
Namma Metro Fare Hike| ದರ ಏರಿಕೆ ವಿರುದ್ಧ ಭುಗಿಲೆದ್ದ ಆಕ್ರೋಶ: ಕನ್ನಡ ಪರ ಸಂಘಟನೆಯಿಂದ ಮೆಟ್ರೋ ಕಚೇರಿಗೆ ಮುತ್ತಿಗೆ
ಆಳುವ ಸರ್ಕಾರ ಆರೋಪ ಮಾಡುತ್ತಾ ಜನರನ್ನು ಮುರ್ಖರನ್ನಾಗಿ ಮಾಡುತ್ತಿದೆ. ಏಕಾಏಕಿ ಮೆಟ್ರೋ ದರ ಏರಿಕೆ ಮಾಡಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು
ಮೆಟ್ರೋ ದರ ಏರಿಕೆಯಿಂದ ಪ್ರಯಾಣಿಕರು ಕಂಗಲಾಗಿದ್ದು, ಜನಾಕ್ರೋಶ ದಿನದಿಂದ ದಿನಕ್ಕೆ ಭುಗಿಲೇಳುತ್ತಿದೆ. ಶನಿವಾರ ಕನ್ನಡ ಪರ ಸಂಘಟನೆಗಳು ಬಿಎಂಆರ್‌ಸಿಎಲ್ ಕಚೇರಿಗೆ ಮುತ್ತಿಗೆ ಹಾಕಿದ್ದಾರೆ.
ಪ್ರತಿಭಟನೆ ಹಿನ್ನಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಮೆಟ್ರೋ ಕೇಂದ್ರ ಕಚೇರಿ ಬಳಿ ಪೊಲೀಸ್ ಬಿಗಿ ಭದ್ರತೆ ಹೆಚ್ಚಿಸಲಾಗಿತ್ತು. ಮೆಟ್ರೋ ಕಚೇರಿಗೆ ಕನ್ನಡ ಪರ ಸಂಘಟನೆಗಳು ಮುತ್ತಿಗೆ ಹಾಕದಂತೆ ತಡೆಯಲು ಒಂದು ಕೆಎಸ್ಆರ್ಪಿ ತುಕಡಿ ಸೇರಿದಂತೆ 20 ಕ್ಕೂ ಹೆಚ್ಚು ಜನ ಪೊಲೀಸರಿಂದ ಭದ್ರತೆ ಒದಗಿಸಲಾಗಿತ್ತು. ಆದರೆ ಕನ್ನಡ ಪರ ಸಂಘಟನೆಯ ಕಾರ್ಯಕರ್ತರು ಮೆಟ್ರೋ ಕಚೇರಿಗೆ ಮುತ್ತಿಗೆ ಹಾಕಿದ್ದಾರೆ.
ಈ ವೇಳೆ ಮಾತನಾಡಿದ ಕನ್ನಡ ಒಕ್ಕೂಟದ ಅಧ್ಯಕ್ಷ ನಟರಾಜ್ ಮಾತನಾಡಿ, ಆಳುವ ಸರ್ಕಾರ ಇವತ್ತು ಆರೋಪ ಮಾಡುತ್ತಾ ಜನರನ್ನು ಮುರ್ಖರನ್ನಾಗಿ ಮಾಡುತ್ತಿದೆ. ಏಕಾಏಕಿ ಮೆಟ್ರೋ ದರ ಏರಿಕೆ ಮಾಡಿದೆ. 105% ದರ ಹೆಚ್ಚಳ ಆಗಿದೆ. ಸರ್ಕಾರಗಳು ಒಬ್ಬರ ಮೇಲೆ ಒಬ್ಬರು ಆರೋಪ ಮಾಡೋದನ್ನು ನಿಲ್ಲಿಸಬೇಕು ಎಂದು ಕಿಡಿಕಾರಿದರು.
105% ಏರಿಕೆ ಮಾಡಿ ಕೇವಲ 30% ದರ ಇಳಿಕೆ ಮಾಡಿರೋದು ಅನ್ಯಾಯ. ಕೇಂದ್ರ ಹಾಗೂ ರಾಜ್ಯ ಸರ್ಕಾರ ದರ ಏರಿಕೆ ವಾಪಸ್ಸು ಪಡೆಯಬೇಕು. ಈ ಕೂಡಲೇ ದರ ಹೆಚ್ಚಳದ ನಿರ್ಧಾರ ವಾಪಸ್ಸು ಪಡೆಯಬೇಕು. ಇಲ್ಲದಿದ್ದರೆ 28 ಸಂಸದರ, ಸಚಿವರ ಶವಯಾತ್ರೆ ಮಾಡುತ್ತೇವೆ. ನಮ್ಮ ಹೋರಾಟ ಹೀಗೆ ಮುಂದುವರೆಯಲಿದೆ ಎಂದು ಎಚ್ಚರಿಕೆ ನೀಡಿದರು.
ನಮ್ಮ ಮೆಟ್ರೋ ಸಾರ್ವಜನಿಕ ಸಂಪರ್ಕಾಧಿಕಾರಿ ಯಶ್ವಂತ್ ಚೌಹ್ಹಾಣ್ ಅವರು ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು. ಈ ವೇಳೆ ದರ ಏರಿಕೆ ವಿಚಾರ ಮಾತನಾಡಿದ ಅವರು, ನಮ್ಮ ಮೆಟ್ರೋ ಲಾಭದಲ್ಲಿಲ್ಲ. ಲಾಭದಲ್ಲಿರೋವಾಗ ದರ ಏರಿಕೆ ಮಾಡೋದು ಸರಿಯಲ್ಲ. ನೀವು ಕೊಟ್ಟ ಮನವಿಯನ್ನು ನಾವು ಪರಿಗಣಿಸುತ್ತೇವೆ ಎಂದು ಹೇಳಿದರು.