IISc Study| ಎರಡು ದಶಕಗಳಲ್ಲಿ ʻಪ್ರಗತಿʼ ಗಾಗಿ ಕರ್ನಾಟಕ ಕಳೆದುಕೊಂಡಿದ್ದು 30 ಲಕ್ಷ ಕೋಟಿ ಮೌಲ್ಯದ ಅರಣ್ಯ ಸಂಪತ್ತು
ಕೇರಳ ಮತ್ತು ಕರ್ನಾಟಕ ಕೇಂದ್ರ ಪರಿಸರ ಸಚಿವಾಲಯದ ಆರನೇ ಕರಡನ್ನು ಒಪ್ಪಿಕೊಳ್ಳಲು ನಿರಾಕರಿಸುತ್ತಿರುವುದನ್ನು ಮೊದಲ ಭಾಗದಲ್ಲಿ ವಿಶ್ಲೇಷಿಸಿರುವ ದ ಫೆಡರಲ್-ಕರ್ನಾಟಕ ಎರಡನೇ ಭಾಗದಲ್ಲಿ ಕರ್ನಾಟಕ ಕರಡನ್ನು ನಿರಾಕರಿಸುವ ಪರಿಣಾಮಗಳ ಅರಿವಿದ್ದೂ, ಪಶ್ಚಿಮ ಘಟ್ಟ ಪ್ರದೇಶದಲ್ಲಿ ಕೈಗೆತ್ತಿಕೊಳ್ಳುತ್ತಿರುವ ʻಪರಿಸರಕ್ಕೆ ಧಕ್ಕೆ ತರುವಂಥʼ ಯೋಜನೆʼಗಳ ಮೇಲೆ ಬೆಳಕು ಚೆಲ್ಲುತ್ತದೆ.
ʼಪ್ರಗತಿʼ ಯ ಹೆಸರಿನಲ್ಲಿ ಕರ್ನಾಟಕ ಕಳೆದು ಎರಡು ದಶಕಗಳಲ್ಲಿ ಅಪಾರ ಪ್ರಮಾಣದ ಅರಣ್ಯ ಸಂಪತ್ತನ್ನು ಕಳೆದುಕೊಂಡಿದೆ! ಭಾರತೀಯ ವಿಜ್ಞಾನ ಸಂಸ್ಥೆ [Indian Institute of Science (IIsc)] ಇತ್ತೀಚೆಗೆ ನಡೆಸಿದ ಸಮೀಕ್ಷೆಯ ಪ್ರಕಾರ ಈಗಿನ ಕರ್ನಾಟಕ ಸರ್ಕಾರದ ಅರಣ್ಯದ ಮೌಲ್ಯ-ರೂ.49 ಲಕ್ಷ ಕೋಟಿ. ಕರ್ನಾಟದ ಅರಣ್ಯ ಸಂಪತ್ತಿನ ಮೌಲ್ಯ 20 ವರ್ಷಗಳ ಹಿಂದಿನ ಮೌಲ್ಯ ರೂ. 79 ಲಕ್ಷ ಕೋಟಿ!
ಅಂದರೆ ಕರ್ನಾಟಕದ ಅರಣ್ಯ ಸಂಪತ್ತಿನ ಮೌಲ್ಯ ಎರಡು ದಶಕಗಳ ಅವಧಿಯಲ್ಲಿ ರೂ. 30 ಲಕ್ಷ ಕೋಟಿಗಳಷ್ಟು ಕುಸಿದಿದೆ ಎಂದು IISc ಸಮೀಕ್ಷೆ ಅಂದಾಜು ಮಾಡಿದೆ. ಈ ಸಮೀಕ್ಷೆಯನ್ನು ಮಾಡಿರುವ ವಿವರವಾದ ಪುಸ್ತಕ ‘Natural Capital Accounting and Valuation of Ecosystem Services’, Karnataka State, India; Ecosystem Services ಇನ್ನೂ ಪ್ರಕಟವಾಗಿಲ್ಲ. ಈ ಪುಸ್ತಕದ ಸಹ ಲೇಖಕ IIScಯ ಖ್ಯಾತ ವಿಜ್ಞಾನಿ ಪ್ರೊ. ಟಿ.ವಿ. ರಾಮಚಂದ್ರ.
