
ನಟಿ ರನ್ಯಾ ರಾವ್
Gold Smuggling | ವಿದೇಶಿ ಕರೆ, ಅಪರಿಚಿತ ವ್ಯಕ್ತಿ, ಕಳ್ಳಸಾಗಣೆ – ನಟಿ ರನ್ಯಾ ರಾವ್ ಬಾಯ್ಟಿಟ್ಟ ಸತ್ಯಗಳು?
ನಾನು ದುಬೈನಿಂದ ಬೆಂಗಳೂರಿಗೆ ಚಿನ್ನವನ್ನು ಕಳ್ಳಸಾಗಣೆ ಮಾಡಿದ್ದು ಇದೇ ಮೊದಲು. ನಾನು ಇದುವರೆಗೆ ದುಬೈನಿಂದ ಚಿನ್ನವನ್ನು ತಂದಿಲ್ಲ ಅಥವಾ ಖರೀದಿಸಿಲ್ಲ. ಅಲ್ಲದೇ, ವಿಮಾನ ನಿಲ್ದಾಣದಲ್ಲಿ ಕ್ರೇಪ್ ಬ್ಯಾಂಡೇಜ್ ಮತ್ತು ಕತ್ತರಿಗಳನ್ನು ಖರೀದಿಸಿದೆ ಎಂದವಳು ತನಿಖಾಧಿಕಾರಿಗಳಿಗೆ ಹೇಳಿದ್ದಾಳೆ ಎನ್ನಲಾಗಿದೆ.
ನಟಿ ರನ್ಯಾ ರಾವ್ ಯೂಟ್ಯೂಬ್ ವೀಡಿಯೊಗಳಿಂದ ಚಿನ್ನವನ್ನು ಮರೆಮಾಡಲು ಕಲಿತಿರುವುದಾಗಿ ಕಂದಾಯ ಗುಪ್ತಚರ ನಿರ್ದೇಶನಾಲಯದ (DRI) ಅಧಿಕಾರಿಗಳ ಮುಂದೆ ತಿಳಿಸಿದ್ದಾರೆ ಎಂಬ ಮಾಹಿತಿ ಲಭ್ಯವಿದೆ.
ಈ ಬಗ್ಗೆ ಅಧಿಕಾರಿಗಳ ಜೊತೆ ಮಾಹಿತಿ ಬಾಯ್ಬಿಟ್ಟಿರುವ ರನ್ಯಾ ರಾವ್, ‘ಮಾರ್ಚ್ 1 ರಂದು ನನಗೆ ವಿದೇಶಿ ಫೋನ್ ಸಂಖ್ಯೆಯಿಂದ ಕರೆ ಬಂದಿತು. ಕಳೆದ ಎರಡು ವಾರಗಳಿಂದ ನನಗೆ ಅಪರಿಚಿತ ವಿದೇಶಿ ಸಂಖ್ಯೆಗಳಿಂದ ಕರೆಗಳು ಬರುತ್ತಿದ್ದವು. ದುಬೈ ವಿಮಾನ ನಿಲ್ದಾಣದ ಟರ್ಮಿನಲ್ 3 ರ ಗೇಟ್ ಎ ಗೆ ಹೋಗಲು ನನಗೆ ಸೂಚಿಸಲಾಯಿತು. ದುಬೈ ವಿಮಾನ ನಿಲ್ದಾಣದಲ್ಲಿ ಚಿನ್ನವನ್ನು ಸಂಗ್ರಹಿಸಿ ಬೆಂಗಳೂರಿನಲ್ಲಿ ತಲುಪಿಸಲು ನನಗೆ ತಿಳಿಸಲಾಯಿತು’ ಎಂದು ಆರೋಪಿ ರನ್ಯಾ ಹೇಳಿದ್ದಾಳೆ ಎನ್ನಲಾಗಿದೆ.
