
ಬೆಂಗಳೂರು ಹೊರ ವರ್ತುಲ ರೈಲ್ವೆ ಯೋಜನೆಗೆ ಸಿದ್ದಗೊಂಡಿರುವ ನಕ್ಷೆ
Bangalore Circular Railway Project: ಬೆಂಗಳೂರು ಹೊರ ವರ್ತುಲ ರೈಲ್ವೆ; ಭೂಮಿ ಕಳೆದುಕೊಳ್ಳುವ ಆತಂಕದಲ್ಲಿ ರೈತರು
ನಗರ ಹೊರ ವರ್ತುಲ ರೈಲ್ವೆ ಯೋಜನೆ ಮುಂದಿನ ಐವತ್ತು ವರ್ಷಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ರೂಪಿಸಲಾಗಿದೆ. ಎರಡು ಹಂತದ ಸರ್ವೇ ಕಾರ್ಯ ಈಗಾಗಲೇ ಪೂರ್ಣಗೊಂಡಿದೆ.
ಬೆಂಗಳೂರು ಮೇಲಿನ ಸಂಚಾರ ದಟ್ಟಣೆಯ ಒತ್ತಡ ತಗ್ಗಿಸಿ, ಸಬ್ ಅರ್ಬನ್ ರೈಲ್ವೆ ಸೇವೆಗೆ ಸಂಪರ್ಕ ಕಲ್ಪಿಸಲು ಬೆಂಗಳೂರು ಹೊರ ವರ್ತುಲ ರೈಲ್ವೆ ಯೋಜನೆ ಜಾರಿಗೆ ಕೇಂದ್ರ ರೈಲ್ವೆ ಇಲಾಖೆ ಮುಂದಡಿ ಇಟ್ಟಿದೆ.
ಬೆಂಗಳೂರು ಹೊರ ವರ್ತುಲ ರೈಲ್ವೆ ಯೋಜನೆಯು ಬೆಂಗಳೂರು ಹೊರಗಿನ ಎಂಟು ಪ್ರಮುಖ ಪಟ್ಟಣಗಳನ್ನು ಸಂಪರ್ಕಿಸುವ ಉದ್ದೇಶ ಹೊಂದಿದೆ.
ಮುಂದಿನ ಐವತ್ತು ವರ್ಷಗಳ ಅಭಿವೃದ್ಧಿ ಗಮನದಲ್ಲಿ ಇರಿಸಿಕೊಂಡು ಬೆಂಗಳೂರು ನಗರ, ಗ್ರಾಮಾಂತರ, ಕೋಲಾರ ಹಾಗೂ ರಾಮನಗರ ಜಿಲ್ಲೆಯನ್ನು ಸಂಪರ್ಕಿಸುವ ವೃತ್ತಾಕಾರವಾದ ರೈಲು ಯೋಜನೆ ರೂಪಿಸಲಾಗಿದೆ.
ಮೂರು ಹಂತಗಳಲ್ಲಿ ಯೋಜನೆ
ಬೆಂಗಳೂರು ಹೊರ ವರ್ತುಲ ರೈಲು ಯೋಜನೆಯನ್ನು ಮೂರು ಹಂತಗಳಲ್ಲಿ ಜಾರಿಗೆ ತರಲಿದ್ದು, ನೆಲಮಂಗಲ ತಾಲೂಕಿನ ನಿಡವಂದದಿಂದ ಆರಂಭವಾಗಿ, ದೊಡ್ಡಬಳ್ಳಾಪುರ, ದೇವನಹಳ್ಳಿ ಹಾಗೂ ಮಾಲೂರಿನವರೆಗೂ ಮೊದಲ ಹಂತದ ಕಾಮಗಾರಿ ನಡೆಯಲಿದೆ. ಈ ಪ್ರದೇಶದಲ್ಲಿ ಈಗಾಗಲೇ ಕೈಗಾರಿಕಾ ವಲಯವಿದೆ. ಇತ್ತೀಚೆಗೆ ರಾಜ್ಯ ಸರ್ಕಾರ ದಾಬಸ್‌ಪೇಟೆ- ದೊಡ್ಡಬಳ್ಳಾಪುರದ ಮಧ್ಯೆ ಕ್ವಿನ್ ಸಿಟಿ ಘೋಷಣೆ ಮಾಡಿದ್ದು ಮತ್ತಷ್ಟು ಕೈಗಾರಿಕೆಗಳು ಬರಲು ಸಹಕಾರಿಯಾಗಿದೆ.