ಪಶ್ಚಿಮ ಘಟ್ಟದಲ್ಲಿ ಮುಂದುವರಿದ ಅರಣ್ಯ ಹನನ
ಇರಲಿ, ಕರ್ನಾಟಕ ಸರ್ಕಾರದ ಅರಣ್ಯ ಸಚಿವರು ಅಕ್ರಮವಾಗಿ ಅರಣ್ಯ ಪ್ರದೇಶವನ್ನು ಆಕ್ರಮಿಸಿಕೊಂಡಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿರುವಾಗಲೇ, ಅಕ್ರಮವಾಗಿ ಪಶ್ಚಿಮ ಘಟ್ಟ ಪ್ರದೇಶದಲ್ಲಿ ತಲೆ ಎತ್ತುತ್ತಿರುವ ಹೋಮ್ ಸ್ಟೇ, ರೆಸಾರ್ಟ್ ಗಳನ್ನು ತೆರವು ಮಾಡುತ್ತಿರುವಾಗಲೇ, ಪಶ್ಚಿಮ ಘಟ್ಟದ ತೊಟ್ಟಿಲೆಂದೇ ಭಾವಿಸಲಾಗುತ್ತಿರುವ ಚಿಕ್ಕಮಗಳೂರಿನಲ್ಲಿ ಪ್ಲಾಂಟೇಷನ್ ಗಳನ್ನು ಬೆಳೆಸಲು ನಿರಂತರವಾಗಿ ಅರಣ್ಯ ಹನನ ನಡೆಯುತ್ತಿದೆ. ಈ ರೀತಿಯ ಕಾಡು ಕಡಿತ ಚಿಕ್ಕಮಗಳೂರು ಮತ್ತು ಮೂಡಿಗೆರೆ ತಾಲ್ಲೂಕಿನಲ್ಲಿ ನಿರಂತರವಾಗಿ ನಡೆಯುತ್ತಿದೆ ಎಂದು ಹೆಸರು ಬಹಿರಂಗ ಪಡಿಸಲು ಬಯಸದ ಹಿರಿಯ ಅರಣ್ಯ ಅಧಿಕಾರಿಯೊಬ್ಬರು ನೋವಿನಿಂದ ದ ಫೆಡರಲ್ -ಕರ್ನಾಟಕದೊಂದಿಗೆ ಹಂಚಿಕೊಂಡಿದ್ದಾರೆ.
ಪಶ್ಚಿಮ ಘಟ್ಟದ ತೊಟ್ಟಿಲಾದ ಇನ್ನೊಂದು ಚಿಕ್ಕ ಜಿಲ್ಲೆ ಕೊಡಗು. ಇಲ್ಲಿನ ಹಿರಿಯ ಅರಣ್ಯಾಧಿಕಾರಿ ಭಾಸ್ಕರ್ ಅವರ ಪ್ರಕಾರ ಈ ವರ್ಷದ ಮಾರ್ಚಿ ಅಂತ್ಯದ ವೇಳೆಗೆ ಕರ್ನಾಟಕ 2 ಲಕ್ಷ ಎಕರೆ ಅರಣ್ಯ ಕಳೆದುಕೊಂಡಿದೆ. ಕೊಡಗಿನಲ್ಲಿ ಇದುವರೆಗೆ 5000 ಎಕರೆ ಅರಣ್ಯವನ್ನು ಒತ್ತುವರಿ ಮಾಡಲಾಗಿದೆ. ಈ ಒತ್ತುವರಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ 3410 ಪ್ರಕರಣಗಳು ದಾಖಲಾಗಿವೆ. ಆದರೆ ಅವು ತೀರ್ಮಾನವಾಗಿಲ್ಲ.
ಪರಿಸ್ಥಿತಿ ಹೀಗಿರುವಾಗ, ಕೇಂದ್ರ ಅರಣ್ಯ ಹಾಗೂ ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವಾಲಯ (MoEF&CC) ದ ಕರಡಿನಲ್ಲಿ ಸೂಚಿಸಿರುವ ಪರಿಸರ ಸೂಕ್ಷ್ಮ ಪ್ರದೇಶ (Ecologically Sensitive Areas ESA) ಗಳಲ್ಲಿ ಕಡಿತ ಕೇಳುತ್ತಿರುವ ಕರ್ನಾಟಕ ಸರ್ಕಾರ, ಸದಾ ಬಾಯಾರಿರುವ ಬೆಂಗಳೂರಿಗೆ ಶರಾವತಿ ನೀರು ಹರಿಸುವು ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ (Sharavathi Pumped Storage Project ) ಜಾರಿಗೆ ಸಿದ್ಧವಾಗಿದೆ. ಸರ್ಕಾರದ ಈ ನಡೆ ಅನೇಕ ಅನುಮಾನಗಳಿಗೆ ಕಾರಣವಾಗಿದೆ. ಪರಿಸರ ಖಾತೆಯ ಅನುಮತಿ ದೊರೆಯುವ ಮುನ್ನವೇ ಸರ್ಕಾರ ತರಾತುರಿಯಲ್ಲಿ ಟೆಂಡರ್ ಆಹ್ವಾನಿಸಿದೆ. ಈಗಾಗಲೇ ಈ ಯೋಜನೆಯ ವೆಚ್ಚ ಕೂಡ ದುಪ್ಪಟ್ಟಾಗಿದೆ. ಈ ಯೋಜನೆಯನ್ನು ಕುರಿತು ದ-ಫೆಡರಲ್ ಕರ್ನಾಟಕ ಈಗಾಗಲೇ ದೀರ್ಘವಾದ ವರದಿಯನ್ನು ಪ್ರಕಟಿಸಿದೆ.
ಬೆಂಗಳೂರಿನಲ್ಲಿರುವ ಕೆರೆಕಟ್ಟೆಗಳನ್ನೆಲ್ಲ ಆಪೋಷನ ತೆಗೆದುಕೊಂಡು, ಕೆರೆಯಂಗಳಗಳನ್ನೆಲ್ಲ ಬಯಲು ಆಡಿ ಮುಗಿಲೆತ್ತರದ ಕಟ್ಟಡಗಳನ್ನು ಕಟ್ಟಿಕೊಳ್ಳಲು ಕಾರಣವಾಗಿರುವ ಅಭಿವೃದ್ಧಿ ಮಾದರಿಯ ಬಗ್ಗೆಯೇ ಹಲವು ಪ್ರಶ್ನೆಗಳನ್ನು ಎತ್ತುವಂತೆ ಮಾಡಿದೆ. ಈಗಾಗಲೇ ಬೆಂಗಳೂರಿನ ಅಳಿದುಳಿದ ಕೆರೆಗಳಲ್ಲಿ ಹೂಳು ತುಂಬಿಕೊಂಡಿದೆ. ಒಂದು ಬಿರುಸಿನ ಮಳೆಗೆ, ಬೆಂಗಳೂರೇ ಜಲಾವೃತವಾದರೂ, ದೇಶದ ಜನಸಂಖ್ಯೆಯಷ್ಟೇ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ಮಹಾನಗರಿಯ ಗಂಟಲು ಇನ್ನೂ ಒಣಗುತ್ತಿದೆ. ಬತ್ತದ ಬಾಯಾರಿಕೆಯ ಬೆಂಗಳೂರಿನ ದಾಹ ತಣಿಸಲು ಸರ್ಕಾರ, ಪಶ್ಚಿಮ ಘಟ್ಟದ ತಪ್ಪಲಲ್ಲಿ ನಿರಾತಂಕವಾಗಿ ಹರಿಯುತ್ತಾ, ಒಂದಷ್ಟು ಬೆಳಕು ತರಲು ಕಾರಣವಾಗಿರುವ ಶರಾವತಿ ನದಿಯತ್ತ ಕಣ್ಣು ಹಾಯಿಸಿದೆ. ಇಂಥ ಸಂದರ್ಭದಲ್ಲಿಯೇ ಬೆಂಗಳೂರಿಗೆ ಶರಾವತಿ ನೀರು ತರುವ ಈ ಯೋಜನೆ ಕಾರ್ಯ ಸಾಧುವೇ? ಪರ್ಯಾಯ ಮಾರ್ಗಗಳೇನು? ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಈ ʼಪರಿಸರ ವಿರೋಧಿʼ ಯೋಜನೆಯನ್ನು ಸ್ಥಳೀಯರು ಹಾಗೂ ಪರಿಸರವನ್ನು ಪ್ರೀತಿಸುವ ಮಂದಿ ವಿರೋಧಿಸುತ್ತಿದ್ದಾರೆ. ಆದರೆ, ರಾಜಕಾರಣದ ಕಾರಣಕ್ಕಾಗಿ ಸ್ಥಳೀಯ ಜನ ಪ್ರತಿನಿಧಿಗಳು ಈ ಯೋಜನೆಗೆ ʻಅಭಿವೃದ್ಧಿಯʼ ಬಣ್ಣ ತೊಡಿಸಿ ಬಯಲಾಟದಲ್ಲಿ ತೊಡಗಿದ್ದಾರೆ. “ಇದೇ ರಾಜಕಾರಣಿಗಳು ಕೇಂದ್ರ ಅರಣ್ಯ ಹಾಗೂ ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವಾಲಯ (MoEF&CC) ದ ಕರಡಿನಲ್ಲಿ ಸೂಚಿಸಿರುವ ಪರಿಸರ ಸೂಕ್ಷ್ಮ ಪ್ರದೇಶ (Ecologically Sensitive Areas ESA)ಗಳ ಪ್ರಸ್ತಾವನೆಯನ್ನು ʻನಿರ್ವಸಿತ ಕಲ್ಪನೆಯಡಿಯಲ್ಲಿ ತಂದು ಅವರಲ್ಲಿ ಆತಂಕ ಹುಟ್ಟಿಸಿ ಅವರನ್ನು ಎತ್ತಿ ಕಟ್ಟುತ್ತಿದ್ದಾರೆ” ಎಂಬುದು ಪರಿಸರವಾದಿ ಲೇಖಕ ಹಾಗೂ ಪರಿಸರ ಜ್ಞಾನದ ಪತ್ರಕರ್ತ ನಾಗೇಶ ಹೆಗಡೆ ವಿಷಾದ ವ್ಯಕ್ತಪಡಿಸುತ್ತಾರೆ. “ಹಿಂದಿನ ಸರ್ಕಾರಗಳು ಪರಿಸರ ಸೂಕ್ಷ್ಮತೆಯನ್ನು ಉಳಿಸಿಕೊಂಡಿದ್ದ ಕಾರಣ, ಪರಿಸರ ಹೋರಾಟಕ್ಕೆ ಬೆಲೆ ಇತ್ತು. ಹಾಗಾಗಿ ಕಾಳಿ,ಬೇಡ್ತಿ ಯೋಜನೆಗಳನ್ನು ತಡೆಯಲು ಸಾಧ್ಯವಾಗಿತ್ತು. ಈಗ ಪರಿಸ್ಥಿತಿ ಸಾಕಷ್ಟ ಬದಲಾಗಿದೆ. ಇದಕ್ಕೆ ತೊಂಭತ್ತರ ದಶಕದ ಉದಾರೀಕರಣ, ಜಾಗತೀಕರಣ, ಖಾಸಗೀಕರಣ ಎಂಬ ತ್ರಿಕರಣ ಶುದ್ಧಿ ಕಾರಣ ಎಂದು ಅವರು ನೊಂದು ನುಡಿಯುತ್ತಾರೆ.
ಅರಣ್ಯವೇ ಇಲ್ಲದ ಅರಣ್ಯ ಭೂಮಿಯಲ್ಲಿ ರೈತರು ಸಾಗುವಳಿ ಮಾಡಿದರೆ ಒಕ್ಕಲೆಬ್ಬಿಸುವ ಸರ್ಕಾರ, ಪರಿಸರ ಸೂಕ್ಷ್ಮ ಶರಾವತಿ ಕಣಿವೆಯಲ್ಲಿ ಬೃಹತ್ ಯೋಜನೆಯನ್ನು ಜಾರಿಗೆ ತರುವ ಬಗ್ಗೆ ಆತಂಕ ವ್ಯಕ್ತಪಡಿಸುತ್ತಾ..”ಹೆಚ್ಚು ಅರಣ್ಯ ನಾಶವಾಗುವುದಿಲ್ಲ ಎನ್ನುವ ಸರ್ಕಾರ ಬೃಹತ್ ಪೈಪುಗಳ ಮೂಲಕ ನೀರನ್ನು ಬೆಂಗಳೂರಿಗೆ ಆಕಾಶ ಮಾರ್ಗದಲ್ಲಿ ಸಾಗಿಸಲಾಗುತ್ತದೆಯೇ, ವಿದ್ಯುತ್ ಗೋಪುರಗಳನ್ನು ಆಗಸದಲ್ಲಿ ನಿರ್ಮಿಸುತ್ತದೆಯೇ?” ಎಂದು ಪರಿಸರ ಚಿಂತಕ ಅಖಿಲೇಶ್ ಚಿಪ್ಪಳ್ಳಿ ಪ್ರಶ್ನಿಸುತ್ತಾರೆ.
8000 ಕೋಟಿರೂಗಳ ಯೋಜನೆ
ಈ ಯೋಜನೆಗೆ ಅಗತ್ಯವಾದ ಭೂ ಸ್ವಾಧೀನ ಪ್ರಕ್ರಿಯೆ ನಡೆಸದೆ, ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ, ರಾಷ್ಟ್ರೀಯ ವನ್ಯ ಜೀವಿ ಮಂಡಳಿ ಅನುಮತಿ ನೀಡುವ ಮುನ್ನವೇ ಪರಿಸರವಾದಿಗಳ ತೀವ್ರ ವಿರೋಧದ ನಡುವೆಯೂ ರಾಜ್ಯ ಸರ್ಕಾರ ಈ ಯೋಜನೆಗೆ ಟೆಂಡರ್ ಕರೆದಿರುವುದು ಆತಂಕ ಮತ್ತು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಈ ಯೋಜನೆಯ ವೆಚ್ಚ ಸದ್ಯಕ್ಕೆ ರೂ. 8005 ಕೋಡಿ ಎಂದು ಅಂದಾಜಿಸಲಾಗಿದೆ. ಸಿದ್ದರಾಮಯ್ಯ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ (2013-2018) ಸಿದ್ಧವಾದ ಯೋಜನೆಯ ಆಗಿನ ವೆಚ್ಚ 4,862.89 ಕೋಟಿ ಎನ್ನುವುದನ್ನು ಇಲ್ಲಿ ಗಮನಿಸಬೇಕು. ಕೇವಲ ಐದು ವರ್ಷದಲ್ಲಿ ಈ ಯೋಜನೆಯ ವೆಚ್ಚ ದುಪ್ಪಟ್ಟಾಗಿದೆ.
