Malnad Distress | ಯೋಜನಾ ಸಂತ್ರಸ್ತರ ದಮನ: ಮಲೆನಾಡಿನಲ್ಲಿ ಎದ್ದಿದೆ ಪ್ರತ್ಯೇಕ ರಾಜ್ಯ ಕೂಗು
x

Malnad Distress | ಯೋಜನಾ ಸಂತ್ರಸ್ತರ ದಮನ: ಮಲೆನಾಡಿನಲ್ಲಿ ಎದ್ದಿದೆ ಪ್ರತ್ಯೇಕ ರಾಜ್ಯ ಕೂಗು

ಮಲೆನಾಡಿನ ಭೂ ಹಕ್ಕು ಸಂಬಂಧಿತ ಸಮಸ್ಯೆಗಳ ಪರಿಹಾರಕ್ಕಾಗಿ ದಶಕಗಳಿಂದ ನಡೆಸುತ್ತಿರುವ ಹೋರಾಟಕ್ಕೆ ಸರ್ಕಾರಗಳು ಕಿವುಡಾಗಿವೆ ಎಂದು ಆರೋಪಿಸುತ್ತಿರುವ ಹೋರಾಟಗಾರರು ಇದೀಗ ವಿವಿಧ ಸಂಘಟನೆಗಳ ಸಹಭಾಗಿತ್ವದಲ್ಲಿ ಪ್ರತ್ಯೇಕ ಮಲೆನಾಡು ರಾಜ್ಯದ ಕೂಗು ಎತ್ತಿವೆ.


ಮಲೆನಾಡಿನಲ್ಲಿ ಪ್ರತ್ಯೇಕ ರಾಜ್ಯದ ಕೂಗು ಎದ್ದಿದೆ. ಹೌದು, ಮಲೆನಾಡಿನ ಮೂಲೆಯ ಸಾಗರದಂತಹ ಪುಟ್ಟ ಪಟ್ಟಣದಲ್ಲಿ ಮಲೆನಾಡಿಗರ ಒಮ್ಮತದ ಕೂಗು ಮೊಳಗತೊಡಗಿದೆ.

ಮಲೆನಾಡಿನ ಜನರ ಅಸ್ತಿತ್ವದ ಪ್ರಶ್ನೆಯಾಗಿರುವ ಹತ್ತಾರು ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಈವರೆಗೆ ವಿವಿಧ ಯೋಜನೆ ಸಂತ್ರಸ್ತರು, ಅಡಿಕೆ ಬೆಳೆಗಾರರು, ಕಾಫಿ ಬೆಳೆಗಾರರು, ಸಾಮಾನ್ಯ ರೈತರು, ಹೀಗೆ ಬೇರೆ ಬೇರೆ ಸಮುದಾಯಗಳು ನಡೆಸಿದ ದಶಕಗಳ ಹೋರಾಟಕ್ಕೆ ಸರ್ಕಾರಗಳು ಕಿವುಡಾಗಿವೆ ಎಂದು ಆರೋಪಿಸುತ್ತಿರುವ ಹೋರಾಟಗಾರರು, ಇದೀಗ ವಿವಿಧ ಸಂಘಟನೆಗಳ ಸಹಭಾಗಿತ್ವದಲ್ಲಿ ಮಲೆನಾಡಿನ ಎಲ್ಲ ಸಮಸ್ಯೆಗಳನ್ನೂ ಮುಂದಿಟ್ಟುಕೊಂಡು ಪ್ರತ್ಯೇಕ ಮಲೆನಾಡು ರಾಜ್ಯದ ಕೂಗು ಎತ್ತಿವೆ.

