
Congress Infighting | ಶೋಷಿತರ ಸಮಾವೇಶ ನಡೆಸಲು ಕೆಪಿಸಿಸಿ ಅಧ್ಯಕ್ಷರ ಪರ್ಮಿಷನ್ ಬೇಕಿಲ್ಲ: ಸಚಿವ ರಾಜಣ್ಣ
ಸಮಾವೇಶದ ಅಗತ್ಯವನ್ನು ಕೇಂದ್ರ ನಾಯಕರ ಗಮನಕ್ಕೆ ತಂದಿದ್ದೇವೆ. ಕೇಂದ್ರದ ನಾಯಕರನ್ನು ಸಮಾವೇಶಕ್ಕೆ ಕರೆಸುತ್ತೇವೆ. ಮುಂದಿನ ದಿನಗಳಲ್ಲಿ ಸಮಾವೇಶಕ್ಕೆ ಬರುತ್ತೇವೆ ಎಂದು ರಾಜಣ್ಣ ಹೇಳಿದ್ದಾರೆ.
ಶೋಷಿತ ಸಮುದಾಯಗಳ ಸಮಾವೇಶ ನಡೆಸಲು ಪಟ್ಟು ಹಿಡಿದಿರುವ ಕಾಂಗ್ರೆಸ್‌ನ ದಲಿತ ಸಮುದಾಯಗಳ ಸಚಿವರು, ನೇರವಾಗಿ ಹೈಕಮಾಂಡ್ ಮಟ್ಟದಲ್ಲೇ ಆ ಕುರಿತ ಮಾತುಕತೆಗಳನ್ನು ಮುಂದುವರಿಸಿರುವ ನಡುವೆಯೇ, ಸಮಾವೇಶ ನಡೆಸಲು ಕೆಪಿಸಿಸಿ ಅಧ್ಯಕ್ಷರ ಪರ್ಮಿಷನ್ ಕೇಳಬೇಕಿಲ್ಲ ಎಂದು ಹೇಳುವ ಮೂಲಕ ಸಹಕಾರ ಸಚಿವ ಕೆ ಎನ್ ರಾಜಣ್ಣ ಹಗ್ಗಜಗ್ಗಾಟಕ್ಕೆ ಮತ್ತೊಂದು ತಿರುವು ನೀಡಿದ್ದಾರೆ.
ತಮ್ಮ ಹಲವು ಅಹವಾಲು ಮುಂದಿಟ್ಟುಕೊಂಡು ದೆಹಲಿಗೆ ತೆರಳಿರುವ ಕೆ ಎನ್ ರಾಜಣ್ಣ, ಪಕ್ಷದ ವರಿಷ್ಠರನ್ನು ಭೇಟಿಯಾದ ಬಳಿಕ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ, ಶೋಷಿತ ಸಮುದಾಯಗಳ ಸಮಾವೇಶ ನಡೆಸಲು ಹೈಕಮಾಂಡ್‌ಗೆ ಮನವಿ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಸಮಾವೇಶದಲ್ಲಿ ಭಾಗವಹಿಸುವುದಾಗಿ ಹೈಕಮಾಂಡ್ ನಾಯಕರು ಹೇಳಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಅಲ್ಲದೆ, ಶೋಷಿತ ಸಮುದಾಯಗಳ ಸಮಾವೇಶ ಮಾಡಲು ಕೆಪಿಸಿಸಿ ಅಧ್ಯಕ್ಷರ ಪರ್ಮಿಷನ್ ಬೇಕಿಲ್ಲ. ಎಐಸಿಸಿ ಅಧ್ಯಕ್ಷರು ದೊಡ್ಡವರೋ? ಕೆಪಿಸಿಸಿ ಅಧ್ಯಕ್ಷರು ದೊಡ್ಡವರೋ? ಕೆಪಿಸಿಸಿ ಅಧ್ಯಕ್ಷರ ನೇತೃತ್ವದಲ್ಲೇ ಸಮಾವೇಶ ಮಾಡಲಾಗುತ್ತದೆ. ಹಾಸನದಲ್ಲೂ ಪಕ್ಷದ ವೇದಿಕೆಯಲ್ಲೇ ಸಮಾವೇಶ ಮಾಡುತ್ತೇವೆ ಎಂದು ರಾಜಣ್ಣ ಹೇಳಿದ್ದಾರೆ.
ಅಧಿಕಾರ ಹಂಚಿಕೆ ಮತ್ತು ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಷಯದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಸಹಕಾರ ಸಚಿವರು ಮತ್ತು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ನಡುವೆ ನಿರಂತರ ವಾಗ್ವಾದದ ಹಿನ್ನೆಲೆಯಲ್ಲಿ ರಾಜಣ್ಣ ಅವರ ಈ ಹೇಳಿಕೆ ಸಂಚಲನ ಮೂಡಿಸಿದೆ.
ಚಿತ್ರದುರ್ಗ, ದಾವಣಗೆರೆ, ಹುಬ್ಬಳ್ಳಿಯಲ್ಲಿ ಸಮಾವೇಶ
ದಲಿತ ಸಚಿವರಿಂದ ಪ್ರತ್ಯೇಕ ಸಮಾವೇಶದ ಅಗತ್ಯವನ್ನು ನಾಯಕರ ಗಮನಕ್ಕೆ ತಂದಿದ್ದೇವೆ. ನಾನು ಎಸ್ಟಿ ಸಮುದಾಯದ ಮತಗಳಿಂದ ಮಾತ್ರ ಗೆದ್ದಿಲ್ಲ. ಎಲ್ಲ ಸಮುದಾಯದ ಆಶೀರ್ವಾದ ಬೇಕು. ಕಾಂಗ್ರೆಸ್ಗೆ ಯಾವ ಸಮಾವೇಶ ಮಾಡಿದರೆ ಒಳ್ಳೆಯದೋ, ಆ ಸಮಾವೇಶ ಮಾಡಬೇಕು. ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಜಾಗೃತಿ ಮೂಡಿಸಬೇಕಿದೆ ಎಂದರು.
ಸಮಾವೇಶದ ಅಗತ್ಯವನ್ನು ಕೇಂದ್ರ ನಾಯಕರ ಗಮನಕ್ಕೆ ತಂದಿದ್ದೇವೆ. ಕೇಂದ್ರದ ನಾಯಕರನ್ನು ಸಮಾವೇಶಕ್ಕೆ ಕರೆಸುತ್ತೇವೆ. ಮುಂದಿನ ದಿನಗಳಲ್ಲಿ ಸಮಾವೇಶಕ್ಕೆ ಬರುತ್ತೇವೆ ಎಂದು ಹೇಳಿದ್ದಾರೆ. ಪಕ್ಷದ ವೇದಿಕೆಯಲ್ಲಿಯೇ ಸಮಾವೇಶ ಮಾಡುತ್ತೇವೆ. ಚಿತ್ರದುರ್ಗ, ದಾವಣಗರೆ ಅಥವಾ ಹುಬ್ಬಳ್ಳಿಯಲ್ಲಿ ಸಮಾವೇಶ ನಡೆಯುತ್ತದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೂ ಆಹ್ವಾನ ನೀಡುತ್ತೇವೆ ಎಂದು ಅವರು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಬೇಡ
'ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದಿಂದ ಬಿಡುಗಡೆ ಮಾಡಿ ಎಂದು ಕೇಳಿರುವೆ. ನಾನು ತುಮಕೂರು ಜಿಲ್ಲೆ ಹಾಗೂ ಪಕ್ಷ ಸಂಘಟನೆಗೆ ಗಮನ ನೀಡಬೇಕಿದೆ. ಈ ಸಂಬಂಧ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಿಗೆ ಪತ್ರ ನೀಡಿರುವೆ' ಎಂದು ಅವರು ತಿಳಿಸಿದ್ದಾರೆ.
ತುಮಕೂರು ಜಿಲ್ಲಾ ಉಸ್ತುವಾರಿಗಾಗಿ ಕೆ ಎನ್ ರಾಜಣ್ಣ ಸಾಕಷ್ಟು ಪ್ರಯತ್ನ ನಡೆಸಿದ್ದರು. ಆದರೆ, ಹಿರಿಯ ಸಚಿವರಾಗಿರುವ ಡಾ ಜಿ ಪರಮೇಶ್ವರ್ ಅವರು ಆ ಅವಕಾಶವನ್ನು ಬಿಟ್ಟುಕೊಟ್ಟಿರಲಿಲ್ಲ. ಹಾಗಾಗಿ ಒಲ್ಲದ ಮನಸಿನಿಂದಲೇ ಅವರು ಉಸ್ತುವಾರಿ ಸಚಿವ ಸ್ಥಾನವನ್ನು ಒಪ್ಪಿಕೊಂಡಿದ್ದರು.
ಅಲ್ಲದೆ, ಅನುದಾನ ಹಂಚಿಕೆ ಮತ್ತು ಅಭಿವೃದ್ಧಿ ಕಾಮಗಾರಿಗಳ ವಿಷಯದಲ್ಲಿ ಕೂಡ ತುಮಕೂರಿಗೆ ಹೆಚ್ಚಿನ ಹಣ ಹರಿದುಬರುತ್ತಿದ್ದು, ಅದರ ಎಲ್ಲಾ ಶ್ರೇಯಸ್ಸು ಡಾ ಜಿ ಪರಮೇಶ್ವರ್ ಅವರಿಗೇ ಸಲ್ಲುತ್ತಿದೆ. ಅನುದಾನ ಮತ್ತು ಯೋಜನೆಗಳ ವಿಷಯದಲ್ಲಿ ಹಾಸನದಲ್ಲಿ ಹೆಚ್ಚಿನ ಅವಕಾಶವಿಲ್ಲದೇ ಇರುವುದು ಕೂಡ ರಾಜಣ್ಣ ಅವರ ಅಸಮಾಧಾನಕ್ಕೆ ಕಾರಣ ಎನ್ನಲಾಗಿದೆ.