
ಕುಲಶಾಸ್ತ್ರೀಯ ಅಧ್ಯಯನದಲ್ಲಿದೆ ವೈಜ್ಞಾನಿಕ ಆಧಾರ: ಪರಿಶಿಷ್ಟ ವರ್ಗಕ್ಕೆ ಕುಡುಬಿ ಜನ?
ಕುಡುಬಿ ಸಮುದಾಯವನ್ನು ಎಸ್‌ಟಿಗೆ ಸೇರಿಸುವ ಸಂಬಂಧ ರಾಜ್ಯ ಸರ್ಕಾರವು ಅಂತಿಮ ಹಂತದ ಪರಿಶೀಲನೆ ನಡೆಸುತ್ತಿದೆ. ಶೀಘ್ರದಲ್ಲಿಯೇ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲಿದೆ ಎಂದು ಮೂಲಗಳು ಹೇಳಿವೆ.
ರಾಜ್ಯದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದ ಮಲೆನಾಡು ಭಾಗಗಳಲ್ಲಿ ವಾಸಿಸುತ್ತಿರುವ ಕುಡುಬಿ ಸಮುದಾಯವು ಇಂದು ಸಾಮಾಜಿಕ ನ್ಯಾಯ ಸಿಗುವ ಹೊಸ್ತಿಲಲ್ಲಿ ನಿಂತಿದೆ. ಪ್ರಸ್ತುತ ರಾಜ್ಯದ ಹಿಂದುಳಿದ ವರ್ಗಗಳ ಪಟ್ಟಿಯ ಪ್ರವರ್ಗ-1ರಲ್ಲಿ ಗುರುತಿಸಿಕೊಂಡಿರುವ ಈ ಸಮುದಾಯವು, ತಮಗೆ ಪರಿಶಿಷ್ಟ ಪಂಗಡ (ಎಸ್‌ಟಿ) ಸ್ಥಾನಮಾನ ನೀಡಬೇಕೆಂದು ಕಳೆದ ನಾಲ್ಕೈದು ದಶಕಗಳಿಂದ ನಿರಂತರ ಹೋರಾಟ ನಡೆಸುತ್ತಿದೆ. ಇತ್ತೀಚಿನ ಕುಲಶಾಸ್ತ್ರೀಯ ಅಧ್ಯಯನಗಳು ಈ ಬೇಡಿಕೆಗೆ ವೈಜ್ಞಾನಿಕ ಆಧಾರವನ್ನು ಒದಗಿಸಿದ್ದು, ಸರ್ಕಾರದ ನಿರ್ಧಾರದ ಮೇಲೆ ಸಮುದಾಯದ ಭವಿಷ್ಯ ಅಡಗಿದೆ.
ಕುಡುಬಿ ಸಮುದಾಯದವರು, ವಿಶೇಷವಾಗಿ ಕರ್ನಾಟಕದ ಕರಾವಳಿ ಪ್ರದೇಶಗಳಲ್ಲಿ ವಾಸಿಸುವವರಾಗಿದ್ದಾರೆ. ಮಹಾರಾಷ್ಟ್ರದ ಕುಣ್ಬಿ ಸಮುದಾಯಕ್ಕೆ ಸಂಬಂಧಿಸಿದವರಾಗಿದ್ದು,"ಮರಾಠ ಕುಡುಬಿ ಎಂದು ಕರೆಯಲಾಗುತ್ತದೆ, ಇವರು ಕೊಂಕಣಿ, ಕನ್ನಡ ಮತ್ತು ಮರಾಠಿ ಭಾಷೆಗಳ ಮಿಶ್ರಣವನ್ನು ಬಳಸುತ್ತಾರೆ.
ಇದಲ್ಲದೇ, 16ನೇ ಶತಮಾನದಲ್ಲಿ ಗೋವಾ ಪ್ರಾಂತ್ಯವು ಪೋರ್ಚುಗೀಸರ ವಶದಲ್ಲಿದ್ದ ವೇಳೆ ಅಲ್ಲಿನ ಮೂಲ ನಿವಾಸಿಗಳ ಮೇಲೆ ಮತಾಂತರದ ಒತ್ತಡ ಉಂಟಾಯಿತು. ತಮ್ಮ ಮೂಲ ದ್ರಾವಿಡ ಸಂಪ್ರದಾಯಗಳನ್ನು ಬಿಡಲು ಒಪ್ಪದ ಈ ಜನಾಂಗವು, ರಾತ್ರೋರಾತ್ರಿ ಸಮುದ್ರ ಮಾರ್ಗವಾಗಿ ದಕ್ಷಿಣಕ್ಕೆ ವಲಸೆ ಬಂದಿತು.
