
ಮನರೇಗಾ ತಿದ್ದುಪಡಿ ವಿರೋಧಿಸಿ ಜ.22ಕ್ಕೆ ದೆಹಲಿಯಲ್ಲಿ ಬೃಹತ್ ಪ್ರತಿಭಟನೆ: ಖರ್ಗೆ
ನೂತನ ಯೋಜನೆ ಜಾರಿಗೊಳಿಸುವ ಮೂಲಕ ಕೇಂದ್ರ ಸರ್ಕಾರ ರಾಜ್ಯಗಳಿಗೆ ಸಾವಿರಾರು ಕೋಟಿ ಹೊರೆ ಹಾಕಿದೆ. ರಾಜ್ಯದ ಪಾಲನ್ನು ಶೇ.10 ರಿಂದ ಶೇ.40ಕ್ಕೆ ಏರಿಕೆ ಮಾಡಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ಮನರೇಗಾ ಯೋಜನೆ ತಿದ್ದುಪಡಿ ಮಾಡಿ ವಿಬಿ ಜಿ ರಾಮ್ ಜಿ ಯೋಜನೆಯನ್ನು ಜಾರಿಗೊಳಿಸುವ ಮೂಲಕ ಕೆಲಸ ಮಾಡುವ ಹಕ್ಕನ್ನು ಕಸಿದುಕೊಂಡಿದ್ದಾರೆ. ನೂತನ ಯೋಜನೆಯು ಬಡವರಿಗೆ ಆಘಾತ ನೀಡದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.
ಬೆಂಗಳೂರಿನಲ್ಲಿ ಸೋಮವಾರ(ಜ.19) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮನರೇಗಾ ಯೋಜನೆ ತಿದ್ದಪಡಿ ವಿರುದ್ಧ ಜ.22ರಂದು ದೆಹಲಿಯ ನೆಹರು ಕ್ರೀಡಾಂಗಣದಲ್ಲಿ ಹೋರಾಟ ನಡೆಯಲಿದೆ. ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳು ಈ ಹೋರಾಟದಲ್ಲಿ ಭಾಗವಹಿಸಲಿವೆ ಎಂದರು.
ನೂತನ ಯೋಜನೆ ಜಾರಿಗೊಳಿಸುವ ಮೂಲಕ ಕೇಂದ್ರ ಸರ್ಕಾರ ರಾಜ್ಯಗಳಿಗೆ ಸಾವಿರಾರು ಕೋಟಿ ಹೊರೆ ಹಾಕಿದೆ. ರಾಜ್ಯದ ಪಾಲನ್ನು ಶೇ.10 ರಿಂದ ಶೇ.40ಕ್ಕೆ ಏರಿಕೆ ಮಾಡಿದ್ದಾರೆ. ಕೂಡಲೇ ಈ ಯೋಜನೆಯನ್ನ ಕೈ ಬಿಡಬೇಕು, ದೇಶದಲ್ಲಿನ ಬಡವರು ಜೀತ ಕಾರ್ಮಿಕರಾಗಬೇಕು ಇಲ್ಲವೇ, ಗುಲಾಮರಾಗಿ ಬಾಳಬೇಕು ಎಂದು ಕೇಂದ್ರ ಸರ್ಕಾರ ಯೋಜನೆ ಮಾಡಿದೆ. ಕೇಂದ್ರ ಸರ್ಕಾರದ ಬಜೆಟ್ ಅಧಿವೇಶನದಲ್ಲಿಯೂ ನಾವು ಇದರ ಬಗ್ಗೆ ಚರ್ಚೆ ಮಾಡಲಿದ್ದೇವೆ ಎಂದು ತಿಳಿಸಿದರು.
ಮನರೇಗಾ ಯೋಜನೆ ತಿದ್ದಪಡಿ ಮಾಡಿ ನೂತನ ವಿಬಿ ಜಿ ರಾಮ್ ಜಿ ಯೋಜನೆ ತಂದಿರುವುದರ ವಿರುದ್ಧ ಕರ್ನಾಟಕ ಸೇರಿದಂತೆ ದೇಶದೆಲ್ಲೆಡೆ ಈಗಾಗಲೇ ಹೋರಾಟ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೂ ಈ ಹೋರಾಟ ರೂಪುಗೊಂಡು ಜನಸಾಮಾನ್ಯರಿಗೆ ಕೇಂದ್ರ ಸರ್ಕಾರದ ನೂತನ ಯೋಜನೆಯ ನ್ಯೂನತೆಗಳನ್ನು ತಿಳಿಸಲಾಗುವುದು ಎಂದರು.
