
Guarantee Scheme | ಬಡವರಿಗೆ ಮಾತ್ರ ಗ್ಯಾರಂಟಿ: ಯೋಜನೆಗಳ ಪುನರ್ ಪರಿಶೀಲನೆ ಸುಳಿವು ನೀಡಿದ ಗೃಹಸಚಿವ
ʼಗೃಹಲಕ್ಷ್ಮಿ ಯೋಜನೆಯಲ್ಲಿ ಶ್ರೀಮಂತರೂ ಸೌಲಭ್ಯ ಪಡೆದುಕೊಳ್ಳುತ್ತಿದ್ದು ಇದನ್ನು ತಪ್ಪಿಸಬೇಕಿದೆ' ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಸಲಹೆ ನೀಡಿದ್ದಾರೆ.
ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ಬಡವರಿಗೆ ಮಾತ್ರ ಸಿಗುವಂತಾಗಬೇಕು. ಆ ನಿಟ್ಟಿನಲ್ಲಿ ಗ್ಯಾರಂಟಿ ಯೋಜನೆಗಳ ಪುನರ್ ಪರಿಶೀಲಿಸಲು ಸರ್ಕಾರದ ಹಂತದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಡಾ ಜಿ. ಪರಮೇಶ್ವರ ಹೇಳಿದ್ದಾರೆ.
ತುಮಕೂರಿನಲ್ಲಿ ಸೋಮವಾರ ನಡೆದ ಕೆಡಿಪಿ ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಪುನರ್ ಪರಿಶೀಲನೆ ಸುಳಿವು ನೀಡಿದ ಗೃಹ ಸಚಿವರು, 'ಬಿಪಿಎಲ್ ಮಾನದಂಡ ಇಟ್ಟುಕೊಂಡು ಬಡವರಿಗೆ ಮಾತ್ರ ಗ್ಯಾರಂಟಿ ಯೋಜನೆಗಳ ಲಾಭ ಸಿಗುವಂತೆ ಮಾಡಬೇಕಿದೆ. ಈ ಬಗ್ಗೆ ಸಭೆಯಲ್ಲಿ ನಿರ್ಧಾರ ತೆಗೆದುಕೊಂಡು ಸರ್ಕಾರಕ್ಕೆ ಏಕೆ ಕಳುಹಿಸಬಾರದುʼ ಎಂದರು.
ವಿಷಯ ಪ್ರಸ್ತಾಪಿಸಿದ ಜೆಡಿಎಸ್ ಶಾಸಕ ಎಂ.ಟಿ.ಕೃಷ್ಣಪ್ಪ, ʼ2 ಲಕ್ಷ ಸಂಬಳ ತೆಗೆದುಕೊಳ್ಳುವ ಮಹಿಳೆಯರು ಸಾರಿಗೆ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ. ನಮ್ಮದು ಅಷ್ಟೊಂದು ಶ್ರೀಮಂತ ರಾಜ್ಯವೇ' ಎಂದು ಪ್ರಶ್ನಿಸಿದರು.
ಇದಕ್ಕೆ ಧ್ವನಿಗೂಡಿಸಿದ ಸಚಿವರು, 'ಇದೊಂದು ಗಂಭೀರ ವಿಚಾರ. ಗೃಹಲಕ್ಷ್ಮಿ ಯೋಜನೆಯಲ್ಲಿ ಶ್ರೀಮಂತರೂ ಸೌಲಭ್ಯ ಪಡೆದುಕೊಳ್ಳುತ್ತಿದ್ದು ಇದನ್ನು ತಪ್ಪಿಸಬೇಕಿದೆ' ಎಂದು ಸಲಹೆ ಮಾಡಿದರು. ಕೃಷ್ಣಪ್ಪ ನೀಡಿದ ಸಲಹೆ ಒಪ್ಪುವುದಾದರೆ ಪರಿಷ್ಕರಿಸುವ ನಿರ್ಧಾರ ಕೈಗೊಳ್ಳೋಣ ಎಂದರು.
ಆಗ ಮಧ್ಯೆ ಪ್ರವೇಶಿಸಿದ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ.ಸುರೇಶ್‌ಬಾಬು, 'ಸರ್ಕಾರದ ಬಳಿ ಹಣ ಇಲ್ಲವಾಗಿದೆ. ಗ್ಯಾರಂಟಿ ಯೋಜನೆಗೆ ಹಣ ಹೊಂದಿಸಲಾಗದೆ ಯೋಜನೆಯ ಸೌಲಭ್ಯ ಕಡಿತ ಮಾಡಲು ಮುಂದಾಗಿದೆ' ಎಂದು ಕಾಲೆಳೆದರು. ಆಗ ತಿಪಟೂರು ಶಾಸಕ ಕೆ.ಷಡಕ್ಷರಿ, 'ಐದು ವರ್ಷ ಐದು ಗ್ಯಾರಂಟಿ ಕೊಡುತ್ತೇವೆ ಎಂದು ಹೇಳಿದ್ದೇವೆ. ಯಾವುದೇ ಕಾರಣಕ್ಕೂ ನಿಲ್ಲಿಸಬಾರದು' ಎಂದು ಆಗ್ರಹಿಸಿದರು.
ಸಭೆಯಲ್ಲಿ ಪರ, ವಿರೋಧ ವ್ಯಕ್ತವಾಗಿದ್ದರಿಂದ ಚರ್ಚೆಯನ್ನು ಹೆಚ್ಚು ಸಮಯ ಮುಂದುವರಿಸಲಿಲ್ಲ. 'ಸರ್ಕಾರದ ಹಂತದಲ್ಲಿ ನಿರ್ಧರಿಸಲಾಗುವುದು' ಎಂದು ಹೇಳಿ ವಿಷಯಾಂತರ ಮಾಡಿದರು.