ಅಂದು ರಾಜ್ಯದ ಕರಾವಳಿಯ ಅರಣ್ಯ ಪ್ರದೇಶಗಳಲ್ಲಿ ಆಶ್ರಯ ಪಡೆದ ಇವರು, ಅಂದಿನಿಂದ ಇಂದಿನವರೆಗೆ ಈ ಮಣ್ಣಿನ ಅವಿಭಾಜ್ಯ ಅಂಗವಾಗಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಕುಡುಬಿ ಸಮುದಾಯವು ಹಿಂದುಳಿದ ವರ್ಗಗಳ ಪ್ರವರ್ಗ-1 ರ ಪಟ್ಟಿಯಲ್ಲಿದೆ. ಒಬಿಸಿ ಮೀಸಲಾತಿಯಡಿಯಲ್ಲಿ ಸೌಲಭ್ಯಗಳನ್ನು ಸಮುದಾಯವು ಪಡೆದುಕೊಳ್ಳುತ್ತಿದೆ.
ಕುಲಶಾಸ್ತ್ರೀಯ ಅಧ್ಯಯನ
ಕುಡುಬಿ ಸಮುದಾಯವನ್ನು ಎಸ್‌ಟಿಗೆ ಸೇರಿಸುವ ಬೇಡಿಕೆಯು ಹಲವು ದಶಕಗಳಿಂದ ಇದೆ. ಪ್ರವರ್ಗ-1 ರಿಂದ ಎಸ್‌ಟಿಗೆ ಸೇರಿಸಬೇಕು ಎಂದು ಕುಲಶಾಸ್ತ್ರೀಯ ಅಧ್ಯಯನ ತಿಳಿಸಿದೆ. 2008 ರಲ್ಲಿ ನಡೆದ ಮೊದಲ ಅಧ್ಯಯನವು ಇವರನ್ನು ಎಸ್‌ಟಿಗೆ ಸೇರಿಸಲು ಶಿಫಾರಸು ಮಾಡಿತ್ತು. ನಂತರ, ಮುಖ್ಯಮಂತ್ರಿ ಸಿದ್ಧರಾಮಯ್ಯನವರ ನೇತೃತ್ವದ ಸರ್ಕಾರವು 2014-15 ರಲ್ಲಿ ಪ್ರತಿಷ್ಠಿತ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆ (ಐಸಾಕ್) ಮೂಲಕ ಮರು ಅಧ್ಯಯನ ನಡೆಸಿತು. ಈ ಸಂಸ್ಥೆಯ ಅಂತಿಮ ವರದಿಯು ಕುಡುಬಿ ಸಮುದಾಯವು ಪರಿಶಿಷ್ಟ ಪಂಗಡಕ್ಕೆ ಸೇರಲು ಅರ್ಹವಾಗಿದೆ ಎಂದು ಸ್ಪಷ್ಟವಾಗಿ ಶಿಫಾರಸು ಮಾಡಿದೆ. ಸಂವಿಧಾನದ ಅನುಚ್ಛೇದ 341 ಮತ್ತು 342 ರ ಪ್ರಕಾರ, ಪಟ್ಟಿಗೆ ಸೇರ್ಪಡೆ ಮಾಡುವ ಅಧಿಕಾರ ಕೇವಲ ಕೇಂದ್ರ ಸರ್ಕಾರ ಮತ್ತು ಸಂಸತ್ತಿಗೆ ಇದೆ. ರಾಜ್ಯ ಸರ್ಕಾರವು ಕೇವಲ ವರದಿಯನ್ನು ಸಿದ್ಧಪಡಿಸಿ ಕೇಂದ್ರಕ್ಕೆ ಶಿಫಾರಸು ಮಾಡಬಹುದಾಗಿದೆ. ಪ್ರಸ್ತುತ ವರದಿಯು ರಾಜ್ಯ ಸರ್ಕಾರದ ಹಂತದಲ್ಲಿ ಅಂತಿಮ ಪರಿಶೀಲನೆಯಲ್ಲಿದೆ. ಶೀಘ್ರದಲ್ಲಿಯೇ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಕುಡುಬಿ ಜನಾಂಗವು ಇಂದಿಗೂ ಆರ್ಥಿಕವಾಗಿ ಹಿಂದುಳಿದಿದೆ. ಅರಣ್ಯ ಹಕ್ಕುಗಳ ಕಾಯ್ದೆಯಡಿ ಇವರಿಗೆ ಸಿಗಬೇಕಾದ ಸೌಲಭ್ಯಗಳು ಇನ್ನೂ ಪೂರ್ಣ ಪ್ರಮಾಣದಲ್ಲಿ ತಲುಪಿಲ್ಲ. ಶಿಕ್ಷಣದ ಮಟ್ಟ ಸುಧಾರಿಸುತ್ತಿದ್ದರೂ, ಉನ್ನತ ಉದ್ಯೋಗಗಳಲ್ಲಿ ಈ ಸಮುದಾಯದ ಪ್ರಾತಿನಿಧ್ಯ ತೀರಾ ಕಡಿಮೆ ಇದೆ. ಇವರ ವಸತಿ ಪ್ರದೇಶಗಳು ಇಂದಿಗೂ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿರುವ ನಿದರ್ಶನಗಳು ಸಾಕಷ್ಟಿವೆ ಎಂದು ಹೇಳಲಾಗಿದೆ.
