
ಕಾರವಾರ ನೌಕಾನೆಲೆಯ ಮಾಹಿತಿ ಸೋರಿಕೆ; ಇಬ್ಬರನ್ನು ಬಂಧಿಸಿದ ಎನ್ಐಎ ಪೊಲೀಸರು
ಕಾರವಾರ ನೌಕಾನೆಲೆಯ ಮಾಹಿತಿ ಸೋರಿಕೆ ವಿಚಾರವಾಗಿ 2024ರ ಆಗಸ್ಟ್ ತಿಂಗಳಲ್ಲಿ ಮೂವರನ್ನು ವಿಚಾರಣೆ ನಡೆಸಿದ್ದ ಎನ್ಐಎ ನೋಟೀಸ್ ನೀಡಿತ್ತು.
ಕಾರವಾರ ನೌಕಾನೆಲೆಯ ಮಾಹಿತಿ ಸೋರಿಕೆ ಆರೋಪದ ಮೇಲೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಇಬ್ಬರು ಆರೋಪಿಗಳನ್ನು ರಾಷ್ಟ್ರೀಯ ತನಿಖಾ ದಳ (NIA) ಬಂಧಿಸಿದೆ.
ಕಾರವಾರ ತಾಲೂಕಿನ ಮುದುಗಾ ಗ್ರಾಮದ ವೇತನ್ ತಾಂಡೇಲ್ ಹಾಗೂ ಹಳವಳ್ಳಿಯ ಅಕ್ಷಯ್ ನಾಯ್ಕ್ ಬಂಧಿತರು. ನೌಕನೆಲೆ ಮಾಹಿತಿ ಸೋರಿಕೆ ಕುರಿತು ಈ ಹಿಂದೆ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಸೋಮವಾರ ಕಾರ್ಯಾಚರಣೆ ನಡೆಸಿದ ಹೈದರಾಬಾದ್ ಎನ್ ಐ ಎ ಅಧಿಕಾರಿಗಳು ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಕಾರವಾರ ನೌಕಾನೆಲೆಯ ಮಾಹಿತಿ ಸೋರಿಕೆ ಕುರಿತಂತೆ 2024ರ ಆಗಸ್ಟ್ ತಿಂಗಳಲ್ಲಿ ಎನ್ ಐ ಎ ಅಧಿಕಾರಿಗಳು ಮುದುಗಾದ ವೇತನ್ ತಾಂಡೇಲ್, ತೋಡೂರಿನ ಸುನೀಲ್ ಹಾಗೂ ಹಳವಳ್ಳಿಯ ಅಕ್ಷಯ್ ನಾಯ್ಕ್ ಎಂಬುವರನ್ನು ವಿಚಾರಣೆ ನಡೆಸಿ ಬಿಟ್ಟು ಕಳುಹಿಸಿತ್ತು. ಇದೀಗ ಇಬ್ಬರು ಆರೋಪಿಗಳ ಪೂರ್ವಾಪರ ಸಂಗ್ರಹಿಸಿ ಬಂಧಿಸಿದೆ.
ಸ್ಪೋಟಕ ಮಾಹಿತಿ ಸಂಗ್ರಹ
ಕಾರವಾರದಲ್ಲಿ ಬಂಧಿತರಾದ ಶಂಕಿತ ಇಬ್ಬರು ಆರೋಪಿಗಳನ್ನು ಪಾಕಿಸ್ತಾನದ ಏಜೆಂಟ್ ಹನಿ ಟ್ರ್ಯಾಪ್ ಮಾಡಿ, ಮಾಹಿತಿ ಕಲೆ ಹಾಕಿದ್ದಳು ಎಂಬ ಸ್ಫೋಟಕ ಸಂಗತಿಯನ್ನು ಅಧಿಕಾರಿಗಳು ಕಲೆ ಹಾಕಿದ್ದಾರೆ.
ಪಾಕಿಸ್ತಾನದ ಏಜೆಂಟ್ ತಾನು ಮರೈನ್ ಅಧಿಕಾರಿ ಎಂದು ಫೇಸ್ಬುಕ್ ನಲ್ಲಿ ಪರಿಚಯಿಸಿಕೊಂಡಿದ್ದಳು. ವೇತನ್ ತಾಂಡೇಲ್, ಸುನೀಲ್ ಹಾಗೂ ಅಕ್ಷಯ್ ನಾಯ್ಕ್ ಬಗ್ಗೆ ಸಂಪೂರ್ಣ ಮಾಹಿತಿ ಕಲೆಹಾಕಿದ್ದಳು.ಎಂದು ತಿಳಿದುಬಂದಿದೆ.
ಕಾರವಾರದ ಚೆಂಡ್ಯಾದಲ್ಲಿರುವ ಮರ್ಕ್ಯುರಿ ಹಾಗೂ ಅಲ್ಟ್ರಾ ಮರೈನ್ ಕಂಪೆನಿಯಲ್ಲಿ ವೇತನ್ ಹಾಗೂ ಅಕ್ಷಯ್ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು. ತೋಡೂರಿನ ಸುನೀಲ್ ಮಾತ್ರ ಹಿಂದೆ ಸೀಬರ್ಡ್ ಕ್ಯಾಂಟೀನ್‌ನಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ.
ಮಂಗಳವಾರ ಕಾರವಾರ ನೌಕಾನೆಲೆಯ ಅಧಿಕಾರಿಗಳನ್ನು ಎನ್ಐಎ ಅಧಿಕಾರಿಗಳ ತಂಡ ಭೇಟಿಯಾಗಿ, ಶಂಕಿತರ ಬಗ್ಗೆ ಇನ್ನಷ್ಟು ಮಾಹಿತಿ ಕಲೆ ಹಾಕಲಿದೆ. ಮಾಹಿತಿ ಸೋರಿಕೆ ಪ್ರಕರಣದಲ್ಲಿ ಇನ್ನಷ್ಟು ಜನರು ಶಾಮೀಲಾಗಿರುವ ಸಾಧ್ಯತೆ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ದಳ ತನಿಖೆಯನ್ನು ತೀವ್ರಗೊಳಿಸಿದೆ.