ಮುಖ್ಯವಾಗಿ ಇಡೀ ರಾಜ್ಯಕ್ಕೆ ಬೆಳಕು ಕೊಡಲು ಜಲ ವಿದ್ಯುತ್‌ ಯೋಜನೆಗಳಿಗಾಗಿ ತಮ್ಮ ಮನೆಮಠ ಕಳೆದುಕೊಂಡು ಪರಿಹಾರ, ಪುನರ್ವಸತಿ ಕೂಡ ಇಲ್ಲದೆ ಬೀದಿಪಾಲಾದ ಮಲೆನಾಡಿನ ಜನರಿಗೆ ಈವರೆಗೆ ಸಾಗುವಳಿ ಭೂಮಿಯ ಹಕ್ಕು ಪತ್ರ ನೀಡದೇ ಅವರನ್ನು ಮಲತಾಯಿ ಮಕ್ಕಳಂತೆ ಕಾಣುತ್ತಿರುವ ಸರ್ಕಾರಗಳ ಧೋರಣೆ, ಶರಾವತಿ, ಭದ್ರಾ, ಸಾವೇಹಕ್ಲು, ಚಕ್ರಾ, ವಾರಾಹಿ ಮುಂತಾದ ಯೋಜನಾ ಸಂತ್ರಸ್ತರ ಮೇಲೆ ಸರ್ಕಾರವೇ ನಡೆಸುತ್ತಿರುವ ಮಾನವ ಹಕ್ಕು ಉಲ್ಲಂಘನೆಗಳು ಮಿತಿ ಮೀರಿವೆ. ಒಂದು ಕಡೆ ನೀರಾವರಿ ಮತ್ತು ಜಲವಿದ್ಯುತ್‌ ಯೋಜನೆಗಳ ಮೂಲಕ ಮಲೆನಾಡಿನ ಭೂಮಿಯನ್ನು ಮುಳುಗಿಸಿ ಜಮೀನು, ಮನೆ ಕಿತ್ತುಕೊಂಡ ಸರ್ಕಾರ, ಅವರಿಗೆ ನ್ಯಾಯಯುತ ಪರಿಹಾರ ಮತ್ತು ಪುನರ್ವಸತಿ ನೀಡದೆ ಮಾನವ ಹಕ್ಕುಗಳ ದಮನ ಮಾಡಿತು. ಬಳಿಕ ಅವರು ಸ್ವಂತ ಶಕ್ತಿಯ ಮೇಲೆ ಉತ್ತಿಬಿತ್ತಿ ನೆಲೆ ಕಂಡುಕೊಂಡ ಜಮೀನನ್ನು ನಾಲ್ಕೈದು ದಶಕದ ಬಳಿಕ ಅಹೋರಾತ್ರಿ ಅರಣ್ಯ ಭೂಮಿ ಎಂದು ಘೋಷಿಸಿ ಮತ್ತೆ ಬೀದಿಪಾಲು ಮಾಡಿ ಬದುಕುವ ಹಕ್ಕನ್ನೇ ಕಿತ್ತುಕೊಂಡಿದೆ ಎಂಬುದು ಹೋರಾಟಗಾರರ ಆತಂಕ.