ಎಸ್‌ಟಿ ಸ್ಥಾನಮಾನ ಏಕೆ ಅಗತ್ಯ?
ಕುಡುಬಿ ಸಮುದಾಯವು ಹಲವು ದಶಕಗಳಿಂದ ಎಸ್‌ಟಿ ಸ್ಥಾನಮಾನಕ್ಕಾಗಿ ಹೋರಾಡುತ್ತಿರುವುದಕ್ಕೆ ಪ್ರಬಲ ಕಾರಣಗಳಿವೆ. ಕೃಷಿ ಕಾರ್ಮಿಕರಾಗಿರುವ ಇವರ ಜೀವನ ಮಟ್ಟ ಇಂದಿಗೂ ತೀರಾ ಕೆಳಮಟ್ಟದಲ್ಲಿದೆ. ಇವರು ವಾಸಿಸುವ ಅನೇಕ ಜಾಗಗಳು ಸರ್ಕಾರಿ ಅಥವಾ ಅರಣ್ಯ ಭೂಮಿಯಾಗಿದ್ದು, ಎಸ್‌ಟಿ ಸ್ಥಾನಮಾನ ಸಿಕ್ಕರೆ ಅರಣ್ಯ ಹಕ್ಕು ಕಾಯ್ದೆಯಡಿ ಇವರಿಗೆ ಭೂಮಿಯ ಹಕ್ಕು ಸುಲಭವಾಗಿ ಸಿಗಲಿದೆ. ಪ್ರವರ್ಗ-1 ರಲ್ಲಿ ಇತರೆ ಅನೇಕ ಸಮುದಾಯಗಳೊಂದಿಗೆ ಸ್ಪರ್ಧಿಸುವುದು ಕಷ್ಟವಾಗಿದೆ.
ಎಸ್‌ಟಿ ಸ್ಥಾನಮಾನ ದೊರೆತರೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಹೆಚ್ಚು ನ್ಯಾಯಸಮ್ಮತ ಅವಕಾಶಗಳು ಲಭ್ಯವಾಗುತ್ತವೆ. ಬುಡಕಟ್ಟು ಸ್ಥಾನಮಾನ ದೊರೆತರೆ ಅವರ ವಿಶಿಷ್ಟ ಕಲೆ ‘ಗುಮ್ಮಟೆ ಪಾಂಗ್’ ಸಂರಕ್ಷಣೆಗಾಗಿ ವಿಶೇಷ ಅನುದಾನಗಳು ದೊರೆಯುತ್ತವೆ ಎಂಬ ಮಾತುಗಳು ಕೇಳಿ ಬಂದಿವೆ.
