BSY POCSO Case | ಯಡಿಯೂರಪ್ಪ ಪೋಕ್ಸೊ ಪ್ರಕರಣ:   ಸಮನ್ಸ್​ಗೆ ತಡೆ ನೀಡಿದ ಹೈಕೋರ್ಟ್
x

ಬಿ.ಎಸ್‌ ಯಡಿಯೂರಪ್ಪ 

BSY POCSO Case | ಯಡಿಯೂರಪ್ಪ ಪೋಕ್ಸೊ ಪ್ರಕರಣ: ಸಮನ್ಸ್​ಗೆ ತಡೆ ನೀಡಿದ ಹೈಕೋರ್ಟ್

ಮುಂದಿನ ವಿಚಾರಣೆವರೆಗೆ ವಿಚಾರಣಾಧೀನ ನ್ಯಾಯಾಲಯದ ಮುಂದೆ ಖುದ್ದು ಹಾಜರಾತಿಯಿಂದ ವಿನಾಯಿತಿ ನೀಡಿದೆ. ಈ ಮೂಲಕ ಬಿಎಸ್‌ ಯಡಿಯೂರಪ್ಪಗೆ ಸದ್ಯಕ್ಕೆ ನಿರಾಳದಂತಾಗಿದೆ.


ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಮತ್ತು ಇತರೆ ಮೂವರ ವಿರುದ್ಧದ ಪೋಕ್ಸೊ ಪ್ರಕರಣಕ್ಕೆ ಕರ್ನಾಟಕ ಹೈಕೋರ್ಟ್‌ ಮಧ್ಯಂತರ ತಡೆಯಾಜ್ಞೆ ನೀಡಿದ್ದು, ಮುಂದಿನ ವಿಚಾರಣೆವರೆಗೆ ವಿಚಾರಣಾಧೀನ ನ್ಯಾಯಾಲಯ ಮುಂದೆ ಖುದ್ದು ಹಾಜರಾತಿಯಿಂದ ವಿನಾಯಿತಿ ನೀಡಿದೆ. ಈ ಮೂಲಕ ಬಿಎಸ್‌ ಯಡಿಯೂರಪ್ಪ ಸದ್ಯಕ್ಕೆ ನಿರಾಳವಾಗಿದ್ದಾರೆ.

ಪೋಕ್ಸೊ ಪ್ರಕರಣ ಮತ್ತು 2025ರ ಮಾರ್ಚ್ 15ರಂದು ಖುದ್ದು ವಿಚಾರಣೆ ಹಾಜರಾಗುವಂತೆ ವಿಶೇಷ ನ್ಯಾಯಾಲಯ ಜಾರಿ ಮಾಡಿರುವ ಸಮನ್ಸ್ ರದ್ದತಿ ಕೋರಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ವೈ ಎಂ ಅರುಣ, ರುದ್ರೇಶ್‌ ಮರಳುಸಿದ್ದಯ್ಯ ಮತ್ತು ಜಿ ಮರಿಸ್ವಾಮಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಪ್ರದೀಪ್‌ ಸಿಂಗ್‌ ಯೆರೂರ್‌ ಅವರ ಏಕಸದಸ್ಯ ಪೀಠ ಶುಕ್ರವಾರ ನಡೆಸಿತು.

ವಾದ ಪ್ರತಿವಾದ ಆಲಿಸಿದ ಪೀಠವು “ಯಡಿಯೂರಪ್ಪ ಮತ್ತು ಇತರರ ವಿರುದ್ದದ ವಿಶೇಷ ನ್ಯಾಯಾಲಯದಲ್ಲಿ ಬಾಕಿ ಇರುವ ಪೋಕ್ಸೊ ಕಾಯ್ದೆ ಮತ್ತು ಐಪಿಸಿ ಸೆಕ್ಷನ್‌ಗಳಾದ 354A, 204, 214 ಜೊತೆಗೆ 37ರ ಅಡಿ ದಾಖಲಾಗಿರುವ ಪ್ರಕರಣಕ್ಕೆ ತಡೆ ವಿಧಿಸಲಾಗಿದೆ. ಎಲ್ಲಾ ಅರ್ಜಿದಾರರಿಗೂ ವಿಚಾರಣಾಧೀನ ನ್ಯಾಯಾಲಯದಲ್ಲಿ ಖುದ್ದು ಹಾಜರಾತಿಯಿಂದ ಮುಂದಿನ ವಿಚಾರಣೆವರೆಗೆ ವಿನಾಯಿತಿ ಕಲ್ಪಿಸಲಾಗಿದೆ” ಎಂದು ಆದೇಶಿಸಿ, ವಿಚಾರಣೆ ಮುಂದೂಡಿತು.

