ಒಳ ಮೀಸಲಾತಿ ಜಾರಿಯಲ್ಲಿ ವಿಳಂಬ | ಸಿಎಂ ಸಿದ್ದರಾಮಯ್ಯರಿಗೆ ಕಾಡುತ್ತಿದೆಯೇ ಎಡ-ಬಲ ಏಟಿನ ಆತಂಕ?
x
ಪ್ರಾತಿನಿಧಿಕ ಚಿತ್ರ

ಒಳ ಮೀಸಲಾತಿ ಜಾರಿಯಲ್ಲಿ ವಿಳಂಬ | ಸಿಎಂ ಸಿದ್ದರಾಮಯ್ಯರಿಗೆ ಕಾಡುತ್ತಿದೆಯೇ ಎಡ-ಬಲ ಏಟಿನ ಆತಂಕ?

ಪರಿಶಿಷ್ಟ ಎಡ-ಬಲ ರಾಜಕಾರಣದ ಒಳಪೆಟ್ಟಿನ ಪಟ್ಟು ಬೀಳಬಹುದು ಎಂಬ ರಾಜಕೀಯನ ಲೆಕ್ಕಾಚಾರದ ಹಿನ್ನೆಲೆಯಲ್ಲಿ ಯಾವುದೇ ಪಕ್ಷದ ಆಡಳಿತವಿದ್ದರೂ 'ಒಳ ಮೀಸಲಾತಿ' ಜಾರಿಯನ್ನು ಮುಂದೂಡುತ್ತಲೇ ಬಂದಿವೆ


ನಿರಂತರ ಮೂರು ದಶಕಗಳ ಹೋರಾಟದ ಬಳಿಕವೂ ಒಳ ಮೀಸಲಾತಿ ಶೀಘ್ರ ಜಾರಿಯಾಗುವಂತೆ ಕಂಡು ಬರುತ್ತಿಲ್ಲ. ಒಳ ಮೀಸಲಾತಿಗಾಗಿ ನಿರಂತರವಾಗಿ ಹೋರಾಟಗಳು ನಡೆದಿವೆ. ಆದರೂ ಕೂಡ ಯಾವುದೇ ಸರ್ಕಾರಕ್ಕೆ ಶಾಶ್ವತವಾಗಿ ಈ ಸಮಸ್ಯೆಯನ್ನು ಪರಿಹರಿಸಬೇಕು ಎಂಬ ಇಚ್ಛೆ ಇರುವಂತೆ ಕಂಡು ಬಂದಿಲ್ಲ.

ಒಳ ಮೀಸಲಾತಿ ಜಾರಿ ಮಾಡುವಂತೆ ಸುಪ್ರೀಂ ಕೋರ್ಟ್ ಆದೇಶ ಕೊಡುವುದಕ್ಕೂ ಮೊದಲೇ ರಾಜ್ಯದಲ್ಲಿ ಒಳ ಮೀಸಲಾತಿ ಕುರಿತು ವರದಿಯನ್ನೂ ಸರ್ಕಾರ ಪಡೆದುಕೊಂಡಿದೆ. ಆದರೂ ಕೂಡ ವರದಿ ಆಧರಿಸಿ ಒಳ ಮೀಸಲಾತಿ ಜಾರಿಗೆ ತರಲು ಈಗಿನ ಸಿದ್ದರಾಮಯ್ಯ ಸರ್ಕಾರವೂ ಸೇರಿದಂತೆ ಯಾವುದೇ ಸರ್ಕಾರಗಳು ಬದ್ಧತೆ ತೋರಿಸಿಲ್ಲ.

ಇತ್ತೀಚೆಗೆ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮಂಡನೆ ಮಾಡುತ್ತಿರುವಾಗಲೂ ಒಳ ಮೀಸಲಾತಿ ಜಾರಿಗೆ ತನ್ನಿ ಎಂದು ಪ್ರೇಕ್ಷಕರ ಗ್ಯಾಲರಿಯಿಂದ ವ್ಯಕ್ತಿಯೊಬ್ಬರು ಘೋಷಣೆ ಹಾಕಿದ್ದರು. ಈ ಘಟನೆ ಒಳ ಮೀಸಲಾತಿ ಸಮಸ್ಯೆ ಎಷ್ಟು ಗಂಭೀರವಾಗಿದೆ ಎಂಬುದನ್ನು ಸೂಚಿಸುತ್ತದೆ. ಆದರೂ ಕೂಡ ಈ ಬಗ್ಗೆ ಗಮನಹರಿಸಿ, ಸಾಮಾಜಿಕ ಸಮಾನತೆಯ ಕುರಿತು ಬದ್ಧತೆ ತೋರಿಸುವ ಸಿದ್ದರಾಮಯ್ಯ ಅವರು ನಿಧಾನ ನಡೆ ಕುತೂಹಲಕ್ಕೆ ಕಾರಣವಾಗಿದೆ.

