BIFFes2025 | ಚಿತ್ರೋತ್ಸವದ ನೆಪದಲ್ಲಿ ಅಕಾಡೆಮಿ ದುಡ್ಡು ಕೊಳ್ಳೆ: KANFIDA ಆರೋಪ
x
ಎನ್ನಾರ್ ಕೆ. ವಿಶ್ವನಾಥ್‍

BIFFes2025 | ಚಿತ್ರೋತ್ಸವದ ನೆಪದಲ್ಲಿ ಅಕಾಡೆಮಿ ದುಡ್ಡು ಕೊಳ್ಳೆ: KANFIDA ಆರೋಪ

ಇದೇ ರೀತಿ ಮುಂದುವರಿದರೆ ಅಕಾಡೆಮಿಯ ವಿರುದ್ಧ ಕಾನೂನು ಕ್ರಮ ಜರುಗಿಸುತ್ತೇವೆ ಎನ್ನುವ ಅವರು, ‘ಅಕಾಡೆಮಿಯ ಪ್ರಧಾನ ಅಂಗವಾಗಿರುವ ನಿರ್ದೇಶಕರ ಸಂಘವನ್ನು ಹೊರಗಿಟ್ಟು ಅಕಾಡೆಮಿ ಕಾರ್ಯನಿರ್ವಹಿಸುತ್ತಿದೆ ಎಂದಿದ್ದಾರೆ


ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ ಇದೇ ಮಾರ್ಚ್ ಒಂದರಂದು ಪ್ರಾರಂಭವಾಲಿದೆ. ಈ ಚಿತ್ರೋತ್ಸವದಲ್ಲಿ 60 ದೇಶಗಳ 200ಕ್ಕೂ ಹೆಚ್ಚು ಚಿತ್ರಗಳು ಪ್ರದರ್ಶನವಾಗಲಿವೆ. ಈ ಮಧ್ಯೆ, ಚಿತ್ರೋತ್ಸವದ ನೆಪದಲ್ಲಿ ಅಕಾಡೆಮಿ ದುಡ್ಡು ಕೊಳ್ಳೆ ಹೊಡೆಯುತ್ತಿದೆ ಎಂದು ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ (KANFIDA) ಅಧ್ಯಕ್ಷ ಎನ್ನಾರ್ ಕೆ. ವಿಶ್ವನಾಥ್‍ ಆರೋಪಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘2009ರಲ್ಲಿ ಚಿತ್ರರಂಗದ ಎಲ್ಲಾ ಅಂಗ ಸಂಸ್ಥೆಗಳನ್ನು ಅಭಿವೃದ್ಧಿಪಡಿಸಲು ಸರ್ಕಾರ ಕರ್ನಾಟಕ ಚಲನಚಿತ್ರ ಅಕಾಡೆಮಿಯನ್ನು ಸ್ಥಾಪನೆ ಮಾಡಿತು. ಈ ಸಂಸ್ಥೆಯಲ್ಲಿ ನಾಮ ನಿರ್ದೇಶಿತ ಸದಸ್ಯರೊಂದಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ನಿರ್ಮಾಪಕರ ಸಂಘ, ನಿರ್ದೇಶಕರ ಸಂಘ, ಕಲಾವಿದರ ಸಂಘ, ಚಲನಚಿತ್ರ ಕಲಾವಿದರ ಒಕ್ಕೂಟ, ಟಿವಿ ಸಂಸ್ಥೆಗಳು ಪದನಿಮಿತ್ತ ಸದಸ್ಯರಾಗಿ ಕಾರ್ಯನಿರ್ವಹಿಸಬೇಕೆನ್ನುವುದು ಅಕಾಡೆಮಿಯ ನಿಯಮ. ಆದರೆ, ಎರಡು ಮೂರು ವರ್ಷಗಳಿಂದ ನಿರ್ದೇಶಕರ ಸಂಘವನ್ನು ಕಡೆಗಣಿಸುತ್ತಲೇ ಬರುತ್ತಿದೆ. ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಅಕಾಡೆಮಿಗೆ ಈಗಾಗಲೇ ಭೇಟಿಕೊಟ್ಟು ರಿಜಿಸ್ಟ್ರಾರ್ ಮತ್ತು ವಾರ್ತಾ ಇಲಾಖೆ ಆಯುಕ್ತರಿಗೆ ಹಾಗೂ ಕಾರ್ಯದರ್ಶಿಗಳಿಗೆ ಅನೇಕ ಬಾರಿ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ. ಒಂದೇ ಸೂರಿನಡಿ ಚಿತ್ರರಂಗ ಬರಬೇಕೆಂಬ ಯೋಜನೆಯೊಂದಿಗೆ ಅಕಾಡೆಮಿ ಪ್ರಾರಂಭ ಆಗಿದೆ. ಆದರೆ, ಅದು ಒಂದೆರಡು ತಂಡದ ಸೂರಾಗಿದೆ. ಅಕಾಡೆಮಿಯಲ್ಲಿ ಅನೇಕ ಯೋಜನೆಗಳನ್ನು ರೂಪಿಸಲು ಅವಕಾಶ ಇದೆ. ಆದರೆ, ಯಾವುದನ್ನು ಮಾಡುವುದಿಲ್ಲ’ ಎಂದು ಹೇಳಿದ್ದಾರೆ.