ಮಲೆನಾಡಿನ ಒಡಲು ಶರಾವತಿ ಕಣಿವೆಯಲ್ಲಿ1940ರಲ್ಲಿ ನಿರ್ಮಾಣವಾದ ಮಲೆನಾಡಿನ ಮೊದಲ ಜಲಾಶಯ ಹಿರೇಭಾಸ್ಕರ ಅಣೆಕಟ್ಟು ಜನರ ಬದುಕು ಮುಳುಗಿಸುವ ಸರಣಿ ಜಲಾಶಯ ಯೋಜನೆಗಳಿಗೆ ನಾಂದಿ ಹಾಡಿತು. ಅಂದಿನಿಂದ ಈವರೆಗೆ ಶಿವಮೊಗ್ಗ, ಚಿಕ್ಕಮಗಳೂರು, ಉತ್ತರಕನ್ನಡ ಸೇರಿದಂತೆ ಮೂರು ಜಿಲ್ಲೆಗಳ ಕೇವಲ ಒಂದು ನೂರು ಕಿಮೀ ವ್ಯಾಪ್ತಿಯಲ್ಲಿ ಹತ್ತಕ್ಕೂ ಹೆಚ್ಚು ಜಲಾಶಯಗಳು ನಿರ್ಮಾಣವಾಗಿವೆ. ಅವುಗಳಿಂದ ಲಕ್ಷಾಂತರ ಮಂದಿ ಪರಿಹಾರ, ಪುನರ್ವಸತಿ ಇಲ್ಲದೆ ಅಕ್ಷರಶಃ ಬೀದಿಪಾಲಾಗಿದ್ದಾರೆ. ಸರ್ಕಾರಗಳು ರಾಜ್ಯದ ಅಭಿವೃದ್ಧಿಗಾಗಿ ಬದುಕು ತ್ಯಾಗ ಮಾಡಿದ ಆ ಜನಗಳಿಗೆ ಪರಿಹಾರ, ಪುನರ್ವಸತಿಯನ್ನಂತೂ ನೀಡಿಲ್ಲ, ಕನಿಷ್ಟ ಅವರು ಮತ್ತೆ ಬದುಕು ಕಟ್ಟಿಕೊಂಡಿರುವ ಭೂಮಿಯ ಹಕ್ಕನ್ನು ಕೊಡುವ ಪ್ರಯತ್ನವನ್ನೂ ಮಾಡಿಲ್ಲ.

ಈ ನಡುವೆ 2011-12ರಲ್ಲಿ ಐವತ್ತು ವರ್ಷ ಹಿಂದಿನ ಸುತ್ತೋಲೆಯನ್ನು ಜಾರಿಗೊಳಿಸುವ ತರಾತುರಿಯಲ್ಲಿ ಶಿವಮೊಗ್ಗ ಜಿಲ್ಲೆಯ ಸುಮಾರು ಎರಡು ಲಕ್ಷ ಎಕರೆ ಕಂದಾಯ ಭೂಮಿಯನ್ನು ಅರಣ್ಯ ಜಾಗ ಎಂದು ದಾಖಲೆ ತಿದ್ದುಪಡಿ ಮಾಡಿ ಇಂಡೀಕರಿಸಲಾಗಿದೆ. ಆ ಭೂಮಿಯ ಪೈಕಿ ಕನಿಷ್ಟ ಒಂದೂವರೆ ಲಕ್ಷ ಎಕರೆ ಜಾಗ ಬಗರ್‌ ಹುಕುಂ ಸಾಗುವಳಿ ಪ್ರದೇಶ. ಅಲ್ಲಿ ಮನೆ, ತೋಟ, ಜಮೀನು ಇದ್ದರೂ, ವಾಸ್ತವಾಂಶಗಳನ್ನು ಪರಿಶೀಲಿಸದೇ ದಾಖಲೆ ತಿದ್ದುಪಡಿ ಮಾಡಲಾಗಿದೆ. ಹಾಗಾಗಿ ವಿವಿಧ ಯೋಜನಾ ಸಂತ್ರಸ್ತರು ನೆಲೆಕಂಡುಕೊಂಡಿದ್ದ ಈ ಜಾಗ ಕೂಡ ಅರಣ್ಯ ಭೂಮಿ ಎಂದಾಗಿದ್ದು ಅವರನ್ನು ಇದೀಗ ಹಂತಹಂತವಾಗಿ ಒಕ್ಕಲೆಬ್ಬಿಸಲಾಗುತ್ತಿದೆ.