ಜ.26ಕ್ಕೆ ರಾಜ್ಯದಲ್ಲಿ ಪಾದಯಾತ್ರೆ
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಯೋಜನೆ ವಿರುದ್ದ ಇತ್ತೀಚೆಗೆ ಪ್ರತಿಕ್ರಿಯಿಸಿದ್ದ ಡಿಸಿಎಂ ಡಿ.ಕೆ. ಶಿವಕುಮಾರ್, ಜ.26ರ ಗಣರಾಜ್ಯೋತ್ಸವದಂದು ಈ ಅಭಿಯಾನ ಆರಂಭವಾಗಲಿದ್ದು, ಪ್ರತಿ ಕ್ಷೇತ್ರದಲ್ಲಿ 5 ರಿಂದ 10 ಕಿ.ಮೀ ಪಾದಯಾತ್ರೆ ನಡೆಸುವ ಮೂಲಕ ನೇರವಾಗಿ ಕಾರ್ಮಿಕರನ್ನು ತಲುಪುವ ಯೋಜನೆ ಇದಾಗಿದೆ. ಜ.6ರಿಂದ ಫೆ.2ರವರೆಗೆ ತಾಲ್ಲೂಕು ಮಟ್ಟದಲ್ಲಿ ಪಂಚಾಯಿತಿ ಸದಸ್ಯರು ಮತ್ತು ಫಲಾನುಭವಿಗಳನ್ನು ಒಳಗೊಂಡ ಬೃಹತ್ ಸಭೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ವಿಬಿ ಜಿ ರಾಮ್ ಜಿ ಕಾಯ್ದೆ ಬಗ್ಗೆ ಚರ್ಚೆ ಮಾಡಲು ಎರಡು ದಿನ ವಿಶೇಷ ಅಧಿವೇಶನ ಕರೆಯುವ ಆಲೋಚನೆ ಸಹ ಇದೆ. ಇದರಿಂದ ಗ್ರಾಮೀಣ ಪ್ರದೇಶದ ಮೇಲೆ ಹೇಗೆ ದುಷ್ಪರಿಣಾಮ ಬೀರಲಿದೆ ಎಂದು ಜನರಲ್ಲಿ ಅರಿವು ಮೂಡಿಸಲಾಗುವುದು. ಮತ್ತೆ ನರೇಗಾವನ್ನು ಮರುಸ್ಥಾಪಿಸುವ ತನಕ ಹೋರಾಟ ಮಾಡಲಾಗುವುದು ಎಂದು ತಿಳಿಸಿದ್ದರು.
ಹಣದ ಹರಿವಿಗೆ ಕತ್ತರಿ
"ರಾಜ್ಯಕ್ಕೆ ಪ್ರತಿ ವರ್ಷ ಸುಮಾರು 6 ಸಾವಿರ ಕೋಟಿ ರೂಪಾಯಿ ನರೇಗಾ ಅನುದಾನ ಹರಿದುಬರುತ್ತಿತ್ತು. ಸರಾಸರಿ ಲೆಕ್ಕದಲ್ಲಿ ಪ್ರತಿ ಪಂಚಾಯಿತಿಗೆ 1 ಕೋಟಿ ರೂಪಾಯಿ ಮೊತ್ತದ ಕಾಮಗಾರಿಗಳಿಗೆ ಇದು ಅವಕಾಶ ಕಲ್ಪಿಸುತ್ತಿತ್ತು. ಈ ಬೃಹತ್ ಮೊತ್ತದ ಹಣವು ಹಳ್ಳಿಗಳ ಮೂಲಸೌಕರ್ಯ ಮತ್ತು ಬಡವರ ಕೈಗೆ ನೇರ ವೇತನವಾಗಿ ಸಿಗುತ್ತಿತ್ತು. ಕೇಂದ್ರದ ಹೊಸ ಮಸೂದೆಯಿಂದ ಈ ಹಣಕಾಸಿನ ಹರಿವಿಗೆ ಕತ್ತರಿ ಬೀಳುವ ಭೀತಿಯಿದೆ. ಇದು ಕೇವಲ ಬಡವರ ಕೂಲಿಯಲ್ಲ, ಬದಲಾಗಿ ಹಳ್ಳಿಗಳ ಆರ್ಥಿಕ ಚಲಾವಣೆಯ ಶಕ್ತಿಯಾಗಿದೆ ಎಂದು ಹೇಳಿದ್ದರು.