‘ನಾನು ದುಬೈನಿಂದ ಬೆಂಗಳೂರಿಗೆ ಚಿನ್ನವನ್ನು ಕಳ್ಳಸಾಗಣೆ ಮಾಡಿದ್ದು ಇದೇ ಮೊದಲು. ನಾನು ಇದುವರೆಗೆ ದುಬೈನಿಂದ ಚಿನ್ನವನ್ನು ತಂದಿಲ್ಲ ಅಥವಾ ಖರೀದಿಸಿಲ್ಲ. ಅಲ್ಲದೇ, ವಿಮಾನ ನಿಲ್ದಾಣದಲ್ಲಿ ಕ್ರೇಪ್ ಬ್ಯಾಂಡೇಜ್ ಮತ್ತು ಕತ್ತರಿಗಳನ್ನು ಖರೀದಿಸಿದೆ. ಚಿನ್ನವು ಎರಡು ಪ್ಲಾಸ್ಟಿಕ್ ಹೊದಿಕೆಯ ಪ್ಯಾಕೆಟ್‌ಗಳಲ್ಲಿತ್ತು. ನಾನು ವಿಮಾನ ನಿಲ್ದಾಣದ ಶೌಚಾಲಯದಲ್ಲಿ ನನ್ನ ದೇಹಕ್ಕೆ ಚಿನ್ನದ ಬಾರ್‌ಗಳನ್ನು ಜೋಡಿಸಿದೆ. ನಂತರ ಚಿನ್ನವನ್ನು ನನ್ನ ಜೀನ್ಸ್ ಮತ್ತು ಶೂಗಳಲ್ಲಿ ಮರೆಮಾಡಿದೆ. ಚಿನ್ನವನ್ನು ದೇಹಕ್ಕೆ ಅಂಟಿಸುವುದು ಹೇಗೆ ಎಂಬುದನ್ನು ನಾನು ಯೂಟ್ಯೂಬ್ ವೀಡಿಯೋ ನೋಡಿ ಕಲಿತಿದ್ದೇನೆ’ ಎಂದು ರನ್ಯಾ ರಾವ್ ಕಂದಾಯ ಗುಪ್ತಚರ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಆಫ್ರಿಕನ್-ಅಮೇರಿಕನ್ ಉಚ್ಚಾರಣೆ
ಆದರೆ ತನಗೆ ಕರೆ ಮಾಡಿದವರು ಅಥವಾ ಇದರ ಹಿಂದೆ ಇರುವವರು ಯಾರೆಂದು ತನಗೆ ತಿಳಿದಿಲ್ಲ ಎಂದು ರನ್ಯಾ ರಾವ್ ಹೇಳಿದ್ದು, ‘ನನಗೆ ಯಾರು ಕರೆ ಮಾಡಿದ್ದಾರೆಂದು ನನಗೆ ಸಂಪೂರ್ಣವಾಗಿ ಖಚಿತವಿಲ್ಲ. ಕರೆ ಮಾಡಿದವರು ಆಫ್ರಿಕನ್-ಅಮೇರಿಕನ್ ಉಚ್ಚಾರಣೆಯನ್ನು ಹೊಂದಿದ್ದರು. ಆರು ಅಡಿ ಎತ್ತರದ ವ್ಯಕ್ತಿಯೊಬ್ಬ ನನಗೆ ದುಬೈನಲ್ಲಿ ಚಿನ್ನ ನೀಡಿದ’ ಎಂದು ರನ್ಯಾ ಹೇಳಿದ್ದಾಳೆ.
ಆಟೋರಿಕ್ಷಾದಲ್ಲಿ ಚಿನ್ನವನ್ನು ಹಾಕಬೇಕಿತ್ತು
ಅಲ್ಲದೇ, ‘ಬೆಂಗಳೂರಿನಲ್ಲಿ ಕಳ್ಳಸಾಗಣೆ ಮಾಡಿದ ಚಿನ್ನವನ್ನು ಯಾರಿಗೆ ನೀಡಬೇಕು ಎಂದು ಕೇಳಿದಾಗ, "ಚಿನ್ನದ ಗಟ್ಟಿಗಳನ್ನು ಅಪರಿಚಿತ ವ್ಯಕ್ತಿಗೆ ತಲುಪಿಸಲು ನನಗೆ ಸೂಚಿಸಲಾಯಿತು" ಎಂದು ರನ್ಯಾ ಹೇಳಿದ್ದು, ವಿಮಾನ ನಿಲ್ದಾಣದ ಟೋಲ್ ಗೇಟ್ ನಂತರ ಸರ್ವಿಸ್ ರಸ್ತೆಗೆ ಹೋಗಲು ಹೇಳಿದರು. ಸಿಗ್ನಲ್ ಬಳಿಯ ಆಟೋರಿಕ್ಷಾದಲ್ಲಿ ಚಿನ್ನವನ್ನು ಹಾಕಬೇಕಿತ್ತು. ಆಟೋರಿಕ್ಷಾದ ಸಂಖ್ಯೆಯನ್ನು ಕೂಡ ನೀಡಿಲ್ಲ ಎಂದು ರನ್ಯಾ ಹೇಳಿದ್ದಾಳೆ.
ರಿಯಲ್ ಎಸ್ಟೇಟ್ ವ್ಯವಹಾರಕ್ಕಾಗಿ ಪ್ರಯಾಣ
ತನ್ನ ಗಂಡನ ಕ್ರೆಡಿಟ್ ಕಾರ್ಡ್ ಬಳಸಿ ಟಿಕೆಟ್ ಬುಕ್ ಮಾಡಿರುವುದಾಗಿ ರನ್ಯಾ ರಾವ್ ಸ್ವಯಂಪ್ರೇರಣೆಯಿಂದ ಹೇಳಿದ್ದು, ತನ್ನ ಹೇಳಿಕೆಯಲ್ಲಿ, ರನ್ಯಾ ತಾನು ಆಗಾಗ್ಗೆ ವಿದೇಶ ಪ್ರವಾಸಗಳನ್ನು ಮಾಡುತ್ತಿರುವ ಬಗ್ಗೆಯೂ ಹೇಳಿದ್ದಾಳೆ. ನಾನು ಸಿನಿಮಾ ಮತ್ತು ರಿಯಲ್ ಎಸ್ಟೇಟ್ ವ್ಯವಹಾರಕ್ಕಾಗಿ ಪ್ರಯಾಣಿಸಿದ್ದೇನೆ. ನಾನು ಯುರೋಪ್, ಅಮೆರಿಕ, ಆಫ್ರಿಕಾ ಮತ್ತು ಮಧ್ಯಪ್ರಾಚ್ಯಕ್ಕೆ ಹಲವು ಬಾರಿ ಭೇಟಿ ನೀಡಿದ್ದೇನೆ ಎಂದು ರನ್ಯಾ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾಳೆ.