕೆಲವು ಮಾರ್ಗಗಳಲ್ಲಿ ದರವು ಶೇ.90-120 ರಷ್ಟು ಹೆಚ್ಚಾಗಿದೆ. ದೇಶದ ಇತರ ನಗರಗಳ ಮೆಟ್ರೋ ಪ್ರಯಾಣ ದರಕ್ಕೆ ಹೋಲಿಸಿದರೆ ಬೆಂಗಳೂರಿನಲ್ಲೇ ಅತಿಹೆಚ್ಚು ದರ ವಸೂಲಿ ಮಾಡಲಾಗುತ್ತಿದೆ ಎಂದು ಪ್ರಯಾಣಿಕರು ಸಾಮಾಜಿಕ ಮಾಧ್ಯಮಗಳ ಮೂಲಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಮೆಜೆಸ್ಟಿಕ್‌ನಿಂದ ಮಾದಾವರ ಮಾರ್ಗದ ಮಂಜುನಾಥ್ ನಗರಕ್ಕೆ ದರವು ಈಗ 60 ರೂ. ಆಗಿದೆ, ಇದು 40 ರಿಂದ 50% ರಷ್ಟು ಹೆಚ್ಚಾಗಿದೆ. ಸಿಂಗಯ್ಯನಪಾಳ್ಯ-ಮೈಸೂರು ರಸ್ತೆ ಪ್ರಯಾಣದ ಬೆಲೆ 80 ರೂ. ಆಗಿದ್ದು, ಇದು 50 ರೂ.ಗಳಿಂದ 60% ಹೆಚ್ಚಾಗಿದೆ. ಯಶವಂತಪುರ-ಎಂಜಿ ರಸ್ತೆ ಪ್ರಯಾಣದ ದರವು 60 ರೂ. ಆಗಿದ್ದು, ಇದು 35 ರೂ.ಗಳಿಗಿಂತ 70% ಹೆಚ್ಚಾಗಿದೆ. ಸಂಪಿಗೆ ರಸ್ತೆ-ಸೌತ್ ಎಂಡ್ ಪ್ರಯಾಣದ ದರವು 40 ರೂ. ಆಗಿದ್ದು, ಇದು ಹಿಂದಿನ 22 ರೂ.ಗಳಿಗಿಂತ 80% ಹೆಚ್ಚಾಗಿದೆ. ಹಾಗೇ ವೈಟ್‌ಫೀಲ್ಡ್ ನಿಂದ ಸಿಂಗಯ್ಯನಪಾಳ್ಯ ಮಾರ್ಗದಲ್ಲಿ ಶೇ.100ರಷ್ಟು ದರ ಏರಿಕೆಯಾಗಿದೆ.
ಈ ಬಗ್ಗೆ ಮೆಟ್ರೋ ಪ್ರಯಾಣಿಕರು ಆಕ್ರೋಶ ಹೊರ ಹಾಕಿದ್ದು, ಸಾಮಾಜಿಕ ಮಾಧ್ಯಮದ ಒಬ್ಬ ಬಳಕೆದಾರ, "ನಾನು ಪ್ರತಿದಿನ 70 ಕಿ.ಮೀ ಪ್ರಯಾಣಿಸುತ್ತೇನೆ. ಆದರೆ ಇದೀಗ ಮೆಟ್ರೋ ಬಳಸುವದಕ್ಕಿಂತ ನನ್ನ ಬೈಕ್ ಬಳಸುವುದು ಅಗ್ಗವಾಗಿದೆ. ಸಾರ್ವಜನಿಕ ಸಾರಿಗೆಯು ವೈಯಕ್ತಿಕ ಪ್ರಯಾಣಕ್ಕಿಂತ ಹೆಚ್ಚು ವೆಚ್ಚವಾಗುತ್ತದೆ ಎಂಬುದು ವಿಪರ್ಯಾಸ. Shame on #BMRCL.” ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮತ್ತೊಬ್ಬ ಬಳಕೆದಾರ ಮೆಟ್ರೋ ದರ ಏರಿಕೆಯನ್ನು "ಹಗಲು ದರೋಡೆ" ಎಂದು ಕರೆದಿದ್ದು, ಮೆಟ್ರೋ ದರಗಳಲ್ಲಿನ ತೀವ್ರ ಏರಿಕೆಯನ್ನು ಎತ್ತಿ ತೋರಿಸಿದ್ದಾರೆ. "ನಾನು ₹47 ಪಾವತಿಸುತ್ತಿದ್ದೆ, ಅವರು ಮೆಟ್ರೋ ದರವನ್ನು 43% ಹೆಚ್ಚಿಸಿದ್ದೇವೆ ಎಂದು ಹೇಳಿಕೊಳ್ಳುತ್ತಾರೆ. ಆದರೆ ವಾಸ್ತವದಲ್ಲಿ, ಇದು ಬಹುತೇಕ 100% ಹೆಚ್ಚಳದಂತೆ ಭಾಸವಾಗುತ್ತದೆ. ಇದು ಹೇಗೆ ಸಮರ್ಥನೆ? QR ಟಿಕೆಟ್‌ಗಳ ಮೇಲಿನ 5% ರಿಯಾಯಿತಿಯನ್ನು ಸಹ ತೆಗೆದುಹಾಕಿದ್ದಾರೆ" ಎಂದು ಅವರು ಬರೆದುಕೊಂಡಿದ್ದಾರೆ.