ಸಾಂಸ್ಕೃತಿಕ ವೈಶಿಷ್ಟ್ಯಗಳು
ಕುಡುಬಿ ಸಮುದಾಯದ ಅಸ್ಮಿತೆಯು ಅವರ ಸಾಂಸ್ಕೃತಿಕ ಆಚರಣೆಗಳಲ್ಲಿ ಅಡಗಿದೆ. ಸಮುದಾಯವು ತನ್ನ ವಿಶಿಷ್ಟ ಸಂಸ್ಕೃತಿಯ ಮೂಲಕ ರಾಜ್ಯದ ಜಾನಪದ ಲೋಕಕ್ಕೆ ಅಪಾರ ಕೊಡುಗೆ ನೀಡಿದೆ. ಇವರು ಮಾತನಾಡುವ ಭಾಷೆ ಕುಡುಬಿ ಕೊಂಕಣಿಯಾಗಿದೆ. ಇದು ಸಾಮಾನ್ಯ ಕೊಂಕಣಿಗಿಂತ ಭಿನ್ನವಾಗಿದ್ದು, ಮರಾಠಿ ಮತ್ತು ಕನ್ನಡದ ಪ್ರಭಾವವನ್ನು ಒಳಗೊಂಡಿದೆ. ಇದೊಂದು ಲಿಪಿಯಿಲ್ಲದ ಭಾಷೆಯಾಗಿದ್ದರೂ, ಮೌಖಿಕ ಪರಂಪರೆಯ ಮೂಲಕ ಜೀವಂತವಾಗಿದೆ. ಸಮುದಾಯದ ಒಳಗೆ ಅರೆ ಕುಡುಬಿ, ಗೋವಾ ಕುಡುಬಿ, ಕೊಡಿಯಾಲ್ ಕುಡುಬಿ, ಕರಿಯ ಕುಡುಬಿ ಮತ್ತು ಜೋಗಿ ಕುಡುಬಿ ಎಂಬ ಐದು ಪ್ರಮುಖ ಪಂಗಡಗಳಿವೆ.
ಇವುಗಳಲ್ಲಿ ಆಚರಣೆಗಳ ವಿಷಯದಲ್ಲಿ ಸೂಕ್ಷ್ಮ ವ್ಯತ್ಯಾಸಗಳಿದ್ದರೂ, ಸಾಂಸ್ಕೃತಿಕವಾಗಿ ಇವರೆಲ್ಲರೂ ಒಂದೇ ಮೂಲಕ್ಕೆ ಸೇರಿದವರು. ಕುಡುಬಿ ಜನಾಂಗದ ಸಂಸ್ಕೃತಿಯ ಜೀವಾಳವೇ 'ಗುಮ್ಮಟೆ'ಯಾಗಿದ್ದು, ಮಣ್ಣಿನಿಂದ ಮಾಡಿದ, ಉಡದ ಚರ್ಮವನ್ನು ಹೊದಿಸಿದ ಈ ವಾದ್ಯವು ಇವರ ಪ್ರತಿ ಹಬ್ಬ-ಹರಿದಿನಗಳಲ್ಲಿ ಮೊಳಗುತ್ತದೆ. ವಿಶೇಷವಾಗಿ 'ಹೋಳಿ' ಅಥವಾ 'ಸುಗ್ಗಿ' ಹಬ್ಬದ ಸಮಯದಲ್ಲಿ ಗುಮ್ಮಟೆ ಬಾರಿಸುತ್ತಾ ಹಾಡುವ ಪದಗಳು ರಾಮಾಯಣ, ಮಹಾಭಾರತದ ಕಥೆಗಳನ್ನು ಒಳಗೊಂಡಿರುತ್ತವೆ. ಈ ಕಲೆಯು ಕೇವಲ ಮನೋರಂಜನೆಯಲ್ಲ, ಬದಲಿಗೆ ಸಮುದಾಯದ ಇತಿಹಾಸವನ್ನು ಮುಂದಿನ ಪೀಳಿಗೆಗೆ ದಾಟಿಸುವ ಮಾಧ್ಯಮವಾಗಿದೆ ಎನ್ನಲಾಗಿದೆ.
ಜನಸಂಖ್ಯಾ ವಿಶ್ಲೇಷಣೆ
ಕುಡುಬಿ ಜನಾಂಗದ ನಿಖರ ಜನಸಂಖ್ಯೆಯ ಬಗ್ಗೆ ಸರ್ಕಾರಿ ಮಟ್ಟದಲ್ಲಿ ಸ್ಪಷ್ಟವಾದ ಅಂಕಿಅಂಶಗಳ ಕೊರತೆಯಿದ್ದರೂ, ಸಮುದಾಯದ ಸಂಘಟನೆಗಳು ನೀಡಿರುವ ಮಾಹಿತಿ ಮಹತ್ವದ್ದಾಗಿದೆ. ರಾಜ್ಯದಲ್ಲಿ ಇವರ ಜನಸಂಖ್ಯೆ ಸುಮಾರು 70 ಸಾವಿರದಿಂದ 80 ಸಾವಿರ ಇರಬಹುದು ಎಂದು ಅಂದಾಜಿಸಲಾಗಿದೆ.ಇವರಲ್ಲಿ ಹೆಚ್ಚಿನವರು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ನೆಲೆಸಿದ್ದಾರೆ. ಮಂಗಳೂರು, ಬಂಟ್ವಾಳ, ಬೆಳ್ತಂಗಡಿ, ಕಾರ್ಕಳ, ಕುಂದಾಪುರ ಮತ್ತು ಉಡುಪಿ ತಾಲ್ಲೂಕುಗಳಲ್ಲಿ ಇವರ ಜನಸಂಖ್ಯೆ ಹೆಚ್ಚಿದೆ.
