Micro Finance Ordinance | ಮೈಕ್ರೋ ಫೈನಾನ್ಸ್‌ ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ
x
ಥಾವರ್‌ ಚಂದ್‌ ಗೆಹ್ಲೋತ್‌

Micro Finance Ordinance | ಮೈಕ್ರೋ ಫೈನಾನ್ಸ್‌ ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ

ಆರು ತಿಂಗಳುಗಳ ಕಾಲ ಈ ಸುಗ್ರೀವಾಜ್ಞೆ ಜಾರಿಯಲ್ಲಿರಲಿದ್ದು, ಮುಂದಿನ ಸದನದಲ್ಲಿ ಈ ಕುರಿತು ಮಸೂದೆಯನ್ನು ಮಂಡಿಸುವಂತೆ ರಾಜ್ಯಪಾಲರು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದ್ದಾರೆ.


ಮೈಕ್ರೋಫೈನಾನ್ಸ್‌ ಕಿರುಕುಳ ಕಡಿವಾಣ ಹಾಕಲು ರಾಜ್ಯ ಸರ್ಕಾರ ರೂಪಿಸಿರುವ ಮೈಕ್ರೋ ಫೈನಾನ್ಸ್​ ಸುಗ್ರೀವಾಜ್ಞೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋತ್​​ ಅಂಕಿತ ಹಾಕಿದ್ದಾರೆ. ಸುಗ್ರೀವಾಜ್ಞೆಗೆ ಅಂತಿಮ ಮುದ್ರೆ ಒತ್ತುವ ಜೊತೆಗೆ ಮುಂದಿನ ವಿಧಾನಮಂಡಲ ಅಧಿವೇಶನದಲ್ಲಿ ಕಾಯ್ದೆಯ ಕುರಿತು ಚರ್ಚಿಸುವಂತೆ ಸೂಚನೆ ನೀಡಿದ್ದಾರೆ.

ಕರ್ನಾಟಕದಲ್ಲಿ ಮೈಕ್ರೋ ಫೈನಾನ್ಸ್​ ಹಾವಳಿಯಿಂದ ಹಲವರು ಆತ್ಮಹತ್ಯೆ ಹಾದಿ ತುಳಿದಿದ್ದರು. ಇದಕ್ಕೆ ಕಡಿವಾಣ ಹಾಕಲು ಸರ್ಕಾರ ಸುಗ್ರೀವಾಜ್ಞೆ ತಂದಿತ್ತು. ಸುಗ್ರೀವಾಜ್ಞೆ ಕಾನೂನು ರೂಪಿಸಿ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಲಾಗಿತ್ತು. ಆದರೆ, ಸುಗ್ರೀವಾಜ್ಞೆಯು ಸಹಜ ಹಾಗೂ ಸಾಲ ನೀಡುವವರ ಮೂಲಭೂತ ಹಕ್ಕುಗಳಿಗೆ ವಿರುದ್ಧವಾಗಿದೆ. ಸಾಲಗಾರರ ಹಿತವನ್ನಷ್ಟೇ ಪರಿಗಣಿಸಲಾಗಿದೆ. ಜೊತೆಗೆ 10 ವರ್ಷ ಜೈಲು ಹಾಗೂ 5ಲಕ್ಷ ರೂ. ದಂಡ ಹಾಕುವ ಪ್ರಸ್ತಾಪಕ್ಕೂ ಆಕ್ಷೇಪ ವ್ಯಕ್ತಪಡಿಸಿ, ಸೂಕ್ತ ವಿವರಣೆಗಳೊಂದಿಗೆ ಸಲ್ಲಿಸುವಂತೆ ರಾಜ್ಯಪಾಲರು ಕಳೆದ ಶುಕ್ರವಾರ ಸುಗ್ರೀವಾಜ್ಞೆಯನ್ನು ವಾಪಸ್‌ ಕಳುಹಿಸಿದ್ದರು.

ಅದರಂತೆ ರಾಜ್ಯ ಸರ್ಕಾರ ಸುಗ್ರೀವಾಜ್ಞೆಗೆ ಹಲವು ತಿದ್ದುಪಡಿಗಳನ್ನು ತಂದು ಸೋಮವಾರ ರಾಜ್ಯಪಾಲರ ಅಂಕಿತಕ್ಕೆ ಮತ್ತೆ ಕಳುಹಿಸಿಕೊಟ್ಟಿತ್ತು. ರಾಜ್ಯ ಸರ್ಕಾರ ಕಳುಹಿಸಿಕೊಟ್ಟಿದ್ದ ಸುಗ್ರೀವಾಜ್ಞೆಗೆ ರಾಜ್ಯಪಾಲರು ಬುಧವಾರ ಅಂತಿಮವಾಗಿ ಅಂಕಿತ ಹಾಕಿದ್ದಾರೆ.

ಸುಗ್ರೀವಾಜ್ಞೆಯ ಮುಂದಿನ ಕ್ರಮ ಏನು?

