ಪೌಷ್ಠಿಕ ಆಹಾರ ಅಕ್ರಮ ಸಂಗ್ರಹ; ಅಂಗನವಾಡಿ ಕಾರ್ಯಕರ್ತೆಯರು ಸೇರಿ 26 ಮಂದಿ ಬಂಧನ
x
ಜಪ್ತಿ ಮಾಡಲಾದ ಪೌಷ್ಟಿಕ ಆಹಾರ

ಪೌಷ್ಠಿಕ ಆಹಾರ ಅಕ್ರಮ ಸಂಗ್ರಹ; ಅಂಗನವಾಡಿ ಕಾರ್ಯಕರ್ತೆಯರು ಸೇರಿ 26 ಮಂದಿ ಬಂಧನ

ಮಕ್ಕಳ ಆಹಾರ, ಗರ್ಭಿಣಿಯರ ಆಹಾರವನ್ನು ಅಕ್ರಮವಾಗಿ ಸಂಗ್ರಹಿಸಿದ್ದನ್ನು ಪತ್ತೆ ಹಚ್ಚಿದ ಅಧಿಕಾರಿಗಳು ಹುಬ್ಬಳ್ಳಿಯ ಕಸಬಾಪೇಟೆ ಪೊಲೀಸ್ ಠಾಣೆಗೆ ನೀಡಿದ್ದ ದೂರು ಆಧರಿಸಿ ಹಲವರನ್ನು ಬಂಧಿಸಲಾಗಿದೆ.


ಅಂಗನವಾಡಿ ಕೇಂದ್ರದ ಮಕ್ಕಳಿಗೆ ವಿತರಿಸುವ ಪೌಷ್ಠಿಕ ಆಹಾರವನ್ನು ಅಕ್ರಮವಾಗಿ ಸಂಗ್ರಹಿಸಿದ್ದ ಆರೋಪದ ಮೇಲೆ ಅಂಗನವಾಡಿ ಕಾರ್ಯಕರ್ತೆಯರು ಸೇರಿ 26 ಮಂದಿಯನ್ನು ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದಾರೆ.

ಫೆ.15 ರಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮತ್ತು ಸಹಾಯಕ ಆಯುಕ್ತರ ನೇತೃತ್ವದಲ್ಲಿ ಗೋದಾಮಿನ ಮೇಲೆ ದಾಳಿ ನಡೆಸಿದಾಗ ಅಕ್ರಮ ದಾಸ್ತಾನು ಪತ್ತೆಯಾಗಿತ್ತು.

ಮಕ್ಕಳ ಆಹಾರ, ಗರ್ಭಿಣಿಯರಿಗೆ ವಿತರಣೆ ಮಾಡುವ ಆಹಾರ ಪದಾರ್ಥಗಳನ್ನು ಪತ್ತೆ ಹಚ್ಚಿದ ಅಧಿಕಾರಿಗಳು ನಗರದ ಕಸಬಾಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ಆಧರಿಸಿ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಗೋಧಿ ರವೆ, ಹಾಲಿನ ಪುಡಿ, ಬೆಲ್ಲ, ಹೆಸರುಕಾಳು ಮತ್ತು ಅಕ್ಕಿ ಸೇರಿದಂತೆ ನಾಲ್ಕು ಲಕ್ಷ ಮೌಲ್ಯದ ಅಹಾರದ ಪಾಕೆಟ್​​ಗಳನ್ನು ಜಪ್ತಿ ಮಾಡಲಾಗಿದೆ ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್​ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.

ಗೋದಾಮು ಮಾಲೀಕ ಹಾಗೂ ಬಾಡಿಗೆ ಪಡೆದವರು ಸೇರಿ ಎಂಟು ಜನರನ್ನು ಮೊದಲು ವಶಕ್ಕೆ ಪಡೆಯಲಾಯಿತು. ಅವರಿಂದ ಮಾಹಿತಿ ಪಡೆದ ಬಳಿಕ ಇನ್ನಷ್ಟು ಜನರನ್ನು ಬಂಧಿಸಿ, 18 ಅಂಗನವಾಡಿಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ಆಹಾರ ಪಾಕೆಟ್‌ ಸಂಗ್ರಹಿಸಿದ್ದನ್ನು ಜಪ್ತಿ ಮಾಡಲಾಗಿದೆ. 18 ಮಂದಿ ಅಂಗನವಾಡಿ ಕಾರ್ಯಕರ್ತೆಯರು ಸೇರಿ 26 ಜನರನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಅಂಗನವಾಡಿ ಕೇಂದ್ರಗಳಲ್ಲಿ ಅಕ್ರಮವಾಗಿ ದಾಸ್ತಾನು ಇರಿಸಿದ್ದ ಆಹಾರ ಪದಾರ್ಥಗಳನ್ನು ವಶಪಡಿಸಿಕೊಂಡರು

