Ceasefire between India and Pakistan disappointing: Minister Priyank Kharge
x

ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ

ಖರ್ಗೆ ವಿದೇಶ ಪ್ರವಾಸ ನಿರಾಕರಣೆ | ಬಿಜೆಪಿ ವಿರೋಧಿ ನಾಯಕರ ಅಮೆರಿಕ ಭೇಟಿಗೆ ಕೇಂದ್ರದಿಂದ ತಡೆ?

ತಮಿಳುನಾಡು, ತೆಲಂಗಾಣದ ಪ್ರತಿನಿಧಿಗಳಿಗೂ ಅನುಮತಿ ನಿರಾಕರಿಸಿರುವ ಮಾಹಿತಿ ಇದೆ. ಅನುಮತಿ ನಿರಾಕರಿಸಿದ್ದಕ್ಕೆ ಸೂಕ್ತ ವಿವರಣೆ ನೀಡಬೇಕು ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಆಗ್ರಹಿಸಿದ್ದಾರೆ.


ಅಮೆರಿಕ ಪ್ರವಾಸಕ್ಕೆ ಅನುಮತಿ ನಿರಾಕರಿಸಿದ ಕೇಂದ್ರ ಸರ್ಕಾರದ ಧೋರಣೆಗೆ ಐಟಿ-ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ಕಿಡಿಕಾರಿದ್ದಾರೆ. ಫ್ರಾನ್ಸ್‌ ಪ್ರವಾಸ ಮುಗಿಸಿ ಬೆಂಗಳೂರಿಗೆ ವಾಪಸಾಗಿರುವ ಅವರು ಗುರುವಾರ ಬೆಂಗಳೂರಿನಲ್ಲಿ ಮಾಧ್ಯಮಗೋಷ್ಠಿ ನಡೆಸಿ, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಅಮೆರಿಕದ ಸ್ಯಾನ್‌ ಫ್ರಾನ್ಸಿಸ್ಕೋದಲ್ಲಿ ಬಯೋ ಟೆಕ್ನಾಲಜಿ ಕುರಿತ ಸಮಾವೇಶ ನಿಗದಿಯಾಗಿತ್ತು. ಫ್ರಾನ್ಸ್‌ ಪ್ರವಾಸ ಮುಗಿಸಿ ಅಮೆರಿಕಕ್ಕೆ ತೆರಳಲು ಸಿದ್ಧತೆ ಮಾಡಿಕೊಂಡಿದ್ದೆವು. ಆದರೆ, ದಿಢೀರನೇ ಅಮೆರಿಕ ಭೇಟಿಗೆ ಕೇಂದ್ರ ಸರ್ಕಾರ ಅನುಮತಿ ನಿರಾಕರಿಸಿದೆ. ನಾವೇನು ವಿದೇಶಕ್ಕೆ ಮೋಜು-ಮಸ್ತಿ ಮಾಡಲು ಹೋಗಿರಲಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ಪ್ರಧಾನಿ ವಿದೇಶ ಪ್ರವಾಸದ ಲೆಕ್ಕ ಕೊಡಲಿ

ಪ್ರಧಾನಿ ನರೇಂದ್ರ ಮೋದಿ ಅವರು ಸಾಕಷ್ಟು ವಿದೇಶ ಪ್ರವಾಸ ಕೈಗೊಂಡಿದ್ದು, ಅದರಿಂದ ಏನಾದರೂ ಪ್ರಯೋಜನವಾಗಿದ್ದರೆ ಲೆಕ್ಕ‌‌ಕೊಡಲಿ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಈ ಹಿಂದೆ ಬೃಹತ್‌ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌ ಅವರೊಂದಿಗೆ ವಿದೇಶ ಪ್ರವಾಸ ಕೈಗೊಂಡಿದ್ದಾಗ ಹಲವು ಒಪ್ಪಂದ ಮಾಡಿಕೊಂಡಿದ್ದರಿಂದ ರಾಜ್ಯದಲ್ಲಿ 30 ಸಾವಿರ ಕೋಟಿ ರೂ. ಬಂಡವಾಳ ಹೂಡಿಕೆಯಾಯಿತು. 20 ಸಾವಿರ ಉದ್ಯೋಗ ಸೃಷ್ಟಿಯಾಯಿತು ಎಂದು ಹೇಳಿದ್ದಾರೆ.

