ಪ್ರಜ್ವಲ್ ಲೈಂಗಿಕ ಹಗರಣ: ಎಚ್.ಡಿ. ರೇವಣ್ಣಗೆ ಜಾಮೀನು
ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣಕ್ಕೆ ಸಂಬಂಧಿಸಿ ಸಂತ್ರಸ್ತೆಯನ್ನು ಅಪಹರಿಸಿದ ಪ್ರಕರಣದಲ್ಲಿ ಬಂಧಿತರಾಗಿರುವ ಮಾಜಿ ಸಚಿವ ಎಚ್.ಡಿ. ರೇವಣ್ಣಅವರಿಗೆ ಬೆಂಗಳೂರು ನ್ಯಾಯಾಲಯ ಸೋಮವಾರ ಜಾಮೀನು ನೀಡಿದೆ. ಇದರಿಂದಾಗಿ ರೇವಣ್ಣ ಅವರ ಜೈಲು ವಾಸ ಸದ್ಯಕ್ಕೆ ಕೊನೆಯಾಗಿದೆ.
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಹಾಗೂ ಪೆನ್‌ಡ್ರೈವ್ ಪ್ರಕರಣದಲ್ಲಿ ಸಂತ್ರಸ್ತ ಮಹಿಳೆಗೆ ಬೆದರಿಕೆ ಹಾಕಿ ಅಪಹರಣ ಮಾಡಲು ಪ್ರಚೋದಿಸಿದ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ಜಾಮೀನು ಅರ್ಜಿ ವಿಚಾರಣೆ ಬೆಂಗಳೂರಿನಲ್ಲಿ ಸೋಮವಾರ ನಡೆದಿದೆ. ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಲ್ಲಿ ಪ್ರಕರಣದ ಕುರಿತು ವಾದ ವಿವಾದವನ್ನು ನ್ಯಾಯಾಧೀಶರು ಆಲಿಸಿ ಜಾಮೀನು ನೀಡುವ ಕುರಿತು ತೀರ್ಪನ್ನು ಕಾಯ್ದಿರಿಸಿದ್ದರು.
ಬಳಿಕ ಸಂಜೆ ತೀರ್ಪು ಹೊರಡಿಸಿದ ನ್ಯಾಯಾಲಯ ಅವರಿಗೆ ಶರತ್ತು ಬದ್ಧ ಜಾಮೀನು ನೀಡಿದ್ದು, ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿಗೆ ಸಹಕರಿಸುವಂತೆ ಸೂಚಿಸಲಾಗಿದೆ. ರೇವಣ್ಣ ಪರ ವಕೀಲರು ದೂರುದಾರೆ ಸಂತ್ರಸ್ತೆ ಸಮಾಜಿಕ ಜಾಲತಾಣದಲ್ಲಿ ತನ್ನ ಅಪಹರಣವಾಗಿಲ್ಲ ಹಾಗೂ ರೇವಣ್ಣ ಹಾಗೂ ಅವರ ಪುತ್ರ ಪ್ರಜ್ವಲ್ ರೇವಣ್ಣ ಅವರು ಈ ಇಂತಹ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ ಎಂದು ಹೇಳಿಕೆ ನೀಡಿದ್ದನ್ನು ನ್ಯಾಯಾಲಯದ ಗಮನಕ್ಕೆ ತಂದಿದ್ದರು. ಆ ವೇಳೆ ಸಾರ್ವಜನಿಕ ಅಭಿಯೋಜಕರು ಆರೋಪಿ ರೇವಣ್ಣ ಅವರು ಸಾಕಷ್ಟು ಪ್ರಭಾವಿಯಾಗಿದ್ದು, ತನಿಖೆಯ ದಿಕ್ಕನ್ನು ಪ್ಪಿಸುವ ಸಾಧ್ಯತೆಯಿದ್ದು ಜಾಮೀನು ಮಂಜೂರು ಮಾಡದಂತೆ ಕೋರಿದ್ದರು.
ಜಾಮೀನು ದೊರೆತಿರುವ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿ ಅಥವಾ ಮಂಗಳವಾರ ಬೆಳಿಗ್ಗೆ ಅವರು ಕಾನೂನು ಪ್ರಕ್ರಿಯೆಗಳನ್ನು ಮುಗಿಸಿ ಜೈಲಿನಿಂದ ಹೊರಬರಲಿದ್ದಾರೆ ಎಂದು ಹೇಳಲಾಗಿದೆ. ಒಂದು ವಾರದ ಪೊಲೀಸ್ ಕಸ್ಟಡಿ ಬಳಿಕ ಅವರನ್ನು ಏಳು ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿ ಮೇ ೮ರಂದು ನ್ಯಾಯಾಲಯ ಆದೇಶ ನೀಡಿತ್ತು.
ಈ ನಡುವೆ ರೇವಣ್ಣ ಅವರಿರುವ ಪರಪ್ಪನ ಅಗ್ರಹಾರದ ಕಂದ್ರ ಕಾರಾಗೃಹದ ಸುತ್ತಲೂ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ರಕ್ಷಣೆ ನೀಡಲಾಗಿದ್ದು ರೇವಣ್ಣ ಬೆಂಬಲಿಗರು ಸಾವಿರಾರು ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.