ಜೀವವೈವಿದ್ಯ ನಾಶ
ತಲಕಳಲೆ ಜಲಾಯದಿಂದ ಭೂಗರ್ಭದ ವಿದ್ಯುದಾಗರಕ್ಕೆ ಮತ್ತು ಅಲ್ಲಿಂದ ಗೇರುಸೊಪ್ಪ ಜಲಾಶಯಕ್ಕೆ ನೀರು ಪೂರೈಕೆಗೆ 8 ಬೃಹತ್ ಪೈಪ್‌ಜಾಲ ಅಳವಡಿಕೆಗೆ ಭಾರಿ ಪ್ರಮಾಣದ ಜಾಗ ಬೇಕಾಗುತ್ತದೆ. ಅಲ್ಲದೆ ವಿದ್ಯುತ್ ಕೇಂದ್ರ, ಗೋಪುರಗಳು, ಮಾರ್ಗಗಳು, ವಿದ್ಯುದಾಗಾರಕ್ಕೆ ರಸ್ತೆ, ಕಚೇರಿ ಮತ್ತು ಇತರೆ ಉದ್ದೇಶಗಳಿಗೂ ಭಾರಿ ಭೂಮಿ ಬೇಕಾಗುತ್ತದೆ. ಹೀಗಿದ್ದರೂ ಅರಣ್ಯದೊಳಗೆ ಕೇವಲ 125 ಎಕರೆ ಬಳಕೆ ಮಾಡಲಾಗುತ್ತದೆ ಎಂದು ತೋರಿಸಲಾಗುತ್ತಿದೆ. . ಪರಿಸರವಾದಿಗಳ ಅಂದಾಜು ಪ್ರಕಾರ 400 ಎಕರೆಗೂ ಅಧಿಕ ಅಭಯಾರಣ್ಯ ಭೂಮಿ, ಮೌಲ್ಯ ಕಟ್ಟಲಾಗದ ಜೀವವೈವಿಧ್ಯ ನಾಶವಾಗುತ್ತದೆ.
ಗಾಡ್ಗೀಳ್ ವರದಿ ಜಾರಿಗೆ ಹೆಚ್ಚಿದ ಒತ್ತಾಯ
ಹಾಗಾಗಿ ಶರಾವತಿ ನದಿ ಮತ್ತು ಬೆಲೆಕಟ್ಟಲಾಗದ ಅರಣ್ಯವನ್ನು ಉಳಿಸಲು ಮಲೆನಾಡಿನ ಜನ ಸಂಘಟಿತರಾಗುತ್ತಿದ್ದಾರೆ. ಶರಾವತಿ ಕಣಿವೆಯಲ್ಲಿ ಹೊಸ ಯೋಜನೆಗಳು ಬೇಡ ಎಂದು ಅವರು ಮಲೆತು ನಿಂತಿದ್ದಾರೆ. IIsc ನ ವಿಜ್ಞಾನಿ ಟಿ.ವಿ. ರಾಮಚಂದ್ರ ಈ Sharavathi Pumped Storage Project ನ್ನು ತೀವ್ರವಾಗಿ ವಿರೋಧಿಸುತ್ತಿದ್ದಾರೆ. “ಪರಿಸರದ ಚಿಂತನೆ ಮಾಡುವ ಎಲ್ಲ ಮನಸ್ಸುಗಳೂ ಈ ಯೋಜನೆಯನ್ನು ವಿರೋಧಿಸಬೇಕು. ಪಶ್ಚಿಮ ಘಟ್ಟದ ಹಿತದೃಷ್ಟಿಯಿಂದ ಗಮನಿಸಿದರೆ ಇನ್ನು ಮಂದೆ ನಾವು ಯಾವುದೇ ರೀತಿಯಲ್ಲಿ ರಿಸ್ಕ್ ತೆಗೆದುಕೊಳ್ಳಲು ಸಾಧ್ಯವಿಲ್ಲ. ಕೇರಳದ ವಯನಾಡು, ಕರ್ನಾಟಕದ ಅಂಕೋಲಾ, ಕೊಡಗು, ಚಿಕ್ಕಮಗಳೂರಿನಲ್ಲಿ ಕುಸಿದ ಧರೆಯನ್ನು ಗಮನಿಸಿದರೆ ನಾವೀಗಾಗಲೇ ಕೈ ಸುಟ್ಟುಕೊಂಡಿರುವುದರ ಅರಿವಾಗುತ್ತದೆ. ಮಾಡಿದ ತಪ್ಪನ್ನೇ ಮತ್ತೆ ಮತ್ತೆ ಮಾಡಿದರೆ ಭಾರಿ ಬೆಲೆ ತೆರಬೇಕಾಗುತ್ತದೆ” ಎಂದು ಹೇಳಿದ್ದಾರೆ.