ಶಿವಕುಮಾರ್ ದೇಸಾಯಿ (ಬುಲೆರೋ ವಾಹನದ ಮಾಲೀಕ), ಬಸವರಾಜ್ ಭದ್ರಶೆಟ್ಟಿ (ವಾಹನದ ಚಾಲಕ), ಮಹಮ್ಮದ್ ಗೌಸ್ (ಗೋಡೌನ್ ಮಾಲೀಕ), ಗೌತಮ್ ಸಿಂಗ್ ಠಾಕೂರ (ಗೋಡೌನ್ ಬಾಡಿಗೆದಾರ), ಮಂಜುನಾಥ ಮಾದರ, ಪಕ್ಕಿರೇಶ ಹಲಗಿ, ಕೃಷ್ಣ ಮಾದರ, ರವಿ ಹರಿಜನ್ ಎಂದು ಗುರುತಿಸಲಾಗಿದೆ. ಇನ್ನು ಬಂಧಿತ ಅಂಗನವಾಡಿ ಕಾರ್ಯಕರ್ತೆಯರನ್ನು ಶಾಮೀನಬಾನು ಮುಜಾವರ್, ಬಿಬೀ ಆಯಿಷಾ, ರೇಷ್ಮಾ ವಡ್ಡೋ, ಶಾಹೀನ್ ಚಕ್ಕೆಹಾರಿ, ಫೈರೋಜಾ ಮುಲ್ಲಾ, ಬಿಬಿಆಯಿಷಾ ಷೇಕ್, ಶಮೀಮಾ ಬಾನು ದಾರುಗಾರ, ಮೆಹಬೂಬಿ ಹಲ್ಯಾಳ, ಶಕುಂತಲಾ ನ್ಯಾಮತಿ, ಚಿತ್ರಾ ಉರಾಣಿಕರ, ಮೀನಾಕ್ಷಿ ಬೆಟಗೇರಿ, ಹೀನಾ ಕೌಸರ್, ಹೀನಾ ಕೌಸರ್ ಮೇಸ್ತ್ರೀ, ಶೀಲಾ ಹಿರೇಮಠ, ಶೃತಿ ಕೊಟಬಾಗಿ, ಪರವೀನ್ ಬಾನು ಖಲೀಪ, ರೇಣುಕಾ ಕಮಲದಿನ್ನಿ, ಗಂಗಮ್ಮ ಪಾಂಡರೆ ಎಂದು ಗುರುತಿಸಲಾಗಿದೆ.

ಅಕ್ರಮವಾಗಿ ಆಹಾರ ಧಾನ್ಯ ಸಾಗಾಟ ಮಾಡಲು ಬಳಸುತ್ತಿದ್ದ KA 25 AB 8346 ಗೂಡ್ಸ್ ವಾಹನವನ್ನು ಹುಬ್ಬಳ್ಳಿ ಕಸಬಾಪೇಟೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಏನಿದು ಪ್ರಕರಣ?

ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ನಾಯಕಿ ಬೈತೂಲ್ಲಾ ಕಿಲ್ಲೇದಾರ ಅವರು ಸಣ್ಣ ಮಕ್ಕಳಿಗೆ ನೀಡುವ ಹಾಲಿನ ಪೌಡರ್, ಗೋಧಿ, ಬೇಳೆ, ಬೆಲ್ಲ ಸೇರಿದಂತೆ ಪೌಷ್ಟಿಕ ಆಹಾರಕ್ಕೆ ಕನ್ನ ಹಾಕಿ ಸಿಕ್ಕಿಬಿದ್ದಿದ್ದರು. ಪತಿ ಫಾರೂಕ್ ಜೊತೆ ಸೇರಿ ಗೋಡೌನ್​ಲ್ಲಿ ಅಕ್ರಮವಾಗಿ ಆಹಾರ ಪದಾರ್ಥದ ಪಾಕೆಟ್‌ಗಳನ್ನು ಸಂಗ್ರಹಿಸಿಟ್ಟಿದ್ದರು.

ಖಚಿತ ಮಾಹಿತಿ ಮೇರೆಗೆ ಮಹಿಳಾ ಮತ್ತು ‌ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಉಪ ವಿಭಾಗ ಅಧಿಕಾರಿ, ತಹಶೀಲ್ದಾರ್‌ ನೇತೃತ್ವದಲ್ಲಿ ಗಬ್ಬೂರಿನ ಪ್ಲಾಸ್ಟಿಕ್ ಸಂಗ್ರಹ ಮಾಡುವ ಹಳೇ ಗೋಡೌನ್ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ಗೋಡೌನ್​ನಲ್ಲಿ ರಾಶಿ ರಾಶಿ ಮೂಟೆಗಳು ಸಿಕ್ಕಿವೆ.

