
Metro Fare Hike | ಮೆಟ್ರೋ ಬಾಯ್ಕಾಟ್; ದರ ಹೆಚ್ಚಳಕ್ಕೆ ಪ್ರತಿಯಾಗಿ ಅಭಿಯಾನ ನಡೆಸಲು ನಿರ್ಧಾರ
Metro Fare Hike: ಟಿಕೆಟ್ ದರ ಕಡಿಮೆ ಮಾಡಲು ಮೆಟ್ರೋ ಪ್ರಯಾಣಿಕರ ವೇದಿಕೆ ಭಾನುವಾರದವರೆಗೆ ಗಡುವು ನೀಡಿದೆ. ಅಷ್ಟರಲ್ಲಿ ಟಿಕೆಟ್ ದರ ಕಡಿಮೆ ಮಾಡಲಿಲ್ಲ ಅಂದರೆ ಮೆಟ್ರೋ ಬಾಯ್ಕಾಟ್ ಮಾಡುವುದಾಗಿ ತಿಳಿಸಲಾಗಿದೆ.
ಮೆಟ್ರೋ ಪ್ರಯಾಣ ದರ ಏರಿಕೆಗೆ ಪ್ರಯಾಣಿಕರ ಆಕ್ರೋಶ ಮುಂದುವರಿದಿದೆ. ಇದೀಗ. ಮೆಟ್ರೋದಲ್ಲಿ ಪ್ರಯಾಣಿಸದೇ ಇರಲು ಮೆಟ್ರೋ ಪ್ರಯಾಣಿಕರ ವೇದಿಕೆ ಮುಂದಾಗಿದೆ. ದರ ಏರಿಕೆ ಖಂಡಿಸಿ ಒಂದು ದಿನ ಅಥವಾ ಒಂದು ವಾರ ಮೆಟ್ರೋ ಹತ್ತದಿರಲು (ಮೆಟ್ರೊ ಬಾಯ್ಕಾಟ್) ಸಿದ್ದತೆ ನಡೆಸುತ್ತಿದೆ ಎಂದು ತಿಳಿದು ಬಂದಿದೆ.
ಟಿಕೆಟ್ ದರ ಕಡಿಮೆ ಮಾಡಲು ಮೆಟ್ರೋ ಪ್ರಯಾಣಿಕರ ವೇದಿಕೆ ಭಾನುವಾರದವರೆಗೆ ಗಡುವು ನೀಡಿದೆ. ಅಷ್ಟರಲ್ಲಿ ಟಿಕೆಟ್ ದರ ಕಡಿಮೆ ಮಾಡದೇ ಹೋದರೆ ಮೆಟ್ರೋದಲ್ಲಿ ಪ್ರಯಾಣಿಸದಿರಲು ನಿರ್ಧರಿಸಿದೆ. ದರ ಏರಿಕೆ ಖಂಡಿಸಿ ಭಾನುವಾರ ಸಮಾವೇಶ ನಡೆಯಲಿದ್ದು,ಅಲ್ಲಿ 'ಮೆಟ್ರೋ ಬಾಯ್ಕಾಟ್' ದಿನಾಂಕ ಘೋಷಣೆ ಆಗಲಿದೆ.
ಮೆಟ್ರೋ ಪ್ರಯಾಣಿಕರ ವೇದಿಕೆಯ ಸದಸ್ಯ ರಾಜೇಶ್ ಭಟ್ ಮಾತನಾಡಿದ್ದು, ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಕೇಂದ್ರದಲ್ಲಿ “ಮೆಟ್ರೋ ಪ್ರಯಾಣಿಕರ ಸಮಾವೇಶ” ನಡೆಯಲಿದೆ. ಟಿಕೆಟ್ ದರ ಏರಿಕೆ ಖಂಡಿಸಿ ಪ್ರತಿದಿನ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೇಂದ್ರ, ರಾಜ್ಯ ಸರ್ಕಾರ ಏನು ಮಾಡುತ್ತಿಲ್ಲ. ನಾವು ಈಗಾಗಲೇ ಸಾವಿರಾರು ಸಹಿ ಸಂಗ್ರಹ ಅಭಿಯಾನ ಮಾಡಿದ್ದೇವೆ. ನಾವು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರನ್ನು ಭೇಟಿ ಮಾಡಿ ದರ ಕಡಿಮೆ ಮಾಡಲು ಮನವಿ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಮೆಟ್ರೊ ಎಂಡಿ ನಮ್ಮ ಮನವಿ ಸ್ವೀಕರಿಸಿಲ್ಲ. ಅಂದರೆ ನಮಗೆ ಬೇರೆ ದಾರಿಯಿಲ್ಲ. ಪಾಸ್ಗಳ ಬೆಲೆ ಏರಿಕೆ ಆಗಿದೆ. ಈ ಭಾನುವಾರ ಇಡೀ ಬೆಂಗಳೂರಿನ ನಾಗರಿಕರನ್ನು ಸೇರಿಸಿ ಸಮಾವೇಶ ಮಾಡುತ್ತೇವೆ. ಸಂಘಸಂಸ್ಥೆಗಳು, ವಿದ್ಯಾರ್ಥಿ ಸಂಘಟನೆಗಳು, ಯುವಜನ ಸಂಘಟನೆಗಳು, ಮೆಟ್ರೋ ಪ್ರಯಾಣಿಕರು ಈ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ದಿನದಿಂದ ದಿನಕ್ಕೆ ಮೆಟ್ರೋದಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆ ಆಗುತ್ತಿದೆ. ನಾಳೆಯಿಂದ ಕರಪತ್ರಗಳನ್ನು ಹಂಚಿಕೆ ಮಾಡುತ್ತೇವೆ ಎಂದು ಅವರು ತಿಳಿಸಿದ್ದಾರೆ.