Airforce Officer Death | ಪ್ಯಾರಾಚೂಟ್‌ ತೆರೆಯದೆ ಹೊಸನಗರ ಮೂಲದ ವಾಯುಸೇನೆ ಅಧಿಕಾರಿ ಸಾವು
x
ವಾಯುಪಡೆಯ ವಾರೆಂಟ್‌ ಅಧಿಕಾರಿ ಮಂಜುನಾಥ್‌.ಜಿ.ಎಸ್‌

Airforce Officer Death | ಪ್ಯಾರಾಚೂಟ್‌ ತೆರೆಯದೆ ಹೊಸನಗರ ಮೂಲದ ವಾಯುಸೇನೆ ಅಧಿಕಾರಿ ಸಾವು

ಮಂಜುನಾಥ್‌.ಜಿ.ಎಸ್‌ ಅವರು ಮೂಲತಃ ಶಿವಮೊಗ್ಗ ಜಿಲ್ಲೆಯ ಹೊಸನಗರದವರಾಗಿದ್ದು, ಆಗ್ರಾದಲ್ಲಿ ಭಾರತೀಯ ವಾಯು ಸೇನೆಗೆ ಸೇರಿದ ಮಾಲ್ಪುರ ಪ್ಯಾರಾಚೂಟ್‌ ಡ್ರಾಪ್‌ ಜೋನ್‌ನಲ್ಲಿ ತರಬೇತಿಯಲ್ಲಿ ಪಾಲ್ಗೊಂಡಿದ್ದರು


ತರಬೇತಿ ವೇಳೆ ಪ್ಯಾರಾಚೂಟ್‌ ತೆರೆದುಕೊಳ್ಳದೆ ವಾಯುಪಡೆಯ (Air Force) ವಾರೆಂಟ್‌ ಅಧಿಕಾರಿ ಮಂಜುನಾಥ್‌.ಜಿ.ಎಸ್‌ (36) ಸಾವನ್ನಪ್ಪಿರುವ ಘಟನೆ ಉತ್ತರಪ್ರದೇಶದ ಆಗ್ರಾದಲ್ಲಿ ಶುಕ್ರವಾರ ಬೆಳಿಗ್ಗೆ ಸಂಭವಿಸಿದೆ.

ಮಂಜುನಾಥ್‌.ಜಿ.ಎಸ್‌ ಅವರು ಮೂಲತಃ ಶಿವಮೊಗ್ಗ ಜಿಲ್ಲೆಯ ಹೊಸನಗರದವರಾಗಿದ್ದು, ಆಗ್ರಾದಲ್ಲಿ ಭಾರತೀಯ ವಾಯು ಸೇನೆಗೆ ಸೇರಿದ ಮಾಲ್ಪುರ ಪ್ಯಾರಾಚೂಟ್‌ ಡ್ರಾಪ್‌ ಜೋನ್‌ನಲ್ಲಿ ತರಬೇತಿ ನಡೆಯುತ್ತಿತ್ತು. ವಾಯುಸೇನೆಯ 12 ಅಧಿಕಾರಿಗಳು ಪ್ಯಾರಾಚೂಟ್‌ ತರಬೇತಿಗೆ ವಿಮಾನದಿಂದ ಜಿಗಿದಿದ್ದರು. 11 ಮಂದಿ ಮಾತ್ರ ಪ್ಯಾರಾಚೂಟ್‌ ಬಳಸಿ ಸುರಕ್ಷಿತವಾಗಿ ಲ್ಯಾಂಡ್‌ ಆಗಿದ್ದರು. ಆದರೆ ವಾರಂಟ್‌ ಆಫೀಸರ್‌ ಮಂಜುನಾಥ್‌ ಜಿ.ಎಸ್‌ ನಾಪತ್ತೆಯಾಗಿದ್ದರು.

ಮಂಜುನಾಥ್‌ ಅವರಿಗಾಗಿ ಶೋಧ ಕಾರ್ಯ ನಡೆಸಿದಾಗ ಸಮೀಪದ ಜಮೀನಿನಲ್ಲಿ ಪತ್ತೆಯಾಗಿದ್ದರು. ಕೂಡಲೆ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಪರೀಕ್ಷಿಸಿದ ವೈದ್ಯರು ಮಂಜುನಾಥ್‌ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ ಎಂದು ವರದಿಯಾಗಿದೆ. ವಿಮಾನದಿಂದ ಹಾರಿದ ನಂತರ ಪ್ಯಾರಾಚೂಟ್‌ ತೆರೆದುಕೊಳ್ಳದೆ ಮಂಜುನಾಥ್‌ ಅವರು ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ.

ಮಂಜುನಾಥ್‌ ಅವರು ಸಾಗರದಲ್ಲಿ ಪಿಯುಸಿ ಪೂರ್ಣಗೊಳಿಸಿದ್ದರು. ಬಳಿಕ ಭಾರತೀಯ ವಾಯು ಸೇನೆಗೆ ಸೇರಿದ್ದರು. ವೈ ಗ್ರೇಡ್‌ ಅಧಿಕಾರಿಯಾಗಿದ್ದ ವಾರಂಟ್‌ ಅಫೀಸರ್‌ ಮಂಜುನಾಥ್‌, ಅಸ್ಸಾಂನಲ್ಲಿ ತಾಂತ್ರಿಕ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅಸ್ಸಾಂ ಮೂಲದ ಯುವತಿಯನ್ನು ಮದುವೆಯಾಗಿದ್ದು, ಒಂದು ಮಗು ಇದೆ.

ಘಟನೆ ಕುರಿತು ಶುಕ್ರವಾರ ಮಧ್ಯಾಹ್ನ ಮಂಜುನಾಥ ಅವರ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ. ಶನಿವಾರ ರಾತ್ರಿ ಮಂಜುನಾಥ್ ಅವರ ಪಾರ್ಥೀವ ಶರೀರ ಬೆಂಗಳೂರಿಗೆ ಆಗಮಿಸಲಿದೆ. ನಂತರ ಹೊಸನಗರಕ್ಕೆ ಪಾರ್ಥೀವ ಶರೀರ ರವಾನೆಯಾಗಲಿದೆ ಎಂದು ತಿಳಿದು ಬಂದಿದೆ.

Read More
Next Story