ಮಲೆನಾಡಿಗರ ಮೇಲೆ ಮತ್ತೆ ಮತ್ತೆ ದಬ್ಬಾಳಿಕೆ

ಅಲ್ಲದೆ, ಅರಣ್ಯ ಹಕ್ಕು ಕಾಯ್ದೆಯಡಿ ಭೂ ಮಂಜೂರಾತಿ ಕೋರಿ ವಿವಿಧ ಯೋಜನಾ ಸಂತ್ರಸ್ತರು ಸೇರಿದಂತೆ ಸಾಗುವಳಿದಾರರು ಸಲ್ಲಿಸಿದ್ದ ಅರ್ಜಿಗಳನ್ನು ಯಾವುದೇ ಪ್ರಕ್ರಿಯೆ ಇಲ್ಲದೆ, ಪರಿಶೀಲನೆ ಇಲ್ಲದೆ ಒಂದೇ ಬಾರಿಗೆ ತೊಂಬತ್ತು ಸಾವಿರ ಅರ್ಜಿಗಳನ್ನು ಸಾರಾಸಗಟಾಗಿ ವಜಾ ಮಾಡಲಾಗಿದೆ. ಆ ಮೂಲಕ ಅರಣ್ಯ ಹಕ್ಕು ಕಾಯ್ದೆಯಡಿ ಕೂಡ ಯೋಜನಾ ಸಂತ್ರಸ್ತರಿಗೆ ಭೂಮಿಯ ಹಕ್ಕು ಸಿಗದಂತೆ ನೋಡಿಕೊಳ್ಳಲಾಗಿದೆ. ಅದೇ ಹೊತ್ತಿಗೆ ಬಗರ್‌ಹುಕುಂ ಸಕ್ರಮ ಕೋರಿ ಫಾರಂ 57ರ ಅಡಿ ಸಲ್ಲಿಕೆಯಾಗಿದ್ದ ಜಿಲ್ಲೆಯ 1.5 ಲಕ್ಷ ಅರ್ಜಿಗಳನ್ನು ಕೂಡ ಯಾವುದೇ ಪ್ರಕ್ರಿಯೆ ನಡೆಸದೆ ಮೂಲೆಗುಂಪು ಮಾಡಲಾಗಿದೆ. ಅಂದರೆ, ಒಂದು ಕಡೆ ನೆಲೆ ಕಂಡುಕೊಂಡ ಭೂಮಿಯನ್ನು ಅದರ ಅನುಭವದಾರರಿಗೆ ಯಾವುದೇ ಮಾಹಿತಿ ನೀಡದೇ ಏಕಾಏಕಿ ಅರಣ್ಯ ಎಂದು ಘೋಷಿಸಿ ಕಿತ್ತುಕೊಳ್ಳಲಾಗಿದೆ, ಮತ್ತೊಂದು ಕಡೆ ಸಾಗುವಳಿದಾರರು ಅರಣ್ಯ ಕಾಯ್ದೆ ಮತ್ತು ಬಗರ್‌ಹುಕಂ ಕಾಯ್ದೆಯ ಆಶ್ರಯ ಪಡೆಯುವ ಅವಕಾಶಗಳನ್ನೂ ದುರುದ್ದೇಶದಿಂದ ಕಿತ್ತುಕೊಳ್ಳಲಾಗಿದೆ. ಹಾಗಾಗಿ ಇಡೀ ಮಲೆನಾಡಿನ ಬಹುತೇಕ ಸಾಗುವಳಿದಾರರು ಇಂದು ತುಂಡು ಭೂಮಿಯನ್ನೂ ಕಳೆದುಕೊಂಡು ಮತ್ತೊಮ್ಮೆ ಅಕ್ಷರಶಃ ಬೀದಿಪಾಲಾಗಿದ್ದಾರೆ ಎಂದು ಹೋರಾಟದ ಹಿಂದಿನ ಕಾರಣಗಳನ್ನು ವಿವರಿಸುತ್ತಾರೆ ದಶಕಗಳಿಂದ ರೈತ ಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿರುವ ಮಲೆನಾಡು ರೈತ ಹೋರಾಟ ಸಮಿತಿಯ ತೀ ನಾ ಶ್ರೀನಿವಾಸ್.‌