ರಾಜ್ಯಪಾಲರು ಅಂಕಿತ ಹಾಕಿರುವ ಸುಗ್ರೀವಾಜ್ಞೆಯನ್ನು ಮುಂದಿನ ಆರು ತಿಂಗಳಲ್ಲಿ ಸದನದಲ್ಲಿ ಮಂಡಿಸಬೇಕು. ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ಚರ್ಚಿಸಬೇಕು ಎಂದು ರಾಜ್ಯಪಾಲರು ಸೂಚಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಮುಖ್ಯಮಂತ್ರಿ ಕಚೇರಿಯು, "ಕರ್ನಾಟಕ ಸರ್ಕಾರವು ಸಚಿವ ಸಂಪುಟ ಸಭೆಯ ಮೂಲಕ ನಿರ್ಧರಿಸಿದ ಕಿರು ಬಂಡವಾಳ ನಿಯಮಗಳಿಗೆ ಸಂಬಂಧಿಸಿದ ಸುಗ್ರೀವಾಜ್ಞೆಗೆ ರಾಜ್ಯಪಾಲರು ರಾಜ್ಯಪಾಲರು ಸಹಿ ಹಾಕಿದ್ದಾರೆ" ಎಂದು ದೃಢಪಡಿಸಿದೆ.

"ರಾಜಭವನದಿಂದ ಕೇಳಿದ ಅಗತ್ಯ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಸುಗ್ರೀವಾಜ್ಞೆಯನ್ನು ಮತ್ತೆ ರಾಜ್ಯಪಾಲರ ಅಂಗಳಕ್ಕೆ ಕಳುಹಿಸಿಕೊಡಲಾಗಿತ್ತು. ಅದರಂತೆ ಇಂದು (ಫೆ.12) ರಾಜ್ಯಪಾಲರು ಕರ್ನಾಟಕದಲ್ಲಿ ಮೈಕ್ರೊ ಫೈನಾನ್ಸ್ ಕಿರುಕುಳ ತಡೆಯುವ ಸುಗ್ರೀವಾಜ್ಞೆಗೆ ಸಹಿ ಹಾಕಿದ್ದಾರೆ"‌ ಎಂದು ಹೇಳಿದೆ.

ಸುಗ್ರೀವಾಜ್ಞೆ ಸ್ಪಷ್ಟೀಕರಣದಲ್ಲಿ ಏನಿದೆ?

'ಸಹಜ ನ್ಯಾಯ ಹಾಗೂ ಸಾಲ ನೀಡುವವರ ಮೂಲಭೂತ ಹಕ್ಕುಗಳಿಗೆ ಸುಗ್ರೀವಾಜ್ಞೆ ವಿರುದ್ಧವಾಗಿದೆ ಎಂಬ ರಾಜ್ಯಪಾಲರ ಆಕ್ಷೇಪಣೆಗೆ ಕಾನೂನು ಸಮರ್ಥನೆಯ ಸ್ಪಷ್ಟಿಕರಣವನ್ನು ರಾಜ್ಯಪಾಲರಿಗೆ ಕಳುಹಿಸಿಕೊಡಲಾಗಿತ್ತು.

ಸುಗ್ರೀವಾಜ್ಞೆಯು ಯಾವುದೇ ವ್ಯಕ್ತಿಯ ಮೂಲಭೂತ ಹಕ್ಕನ್ನು ನಿರ್ಬಂಧಿಸುವುದಿಲ್ಲ. ಸಾಲದಾತರ ಹಿತಾಸಕ್ತಿ ನಿರ್ಲಕ್ಷಿಸಿಲ್ಲ. ಸಾಲ ವಸೂಲಾತಿಯನ್ನೂ ನಿರ್ಬಂಧಿಸುವುದಿಲ್ಲ ಎಂದು ವಿವರಣೆ ನೀಡಿತ್ತು.

ಮೈಕ್ರೋಫೈನಾನ್ಸ್ ಕಿರುಕುಳದಿಂದ 12ಕ್ಕೂ ಹೆಚ್ಚು ಜನರು ಆತ್ಮಹತ್ಯೆ ಮಾಡಿಕೊಂಡಿದ್ದರು. ಕೆಲವರು ಗ್ರಾಮಗಳನ್ನು ತೊರೆದಿದ್ದರು. ಸಣ್ಣ ಸಾಲಗಾರರ ಹಿತಾಸಕ್ತಿ ರಕ್ಷಿಸುವ ಸಲುವಾಗಿ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ತರಬೇಕಾಯಿತು ಎಂದು ಸರ್ಕಾರ ಸಮರ್ಥನೆ ನೀಡಿದೆ.