ಆರೋಪಿ ಕಿಲ್ಲೇದಾರ ಅವರು ಅಂಗನವಾಡಿ ಕಾರ್ಯಕರ್ತೆಯರ ಸಂಘ ಕಟ್ಟಿಕೊಂಡು ಓಡಾಡುತ್ತಿದ್ದರು. ಸ್ಥಳೀಯ ಮಟ್ಟದಲ್ಲಿ ಕಾಂಗ್ರೆಸ್ ನಾಯಕಿಯಾಗಿ ಗುರುತಿಸಿಕೊಂಡಿದ್ದರು. ಈಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ದೂರಿನ ಮೇಲೆ ಬೈತೂಲ್ಲಾ ಕಿಲ್ಲೇದಾರ, ಪತಿ ಫಾರೂಕ್ ಹಾಗೂ ಕಾರು ಚಾಲಕ ಮತ್ತು ಕಾರು ಮಾಲೀಕರ ಮೇಲೆ ದೂರು ದಾಖಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ಬೈತೂಲ್ಲಾ ಕಿಲ್ಲೇದಾರ ನಾಪತ್ತೆಯಾಗಿದ್ದಾರೆ.

ಕಾರ್ಯಕರ್ತೆಯರನ್ನು ಶಿಕ್ಷಿಸುವುದು ಸರಿಯಲ್ಲ

ಪೌಷ್ಟಿಕ ಆಹಾರ ಪದಾರ್ಥ ಅಕ್ರಮವಾಗಿ ದಾಸ್ತಾನು ಮಾಡಿದ್ದ ಆರೋಪದ ಮೇಲೆ ಹುಬ್ಬಳ್ಳಿಯಲ್ಲಿ 18 ಮಂದಿ ಅಂಗನವಾಡಿ ಕಾರ್ಯಕರ್ತೆಯನ್ನು ಶಿಕ್ಷಿಸುವುದು ತರವಲ್ಲ. ಪ್ರತಿ ೨೫ ಅಂಗನವಾಡಿಗಳಿಗೆ ಒಬ್ಬರು ಮೇಲ್ವಿಚಾರಕರು ಇರುತ್ತಾರೆ. ಅಂಗನವಾಡಿ ಕೇಂದ್ರಗಳಿಗೆ ಬರುವ ಆಹಾರ ಪದಾರ್ಥಗಳನ್ನು ಪರಿಶೀಲಿಸುವುದು ಅವರ ಕರ್ತವ್ಯ. ಆಹಾರ ಪದಾರ್ಥಗಳನ್ನು ಅಕ್ರಮವಾಗಿ ದಾಸ್ತಾನು ಮಾಡಬೇಕಾದರೆ ಅಧಿಕಾರಿಗಳು ಏನು ಮಾಡುತ್ತಿದ್ದರು. ಆಹಾರ ಪದಾರ್ಥಗಳ ಬಿಲ್ಲಿಂಗ್‌, ಸರಬರಾಜಿನ ಬಿಲ್‌ ಮಾಡಿದ್ದೇಗೆ, ಇದನ್ನುಯಾಕೆ ಪರಿಶೀಲಿಸಿಲ್ಲ. ಇದರಲ್ಲಿ ಅಧಿಕಾರಿಗಳೇ ಶಾಮೀಲಾಗಿರುವ ಅನುಮಾನವಿದೆ ಎಂದು ಸಿಐಟಿಯು ಸಂಯೋಜಿತ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ವರಲಕ್ಷ್ಮಿ ಅವರು ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು.

ಕೆಲವು ಕಡೆಗಳಲ್ಲಿ ಬೇಕಾಬಿಟ್ಟಿ ಆಹಾರ ಪದಾರ್ಥ ಪೂರೈಸಲಾಗುತ್ತಿದೆ. ಇದರ ಮಾಹಿತಿ ಸಿಡಿಪಿಒ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕರಿಗೆ ಇದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಹೊರಗಿನವರು ಹಾಗೂ ಅಧಿಕಾರಿಗಳು ಶಾಮೀಲಾದಾಗ ಮಾತ್ರ ಅಕ್ರಮಗಳ ನಡೆಯುತ್ತವೆ. ಅಧಿಕಾರಿಗಳು ಮಾಡುವ ತಪ್ಪಿಗೆ ಅಂಗನವಾಡಿ ಕಾರ್ಯಕರ್ತೆಯರಿಗೆ ಶಿಕ್ಷೆ ಕೊಡಿವುದು ಸರಿಯಲ್ಲ ಎಂದು ಹೇಳಿದರು.

ಇನ್ನು ಹುಬ್ಬಳ್ಳಿಯಲ್ಲಿ ಸಿಐಟಿಯು ಸಂಯೋಜಿತ ಸಂಘಟನೆಯ ಅಂಗನವಾಡಿ ಕಾರ್ಯಕರ್ತೆಯರಿಲ್ಲ. ಆದರೆ, ಯಾರೇ ತಪ್ಪು ಮಾಡಿದರೂ ಶಿಕ್ಷೆ ಅನುಭವಿಸಬೇಕು ಎಂದು ಹೇಳಿದರು.

Read More
Next Story