ಅಮೆರಿಕದ ಸ್ಯಾನ್‌ ಫ್ರಾನ್ಸಿಸ್ಕೋದಲ್ಲಿ ಬಯೋ ಟೆಕ್ನಾಲಜಿ ಕುರಿತ ಸಮಾವೇಶ ಏರ್ಪಡಿಸಲಾಗಿತ್ತು. ಮೇ 15 ರಂದು ಅಧಿಕೃತ ವಿದೇಶ ಪ್ರವಾಸದ ನನ್ನ‌ ಹೆಸರು ಸೇರಿದಂತೆ ನಿಯೋಗದಲ್ಲಿ ಹೋಗುವವರ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಿದ್ದೆವು. ಜೂ. 4ಕ್ಕೆ ಕೇಂದ್ರ ಸರ್ಕಾರ ನನ್ನ ಹೆಸರು ತಿರಸ್ಕಾರ ಮಾಡಿ ವಾಪಸ್‌ ಕಳುಹಿಸಿತ್ತು. ಜೂ.6 ರಂದು ನನ್ನ ಹೆಸರು ತೆಗೆದು ಅಧಿಕಾರಿಗಳು ಮಾತ್ರ ಹೋಗಲಿದ್ದಾರೆ ಎಂದು ಪತ್ರ ಕಳಿಸಲಾಗಿತ್ತು. ಜೂ. 11ಕ್ಕೆ ಅನುಮತಿ ನೀಡಿದ್ದರು. ಜೂ.12ಕ್ಕೆ ಶಾಸಕ ಶರತ್‌ ಬಚ್ಚೇಗೌಡ ಹೆಸರನ್ನೂ ಕಳಿಸಿದಾಗ ಜೂ.14ಕ್ಕೆ ಅನುಮತಿ ನೀಡಿದ್ದಾರೆ. ಇದರ ಹಿಂದಿರುವ ಉದ್ದೇಶ ಏನೆಂಬುದು ಅರ್ಥ ಮಾಡಿಕೊಳ್ಳಬಹುದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅನುಮತಿ ನಿರಾಕರಣೆಗೆ ವಿವರಣೆ ಕೊಡಿ

ಅಮೆರಿಕ ಪ್ರವಾಸದ ನಮ್ಮ ಮನವಿ ತಿರಸ್ಕರಿಸಿದ ಬಗ್ಗೆ ಕೇಂದ್ರ ಸರ್ಕಾರ ವಿವರಣೆ ನೀಡಬೇಕು. ಈ ಸಂಬಂಧ ಸಿಎಂ ಸಿದ್ದರಾಮಯ್ಯ ಅವರು ಕೇಂದ್ರಕ್ಕೆ ಪತ್ರ ಬರೆಯಲಿದ್ದಾರೆ ಎಂದು ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ.

ತಮಿಳುನಾಡು ಹಾಗೂ ತೆಲಂಗಾಣದ ಪ್ರತಿನಿಧಿಗಳಿಗೂ ಅನುಮತಿ ನಿರಾಕರಣೆ ಮಾಡಲಾಗಿದೆ ಎಂಬ ಮಾಹಿತಿ ಇದೆ. ಸಕಾರಣವಿದ್ದರೆ ತಿರಸ್ಕಾರ ಮಾಡಲಿ. ಆದರೆ, ಅನುಮತಿ ನಿರಾಕರಿಸಿದ್ದಕ್ಕೆ ಸೂಕ್ತ ವಿವರಣೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಏನಿದು ವಿವಾದ?

ಪ್ಯಾರಿಸ್‌ನಲ್ಲಿ ನಡೆದ 'ವೈವಾಟೆಕ್-2025', 'ಪ್ಯಾರಿಸ್ ಏರ್ ಶೋ'ನಲ್ಲಿ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ಭಾಗಿಯಾಗಿದ್ದರು. ಅವರು ಅಲ್ಲಿಂದಲೇ ಅಮೆರಿಕದ ಸ್ಯಾನ್‌ಫ್ರಾನ್ಸಿಸ್ಕೊಗೆ ತೆರಳಬೇಕಿತ್ತು. ವಿದೇಶಾಂಗ ಸಚಿವಾಲಯವು ಪ್ರಿಯಾಂಕ್‌ ಖರ್ಗೆ ಅಮೆರಿಕ ಭೇಟಿಗೆ ಅನುಮತಿ ನಿರಾಕರಿಸಿತ್ತು. ಆದರೆ, ಅಧಿಕಾರಿಗಳ ಭೇಟಿಗೆ ಅವಕಾಶ ನೀಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಸೂಕ್ತ ಕಾರಣ ನೀಡಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

Read More
Next Story