
ಬಸವ ತತ್ವ ಪ್ರಚಾರಕ್ಕೆ 500 ಕೋಟಿ ರೂ ಅನುದಾನಕ್ಕೆ ಲಿಂಗಾಯತ ಸ್ವಾಮೀಜಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ಬಸವ ತತ್ವ ಪ್ರಚಾರಕ್ಕೆ 500 ಕೋಟಿ ರೂ. ಅನುದಾನ: ಲಿಂಗಾಯತ ಮಠಾಧೀಶರ ಪಟ್ಟು
ಬಸವಣ್ಣನವರ ಪರಂಪರೆಯನ್ನು ಹರಡುವ ಉದ್ದೇಶದಿಂದ ತಮ್ಮ 16ನೇ ಬಜೆಟ್‌ನಲ್ಲಿ 500 ಕೋಟಿ ರೂ.ಗಳನ್ನು ಮೀಸಲಿಡುವಂತೆ ಒತ್ತಾಯಿಸಿ ವೀರಶೈವ-ಲಿಂಗಾಯತ ಸಮುದಾಯದ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದೆ.
12ನೇ ಶತಮಾನದ ಕವಿ-ಸುಧಾರಕ ಬಸವಣ್ಣನವರ ಪರಂಪರೆಯನ್ನು ಹರಡುವ ಉದ್ದೇಶದಿಂದ ತಮ್ಮ 16ನೇ ಬಜೆಟ್‌ನಲ್ಲಿ 500 ಕೋಟಿ ರೂ.ಗಳನ್ನು ಮೀಸಲಿಡುವಂತೆ ಒತ್ತಾಯಿಸಿ ವೀರಶೈವ-ಲಿಂಗಾಯತ ಸಮುದಾಯದ ನಿಯೋಗ ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ.
ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಲಿಂಗಾಯತ ಸ್ವಾಮೀಜಿಗಳು, ಬಸವಣ್ಣನವರ ವಿಚಾರಗಳು ಮತ್ತು ತತ್ವವನ್ನು ಯುವ ಪೀಳಿಗೆಗೆ ತಲುಪಿಸಲು ಐದು ವರ್ಷಗಳ ಕಾಲ ಹಣವನ್ನು ಮೀಸಲಿಡುವಂತೆ ಮುಖ್ಯಮಂತ್ರಿಯವರನ್ನು ಒತ್ತಾಯಿಸಿದರು.
ಇತ್ತೀಚೆಗೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನದಲ್ಲಿ ಈ ಕುರಿತು ನಿರ್ಣಯ ಕೈಕೊಳ್ಳಲಾಗಿದೆ ಎಂದು ಮಠಾಧೀಶರು ಸಿದ್ದರಾಮಯ್ಯ ಅವರಿಗೆ ತಿಳಿಸಿದರು.
ಸ್ವಾಮೀಜಿಗಳ ನಿಯೋಗದ ಬೇಡಿಕೆಗಳು
ಅಕ್ಷರಧಾಮ ಮಾದರಿಯಲ್ಲಿ 25 ಎಕರೆ ಜಾಗದಲ್ಲಿ "ಶರಣ ದರ್ಶನ" ಕೇಂದ್ರವನ್ನು ಸ್ಥಾಪಿಸುವುದು, "ಶರಣ ಸ್ಮಾರಕ ರಕ್ಷಣಾ ಪ್ರಾಧಿಕಾರ" ಮತ್ತು ಬಸವಕಲ್ಯಾಣದಲ್ಲಿ ವಚನ ವಿಶ್ವವಿದ್ಯಾಲಯವನ್ನು ಸ್ಥಾಪಿಸುವುದು ಮುಖ್ಯಮಂತ್ರಿಯವರ ಮುಂದೆ ಇಟ್ಟ ನಿರ್ದಿಷ್ಟ ಬೇಡಿಕೆಗಳಲ್ಲಿ ಸೇರಿವೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ನಿಯಮಿತವಾಗಿ ಕಾರ್ಯಕ್ರಮಗಳನ್ನು ನಡೆಸಬಹುದಾದ ಎಲ್ಲಾ ಜಿಲ್ಲೆಗಳಲ್ಲಿ "ಬಸವ ಭವನ"ಗಳ ಅಗತ್ಯವನ್ನು ನಿಯೋಗವು ಒತ್ತಿ ಹೇಳಿದೆ.
ವಚನ ಸಾಹಿತ್ಯ ಮತ್ತು ಹಸ್ತಪ್ರತಿಗಳನ್ನು ಸಂರಕ್ಷಿಸಲು, ಪ್ರಕಟಿಸಲು ಮತ್ತು ಸಂಗ್ರಹಿಸಲು ಹಣವನ್ನು ಹಂಚಿಕೆ ಮಾಡುವುದು ನಿಯೋಗ ಮಾಡಿದ ಮತ್ತೊಂದು ಬೇಡಿಕೆಯಾಗಿದೆ. ಈ ಮಧ್ಯೆ ಸಿದ್ದರಾಮಯ್ಯ ಅವರು ಬಸವಣ್ಣನವರ ಸಿದ್ಧಾಂತ ಮತ್ತು ವಚನ ಸಂಪ್ರದಾಯಕ್ಕೆ ತಮ್ಮ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದರು. ಅವರು ತಮ್ಮ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸುವುದಾಗಿ ಶ್ರೀಗಳಿಗೆ ಭರವಸೆ ನೀಡಿದರು.
ಆಂತರಿಕವಾಗಿ ವಿರೋಧಿಸುತ್ತಿದ್ದಾರೆ
ಬಸವಣ್ಣನವರ ವಿಚಾರ ಮತ್ತು ಹೋರಾಟ ಜಾತ್ಯತೀತ ಸಮಾಜ ನಿರ್ಮಾಣಕ್ಕೆ ಪೂರಕ, ಜಾತಿವಾದಿ ಪಟ್ಟಭದ್ರರಿಗೆ ಬಸವಣ್ಣನವರ ವಿಚಾರಗಳು ಹಿಡಿಸಲ್ಲ. ಪಟ್ಟಭದ್ರರು ಬಹಿರಂಗವಾಗಿ ಬಸವಣ್ಣನವರನ್ನು ವಿರೋಧಿಸಲು ಸಾಧ್ಯವಿಲ್ಲ. ಅದಕ್ಕೇ ಆಂತರಿಕವಾಗಿ ವಿರೋಧಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.
ಗೋ.ರು.ಚ ಅಧ್ಯಕ್ಷತೆಯಲ್ಲಿ ಅನುಭವ ಮಂಟಪ ಪುನರುಜ್ಜಿವನಕ್ಕೆ ಮುಂದಾಗಿದ್ದು ನಾವು. ಅನುಭವ ಮಂಟಪ ಜಗತ್ತಿನ ಮೊದಲ ಪ್ರಜಾಪ್ರಭುತ್ವದ ವೇದಿಕೆ. ಯಾರ ಒತ್ತಾಯವೂ ಇಲ್ಲದ ವೇಳೆಯಲ್ಲೇ ನಮ್ಮ ಸರ್ಕಾರ ಅನುಭವ ಮಂಟಪ ಪುನರುಜ್ಜಿವನಕ್ಕೆ ಮುಂದಾಗಿತ್ತು. ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ್ದು ಕಾಂಗ್ರೆಸ್ ಸರ್ಕಾರ ಎಂದರು.