ಬಿಎಸ್‌ವೈ ಪ್ರತಿನಿಧಿಸಿದ್ದ ಹಿರಿಯ ವಕೀಲ ಸಿ ವಿ ನಾಗೇಶ್‌ ಅವರು “ಘಟನೆ ನಡೆದಿದೆ ಎನ್ನಲಾಗಿರುವ ದಿನಾಂಕದಿಂದ ಒಂದು ತಿಂಗಳ 12 ದಿನದ ನಂತರ ಸಂತ್ರಸ್ತೆ ಮತ್ತು ದೂರುದಾರೆ ಪ್ರಕರಣ ದಾಖಲಿಸಿದ್ದಾರೆ. ಸಂತ್ರಸ್ತೆ ಮತ್ತು ದೂರುದಾರರ ಹೇಳಿಕೆ ಸತ್ಯದಿಂದ ಕೂಡಿಲ್ಲ. ಈ ಸಂಬಂಧ ಹಿಂದಿನ ದಾವೆಯ ಸಂದರ್ಭದಲ್ಲಿ ಸಮನ್ವಯ ಪೀಠವು ವಿಚಾರಣಾಧೀನ ನ್ಯಾಯಾಲಯದ ಪ್ರಕ್ರಿಯೆ ತಡೆ ನೀಡಿತ್ತು. ವಿಶೇಷ ನ್ಯಾಯಾಲಯವು ನಾಳೆ ವಿಚಾರಣೆಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್‌ ಜಾರಿ ಮಾಡಿದೆ. ಹೀಗಾಗಿ, ಈ ಅರ್ಜಿ ಇತ್ಯರ್ಥವಾಗುವವರೆಗೆ ತಡೆ ನೀಡಬೇಕು” ಎಂದು ಕೋರಿದರು.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರು “ಹಿಂದಿನ ದಾವೆಯ ಸುತ್ತಿನಲ್ಲಿ ಯಡಿಯೂರಪ್ಪ ಮತ್ತು ಇತರರ ಪ್ರಕರಣದಲ್ಲಿ ತಡೆಯಾಜ್ಞೆ ನೀಡಿರಲಿಲ್ಲ. ಮಧ್ಯಂತರ ವ್ಯವಸ್ಥೆ ಮಾಡಲಾಗಿತ್ತು ಅಷ್ಟೆ. ಇದು ಮಧ್ಯಂತರ ಪರಿಹಾರ ನೀಡುವ ಪ್ರಕರಣವಲ್ಲ. ಪ್ರಕರಣ ಮುಂದುವರಿಸಲು ಸಾಕಷ್ಟು ದಾಖಲೆಗಳು ನ್ಯಾಯಾಲಯದ ಮುಂದೆ ಇವೆ. ಮಧ್ಯಂತರ ತಡೆ ನೀಡಿದರೆ ಪ್ರಾಸಿಕ್ಯೂಷನ್‌ಗೆ ಸಮಸ್ಯೆ ಉಂಟಾಗಲಿದೆ. ಎಫ್‌ಐಆರ್‌, ಆರೋಪ ಪಟ್ಟಿ ಸಲ್ಲಿಕೆಯನ್ನು ಹಾಗೆ ಉಳಿಸಿತ್ತು” ಎಂದು ಆಕ್ಷೇಪಿಸಿದರು.

ವಾದ-ಪ್ರತಿವಾದ ಆಲಿಸಿದ ನ್ಯಾ. ಪ್ರದೀಪ್ ಸಿಂಗ್ ಯೆರೂರ್ ಅವರ ಪೀಠ, ಬಿಎಸ್ ಯಡಿಯೂರಪ್ಪ ಅರ್ಜಿಯ ವಿಚಾರಣೆ ಅಗತ್ಯವಿದೆ ಎಂದು ಹೇಳಿ ನ್ಯಾ. ಪ್ರದೀಪ್ ಸಿಂಗ್ ಯೆರೂರ್ ಅವರ ಪೀಠ ಕಾಗ್ನಿಜೆನ್ಸ್, ಸಮನ್ಸ್ ಆದೇಶಕ್ಕೆ ತಡೆ ನೀಡಿದೆ. ಹಾಗೇ, ಖುದ್ದು ಹಾಜರಾತಿಯಿಂದಲೂ ಬಿಎಸ್ ಯಡಿಯೂರಪ್ಪ ಅವರಿಗೆ ವಿನಾಯಿತಿ ನೀಡಿದೆ.

ಏನಿದು ಪ್ರಕರಣ?

ಬಿ.ಎಸ್‌ ಯಡಿಯೂರಪ್ಪ ತಮ್ಮ 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು 2024 ರ ಮಾರ್ಚ್​ನಲ್ಲಿ ಸಂತ್ರಸ್ತೆಯ ತಾಯಿ ಈ ಆರೋಪ ಮಾಡಿದ್ದರು. ಬಳಿಕ ಯಡಿಯೂರಪ್ಪ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

Read More
Next Story