Mysore MUDA Scam | ಸಿಎಂ ವಿರುದ್ಧ ತನಿಖೆಗೆ ಅನುಮತಿ ಪ್ರಕರಣ: ಇಂದು ಹೈಕೋರ್ಟ್‌ ತೀರ್ಪು
x

Mysore MUDA Scam | ಸಿಎಂ ವಿರುದ್ಧ ತನಿಖೆಗೆ ಅನುಮತಿ ಪ್ರಕರಣ: ಇಂದು ಹೈಕೋರ್ಟ್‌ ತೀರ್ಪು

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ(ಮೂಡಾ) ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿ ತಮ್ಮ ವಿರುದ್ಧದ ಕ್ರಿಮಿನಲ್ ಪ್ರಕರಣದ ತನಿಖೆಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಅವರು ಸಲ್ಲಿಸಿರುವ ರಿಟ್ ಅರ್ಜಿಯ ತೀರ್ಪು ಇಂದು (ಮಂಗಳವಾರ) ಪ್ರಕಟವಾಗಲಿದೆ.


ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ(ಮೂಡಾ) ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿ ತಮ್ಮ ವಿರುದ್ಧದ ಕ್ರಿಮಿನಲ್ ಪ್ರಕರಣದ ತನಿಖೆಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಅವರು ಸಲ್ಲಿಸಿರುವ ರಿಟ್ ಅರ್ಜಿಯ ತೀರ್ಪು ಮಂಗಳವಾರ(ಸೆ.24) ಪ್ರಕಟವಾಗಲಿದೆ.

ಸಿಎಂ ಸಿದ್ದರಾಮಯ್ಯ ಅವರು ಸಲ್ಲಿಸಿದ್ದ ಅರ್ಜಿ ಮೇಲಿನ ವಿಚಾರಣೆಯನ್ನು ಪೂರ್ಣಗೊಳಿಸಿದ್ದ ನ್ಯಾಯಮೂರ್ತಿ ನಾಗಪ್ರಸನ್ನ ನೇತೃತ್ವದ ಏಕಸದಸ್ಯ ಪೀಠ, ತನ್ನ ತೀರ್ಪು ಕಾಯ್ದಿರಿಸಿತ್ತು.

ಸಿಎಂ ಸಿದ್ಧರಾಮಯ್ಯ ಅವರನ್ನು ಕ್ರಿಮಿನಲ್ ಪ್ರಕರಣ ತನಿಖೆಗೆ ಒಳಪಡಿಸುವ ಕುರಿತ ಹೈಕೋರ್ಟ್ ನೀಡುವ ತೀರ್ಪಿನತ್ತ ಎಲ್ಲರ ಚಿತ್ತ ನೆಟ್ಟಿದೆ.

ಕಳೆದ ಸೆ.12ರಂದು ಎರಡೂ ಕಡೆಯ ವಕೀಲರ ವಾದ-ಪ್ರತಿವಾದ ಆಲಿಸಿದ್ದ ನ್ಯಾಯಪೀಠ ತೀರ್ಪು ಕಾಯ್ದಿರಿಸಿದ್ದರಿಂದ ಸಿಎಂ ಸಿದ್ದರಾಮಯ್ಯ ಅವರಿಗೆ ಕೊಂಚ ರಿಲೀಫ್ ಸಿಕ್ಕಿತ್ತು. ಇದೀಗ ಮಂಗಳವಾರ ಪ್ರಕಟವಾಗುವ ಹೈಕೋರ್ಟ್ ತೀರ್ಪು ಸಿಎಂ ಸಿದ್ದರಾಮಯ್ಯ ಅವರ ರಾಜಕೀಯದ ಮುಂದಿನ ನಡೆಯನ್ನು ನಿರ್ಧರಿಸಲಿದೆ ಎಂಬ ಮಾತುಗಳು ರಾಜಕಾರಣದಲ್ಲಿ ಕೇಳಿ ಬರುತ್ತಿವೆ.

ಸಿದ್ದರಾಮಯ್ಯ ಪರವಾಗಿ ಹಿರಿಯ ಸುಪ್ರೀಂ ಕೋರ್ಟ್ ವಕೀಲ ಅಭಿಷೇಕ್ ಮನು ಸಿಂಘ್ವಿ ಸೇರಿದಂತೆ ಹಲವು ಹಿರಿಯ ವಕೀಲರು ವಾದ ಮಂಡಿಸಿದ್ದರು. ಇನ್ನು ರಾಜ್ಯಪಾಲರ ಪರ ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ವಾದ ಮಂಡಿಸಿದ್ದರು. ಅಲ್ಲದೇ ದೂರುದಾರರಾದ ಟಿಜೆ ಅಬ್ರಾಹಂ ಮತ್ತು ಸ್ನೇಹಮಯಿ ಕೃಷ್ಣ ಪರ ವಕೀಲರು ಸಹ ತಮ್ಮ ವಾದ ಮಂಡಿಸಿದ್ದರು. ಈ ಎಲ್ಲಾ ವಾದ- ಪ್ರತಿವಾದ ಆಲಿಸಿದ್ದ ನ್ಯಾ. ಎಂ.ನಾಗಪ್ರಸನ್ನ ಅವರು ಆದೇಶವನ್ನು ಕಾಯ್ದಿರಿಸಿದ್ದರು.

ಮುಡಾ ಹಗರಣದ ಹಿನ್ನೆಲೆ

ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಸಿದ್ದರಾಮಯ್ಯ ಹೆಸರಿನಲ್ಲಿದ್ದ ಕೆಸರೆ ಗ್ರಾಮದ ಸರ್ವೆ ನಂಬರ್ 464ರ 3.16 ಎಕರೆ ಜಮೀನನ್ನು ದೇವನೂರು ಬಡಾವಣೆ ನಿರ್ಮಾಣಕ್ಕೆ ಮುಡಾ ಭೂಸ್ವಾಧೀನ ಮಾಡಿಕೊಂಡಿತ್ತು. ಈ ಜಾಗವನ್ನು ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಗೆ ದಾನ ಪತ್ರದ ಮೂಲಕ ಅವರ ಸಹೋದರ ಕೊಟ್ಟಿದ್ದರು. ಇದು ಒಟ್ಟು 1,48,104 ಚದರ ಅಡಿ ಜಾಗ ಇತ್ತು. ಅದರ ಬದಲಿಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ 2021ರಲ್ಲಿ ಪಾರ್ವತಿ ಅವರಿಗೆ ಮೈಸೂರಿನ ಪ್ರತಿಷ್ಠಿತ ವಿಜಯನಗರ ಬಡಾವಣೆಯಲ್ಲಿ 38,284 ಚದರ ಅಡಿ ಜಾಗ ನೀಡಿದ್ದು, ಈಗ ವಿವಾದಕ್ಕೀಡಾಗಿದೆ.

Read More
Next Story