ಎಡ-ಬಲ ರಾಜಕಾರಣದ ಒಳಪೆಟ್ಟಿನ ಪಟ್ಟು

ಪರಿಶಿಷ್ಟ ಎಡ-ಬಲ ರಾಜಕಾರಣದ ಒಳಪೆಟ್ಟಿನ ಪಟ್ಟು ಬೀಳಬಹುದು ಎಂಬ ರಾಜಕೀಯನ ಲೆಕ್ಕಾಚಾರದ ಹಿನ್ನೆಲೆಯಲ್ಲಿ ಯಾವುದೇ ಪಕ್ಷದ ಆಡಳಿತವಿದ್ದರೂ 'ಒಳ ಮೀಸಲಾತಿ' ಜಾರಿಯನ್ನು ಮುಂದೂಡುತ್ತಲೇ ಬಂದಿವೆ. ಹಿಂದಿನ ಬಿಜೆಪಿ ಸರ್ಕಾರದಲ್ಲಿ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದಾಗ ಪರಿಶಿಷ್ಟ ಜಾತಿಯವರಿಗೆ ಇದ್ದ ಮೀಸಲಾತಿಯನ್ನು ಶೇ. 15 ರಿಂದ 17ಕ್ಕೆ ಏರಿಸಿ ಒಳ ಮೀಸಲಾತಿ ಹಂಚಿಕೆಗೆ ಮುಂದಾಗಿದ್ದರು. ನಂತರ ನಡೆದ ಚುನಾವಣೆಯಲ್ಲಿ ಬಿಜೆಪಿ ಹಿನ್ನಡೆಗೆ ಇದೂ ಕೂಡ ಒಂದು ಕಾರಣ ಎಂದು ವಿಶ್ಲೇಷಣೆಗಳು ನಡೆದಿದ್ದವು. ಇದೇ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಕೂಡ ಒಳ ಮೀಸಲಾತಿ ಜಾರಿ ಮಾಡಲು ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂಬ ಮಾತುಗಳಿವೆ.

ಏನು ಮಾಡಲು ಆಗುವುದಿಲ್ಲ: ದ್ವಾರಕಾನಾಥ್

ಒಳ ಮೀಸಲಾತಿ ವಿಳಂಬದ ಕುರಿತು ದ ಫೆಡರಲ್ ಕರ್ನಾಟಕದೊಂದಿಗೆ ಮಾತನಾಡಿದ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ. ಸಿ.ಎಸ್. ದ್ವಾರಕಾನಾಥ್, 'ಒಳ ಮೀಸಲಾತಿ ಜಾರಿಗೆ ತರುವುದರಿಂದ ರಾಜಕೀಯ ಹೊಡೆತ ಬೀಳುತ್ತದೆ ಎಂಬುದಾದರೆ ಏನನ್ನೂ ಮಾಡಲು ಆಗುವುದಿಲ್ಲ. ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರು ಹಾವನೂರು ವರದಿಯನ್ನು ಜಾರಿಗೆ ತರುವಾಗ ರಾಜಕೀಯ ಪರಿಣಾಮ ಆಗುತ್ತದೆ ಎಂದಿದ್ದರೆ ಏನೂ ಮಾಡಲು ಆಗುತ್ತಿರಲಿಲ್ಲ. ಅವರು ಭೂಸುಧಾರಣೆ ತಂದಾಗಲೂ ರಾಜಕೀಯ ಹೊಡೆತ ಬೀಳುತ್ತದೆ ಎಂದುಕೊಂಡಿದ್ದರೆ ಏನು ಮಾಡಲು ಅಗುತ್ತಿರಲಿಲ್ಲ. ರಾಜಕೀಯ ಪರಿಣಾಮ ಆಗುತ್ತದೆ ಎಂಬ ಕಾರಣಕ್ಕೆ ಸಾಮಾಜಿಕ ನ್ಯಾಯವನ್ನು ಕೊಡದಿರುವುದು ತಪ್ಪಾಗುತ್ತದೆ. ಸಾಮಾಜಿಕ ನ್ಯಾಯ ಕೊಡಬೇಕು ಎಂಬುದು ಇದ್ದರೆ ನೀವು ಯಾವುದೇ ಸವಾಲನ್ನು ಎದುರಿಸಲು ಸಿದ್ಧರಾಗಿರಬೇಕು' ಎಂದರು.