ಕಾಡಿನ ಅಂಚಿನಲ್ಲಿ ಮತ್ತು ಮೂಲಭೂತ ಸೌಕರ್ಯಗಳಿಲ್ಲದ ಪ್ರದೇಶಗಳಲ್ಲಿ ವಾಸಿಸುವುದರಿಂದ, ಇಂದಿಗೂ ಅನೇಕ ಕುಟುಂಬಗಳು ಯಾವುದೇ ಅಧಿಕೃತ ದಾಖಲೆಗಳಿಗೆ ಸಿಗದೆ ಉಳಿದಿವೆ ಎಂಬುದು ಕಳವಳಕಾರಿ ಸಂಗತಿಯಾಗಿದೆ.
ರಾಜ್ಯದ ಕರಾವಳಿ ಮತ್ತು ಗಡಿ ಭಾಗದ ದಟ್ಟ ಅರಣ್ಯಗಳಲ್ಲಿ ವಾಸಿಸುತ್ತಿರುವ ಬುಡಕಟ್ಟುಗಳಾದ ಕುಣಬಿ (ಕುಡುಬಿ), ಗೌಳಿ ಹಾಗೂ ಹಾಲಕ್ಕಿ ಜನಾಂಗಗಳಿಗೆ ರಾಜ್ಯದಲ್ಲಿ ಇನ್ನೂ ಎಸ್‌ಟಿ ಮಾನ್ಯತೆ ಸಿಗದಿರುವುದು ಅತ್ಯಂತ ವಿಷಾದನೀಯ ಎಂದು ವಕೀಲರು ಮತ್ತು ಸಾಮಾಜಿಕ ಕಾರ್ಯಕರ್ತ ಕಿರಣ್ ಕುಮಾರ್ ಕೊತ್ತಗೆರೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದ ಫೆಡರಲ್ ಕರ್ನಾಟಕದ ಕರ್ನಾಟಕ ಜತೆ ಮಾತನಾಡಿದ ಅವರು, ಗಡಿ ರಾಜ್ಯಗಳಾದ ಗೋವಾ ಮತ್ತು ಮಹಾರಾಷ್ಟ್ರಗಳಲ್ಲಿ ಈ ಸಮುದಾಯಗಳು ಈಗಾಗಲೇ ಸಾಂವಿಧಾನಿಕವಾಗಿ ಎಸ್‌ಟಿ ಮಾನ್ಯತೆ ಮತ್ತು ಸೌಲಭ್ಯಗಳನ್ನು ಪಡೆಯುತ್ತಿವೆ. ಆದರೆ, ರಾಜ್ಯದಲ್ಲಿ ಮಾತ್ರ ಇವರು ಇಂದಿಗೂ ನಿಕೃಷ್ಟ ಸ್ಥಿತಿಯಲ್ಲಿ ಬದುಕುತ್ತಿರುವುದು ವ್ಯವಸ್ಥೆಯ ಅಣಕವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ಈಗಲಾದರೂ ರಾಜ್ಯ ಸರ್ಕಾರದ ಮುಂದೆ ಇರುವ ಎಸ್‌ಟಿ ಮಾನ್ಯತೆಯ ಪ್ರಸ್ತಾವನೆಯನ್ನು ಅಗತ್ಯ ಪೂರಕ ಅಂಶಗಳೊಂದಿಗೆ ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು ಮತ್ತು ಇವರ ಪುನರ್ ವಸತಿ, ಶಿಕ್ಷಣ ಹಾಗೂ ಆರೋಗ್ಯಕ್ಕೆ ಸಮಗ್ರ ಯೋಜನೆ ರೂಪಿಸಲು ಮುಂದಿನ ಬಜೆಟ್ ನಲ್ಲಿ ಅನುದಾನ ಮೀಸಲಿಡಬೇಕು ಎಂದು ಆಗ್ರಹಿಸಿದರು.