ʼದ ಫೆಡರಲ್‌ ಕರ್ನಾಟಕʼದೊಂದಿಗೆ ಮಾತನಾಡಿದ ಅವರು, ಕಳೆದ ಅರವತ್ತು ವರ್ಷಗಳಿಂದ ಮಲೆನಾಡಿನ ರೈತರ ಮೇಲೆ ನಿರಂತರ ದಬ್ಬಾಳಿಕೆ ನಡೆಯುತ್ತಿದೆ. ಮೊದಲು ಸಾಲು ಸಾಲು ಜಲಾಶಯ ಕಟ್ಟಿ ಜನರನ್ನು ಮುಳುಗಿಸಿದ ಸರ್ಕಾರ, ಕಳೆದ ಎರಡು ದಶಕದಿಂದ ಅರಣ್ಯ, ವನ್ಯಜೀವಿ, ಸರ್ಕಾರಿ ಭೂ ಕಬಳಿಕೆಯಂತಹ ವಿವಿಧ ಕಾನೂನುಗಳನ್ನು ಕದ್ದುಮುಚ್ಚಿ ಜಾರಿ ಮಾಡುವ ಮೂಲಕ ಮತ್ತು ಜನರ ನ್ಯಾಯಯುತ ಅರ್ಜಿಗಳನ್ನು ಸಾರಾಸಗಟಾಗಿ ತಿರಸ್ಕರಿಸುವ ಮೂಲಕ,.. ಹೀಗೆ ಹಲವು ರೀತಿಯಲ್ಲಿ ಜನರನ್ನು ನಿರ್ಗತಿಕರನ್ನಾಗಿ, ನಿರ್ವಸತಿಗರನ್ನಾಗಿ ಮಾಡಲಾಗುತ್ತಿದೆ. ಲಿಂಗನಮಕ್ಕಿ ಜಲಾಶಯ ನಿರ್ಮಾಣವಾಗಿ ಎಪ್ಪತ್ತು ವರ್ಷ ಕಳೆದರೂ ಈವರೆಗೂ ಆ ಯೋಜನೆಯ ಸಂತ್ರಸ್ತರಿಗೆ ಪುನರ್ಸವತಿ ಭೂಮಿ ಹಕ್ಕು ನೀಡಲಾಗಿಲ್ಲ. ಮಾತ್ರವಲ್ಲ, ಆ ಸಂತ್ರಸ್ತರು ನೂರಾರು ಕಷ್ಟಕಾರ್ಪಣ್ಯ ಅನುಭವಿಸಿ ಸಾಗುವಳಿ ಮಾಡಿರುವ ಭೂಮಿಯನ್ನೂ ಕಿತ್ತುಕೊಂಡು ಮತ್ತೆ ಅವರನ್ನು ಬೀದಿ ಪಾಲು ಮಾಡಲಾಗುತ್ತಿದೆ ಎಂದರೆ ಸರ್ಕಾರಗಳು ಈ ಜನರ ತ್ಯಾಗಕ್ಕೆ ಯಾವ ಬೆಲೆ ಕೊಟ್ಟಿವೆ ಎಂಬುದು ಅರ್ಥವಾಗುತ್ತದೆ. ಈ ಜನರ ಮೇಲಿನ ಮಾನವ ಹಕ್ಕುಗಳ ಉಲ್ಲಂಘನೆಯ ಸರಣಿ ಇನ್ನೂ ಮುಂದುವರಿದಿದೆ. ಆ ಹಿನ್ನೆಲೆಯಲ್ಲೇ ಇದೀಗ ಮಾಡು ಇಲ್ಲವೇ ಮಡಿ ಎಂಬ ಹೋರಾಟ ಕೈಗೆತ್ತಿಕೊಂಡಿದ್ದೇವೆ ಎಂದು ವಿವರಿಸಿದರು.