ತ್ರಿಕೂಟ ರಾಜಕಾರಣ
“ಪಶ್ಚಿಮ ಘಟ್ಟಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ಆಕ್ರಮಣ ನಡೆಯುತ್ತಿದೆ. ಜೀವಸಂಕುಲಕ್ಕೆ ಆಪತ್ತು ಎದುರಾಗಿದೆ. ಇದರ ವಿರುದ್ದ ಹೋರಾಟ ನಡೆಸುವುದು ಇಂದಿನ ತುರ್ತು ಅಗತ್ಯ” ಎನ್ನುತ್ತಾರೆ ಪರಿಸರ ಲೇಖಕ ನಾಗೇಶ ಹೆಗಡೆ. “ನಾವು ಬಹಳ ಹಿಂದಿನಿಂದಲೂ ಪಶ್ಚಿಮ ಘಟ್ಟದ ಸಂರಕ್ಷಣೆಯ ಬಗ್ಗೆ ಮಾತನಾಡುತ್ತಿದ್ದೆವು. ಆದರೆ ನಾವು ಆಡುತ್ತಿದ್ದ ಮಾತುಗಳನ್ನು ಈಗ ಪ್ರಕೃತಿಯೇ ಆಡಿ ತನ್ನ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ತನ್ನದೇ ರೀತಿಯಲ್ಲಿ ಪ್ರತಿಭಟಿಸುತ್ತಿದೆ. ತನ್ನ ರುದ್ರ ರೂಪವನ್ನು ಪ್ರಕಟಿಸುತ್ತಿದೆ. ತನ್ನ ಒಡಲ ಆಕ್ರೋಷವನ್ನು ಹೊರಕ್ಕೆ ಹಾಕುತ್ತಿದೆ” ಎಂದಿರುವ ನಾಗೇಶ ಹೆಗಡೆ ಅವರು, “ಅಭಿವೃದ್ಧಿಯ ಹೆಸರಿನಲ್ಲಿ ರಾಜಕಾರಣಿಗಳು, ಅಧಿಕಾರಿಗಳು ಮತ್ತು ಗುತ್ತಿಗೆದಾರರ ʻತ್ರಿಕೂಟʼ ವ್ಯವಸ್ಥೆಯನ್ನು ಎದುರಿಸಬೇಕಾದರೆ, ಮಾಧವ ಗಾಡ್ಗೀಳ್ ವರದಿ ಜಾರಿಗೆ ಬರಬೇಕು” ಎಂದು ಒತ್ತಾಯಿಸಿದ್ದಾರೆ.
ಆದರೆ ಈ ಪ್ರತಿಭಟನೆಗಳನ್ನು ಸರ್ಕಾರ ತೀವ್ರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. ಬದಲಾಗಿ ಕೇಂದ್ರ ಸರ್ಕಾರದೊಂದಿಗೆ ಸಂಘರ್ಷಕ್ಕಿಳಿದಂತೆ ಕಾಣುತ್ತಿದೆ. “ ಪಶ್ಚಿಮ ಘಟ್ಟದ ಜೀವ ವೈವಿದ್ಯ ಸಂರಕ್ಷಣೆಗೆ ಡಾ. ಕಸ್ತೂರಿರಂಗನ್ ವರದಿ ಕುರಿತಂತೆ ಸಂಬಂಧಪಟ್ಟ ಎಲ್ಲ ಬಾಧ್ಯಸ್ತರೊಂದಿಗೆ ಚರ್ಚಿಸಿ, ಸಾಧಕ-ಬಾಧಕಗಳ ವರದಿ ನೀಡಲು ಕೇಂದ್ರ ಸರ್ಕಾರ ರಚಿಸಿದ್ದ IFS ಅಧಿಕಾರಿ ಸಂಜಯ್ ಕುಮಾರ್ ನೇತೃತ್ವದ ಸಮಿತಿಯು ರಾಜ್ಯದಲ್ಲಿ ಯಾವುದೇ ಗ್ರಾಮಕ್ಕೆ ಭೇಟಿ ನೀಡಿಲ್ಲ. ಸ್ಥಳೀಯರೊಂದಿಗೆ ಮಾತುಕತೆ ನಡೆಸಿಲ್ಲ. ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಆರೋಪಿಸಿ, ಕೈ ತೊಳೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. “ಈಗಾಗಲೇ ರಾಜ್ಯ ಸರ್ಕಾರ ಕಸ್ತೂರಿರಂಗನ್ ವರದಿಯನ್ನು ತಿರಸ್ಕರಿಸಲು ತೀರ್ಮಾನ ತೆಗೆದುಕೊಂಡಿದೆ” ಎಂದು ಸ್ಪಷ್ಟವಾಗಿ ಸರ್ಕಾರದ ನಿಲುವನ್ನು ಬಹಿರಂಗವಾಗಿ ಹೇಳುತ್ತಿದ್ದಾರೆ.