ಸಿದ್ದರಾಮಯ್ಯಗೆ ಇಚ್ಛಾಶಕ್ತಿ ಕೊರತೆ?

'ಒಳ ಮೀಸಲಾತಿಯನ್ನು ಜಾರಿಗೆ ತರಲು ಎಂಪಿರಿಕೆಲ್ ಡೆಟಾ (ಪ್ರಾಯೋಗಿಕ ದತ್ತಾಂಶ) ಬೇಕು ಎಂಬುದಿದ್ದರೆ ಅದು ಈಗ ಹಿಂದುಳಿದ ವರ್ಗಗಳ ಆಯೋಗ ನಡೆಸಿರುವ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯಲ್ಲಿ ಇದೆ. ಒಳ ಮೀಸಲಾತಿ ಕೊಡಬೇಕು ಎಂಬ ಇಚ್ಛಾಶಕ್ತಿ ಇದ್ದರೆ ಆ ದತ್ತಾಂಶ ಉಪಯೋಗಿಸಿಕೊಂಡು ಕೊಡಬಹುದು.' ಎಂದು ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಸಿ.ಎಸ್. ದ್ವಾರಕಾನಾಥ್ ಸಲಹೆ ನೀಡಿದ್ದಾರೆ.

ಇದೇ ವಿಚಾರದ ಕುರಿತು ʼದ ಫೆಡರಲ್ ಕರ್ನಾಟಕʼದೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಯ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್, 'ಸೂಕ್ತ ಅಂಕಿ-ಅಂಶ ಇಲ್ಲದೆ ಒಳ ಮೀಸಲಾತಿಯನ್ನು ಜಾರಿಗೆ ತರಬಾರದು. ಹಾಗಂತ ಒಳ ಮೀಸಲಾತಿ ಜಾರಿ ಮಾಡುವುದನ್ನು ವಿಳಂಬ ಕೂಡ ಮಾಡಬಾರದು. ಒಳ ಮೀಸಲಾತಿ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಸರ್ಕಾರ ಕಂಡುಕೊಳ್ಳಬೇಕು. ದತ್ತಾಂಶ ಪಡೆಯುವುದು ಸರ್ಕಾರಕ್ಕೆ ದೊಡ್ಡ ಕೆಲಸವೇನು ಅಲ್ಲ. ಆದರೆ ಅದನ್ನು ಜಾರಿಗೆ ತರುವ ಇಚ್ಛೆ ಇರಬೇಕು ಎಂದರು.

ಮಲ್ಲಿಕಾರ್ಜುನ ಖರ್ಗೆ, ಮುನಿಯಪ್ಪ ಅಭಿಪ್ರಾಯ ಮುಖ್ಯ

ಒಳ ಮೀಸಲಾತಿ ಜಾರಿಗೆ ತರುವಲ್ಲಿ ಎಡಗೈ-ಬಲಗೈ ಸಮುದಾಯಗಳ ಪ್ರಬಲ ನಾಯಕರ ಅಭಿಪ್ರಾಯ ಕೂಡ ಪರಿಗಣಿಸಬೇಕಾಗುತ್ತದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಚಿವರಾದ ಡಾ. ಜಿ. ಪರಮೇಶ್ವರ್, ಎಚ್.ಸಿ. ಮಹಾದೇವಪ್ಪ, ಕೆ.ಎಚ್. ಮುನಿಯಪ್ಪ, ಎಚ್.ಅಂಜನೇಯ ಸೇರಿದಂತೆ ಅನೇಕ ಪ್ರಬಲ ನಾಯಕರು ಪರಿಶಿಷ್ಟ ಎಡ ಹಾಗೂ ಬಲ ಸಮುದಾಯದವರಾಗಿದ್ದಾರೆ. ಇವರೆಲ್ಲರ ಒಪ್ಪಿಗೆ ಇಲ್ಲದೆ ಒಳ ಮೀಸಲಾತಿ ಜಾರಿಗೆ ತರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಷ್ಟಸಾಧ್ಯ ಎನ್ನಲಾಗಿದೆ.

ಒಳ ಮೀಸಲಾತಿ ಹೋರಾಟದ ಹಾದಿ

ಎಸ್​ಸಿ ಒಳ ಮೀಸಲಾತಿ ವಿಚಾರ ಇವತ್ತು-ನಿನ್ನೆಯದಲ್ಲ. ಮಾಜಿ ಸಿಎಂ ಎಸ್​.ಎಂ. ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದಾಲೇ ಒಳ ಮೀಸಲಾತಿ ಜಾರಿಗೆ ಒತ್ತಡ ಹೆಚ್ಚಾಗಿತ್ತು. ಹೀಗಾಗಿಯೇ ನಂತರ ಅಸ್ತಿತ್ವಕ್ಕೆ ಬಂದ ಎನ್. ಧರ ಸಿಂಗ್ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ 2005ರಲ್ಲಿ ಅಧ್ಯಯನ ನಡೆಸಿ ಶಿಫಾರಸು ಮಾಡಲು ನ್ಯಾ. ಎ.ಜೆ. ಸದಾಶಿವ ನೇತೃತ್ವದ ಆಯೋಗವನ್ನು ರಚನೆ ಮಾಡಿತ್ತು.