ಮಲೆನಾಡಿನ ಬದುಕು ಉಳಿವಿಗೆ ಅಂತಿಮ ಹೋರಾಟ

ವಿವಿಧ ಯೋಜನೆ ಸಂತ್ರಸ್ತರಿಗೆ ಹಕ್ಕುಪತ್ರ ಕೊಡಬೇಕು, ಅರಣ್ಯಹಕ್ಕು ಅರ್ಜಿಗಳನ್ನು ಪುನರ್‌ ಪರಿಶೀಲನೆ ನಡೆಸಿ ಶಿವಮೊಗ್ಗ ಜಿಲ್ಲೆಯನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಭೂ ಹಕ್ಕು ಮಂಜೂರಾತಿ ನೀಡಬೇಕು, ಸಿಂಗಳೀಕ ಅಭಯಾರಣ್ಯ ಘೋಷಣೆ ರದ್ದು ಮಾಡಬೇಕು, ಕೆಪಿಸಿ ಭೂಮಿಯನ್ನು ವಾರಸುದಾರರಿಗೆ ವಾಪಸ್‌ ಮಾಡಬೇಕು, ಉರುಳುಗಲ್ಲು ಮತ್ತಿತರ ಶರಾವತಿ ಸಂತ್ರಸ್ತರ ಕುಗ್ರಾಮಗಳಿಗೆ ನಾಗರಿಕ ಸೌಲಭ್ಯ ಕಲ್ಪಿಸಬೇಕು ಎಂಬುದೂ ಸೇರಿದಂತೆ ಒಟ್ಟು ಹದಿನಾಲ್ಕು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮಲೆನಾಡು ರೈತ ಹೋರಾಟ ಸಮಿತಿ, ಎಚ್‌ ಗಣಪತಿಯಪ್ಪ ಸ್ಥಾಪಿತ ಶಿವಮೊಗ್ಗ ಜಿಲ್ಲಾ ರೈತ ಸಂಘ, ಮುಳುಗಡೆ ಸಂತ್ರಸ್ತರು ಮತ್ತು ಭೂ ಹಕ್ಕು ವಂಚಿತರ ಸಂಯುಕ್ತ ವೇದಿಕೆ ಸೇರಿದಂತೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಸೋಮವಾರ(ಅ.21)ದಿಂದ ಸಾಗರದಲ್ಲಿ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹಕ್ಕೆ ಕರೆ ಕೊಡಲಾಗಿದೆ.

“ಇದು ನಮ್ಮ ಮಲೆನಾಡಿನ ಬದುಕನ್ನು ಉಳಿಸಿಕೊಳ್ಳುವ ಅಂತಿಮ ಹೋರಾಟ. ನಿರಂತರ ಸರ್ಕಾರಗಳು ಮಲೆನಾಡಿಗರ ಮೇಲೆ ನಡೆಸುತ್ತಿರುವ ಮಾನವ ಹಕ್ಕು ಉಲ್ಲಂಘನೆ ಮತ್ತು ಅನ್ಯಾಯಗಳನ್ನು ವಿರೋಧಿಸಿ ನಮಗೆ ಸಂವಿಧಾನದ 6ನೇ ಪರಿಚ್ಛೇಧದಡಿ ಪ್ರತ್ಯೇಕ ರಾಜ್ಯ ಸ್ಥಾನಮಾನಕ್ಕೆ ಹಕ್ಕು ಮಂಡಿಸಲೂ ನಾವು ಹಿಂಜರಿಯುವುದಿಲ್ಲ. ಹೈದರಾಬಾದ್‌ ಕರ್ನಾಟಕದ ಜನ ಅಲ್ಲಿನ ಪ್ರಾದೇಶಿಕ ಅಸಮತೋಲನದ ವಿರುದ್ಧ ದನಿ ಎತ್ತಿದ ಪರಿಣಾಮ ಅವರಿಗೆ ಈಗ ವಿಶೇಷ ಸ್ಥಾನ ಮಾನ ಸಿಕ್ಕಿದೆ. ಮಲೆನಾಡಿನ ವಿಷಯದಲ್ಲಿ ಸರ್ಕಾರವೇ ಸೃಷ್ಟಿಸಿರುವ ದೊಡ್ಡ ಮಾನವೀಯ ಬಿಕ್ಕಟ್ಟು ನಿರ್ಮಾಣವಾಗಿದೆ. ಜನರ ಬದುಕು ಹಕ್ಕನ್ನೇ ವಿವಿಧ ಯೋಜನೆ, ಕಾನೂನುಗಳ ಹೆಸರಲ್ಲಿ ದಮನ ಮಾಡಲಾಗಿದೆ. ಸರ್ಕಾರದ ಇಂತಹ ಅಮಾನವೀಯ, ಅಸಂವಿಧಾನಿಕ ದಬ್ಬಾಳಿಕೆಯನ್ನು ಪ್ರಶ್ನಿಸಿ ನಾನು ಪ್ರತ್ಯೇಕ ರಾಜ್ಯದ ಕೂಗು ಮೊಳಗಿಸುತ್ತಿದ್ದೇವೆ” ಎಂದು ತೀ ನಾ ಶ್ರೀನಿವಾಸ್‌ ಹೋರಾಟದ ದಿಕ್ಕುದೆಸೆಯ ಕುರಿತು ವಿವರಿಸಿದರು.