ಹಾಗಾದರೆ, ಈ ಬೆಳವಣಿಗೆಗಳು ಏನನ್ನು ಸೂಚಿಸುತ್ತವೆ: ಜನರ ಹೆಚ್ಚುತ್ತಿರುವ ಬೇಡಿಕೆಗಳು ಪರಿಸರದ ಮೇಲೆ ಮಾಡುತ್ತಿರುವ ದೌರ್ಜನ್ಯಕ್ಕೆ ಕಾರಣ ಎಂದು ಸ್ಪಷ್ಟವಾಗಿ ಹೇಳುತ್ತಿವೆ. “Sacrifice for Greater Common Good” –ಅಂದರೆ ಪ್ರಗತಿಯ ಚಕ್ರಕ್ಕೆ ತಿರುಗಣಿಯಾಗಿರುವ ಜನ ಸಾಮಾನ್ಯರ ಬದುಕು ಎಂದಷ್ಟೇ ಹೇಳಬಹುದು.
ಕೊನೆಯ ಮಾತು
ಪರಿಸ್ಥಿತಿ ಹೀಗಿರುವಾಗ ಒಂದು ವಿಷಯ ನಮ್ಮೆಲ್ಲರ ಗಮನ ಸೆಳೆಯಬೇಕಿತ್ತು. ಗೌರಿ-ಗಣೇಶ ಹಬ್ಬದ ದಿನವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮಹಾತ್ವಾಕಾಂಕ್ಷೆ ಯ ಎತ್ತಿನಹೋಳೆ ಯೋಜನೆಯನ್ನು ಲೋಕಾರ್ಪಣೆ ಮಾಡಿದ್ದಾರೆ. “ಎತ್ತಿನಹೊಳೆ ಎರಡನೇ ಹಂತ 2027ಕ್ಕೆ ಮುಕ್ತಾಯಗೊಂಡು ರಾಜ್ಯದ 7 ಜಿಲ್ಲೆಗಳ ಲಕ್ಷಾಂತರ ಮನೆಗಳಿಗೆ ಕುಡಿಯುವ ನೀರು ಲಭ್ಯವಾಗುತ್ತದೆ. ಅದಕ್ಕೆ ಇನ್ನೂ 1000 ಕೋಟಿ ರೂಪಾಯಿಗಳ ಅಗತ್ಯವಿದೆ. ಅದನ್ನು ಹೊಂದಿಸಲು ಸರ್ಕಾರ ಸಿದ್ಧವಿದೆ. ಈ ಎರಡನೇ ಹಂತದ ಯೋಜನೆಯನ್ನು ಪೂರ್ಣಗೊಳಸಿ ನಾನೇ ಉದ್ಘಾಟಿಸುತ್ತೇನೆ”, ಎಂದು ಹೇಳಿದ್ದಾರೆ.