
ವಿಧಾನ ಸಭಾ ಕಲಾಪ
MLA's Salary Hike | ಹಣಕಾಸು ಮುಗ್ಗಟ್ಟಿನ ನಡುವೆ ಶಾಸಕರ ವೇತನ ಭಾರೀ ಹೆಚ್ಚಳ?
ರಾಜ್ಯದ ಆರೋಗ್ಯ, ಶಿಕ್ಷಣ, ಕುಡಿಯುವ ನೀರು, ಗ್ರಾಮೀಣ ರಸ್ತೆಯಂತಹ ಅಗತ್ಯ ಮೂಲ ಸೌಕರ್ಯಗಳಿಗೆ ಅನುದಾನ ನೀಡುವ, ಆ ವಲಯಗಳಲ್ಲಿ ಕೆಲಸ ಮಾಡುವ ತಳಮಟ್ಟದ ಸಿಬ್ಬಂದಿಗೆ ಕನಿಷ್ಟ ವೇತನ ನೀಡುವ ವಿಷಯದಲ್ಲಿ ಹಣಕಾಸಿನ ಮುಗ್ಗಟ್ಟಿನ ನೆಪ ಹೇಳುವ ಸರ್ಕಾರ ಇದೀಗ ಶಾಸಕರು ಮತ್ತು ಸಚಿವರ ವೇತನವನ್ನು ಬರೋಬ್ಬರಿ ಶೇ.50 ರಷ್ಟು ಹೆಚ್ಚಿಸಲು ಮುಂದಾಗಿರುವುದು ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಬಿಸಿಯೂಟ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮತ್ತಿತರ ತಳಮಟ್ಟದ ಸಿಬ್ಬಂದಿ ಕನಿಷ್ಟ ವೇತನ ಖಾತರಿ ಕೇಳಿದರೆ ಖಜಾನೆ ಖಾಲಿಯಾಗಿದೆ ಎನ್ನುವ, ಸರ್ಕಾರಿ ಇಲಾಖೆಗಳಲ್ಲಿ ವೆಚ್ಚ ಕಡಿತದ ಹೆಸರಲ್ಲಿ ಖಾಯಂ ಸಿಬ್ಬಂದಿಯೇ ಇಲ್ಲದೆ ಆಡಳಿತ ನಡೆಸುವ ಸರ್ಕಾರ ಅದರ ಭಾಗವಾಗಿರುವ ಸಚಿವರು, ಶಾಸಕರ ವೇತನದ ವಿಷಯದಲ್ಲಿ ಮಾತ್ರ ಇನ್ನಿಲ್ಲದ ದಾರಾಳತನ ತೋರುವುದು ವಾಡಿಕೆ.
ಇದೀಗ ಕರ್ನಾಟಕ ಸರ್ಕಾರ ಕೂಡ ರಾಜ್ಯದ ಶಾಸಕರು ಮತ್ತು ಸಚಿವರ ವೇತನವನ್ನು ಬರೋಬ್ಬರಿ ಶೇ.50ರಷ್ಟು ಹೆಚ್ಚಿಸಲು ಕಲಾಪ ಸಲಹಾ ಸಮಿತಿ ತೀರ್ಮಾನಿಸಿದೆ.
ಅಂದರೆ, ಸದ್ಯ ತಿಂಗಳಿಗೆ ವೇತನ ಮತ್ತು ಭತ್ಯೆ ಸೇರಿ 2 ಲಕ್ಷ ರೂ. ವೇತನ ಪಡೆಯುತ್ತಿರುವ ಶಾಸಕರು, ಹೊಸ ವೇತನ ವಿಧೇಯಕ ಜಾರಿಯಾದ ಬಳಿಕ ಬರೋಬ್ಬರಿ 3 ಲಕ್ಷ ರೂ. ಪಡೆಯಲಿದ್ದಾರೆ!