ನೋಂದಾಯಿಸದಿರುವ ಮತ್ತು ಸಾಲ ನೀಡಲು ಪರವಾನಗಿ ಹೊಂದಿರದ ಯಾವ ವ್ಯಕ್ತಿಯೂ ಯಾರಿಗೂ ಸಾಲ ಕೊಡುವ ಹಾಗೂ ಹೆಚ್ಚಿನ ಬಡ್ಡಿ ಮತ್ತು ಚಕ್ರಬಡ್ಡಿ ಅಥವಾ ದಂಡದ ಬಡ್ಡಿ ವಿಧಿಸುವಂತಹ ಅಧಿಕಾರ ಹೊಂದಿರುವುದಿಲ್ಲ. ಸಾಲವನ್ನು ಖಾಸಗಿಯಾಗಿ, ಪರವಾನಗಿ ಪಡೆಯದೆ ನೀಡಿ ಹೆಚ್ಚಿನ ಬಡ್ಡಿ ವಸೂಲಿ ಮಾಡಿದರೆ ಅದು ಅಕ್ರಮ. ಅಂತಹ ಸಾಲವು ವಸೂಲಿಗೆ ಅರ್ಹವೂ ಅಲ್ಲ, ಯೋಗ್ಯವೂ ಅಲ್ಲ ಎಂದೂ ರಾಜ್ಯಪಾಲರಿಗೆ ನೀಡಿರುವ ಸ್ಪಷ್ಟಿಕರಣದಲ್ಲಿ ಸರ್ಕಾರ ವಿವರಿಸಿದೆ.

ಸುಗ್ರೀವಾಜ್ಞೆಯಲ್ಲಿ ನೋಂದಾಯಿತ ಸಂಸ್ಥೆ ಅಥವಾ ವ್ಯಕ್ತಿಗಳು ನಿಯಮಾನುಸಾರ ಸಾಲ ವಸೂಲಿ ಮಾಡಬಾರದು ಅಥವಾ ಅಂತಹ ಸಾಲಗಳು ವಸೂಲಿಗೆ ಅರ್ಹವಲ್ಲ ಎಂದು ಎಲ್ಲೂ ಹೇಳಿಲ್ಲ. ಆದರೆ, ಸಾಲ ವಸೂಲಾತಿಗೆ ಕಾನೂನು ಬಾಹಿರ ಕ್ರಮ ಅನುಸರಿಸುವುದು ಕಿರುಕುಳಕ್ಕೆ ಕಾರಣವಾಗಲಿದೆ. ಇದನ್ನು ತಡೆಯಲು ಸುಗ್ರೀವಾಜ್ಞೆ ಜಾರಿಗೊಳಿಸುತ್ತಿರುವುದಾಗಿ ರಾಜ್ಯಪಾಲರಿಗೆ ರಾಜ್ಯ ಸರ್ಕಾರ ಮನವರಿಕೆ ಮಾಡಿಕೊಟ್ಟಿದೆ.

ಸಾಲಗಾರರಿಗೆ ಸಿಎಂ ಅಭಯ

ಸುಗ್ರೀವಾಜ್ಞೆಗೆ ರಾಜ್ಯಪಾಲರು ಅಂಕಿತ ಹಾಕಿದ ಬೆನ್ನಲ್ಲೇ ಆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಮೈಕ್ರೋ ಫೈನಾನ್ಸ್‌ ಕಂಪೆನಿಗಳು‌ ಸಾಲ ವಸೂಲಿಯ ನೆಪದಲ್ಲಿ ಸಾಲ ಪಡೆದವರಿಗೆ ನೀಡುತ್ತಿರುವ ಕಿರುಕುಳವನ್ನು ತಡೆಯಲು ರೂಪಿಸಲಾದ ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ ದೊರೆತಿದೆ. ಈ ಕಾನೂನು ಶೀಘ್ರದಲ್ಲಿ ಜಾರಿಗೆ ಬಂದು ಮೈಕ್ರೋ ಫೈನಾನ್ಸ್‌ಗಳ ನಿಯಮ ಬಾಹಿರ ಸಾಲ ವಸೂಲಿ, ಕಿರುಕುಳಗಳ ವಿರುದ್ಧ ಜನರಿಗೆ ರಕ್ಷಣೆ ನೀಡಲಿದೆ ಎಂದು ಹೇಲಿದ್ದಾರೆ.

ಅಲ್ಲದೆ, ಮೈಕ್ರೋ ಫೈನಾನ್ಸ್‌ಗಳ ಕಿರುಕುಳಕ್ಕೆ ಹೆದರಿ ಯಾರೊಬ್ಬರೂ ದುಡುಕಿನ ನಿರ್ಧಾರ ಕೈಗೊಳ್ಳದಿರಿ. ನಿಮ್ಮ ಜೊತೆ ನಮ್ಮ ಸರ್ಕಾರ ಇದೆ ಎಂದು ಕಿರುಕುಳಕ್ಕೆ ಒಳಗಾಗಿ ಆತ್ಮಹತ್ಯೆಯ ಹಾದಿ ಹಿಡಿದಿರುವ ಸಾಲಗಾರರಿಗೆ ಅಭಯ ನೀಡಿದ್ದಾರೆ.

Read More
Next Story