ಪ್ರತ್ಯೇಕ ರಾಜ್ಯದ ಕೂಗು ಇದೇ ಮೊದಲಲ್ಲ!

ಹೌದು, ಮಲೆನಾಡಿನಲ್ಲಿ ಪ್ರತ್ಯೇಕ ರಾಜ್ಯದ ಕೂಗು ಇದೇ ಮೊದಲ ಬಾರಿಗೆ ಕೇಳುತ್ತಿಲ್ಲ. ಮೂರು ದಶಕದ ಹಿಂದೆ, 1996-97 ರಲ್ಲಿ ಸಾಗರ ಸುತ್ತಮುತ್ತಲ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಸರ್ಕಾರ ಸಮೀಕ್ಷೆ ಆರಂಭಿಸಿದಾಗ ಕೂಡ ಮಲೆನಾಡಿನ ಜನ ಸಾಗರ ಪಟ್ಟಣದಲ್ಲಿ ದೊಡ್ಡ ಪ್ರತಿಭಟನೆ ನಡೆಸಿದ್ದರು. ಆ ವೇಳೆ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ್ದ ಮ್ಯಾಗ್ಸಸ್ಸೇ ಪ್ರಶಸ್ತಿ ಪುರಸ್ಕತ ಕೆ ವಿ ಸುಬ್ಬಣ್ಣ ಅವರು ಮಲೆನಾಡಿನ ಜನರ ಸಂಕಷ್ಟಗಳ ಸರಮಾಲೆ ಮುಂದುವರಿದಿದೆ. ಇಲ್ಲಿನ ಶರಾವತಿ ಯೋಜನೆ ಇರಬಹುದು, ಇಲ್ಲಿನ ಕೃಷಿಕರ ಸಮಸ್ಯೆಗಳಿರಬಹುದು, ಕನಿಷ್ಟ ನಾಗರಿಕ ಸೌಲಭ್ಯಗಳಿರಬಹುದು, ಸರ್ಕಾರಗಳು ಕುರುಡಾಗಿವೆ. ಆದರೆ, ತಮಗೆ ಲಾಭವಿದೆ ಎಂದಾದರೆ ಗಣಿಗಾರಿಕೆಯಂತಹ ಯೋಜನೆಗಳನ್ನು ಸ್ಥಳೀಯರ ಹಿತ ಬಲಿಕೊಟ್ಟು ಹೇರುತ್ತಿವೆ. ಇದು ಮುಂದೊಂದು ದಿನ ಪ್ರತ್ಯೇಕ ಮಲೆನಾಡು ರಾಜ್ಯದ ಕೂಗಿಗೆ ಕಾರಣವಾಗಬಹುದು ಎಂಬ ಎಚ್ಚರಿಕೆ ನೀಡಿದ್ದರು.