ಸತತ 7 ವರ್ಷಗಳ ಕಾಲ ಅಧ್ಯಯನದ ನಂತರ ಮಾಡಿದ ನ್ಯಾ. ಎ.ಜಿ. ಸದಾಶಿವ ಆಯೋಗ 2012 ಜೂನ್ 12ರಂದು ಆಗಿನ ಸಿಎಂ ಡಿ.ವಿ. ಸದಾನಂದಗೌಡ ಅವರಿಗೆ ವರದಿ ಸಲ್ಲಿಸಿತ್ತು. ಆಗ ಎಸ್​ಸಿ ಸಮುದಾಯಕ್ಕಿದ್ದ ಶೇ.15ರ ಮೀಸಲಾತಿಯಲ್ಲಿ ಎಡಗೈಗೆ ಶೇ.6, ಬಲಗೈಗೆ ಶೇ.5.5, ಸ್ಪೃಶ್ಯ ಉಪಜಾತಿಗಳಿಗೆ ಶೇ. 3 ಹಾಗೂ ಈ ಮೂರು ಗುಂಪುಗಳಿಗೆ ಸೇರದವರಿಗೆ ಶೇ.1ರಷ್ಟು ಮೀಸಲಾತಿ ನೀಡಬಹುದು ಎಂದು ಶಿಫಾರಸು ಮಾಡಿತ್ತು. ಪರಿಶಿಷ್ಟ ಜಾತಿಯಲ್ಲಿರು ಒಟ್ಟು 101 ಉಪಜಾತಿಗಳನ್ನು ವರ್ಗೀಕರಣ ಮಾಡಿ ಒಳ ಮೀಸಲಾತಿ ಕೊಡಬೇಕಾಗಿದೆ.

ನಂತರ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾಗ ಪರಿಶಿಷ್ಟ ಜಾತಿಯವರಿಗೆ ಇದ್ದ ಮೀಸಲಾತಿಯನ್ನು ಶೇ. 15 ರಿಂದ 17ಕ್ಕೆ ಹಾಗೂ ಪರಿಶಿಷ್ಟ ಪಂಗಡದವರಿಗೆ ಇದ್ದ ಮೀಸಲಾತಿಯನ್ನು ಶೇ. 3 ರಿಂದ 7ಕ್ಕೆ ಏರಿಸಲಾಯಿತು. ಜೊತೆಗೆ ಒಳ ಮೀಸಲಾತಿ ಜಾರಿಗೆ ತರಲು ಬೊಮ್ಮಾಯಿ ಸರ್ಕಾರದಿಂದಲೂ ಆಗಲಿಲ್ಲ.

ಒತ್ತಡ ಹೆಚ್ಚಾದಾಗ ಒಳ ಮೀಸಲಾತಿ ಜಾರಿಗೆ ತರಲು ಸಿದ್ದರಾಮಯ್ಯ ಸರ್ಕಾರ ನಿರ್ಧಾರ ಮಾಡಿ 2024ರ ನವೆಂಬರ್ 13ರಂದು ನಿವೃತ್ತ ನ್ಯಾ. ನಾಗಮೋಹನ್ ದಾಸ್ ನೇತೃತ್ವದಲ್ಲಿ ಪರಿಶಿಷ್ಟ ಜಾತಿ ಒಳಮೀಸಲಾತಿ ಆಯೋಗ ರಚನೆ ಮಾಡಿದೆ. ಆರಂಭದಲ್ಲಿ 2 ತಿಂಗಳುಗಳಲ್ಲಿ ವರದಿ ನೀಡಲು ಸೂಚಿಸಿದ್ದ ಸರ್ಕಾರಕ್ಕೆ ಈವರೆಗೂ ನ್ಯಾ. ಎಚ್.ಎನ್. ನಾಗಮೋಹನ್ ದಾಸ್ ಆಯೋಗ ವರದಿ ನೀಡಿಲ್ಲ ಎಂಬುದು ಒತ್ತಡ ಹೆಚ್ಚಾಗಲು ಕಾರಣವಾಗಿದೆ.

Read More
Next Story