ವೇತನ ಹೆಚ್ಚಳಕ್ಕೆ ಸಂಬಂಧಿಸಿದ ವಿಧೇಯಕವನ್ನು ಇದೇ ಅಧಿವೇಶನದಲ್ಲಿ ಸರ್ಕಾರ ಮಂಡಿಸಲಿದೆ. ಇದಕ್ಕೆ ಒಪ್ಪಿಗೆ ಸಿಕ್ಕ ತಕ್ಷಣ ಜನಪ್ರತಿನಿಧಿಗಳ ವೇತನ 50% ಹೆಚ್ಚಾಗಲಿದೆ. ಇದರ ಜೊತೆ ಇತರೆ ಭತ್ಯೆಗಳೂ ಹೆಚ್ಚಾಗಲಿವೆ. ಆ ಹಿನ್ನೆಲೆಯಲ್ಲಿ ಈಗ 40 ಸಾವಿರ ರೂ. ಇರುವ ಶಾಸಕರ ಮಾಸಿಕ ವೇತನ 60 ಸಾವಿರಕ್ಕೆ ಏರಿಕೆಯಾದರೆ, ಉಳಿಕೆ ಭತ್ಯೆಗಳನ್ನು ಸೇರಿ ಸದ್ಯ 2 ಲಕ್ಷ ರೂ. ಇರುವ ಒಟ್ಟು ವೇತನ, 3 ಲಕ್ಷ ರೂ.ಗಳಿಗೆ ಏರಿಕೆಯಾಗಲಿದೆ.
ಕಳೆದ ಅಧಿವೇಶನದಲ್ಲಿ ಶಾಸಕರ ವೇತನ ಹೆಚ್ಚಳ ಮಾಡುವಂತೆ ವಿಪಕ್ಷ ಉಪನಾಯಕ ಅರವಿಂದ್ ಬೆಲ್ಲದ್ ಪ್ರಸ್ತಾಪ ಮಾಡಿದ್ದರು.
ಪ್ರಸ್ತುತ ಶಾಸಕರ ವೇತನ
ವೇತನ – 40,000 ರೂ.
ಕ್ಷೇತ್ರ ಭತ್ಯೆ – 60,000 ರೂ.
ಪ್ರಯಾಣ ಭತ್ಯೆ – 60,000 ರೂ
ಆಪ್ತ ಸಹಾಯಕರ ವೇತನ – 20,000 ರೂ.
ದೂರವಾಣಿ ವೆಚ್ಚ – 20,000 ರೂ.
ಅಂಚೆ ವೆಚ್ಚ – 5000 ರೂ
ಒಟ್ಟು ಮೊತ್ತ – 2,05,000 ರೂ.
ಪ್ರಸ್ತುತ ಸಿಎಂ- ಸಚಿವರ ವೇತನ
ವಿಧಾನಸಭೆ ಸ್ಪೀಕರ್ ಮತ್ತು ವಿಧಾನ ಪರಿಷತ್ ಸಭಾಪತಿ – 75,000 ರೂ.
ಮುಖ್ಯಮಂತ್ರಿ – 75,000 ರೂ.
ಉಪ ಸ್ಪೀಕರ್ ಮತ್ತು ಉಪ ಸಭಾಪತಿ – 60,000 ರೂ.
ಕ್ಯಾಬಿನೆಟ್ ಸಚಿವರು – 60,000 ರೂ.
ವಿಪಕ್ಷ ನಾಯಕರು – 60,000 ರೂ.
ರಾಜ್ಯ ಸಚಿವ ದರ್ಜೆ – 50,000 ರೂ.
ಸರ್ಕಾರ-ವಿಪಕ್ಷ ಮುಖ್ಯ ಸಚೇತಕ -50,000 ರೂ.
ಎಂಎಲ್‌ಸಿ – 40,000 ರೂ ಇದೆ.
ರಾಜ್ಯದ ಆರೋಗ್ಯ, ಶಿಕ್ಷಣ, ಕುಡಿಯುವ ನೀರು, ಗ್ರಾಮೀಣ ರಸ್ತೆಯಂತಹ ಅಗತ್ಯ ಮೂಲ ಸೌಕರ್ಯಗಳಿಗೆ ಅನುದಾನ ನೀಡುವ, ಆ ವಲಯಗಳಲ್ಲಿ ಕೆಲಸ ಮಾಡುವ ತಳಮಟ್ಟದ ಸಿಬ್ಬಂದಿಗೆ ಕನಿಷ್ಟ ವೇತನ ನೀಡುವ ವಿಷಯದಲ್ಲಿ ಹಣಕಾಸಿನ ಮುಗ್ಗಟ್ಟಿನ ನೆಪ ಹೇಳುವ ಸರ್ಕಾರ ಇದೀಗ ಶಾಸಕರು ಮತ್ತು ಸಚಿವರ ವೇತನವನ್ನು ಬರೋಬ್ಬರಿ ಶೇ.50 ರಷ್ಟು ಹೆಚ್ಚಿಸಲು ಮುಂದಾಗಿರುವುದು ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.