ಮೆಟ್ರೋ ದರ ಹೆಚ್ಚಳದ ಬಗ್ಗೆ ಜೆಡಿಎಸ್ ಕೂಡ ತನ್ನ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದು, ಬೆಲೆ ಏರಿಕೆಯಿಂದ ತತ್ತರಿಸಿರುವ ರಾಜ್ಯದ ಜನರಿಗೆ ಸರ್ಕಾರ ಮತ್ತೊಮ್ಮೆ ಬರೆ ಎಳೆದಿದೆ ಎಂದು ಟೀಕಿಸಿದೆ. ಬಸ್ ದರ, ಹಾಲಿನ ದರ, ವಿದ್ಯುತ್ ದರ, ಪೆಟ್ರೋಲ್–ಡೀಸೆಲ್ ದರ, ಮುದ್ರಾಂಕ ಶುಲ್ಕ, ಜನನ ಮರಣ ಪ್ರಮಾಣ ಪತ್ರ ಶುಲ್ಕ ಹೆಚ್ಚಳ, ಸರ್ಕಾರಿ ಆಸ್ಪತ್ರೆಗಳ ಚಿಕಿತ್ಸಾ ಶುಲ್ಕ ಹೆಚ್ಚಳ ಮಾಡಲಾಗಿತ್ತು. ಇದೀಗ ಮೆಟ್ರೋ ಪ್ರಯಾಣ ದರವನ್ನು ಏರಿಸಿದೆ.
ರಾಜ್ಯದ ಜನರನ್ನು ಪ್ರತಿ ದಿನವೂ ಒಂದಲ್ಲ ಒಂದು ರೀತಿಯಲ್ಲಿ ಸುಲಿಗೆ ಮಾಡುವ ಮೂಲಕ ಖಜಾನೆ ತುಂಬಿಸಿಕೊಳ್ಳುತ್ತಿರುವ ಲೂಟಿಕೋರ ಕಾಂಗ್ರೆಸ್ ಸರ್ಕಾರ ಕರುನಾಡಿಗೆ ಶಾಪವಾಗಿದೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದೆ.
ಮೆಟ್ರೋ ಬೆಲೆ ಏರಿಕೆಗೆ ಸಂಬಂಧಿಸಿದಂತೆ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಸಹ, ಮೆಟ್ರೋ ದರ ಏರಿಕೆ ನ್ಯಾಯಸಮ್ಮತವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಬಗ್ಗೆ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಅವರು, ‘ಕರ್ನಾಟಕ ಸರ್ಕಾರವು ಸಾರ್ವಜನಿಕ ಸಾರಿಗೆಯನ್ನು ಪ್ರೋತ್ಸಾಹಿಸುವ ಮತ್ತು ಖಾಸಗಿ ವಾಹನಗಳನ್ನು ನಿರುತ್ಸಾಹಗೊಳಿಸುವ ಬದಲು, ಮೆಟ್ರೋ ದರ ಹೆಚ್ಚಳದ ಮೂಲಕ ಅದಕ್ಕೆ ತದ್ವಿರುದ್ಧವಾದದ್ದನ್ನು ಮಾಡುತ್ತಿದೆ. ಬೆಂಗಳೂರು ಮೆಟ್ರೋ ಪ್ರಯಾಣ ದರ ದೇಶದ ಇತರ ಮೆಟ್ರೋಗಳಿಗೆ ಸಮನಾಗಿರಬೇಕು. ದೆಹಲಿಯಲ್ಲಿ ಪ್ರಯಾಣಿಕರು 12 ಕಿ.ಮೀ ಪ್ರಯಾಣಕ್ಕೆ 30 ರೂ. ಪಾವತಿಸಿದರೆ, ಬೆಂಗಳೂರಿನಲ್ಲಿ 60 ರೂ. ಪಾವತಿಸಬೇಕಾಗುತ್ತದೆ. ಇದು ದುಪ್ಪಟ್ಟು ಮೊತ್ತವಾಗಿದೆ. ಗರಿಷ್ಠ ದರವನ್ನು 60 ರಿಂದ 90 ರೂ.ಗಳಿಗೆ ಹೆಚ್ಚಿಸುವ ಮೂಲಕ ಸರಿಸುಮಾರು ಶೇ 50 ಹೆಚ್ಚಳವು ನ್ಯಾಯಸಮ್ಮತವಲ್ಲ. ದೇಶದ ಬೇರೆ ಯಾವುದೇ ಮೆಟ್ರೋ ಇಷ್ಟು ಹೆಚ್ಚಿನ ಶುಲ್ಕ ವಿಧಿಸುವುದಿಲ್ಲ. 60 ರೂ.ಗಿಂತ ಹೆಚ್ಚಿನ ದರ ಏರಿಕೆ ತುಂಬಾ ಹೆಚ್ಚಾಗಿದೆ’ ತೇಜಸ್ವಿ ಸೂರ್ಯ ಟ್ವೀಟ್ ಮಾಡಿದ್ದಾರೆ.
ಪ್ರಸ್ತುತ, ಬಿಎಂಆರ್‌ಸಿಎಲ್ ಮೆಟ್ರೋ ಕಾರ್ಯಾಚರಣೆಗಳಿಂದ ಪ್ರತಿದಿನ ಸುಮಾರು ₹2 ಕೋಟಿ ಆದಾಯ ಗಳಿಸುತ್ತಿದೆ. ಸದ್ಯ ಪರಿಷ್ಕೃತ ದರಗಳೊಂದಿಗೆ ನಿಗಮವು ಪ್ರತಿದಿನ ಹೆಚ್ಚುವರಿಯಾಗಿ ಸುಮಾರು ₹80 ಲಕ್ಷ ಅಥವಾ ಅದಕ್ಕಿಂತ ಅಧಿಕ ಲಾಭ ನಿರೀಕ್ಷಿಸುತ್ತಿದೆ.