
ಇನ್ಫೋಸಿಸ್ ಶೌಚಾಲಯದಲ್ಲಿ ಮಹಿಳಾ ಸಹೋದ್ಯೋಗಿಗಳ ವಿಡಿಯೊ ತೆಗೆದ ಆರೋಪ: ಬಂಧನ
ಪೊಲೀಸರ ಪ್ರಕಾರ, ಈ ಆಘಾತಕಾರಿ ಘಟನೆ ಜೂನ್ 30ರಂದು ಬೆಳಿಗ್ಗೆ ನಡೆದಿದೆ. ಮಹಿಳೆಯೊಬ್ಬರು ಶೌಚಾಲಯ ಬಳಸುತ್ತಿದ್ದಾಗ, ಪಕ್ಕದ ಕೋಣೆಯಿಂದ ಶಂಕಾಸ್ಪದ ಚಲನೆಯನ್ನು ಗಮನಿಸಿದ್ದಾರೆ.
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮಹಿಳೆಯರ ಶೌಚಾಲಯದಲ್ಲಿ ಸಹೋದ್ಯೋಗಿಗಳನ್ನು ರಹಸ್ಯವಾಗಿ ವಿಡಿಯೋ ಚಿತ್ರೀಕರಿಸಿದ ಆರೋಪದ ಮೇಲೆ 30 ವರ್ಷದ ಇನ್ಫೋಸಿಸ್ ಉದ್ಯೋಗಿಯೊಬ್ಬನನ್ನು ಬುಧವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಾರಾಷ್ಟ್ರದ ಸಾಂಗ್ಲಿ ಮೂಲದ ಸ್ವಪ್ನಿಲ್ ನಾಗೇಶ್ ಮಾಲಿ ಬಂಧಿತ ಆರೋಪಿ. ಇನ್ಫೋಸಿಸ್‌ನಲ್ಲಿ ಸೀನಿಯರ್ ಅಸೋಸಿಯೇಟ್ ಕನ್ಸಲ್ಟಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಈತನನ್ನು ಕಂಪನಿಯ ಮಾನವ ಸಂಪನ್ಮೂಲ (HR) ಸಿಬ್ಬಂದಿ ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಇನ್ಫೋಸಿಸ್‌ನಿಂದ ಕಠಿಣ ಕ್ರಮ, ಉದ್ಯೋಗಿಯ ವಜಾ
ಈ ಘಟನೆಗೆ ಸಂಬಂಧಿಸಿದಂತೆ ಇನ್ಫೋಸಿಸ್ ತಕ್ಷಣವೇ ಹೇಳಿಕೆ ಬಿಡುಗಡೆ ಮಾಡಿದೆ. "ನಮಗೆ ಈ ಘಟನೆಯ ಬಗ್ಗೆ ಮಾಹಿತಿ ಇದ್ದು, ಆರೋಪಿಯನ್ನು ಕಂಪನಿಯಿಂದ ವಜಾಗೊಳಿಸಲಾಗಿದೆ. ದೂರುದಾರರಿಗೆ ಬೆಂಬಲ ನೀಡಿ, ತ್ವರಿತ ದೂರು ದಾಖಲಿಸಲು ಸಹಾಯ ಮಾಡಿದ್ದೇವೆ ಮತ್ತು ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತಿದ್ದೇವೆ. ಇನ್ಫೋಸಿಸ್ ಕಂಪನಿಯು ಶೂನ್ಯ-ಸಹಿಷ್ಣುತೆ ನೀತಿ (zero-tolerance policy) ಹೊಂದಿದ್ದು, ಕಂಪನಿಯ ನೀತಿ ಸಂಹಿತೆಯ ಉಲ್ಲಂಘನೆಗೆ ಸಂಬಂಧಿಸಿದ ಯಾವುದೇ ದೂರನ್ನು ಗಂಭೀರವಾಗಿ ಪರಿಗಣಿಸುತ್ತದೆ" ಎಂದು ಕಂಪನಿಯ ವಕ್ತಾರರು ಸ್ಪಷ್ಟಪಡಿಸಿದ್ದಾರೆ.
ಪೊಲೀಸರ ಪ್ರಕಾರ, ಈ ಆಘಾತಕಾರಿ ಘಟನೆ ಜೂನ್ 30ರಂದು ಬೆಳಿಗ್ಗೆ ನಡೆದಿದೆ. ಮಹಿಳೆಯೊಬ್ಬರು ಶೌಚಾಲಯ ಬಳಸುತ್ತಿದ್ದಾಗ, ಪಕ್ಕದ ಕೋಣೆಯಿಂದ ಶಂಕಾಸ್ಪದ ಚಲನೆಯನ್ನು ಗಮನಿಸಿದ್ದಾರೆ. ಆರೋಪಿ ಸ್ವಪ್ನಿಲ್ ಮಾಲಿ ಪಕ್ಕದ ಕೋಣೆಯ ಕಮೋಡ್ ಮೇಲೆ ನಿಂತು ತನ್ನ ಮೊಬೈಲ್ ಫೋನ್‌ನಿಂದ ಮಹಿಳೆಯ ವಿಡಿಯೋ ಚಿತ್ರೀಕರಿಸಿದ್ದು ಈ ವೇಳೆ ಗೊತ್ತಾಗಿದೆ.
ಆತಂಕಗೊಂಡ ಮಹಿಳೆ ಕೂಗಾಡಿದಾಗ ಆರೋಪಿ ಕ್ಷಮೆಯಾಚಿಸಿದ್ದಾನೆ. ದೂರಿನ ಬಳಿಕ ಇನ್ಫೋಸಿಸ್‌ನ ಮಾನವ ಸಂಪನ್ಮೂಲ ವಿಭಾಗದ ಸಿಬ್ಬಂದಿ ಆರೋಪಿಯ ಫೋನ್ ಪರಿಶೀಲಿಸಿದಾಗ, ದೂರುದಾರ ಮಹಿಳೆಯ ವಿಡಿಯೋ ಜೊತೆಗೆ ಇನ್ನೊಬ್ಬ ಮಹಿಳಾ ಉದ್ಯೋಗಿಯ ರಹಸ್ಯ ವಿಡಿಯೋ ಕಂಡುಬಂದಿದೆ. ಈ ವಿಡಿಯೋಗಳನ್ನು ಈಗ ಅಳಿಸಲಾಗಿದ್ದರೂ, ಸಿಬ್ಬಂದಿ ಅವುಗಳ ಸ್ಕ್ರೀನ್‌ಶಾಟ್‌ಗಳನ್ನು ತೆಗೆದುಕೊಂಡಿದ್ದರು.
ಬಳಿಕ ಮಹಿಳೆ ತಮ್ಮ ಪತಿಯ ಸಲಹೆಯ ಮೇರೆಗೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿಯ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆಯ (IT Act) ಸಂಬಂಧಿತ ವಿಭಾಗಗಳು ಮತ್ತು ಹೊಸ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 77 (ವಾಯರಿಸಂ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. "ದೂರಿನ ಆಧಾರದ ಮೇಲೆ ಆರೋಪಿಯನ್ನು ಬಂಧಿಸಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.