ಅಲ್ಲದೆ, ಹತ್ತು ವರ್ಷದ ಹಿಂದೆ ಕಸ್ತೂರಿ ರಂಗನ್‌ ವರದಿ ಮತ್ತು ಇಂಡೀಕರಣ ವಿಷಯದಲ್ಲಿ ರಚನೆಯಾಗಿದ್ದ ರಾಜ್ಯ ಸರ್ಕಾರದ ಸದನ ಸಮಿತಿ ಶಿವಮೊಗ್ಗ ಜಿಲ್ಲಾ ಪಂಚಾಯ್ತಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕೂಡ ಹೋರಾಟಗಾರರು ಮಲೆನಾಡಿನ ಮೇಲೆ ಸರ್ಕಾರಗಳು ನಡೆಸುತ್ತಿರುವ ದಬ್ಬಾಳಿಕೆಗಳು ಮುಂದುವರಿದರೆ ನಾವು ಪ್ರತ್ಯೇಕ ರಾಜ್ಯ ಬೇಡಿಕೆ ಇಡುವುದು ಅನಿವಾರ್ಯವಾಗಲಿದೆ ಎಂದು ಸದನ ಸಮಿತಿಯ ಮುಂದೆಯೇ ಹೇಳಿದ್ದರು.

ಪ್ರತ್ಯೇಕತೆ ದನಿ ಎತ್ತುವುದು ಅನಿವಾರ್ಯ

“ವಿವಿಧ ಯೋಜನಾ ಸಂತ್ರಸ್ತರ ದಶಕಗಳ ಹೋರಾಟ ಇದೀಗ ನಿರ್ಣಾಯಕ ಘಟ್ಟಕ್ಕೆ ತಲುಪಿದ್ದು, ಇಡೀ ಮಲೆನಾಡಿನ ಮೇಲಿನ ದಬ್ಬಾಳಿಕೆಗೆ ಇತಿಶ್ರೀ ಹಾಡಲು ನಿರ್ಧರಿಸಿದ್ದೇವೆ. ಈ ಹೋರಾಟ ಪಕ್ಷಾತೀತ ಮತ್ತು ಸಿದ್ದಾಂತಾತೀತವಾದದ್ದು. ಇದು ಜನರ ಬದುಕಿನ ಹೋರಾಟ, ಮಲೆನಾಡಿನ ಜನಜೀವನದ ಅಳಿವು-ಉಳಿವಿನ ಹೋರಾಟ. ನಮಗೆ ಈ ಸರ್ಕಾರಗಳು ನಿರಂತರವಾಗಿ ಅನ್ಯಾಯ ಮಾಡಿವೆ. ಹಾಗಾಗಿ ನಾವು ನಮ್ಮದೇ ಪ್ರತ್ಯೇಕ ವ್ಯವಸ್ಥೆಗಾಗಿ ದನಿ ಎತ್ತುವುದು ಇವತ್ತು ಅಸ್ತಿತ್ವದ ಪ್ರಶ್ನೆಯಾಗಿದೆ” ಎಂದು ಹೋರಾಟದ ಅನಿವಾರ್ಯತೆ ವಿವರಿಸಿದ್ದು ಮತ್ತೊಬ್ಬ ನಾಯಕರಾದ ನಗರ ಹೋಬಳಿ ನಾಗರಿಕ ವೇದಿಕೆಯ ಶ್ರೀಕರ್.‌

ಒಟ್ಟಾರೆ, ಏಳು ದಶಕಗಳ ಸರ್ಕಾರದ ನಿರ್ಲಕ್ಷ್ಯ ಮತ್ತು ವಾಸ್ತವಿಕ ಮಾನವೀಯ ಬಿಕ್ಕಟ್ಟು ಅರಿಯದೇ ಕಾನೂನು ಅಸ್ತ್ರ ಝಳಪಿಸುವ ಆಡಳಿತ ವ್ಯವಸ್ಥೆಯ ವಿರುದ್ಧ ಮಲೆನಾಡು ಸಿಡಿದೆದ್ದಿದೆ. ಪ್ರತ್ಯೇಕ ರಾಜ್ಯದ ಕೂಗು ಮೊಳಗಿಸಲು ಸಜ್ಜಾಗಿದೆ.

Read More
Next Story