ಈ ಬಾರಿ ಸರ್ಕಾರವು ಚಿತ್ರೋತ್ಸವ ನಡೆಸುವುದಕ್ಕೆ ಕರ್ನಾಟಕ ಚಲನಚಿತ್ರ ಅಕಾಡೆಮಿಗೆ ಒಂಬತ್ತು ಕೋಟಿ ರೂ. ನೀಡಿದೆ. ಅಷ್ಟೊಂದು ಹಣ ಯಾಕೆ ಎಂದು ಪ್ರಶ್ನಿಸುವ ವಿಶ್ವನಾಥ್‍, ‘ಫೆಬ್ರವರಿ ತಿಂಗಳು ಬಂದಾಗ ಎಚ್ಚೆತ್ತುಕೊಳ್ಳುವ ಅಕಾಡೆಮಿ ಚಿತ್ರೋತ್ಸವದ ನೆಪದಲ್ಲಿ ಕೊಳ್ಳೆ ಹೊಡೆಯುವುದಕ್ಕೆ ಪ್ಲಾನ್ ಮಾಡುತ್ತಿದೆ. ನಾಗತಿಹಳ್ಳಿ ಚಂದ್ರಶೇಖರ್ ಅವರು ಅಕಾಡೆಮಿ ಅಧ್ಯಕ್ಷರಾಗಿದ್ದಾಗ ಎರಡು ಕೋಟಿ 70 ಲಕ್ಷ ರೂಪಾಯಿಗೆ ಚಲನಚಿತ್ರೋವವನ್ನು ತುಂಬಾ ಅಚ್ಚುಕಟ್ಟಾಗಿ ಮಾಡಿದ್ದರು. ಈ ವರ್ಷ ಸರ್ಕಾರ ಚಿತ್ರೋತ್ಸವಕ್ಕೆ ಒಂಬತ್ತು ಕೋಟಿ ಮೀಸಲಿಟ್ಟಿದೆ. ಇಷ್ಟು ಹಣ ಬೇಕಾ? ಇದು ಯಾವುದಕ್ಕೆ ಖರ್ಚು ಮಾಡುತ್ತಿದ್ದಾರೆ ಎನ್ನುವುದನ್ನು ಕೇಳಲು ನಮಗೆ ಅನುಮತಿ ಕೊಡುತ್ತಿಲ್ಲ. ಲೆಕ್ಕ ಪತ್ರ ಕೇಳುತ್ತೇವೆ ಎನ್ನುವ ಉದ್ದೇಶಕ್ಕೆ ನಮ್ಮನ್ನು ಹೊರಗಿಟ್ಟಿದ್ದಾರೆ. ಮೂರೂವರೆಯಿಂದ ನಾಲ್ಕು ಕೋಟಿ ಹಣವನ್ನು ಸರ್ಕಾರ ನಮಗೆ ಕೊಟ್ಟರೆ, ನಾವು ಅದ್ಭುತವಾಗಿ ಚಿತ್ರೋತ್ಸವವನ್ನು ಮಾಡಿಕೊಡುತ್ತೇವೆ. ಉಳಿದ ಹಣವನ್ನು ಚಿತ್ರರಂಗದ ಎಲ್ಲಾ ಅಂಗ ಸಂಸ್ಥೆಗಳಿಗೂ ಹಂಚಬಹುದು. ಇದನ್ನು ಬಿಟ್ಟು ನ್ಯಾಯ ಕೇಳುವುದಕ್ಕೆ ಹೋದಾಗ, ನಮ್ಮನ್ನು ಭಿಕ್ಷುಕರಂತೆ ಕಾಣುವ ಅಕಾಡೆಮಿಯನ್ನು ಸುಮ್ಮನೆ ಬಿಡುವುದಿಲ್ಲ. ನಮ್ಮ ಸಂಘಕ್ಕೆ ಅವಮಾನ ಮಾಡುವುದನ್ನು ಸಹಿಸುವುದಿಲ್ಲ. ಅದು ಪುಟ್ಟಣ್ಣ ಕಣಗಾಲ್ ಅವರಿಗೆ ಅವಮಾನ ಮಾಡಿದ ಹಾಗೆ’ ಎಂದು ಅವರು ಹೇಳಿದ್ದಾರೆ.

ಇದೇ ರೀತಿ ಮುಂದುವರಿದರೆ ಅಕಾಡೆಮಿಯ ವಿರುದ್ಧ ಕಾನೂನು ಕ್ರಮ ಜರುಗಿಸುತ್ತೇವೆ ಎನ್ನುವ ಅವರು, ‘ಅಕಾಡೆಮಿಯ ಪ್ರಧಾನ ಅಂಗವಾಗಿರುವ ನಿರ್ದೇಶಕರ ಸಂಘವನ್ನು ಹೊರಗಿಟ್ಟು ಅಕಾಡೆಮಿ ಕಾರ್ಯನಿರ್ವಹಿಸುತ್ತಿದೆ. ಇದೇ ರೀತಿ ಮುಂದುವರಿದರೆ ಅಕಾಡೆಮಿಯ ವಿರುದ್ಧ ಕಾನೂನು ಕ್ರಮ ಜರುಗಿಸಲಿದ್ದೇವೆ’ ಎಂದು ವಿಶ್ವನಾಥ್ ಎಚ್ಚರಿಸಿದ್ದಾರೆ.

Read More
Next Story