ದುಬಾರಿ ಹೊಟೇಲ್‌ ಬಳಿ ಊಟಕ್ಕೆ ನಿಲ್ಲುವ ಐರಾವತ! ಸಾರಿಗೆ ಸಚಿವರಿಗೆ ನೆಟ್ಟಿಗರ ತರಾಟೆ
x
ಕೆಎಸ್‌ಆರ್‌ಟಿಸಿ ಬಸ್‌

ದುಬಾರಿ ಹೊಟೇಲ್‌ ಬಳಿ ಊಟಕ್ಕೆ ನಿಲ್ಲುವ ಐರಾವತ! ಸಾರಿಗೆ ಸಚಿವರಿಗೆ ನೆಟ್ಟಿಗರ ತರಾಟೆ

ಕಮೀಷನ್ ಆಸೆಗಾಗಿ ನಿಗಮದ ಅಧಿಕಾರಿಗಳು, ದೂರದ ಊರುಗಳಿಗೆ ತೆರಳುವ ಬಸ್ಸುಗಳನ್ನು ದುಬಾರಿ ಹೊಟೇಲ್ ಬಳಿ ಊಟ- ತಿಂಡಿಗೆ ನಿಲ್ಲಿಸುತ್ತಾರೆ ಎಂದು ಆರೋಪಿಸಲಾಗಿದೆ.


Click the Play button to hear this message in audio format

ಕರ್ನಾಟಕ ವಿಧಾನಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್ ಪಕ್ಷ ಐದು ಗ್ಯಾರಂಟಿಗಳನ್ನು ನೀಡಿತ್ತು. ಆ ಗ್ಯಾರಂಟಿಗಳಲ್ಲಿ ಉಚಿತ ಬಸ್​ ಪ್ರಯಾಣದ ಶಕ್ತಿ ಯೋಜನೆಯೂ ಒಂದು. ಈ ಶಕ್ತಿ ಯೋಜನೆಯಡಿ ಸರ್ಕಾರಿ ಬಸ್‌ಗಳಲ್ಲಿ ರಾಜ್ಯಾದ್ಯಂತ ಮಹಿಳೆಯರಿಗೆ ಉಚಿತ ಪ್ರಯಾಣ ಅವಕಾಶ ಕಲ್ಪಿಸಲಾಗಿದೆ. ಆದರೆ ಈ ಶಕ್ತಿ ಗ್ಯಾರೆಂಟಿ ಯೋಜನೆಯಿಂದಾಗಿ ಸಾರಿಗೆ ನಿಗಮವು ಭಿಕ್ಷಾಟನೆ ಹಂತ ತಲುಪಿದೆಯೇ ಎಂದು ಜನರು ಪ್ರಶ್ನಿಸುತ್ತಿದ್ದಾರೆ.

ರಾಜ್ಯ ಸರ್ಕಾರಿ ಸ್ವಾಮ್ಯದ ಸಾರಿಗೆ ಸಂಸ್ಥೆ KSRTC ನಿಗಮವು 'ಶಕ್ತಿ' ಗ್ಯಾರೆಂಟಿ ಯೋಜನೆಯಿಂದಾಗಿ ಆರ್ಥಿಕವಾಗಿ ಬಲಗೊಂಡಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

"ಶಕ್ತಿ ಉಚಿತ ಯೋಜನೆ ಎಂದು ಮೂಗು ಮುರಿಯುವವರ ಗಮನಕ್ಕೆ! ಶಕ್ತಿ ಯೋಜನೆಯಿಂದ ಜಿಎಸ್​​ಟಿ ಸಂಗ್ರಹ ಹೆಚ್ಚಿದ್ದು, ಔದ್ಯೋಗಿಕ ಕ್ಷೇತ್ರದಲ್ಲಿ ಶೇ 25.1ನಿಂದ 30.2ರಷ್ಟು ಮಹಿಳೆಯ ಪಾಲುದಾರಿಕೆ ಹೊಂದಿದೆ. ಇದು ಬಿಟ್ಟಿ ಭಾಗ್ಯವಲ್ಲ; ಸಮಾಜದಲ್ಲಿ ಸರ್ಕಾರ ಹೂಡಿರುವ ಬಂಡವಾಳ" ಎಂಬ ಮಾಹಿತಿಯನ್ನು ರಾಮಲಿಂಗಾ ರೆಡ್ಡಿ ಟ್ವೀಟ್‌ ಮಾಡಿದ್ದಾರೆ.

ಆದರೆ ಇದೇ ಸಾರಿಗೆ ನಿಗಮ ಇಂದು ಜನವಿರೋಧಿ ನಡೆಯನ್ನು ಅನುಸರಿಸುತ್ತಿದೆ ಎಂದು ಕೆಎಸ್‌ಆರ್‌ಟಿಸಿ ಬಸ್‌ ಪ್ರಯಾಣಿಕರು ಹಿಡಿಶಾಪ ಹಾಕುತ್ತಿದ್ದಾರೆ. ಇದಕ್ಕೆ ಮೂಲ ಕಾರಣ ಕಮೀಷನ್ ಆಸೆಗಾಗಿ ನಿಗಮದ ಅಧಿಕಾರಿಗಳು ದೂರದ ಊರುಗಳಿಗೆ ತೆರಳುವ ಬಸ್ಸುಗಳನ್ನು ದುಬಾರಿ ದರದ ಊಟ-ತಿಂಡಿ ಸಿಗುವ ಹೊಟೇಲ್ ಬಳಿ ನಿಲ್ಲಿಸಲು ಚಾಲಕರಿಗೆ ತಾಕೀತು ಮಾಡಿರುವುದು. ಕೆಎಸ್‌ಆರ್‌ಟಿಸಿ ಬಸ್ಸುಗಳು ತಂಗುವ ಹೊಟೇಲ್‌ಗಳು ಕುಗ್ರಾಮಗಳಲ್ಲಿದ್ದರೂ ಊಟ-ತಿಂಡಿಗೆ ಬೆಂಗಳೂರಿನ ಸ್ಟಾರ್ ಹೊಟೇಲ್‌ಗಳಿಗಿಂತಲೂ ದುಬಾರಿ ದರ ವಸೂಲಿ ಮಾಡುತ್ತಿವೆ‌.

ಪ್ರಯಾಣಿಕರಿಗೆ ಸುಗಮ ಸಾರಿಗೆ ವ್ಯವಸ್ಥೆ ಕಲ್ಪಿಸುವ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಪ್ರಯಾಣಿಕರಿಗೆ ಸುಲಭ ಪ್ರಯಾಣದ ಅವಕಾಶ ಕಲ್ಪಿಸುವ ಬದಲು ಜನವಿರೋಧಿ ನಡೆ ಅನುಸರಿಸುತ್ತಿದೆ. ಪ್ರಯಾಣಿಕರ ಆಹಾರದ ಹಕ್ಕನ್ನು ಕಸಿದುಕೊಳ್ಳುವುದಷ್ಟೇ ಅಲ್ಲ, ಪ್ರಯಾಣಿಕರನ್ನು ಅನಾರೋಗ್ಯಕ್ಕೂ ತಳ್ಳುತ್ತಿದೆ ಎಂದು ಪ್ರಯಾಣಿಕರು ದೂರುತ್ತಿದ್ದಾರೆ.

ಈ ಬಗ್ಗೆ ಕೆಎಸ್‌ಆರ್‌ಟಿಸಿ ಪ್ರಯಾಣಿಕರೊಬ್ಬರು ಟ್ವೀಟ್ ಮಾಡಿ ಅವ್ಯವಸ್ಥೆಯನ್ನು ಬಯಲು ಮಾಡಿದ್ದಾರೆ. ಗುರುವಾರ ಮಧ್ಯಾಹ್ನ ಬೆಂಗಳೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಐರಾವತ ಬಸ್ಸನ್ನು ಬೆಳ್ಳೂರು ಕ್ರಾಸ್ ಸಮೀಪ ಗ್ರ್ಯಾಂಡ್ ಹರ್ಷ ಎಂಬ ಹೊಟೇಲ್ ಬಳಿ ಊಟ-ತಿಂಡಿಗೆಂದು ನಿಲ್ಲಿಸಿದ್ದಾರೆ. ಮಧ್ಯಾಹ್ನ 1 ಗಂಟೆಯಿಂದ 2 ಗಂಟೆ ನಡುವೆ ಊಟಕ್ಕೆ ವ್ಯವಸ್ಥೆ ಮಾಡಿದ್ದರೆ ಪರವಾಗಿಲ್ಲ ಎನ್ನಬಹುದಿತ್ತು. ಆದರೆ ಹೊತ್ತಲ್ಲದ ಹೊತ್ತಿಗೆ; ಅಂದರೆ 2.30ರ ಸುಮಾರಿಗೆ ಈ ಹೊಟೇಲ್ ಮುಂದೆ ಊಟಕ್ಕೆಂದು ಬಸ್ ನಿಲ್ಲಿಸಿದ್ದಾರೆ. ಅಷ್ಟೇ ಅಲ್ಲ, ಈ ಹೊಟೇಲ್‌ನಲ್ಲಿ ಊಟ, ಇಡ್ಲಿ ಹೊರತುಪಡಿಸಿ ಬೇರೆ ತಿಂಡಿ ಇಲ್ವಂತೆ. ದೋಸೆ ಮತ್ತಿತರ ತಿಂಡಿ ಸಂಜೆ ನಂತರವಷ್ಟೇ ಎಂದಿದ್ದಾರೆ ಹೊಟೇಲ್ ಸಿಬ್ಬಂದಿ. ಊಟಕ್ಕೆ ಬರೋಬ್ಬರಿ 200 ರೂಪಾಯಿ ದರ. ಒಂದು ಇಡ್ಲಿಗೆ 63 ರೂಪಾಯಿ.

ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕಿಸಿದ ಬಸ್ ನಿರ್ವಾಹಕರಲ್ಲಿ ಈ ಬಗ್ಗೆ ಕೇಳಿದರೆ, ಈ ಹೊಟೇಲ್‌ನಿಂದ KSRTC ನಿಗಮಕ್ಕೆ ಹಣ ಸಂದಾಯವಾಗುತ್ತೆ. ಹಾಗಾಗಿ ಇಲ್ಲೇ ಬಸ್ ನಿಲ್ಲಿಸಬೇಕೆಂದು ಅಧಿಕಾರಿಗಳ ಆದೇಶವಿದೆ ಎಂದಿದ್ದಾರಂತೆ. ಈ ಬಗ್ಗೆ ಅವರು ಟ್ವೀಟ್‌ ಮೂಲಕ ತಮ್ಮ ಅಸಮಧಾನವನ್ನು ವ್ಯಕ್ತಪಡಿಸಿದ್ದಾರೆ.

ಈ ಕುರಿತಂತೆ ಹೊಟೇಲ್ ಬಿಲ್ ಜೊತೆ ಟ್ವೀಟ್ ಮಾಡಿರುವ KSRTC ಪ್ರಯಾಣಿಕರೊಬ್ಬರು, ಗ್ಯಾರೆಂಟಿ ಯೋಜನೆಯಿಂದಾಗಿ ನಿಗಮವು ಭಿಕ್ಷಾಟನೆ ಹಂತ ತಲುಪಿದೆಯೇ ಎಂದು ಪ್ರಶ್ನಿಸಿದ್ದಾರೆ. 'ಶಕ್ತಿ' ಯೋಜನೆಯನ್ನು ಸಮರ್ಥಿಸುತ್ತಿರುವ ಸಾರಿಗೆ ಮಂತ್ರಿ ರಾಮಲಿಂಗಾ ರೆಡ್ಡಿಯವರನ್ನು ಪ್ರಶ್ನಿಸಿರುವ ನೆಟ್ಟಿಗರು, 'ರಾಮಲಿಂಗಾ ರೆಡ್ಡಿಯವರೇ ನಿಮ್ಮ KSRTC ಗ್ಯಾರೆಂಟಿ ಯೋಜನೆಯಿಂದಾಗಿ ಬಲಗೊಂಡಿದೆಯೇ? ಅಥವಾ ಬರ್ಬಾದ್ ಆಗಿದೆಯೇ? ಹಾಗಾಗಿ ಈ ಭಿಕ್ಷಾಟನೆಯೇ? ಭ್ರಷ್ಟಾಚಾರವೇ?' ಎಂದು ಪ್ರಶ್ನಿಸಿದ್ದಾರೆ.

ಸದ್ಯ ಈ ಟ್ವೀಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

Read More
Next Story