ದೊಡ್ಡಬಳ್ಳಾಪುರದ ತಾಲೂಕಿನ ವಡ್ಡರಹಳ್ಳಿ ಬಳಿ ಹತ್ತು ಕಿ.ಮೀ ಉದ್ದದ ಇಂಟರ್ ಚೆಂಜ್ ಟ್ರಾಕ್ ಬರಲಿದೆ. ವಡ್ಡರಹಳ್ಳಿಯಿಂದ ಲಕ್ಷ್ಮಿದೇವಿಪುರದವರೆಗೆ ರೈಲ್ವೆ ಡಿಪೋ ಹಾಗೂ ಜಂಕ್ಷನ್‌ಗಳು ನಿರ್ಮಾಣವಾಗಲಿವೆ.
ಇದೇ ಮಾರ್ಗದಲ್ಲಿ ಮುಂದುವರೆದು ಆದಿನಾರಾಯಣ ಹೊಸಹಳ್ಳಿ, ಕುಂದಾಣ ಮೂಲಕ ದೇವನಹಳ್ಳಿಯ ಆವತಿ ಹಾಗೂ ವೆಂಕಟಗಿರಿ ನಿಲ್ದಾಣಗಳ ಬಳಿ ಮತ್ತೊಂದು ಜಂಕ್ಷನ್ ತಲೆ ಎತ್ತಲಿದೆ. ಈ ಪ್ರದೇಶದಲ್ಲೂ ಈಗಾಗಲೇ ಫಾಕ್ಸ್ ಕಾನ್, ಡಿಫೆನ್ಸ್ ಪಾರ್ಕ್ ನಂತರ ಕೈಗಾರಿಕಾ ವಲಯಗಳು ನಿರ್ಮಾಣವಾಗಿವೆ. ಜತೆಗೆ ಕೆಂಪೇಗೌಡ ವಿಮಾನ ನಿಲ್ದಾಣವೂ ಸಮೀಪವಾಗಲಿದೆ.
ಎರಡನೇ ಹಂತದಲ್ಲಿ ಕೋಲಾರದ ಮಾಲೂರಿನಿಂದ, ಆನೇಕಲ್ ಹಾಗೂ ಹೆಜ್ಜಾಲದವರೆಗೂ ಕಾಮಗಾರಿ ನಡೆಯಲಿದೆ. ಮಾಲೂರಿನಲ್ಲಿ ಹತ್ತು ಕಿ.ಮೀ ಟ್ರ್ಯಾಕ್ ಇರಲಿದ್ದು, ಇಂಟರ್ ಚೆಂಜ್ ಇರಲಿದೆ. ಬಾಗಲೂರು, ತಮಿಳುನಾಡು ಗಡಿಯುದ್ದಕ್ಕೂ ಸಂಚಾರ ಇರಲಿದ್ದು ಆನೇಕಲ್‌ನಲ್ಲಿ ಜಂಕ್ಷನ್ ಬರಲಿದೆ. ಇಲ್ಲಿ ಕನಿಷ್ಠ ನಾಲ್ಕು ಟ್ರ್ಯಾಕ್ ಇರಲಿವೆ. ಬನ್ನೇರುಘಟ್ಟ ಜೈವಿಕ ಉದ್ಯಾನವನ, ಹಾರೋಹಳ್ಳಿ, ಕನಕಪುರ, ಮೈಸೂರು ರಸ್ತೆ, ಹೆಜ್ಜಾಲದವರೆಗೂ ಎರಡನೇ ಹಂತದ ಕಾಮಗಾರಿ ಮುಂದುವರಿಯಲಿದೆ.
ಮೂರನೇ ಹಂತದಲ್ಲಿ ಹೆಜ್ಜಾಲದಲ್ಲಿ ಇಂಟರ್ ಚೆಂಜ್ ಇರಲಿದೆ. ಬಿಡದಿ ಬಳಿ ಬೆಂಗಳೂರು -ಮೈಸೂರು ಎಕ್ಸ್ ಪ್ರೆಸ್ ವೇ ಇದ್ದು, ಬಿಡದಿ ಟೌನ್ ಶಿಪ್ ಕೂಡ ತಲೆ ಎತ್ತಲಿದೆ. ತಾವರೆಕೆರೆ, ದೊಡ್ಡಆಲದಮರ, ಸೋಲದೇವನಹಳ್ಳಿ, ಸೋಲೂರು, ದಾಬಸಪೇಟೆ ಮೂಲಕ ಮರಳಿ ನಿಡವಂದಕ್ಕೆ ಸಂಪರ್ಕ ಕಲ್ಪಿಸಲಿದೆ. ರಾಜಧಾನಿಯ ಹೊರಗೆ ವೃತ್ತಾಕಾರವಾಗಿ ಈ ರೈಲು ಯೋಜನೆ ಕಾರ್ಯನಿರ್ವಹಿಸಲಿದೆ.
81,000 ಕೋಟಿ ರೂ. ವೆಚ್ಚ
ನಗರದ ಸುತ್ತಮುತ್ತಲಿನ ಎಂಟು ಪಟ್ಟಣಗಳನ್ನು ಸಂಪರ್ಕಿಸುವ ಈ ಯೋಜನೆಯು ಒಟ್ಟು 287 ಕಿ.ಮೀ ಉದ್ದವಾಗಿದ್ದು, 2,500 ಎಕರೆ ಭೂಸ್ವಾಧೀನ ಅವಶ್ಯಕತೆ ಇದೆ. ಹಳಿ ಜೋಡಣೆ, ಭೂಸ್ವಾಧೀನ, ಕಟ್ಟಡಗಳ ನಿರ್ಮಾಣ ಹಾಗೂ ಮೂಲಭೂತ ಸೌಕರ್ಯಕ್ಕೆ ರೈಲ್ವೆ ಇಲಾಖೆ 81,000 ಕೋಟಿ ರೂ. ವ್ಯಯ ಮಾಡಲಿದೆ.
ಅಧಿಕೃತ ನಕ್ಷೆಯಲ್ಲಿ ಗುರುತು
ನೆಲಮಂಗಲ ಹಾಗೂ ದೊಡ್ಡಬಳ್ಳಾಪುರದಲ್ಲಿ ರಸ್ತೆ ಕಾರಿಡಾರ್‌ಗಳ ನಿರ್ಮಾಣಕ್ಕೆ ಗುರುತಿಸಲಾಗಿರುವ ಪ್ರಸ್ತಾವಿತ ಜಾಗವನ್ನು ಸರ್ಕಾರದ ಅಧಿಕೃತ ನಕ್ಷೆ ದಿಶಾಂಕ್ ನಲ್ಲಿ ನಮೂದಾಗಿದೆ. ಇದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಜನರು ಭೂಸ್ವಾಧೀನದ ಕುರಿತು ಆತಂಕ ವ್ಯಕ್ತಪಡಿಸಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ವಡ್ಡರಹಳ್ಳಿ ಉದ್ದೇಶಿತ ರೈಲ್ವೆ ಜಂಕ್ಷನ್ ಯೋಜನೆ ಹಿನ್ನೆಲೆಯಲ್ಲಿ ಲಕ್ಷ್ಮಿದೇವಿಪುರದ ಸಮೀಪ ರಸ್ತೆ ಅಗಲೀಕರಣಕ್ಕೆ ನಕಾಶೆಯಲ್ಲಿ ಗುರುತುಹಾಕಿರುವುದು.
ಯೋಜನೆಯಿಂದ ಅನುಕೂಲ
ಹೊರ ವರ್ತುಲ ರೈಲ್ವೆ ಯೋಜನೆಯಿಂದಾಗಿ ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗಲಿದೆ. ಈ ಮೊದಲು ಉದ್ಯೋಗ ಅರಸಿ ಯುವಜನತೆ ನಗರ ಪ್ರದೇಶಗಳಿಗೆ ಹೋಗಿ ಕೆಲಸ ಮಾಡಬೇಕಿತ್ತು. ಈ ಯೋಜನೆಯಿಂದ ಮುಂದಿನ ದಿನಗಳಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗಲಿದ್ದು ನಗರದ ಅವಲಂಬನೆ ಕಡಿಮೆ ಆಗಲಿದೆ. ರೈಲ್ವೆ ಡಿಪೋ ನಿರ್ಮಾಣವಾಗುವುದರಿಂದ ಉದ್ಯೋಗ ದೊರೆತು ವ್ಯಾಪಾರ ಅಭಿವೃದ್ಧಿಯಾಗಲಿದೆ. ನಗರ ಪ್ರದೇಶಗಳಲ್ಲಿ ವಾಹನ ದಟ್ಟಣೆ ಕಡಿಮೆಯಾಗುತ್ತದೆ ಎಂದು ತಿರುಮಗೊಂಡನಹಳ್ಳಿ ನಿವಾಸಿ ಮಂಜುನಾಥ್ ʼದ ಫೆಡರಲ್ ಕರ್ನಾಟಕಕ್ಕೆʼ ತಿಳಿಸಿದರು.
ಭೂಮಿ,ಮನೆ ಕಳೆದುಕೊಳ್ಳುವ ಆತಂಕ
ನಗರ ಹೊರ ವರ್ತುಲ ರೈಲ್ವೆ ಯೋಜನೆಗೆ ಭೂಸ್ವಾಧೀನ ಮಾಡಿಕೊಳ್ಳಲು ಸರ್ಕಾರದ ಅಧಿಕೃತ ನಕ್ಷೆಯಲ್ಲಿ ಜಾಗ ಗುರುತಿಸಲಾಗಿದ್ದು ದೊಡ್ಡಬಳ್ಳಾಪುರ ತಾಲೂಕಿನ ವಡ್ಡರಹಳ್ಳಿ, ತಿರುಮಗೊಂಡನಹಳ್ಳಿ, ಮಲ್ಲತ್ತಹಳ್ಳಿ ಹಾಗೂ ಲಕ್ಷ್ಮಿದೇವಿಪುರದ ನಿವಾಸಿಗಳು ಮನೆ, ಜಮೀನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.
ವಡ್ಡರಹಳ್ಳಿಯಲ್ಲಿ ಹತ್ತು ಕಿ.ಮೀ ಉದ್ದದ ಇಂಟರ್ ಚೆಂಜ್ ಟ್ರ್ಯಾಕ್ ಹಾಗೂ ಲಕ್ಷ್ಮಿ ದೇವಿಪುರದಲ್ಲಿ ರೈಲ್ವೆ ಡಿಪೋ ಹಾಗೂ ಜಂಕ್ಷನ್‌ಗಳು ನಿರ್ಮಾಣವಾವುದರಿಂದ ರಸ್ತೆಗಳು ಅಗಲೀಕರಣವಾಗಲಿವೆ. ಇದರಿಂದ ನಮ್ಮ ಪೂರ್ವಜರಿಂದ ಬಂದ ಜಮೀನು ಹಾಗೂ ಮನೆ ಬಿಟ್ಟುಹೋಗುವ ಪರಿಸ್ಥಿತಿ ಎದುರಾಗಿದೆ ಎಂದು ವಡ್ಡರಹಳ್ಳಿ ಗ್ರಾಮದ ಲಂಕೇಶ್ ʼದ ಫೆಡರಲ್ ಕರ್ನಾಟಕಕ್ಕೆʼ ಜತೆ ಮಾತನಾಡುತ್ತಾ ಆತಂಕ ವ್ಯಕ್ತಪಡಿಸಿದ್ದಾರೆ.
ರಿಯಲ್ ಎಸ್ಟೇಟ್ ದಂಧೆ
ಹೊರ ವರ್ತುಲ ರೈಲು ಯೋಜನೆಯು ಬೆಂಗಳೂರು ನಗರದ ಸುತ್ತಲೂ ವೃತ್ತಾಕಾರವಾಗಿ ಬರಲಿದ್ದು ಈ ಪ್ರದೇಶ ಈಗಾಗಲೇ ಕೈಗಾರಿಕಾ ಕಾರಿಡಾರ್ ಹಾಗೂ ಟೌನ್‌ಶಿಪ್ ಯೋಜನೆಗೆ ಒಳಪಟ್ಟಿರುವುದರಿಂದ ಭೂಮಿಯ ಬೆಲೆ ಗಗನಕ್ಕೇರಿದೆ. ಇದೀಗ ರೈಲ್ವೆ ಇಲಾಖೆ ಹೊರ ವರ್ತುಲ ರೈಲು ಯೋಜನೆ ಜಾರಿಗೊಳಿಸಲು ಮುಂದಾಗಿರುವುದರಿಂದ ಈ ಭಾಗದಲ್ಲಿ ರಿಯಲ್ ಎಸ್ಟೇಟ್ ಮಾಫಿಯಾ ತಲೆ ಎತ್ತುತ್ತಿದೆ. ರೈತರಿಗೆ ಭೂಮಿ ಕಳೆದುಕೊಳ್ಳವ ಚಿಂತೆ ಒಂದೆಡೆಯಾದರೆ ರೈಲ್ವೆ ಇಲಾಖೆ ಕಡಿಮೆ ಬೆಲೆಗೆ ಭೂಸ್ವಾಧೀನ ಮಾಡಿಕೊಳ್ಳಲಿದೆ ಎಂಬ ವದಂತಿ ಹರಡಿಸಿ ರಿಯಲ್ ಎಸ್ಟೇಟ್ ಮಾಫಿಯಾದವರು ರೈತರಿಂದ ಕಡಿಮೆ ಬೆಲೆಗೆ ಭೂಮಿ ಖರೀದಿಸುತ್ತಿದ್ದು ರೈತರು ಸಂಕಟ ಪಡುವಂತಾಗಿದೆ.
ಹೆದ್ದಾರಿ ಹಾಗೂ ಸಬ್ ಅರ್ಬನ್ ಸಂಪರ್ಕ
ಈಗಾಗಲೇ ಗುರುತಿಸಲಾಗಿರುವ ಯೋಜನೆಯಲ್ಲಿ ರಾಷ್ಟ್ರೀಯ, ರಾಜ್ಯ ಹೆದ್ದಾರಿ ಹಾಗೂ ಕೆಲವೆಡೆ ಸಬ್ ಅರ್ಬನ್ ರೈಲು ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸುವ ಉದ್ದೇಶ ಹೊಂದಲಾಗಿದೆ. ಇದರಿಂದ ಸಾರ್ವಜನಿಕರು ಪ್ರಯಾಣಿಸಲು ಹೆಚ್ಚಿನ ಅನುಕೂಲವಾಗಲಿದೆ ಎಂದು ಈಚೆಗೆ ನಡೆದ ಸಭೆಯಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ತಿಳಿಸಿದ್ದರು.
ಭೂಸ್ವಾಧೀನಕ್ಕೆ ಸಮಿತಿ ರಚನೆ
ಬೆಂಗಳೂರು ಹೊರ ವರ್ತುಲ ರೈಲ್ವೆ ಯೋಜನೆಗೆ ಒಟ್ಟು 2,500 ಎಕರೆ ಜಾಗವನ್ನು ಭೂಸ್ವಾಧೀನ ಪಡಿಸಿಕೊಳ್ಳಲು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಧಿಕಾರಿಗಳನ್ನು ಒಳಗೊಂಡ ಸಮಿತಿಯನ್ನು ರಚನೆ ಮಾಡಲು ರೈಲ್ವೆ ಇಲಾಖೆ ನಿರ್ಧರಿಸಿದೆ.
ನೈರುತ್ಯ ರೈಲ್ವೆಯ ಬೆಂಗಳೂರು ವಿಭಾಗದ ವ್ಯವಸ್ಥಾಪಕರು, ಭೂಸ್ವಾಧೀನ ಅಧಿಕಾರಿಗಳು, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಹಾಗೂ ಕರ್ನಾಟಕ ರೈಲು ಮೂಲಸೌಕರ್ಯ ಅಭಿವೃದ್ಧಿ ಕಂಪನಿ (ಕೆ-ರೈಡ್) ಬಿಬಿಎಂಪಿ ಸೇರಿದಂತೆ ಯೋಜನೆಯ ವ್ಯಾಪ್ತಿಯ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಸಮಿತಿಯಲ್ಲಿರಲಿದ್ದಾರೆ ಎಂದು ತಿಳಿದುಬಂದಿದೆ.
ಸುಪ್ರೀಂ ಮಾರ್ಗಸೂಚಿಯಂತೆ ಪರಿಹಾರ
ಭೂಮಿ ಕಳೆದುಕೊಳ್ಳುವವರಿಗೆ ಸುಪ್ರೀಂಕೋರ್ಟ್ ಮಾರ್ಗಸೂಚಿಯಂತೆ ರೈಲ್ವೆ ಇಲಾಖೆ ಹಾಗೂ ರಾಜ್ಯ ಸರ್ಕಾರಗಳ ನಿಯಮಗಳ ಅನ್ವಯ ಪರಿಹಾರ ನೀಡಲಾಗುವುದು. ಭೂಮಿ ಹಾಗೂ ಮನೆ ಕಳೆದುಕೊಳ್ಳುವ ಯಾವೊಬ್ಬ ರೈತರಿಗೂ ಅನ್ಯಾಯವಾಗಲು ಬಿಡುವುದಿಲ್ಲ. ಯೋಜನೆಯಡಿ ಭೂಮಿ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ಒದಗಿಸಲಾಗುವುದು ಎಂದು ರೈಲ್ವೆ ರಾಜ್ಯ ಸಚಿವ ಸೋಮಣ್ಣ ತಿಳಿಸಿದ್ದಾರೆ.
ರೈಲ್ವೆ ಇಲಾಖೆಯಿಂದಲೇ ಸಂಪೂರ್ಣ ಹಣ ಬಿಡುಗಡೆ
ರಾಜ್ಯದ ಪಾಲುದಾರಿಕೆಯಲ್ಲಿನ ಬೆಂಗಳೂರು ಉಪನಗರ ರೈಲ್ವೆ ಯೋಜನೆ ಕುಂಠಿತವಾಗಿದೆ. ಆದ್ದರಿಂದ ನಗರ ಹೊರ ವರ್ತುಲ ರೈಲ್ವೆ ಯೋಜನೆಗೆ ಅಗತ್ಯವಿರುವ 81,000 ಕೋಟಿ ರೂ. ಹಣವನ್ನು ಸಂಪೂರ್ಣವಾಗಿ ಕೇಂದ್ರ ಸರ್ಕಾರವೇ ಭರಿಸಲಿದೆ. ಯೋಜನೆಯಡಿ ದೇವನಹಳ್ಳಿ ಹಾಗೂ ಯಲಹಂಕ ನಡುವೆ ಮೆಗಾ ಕೋಚಿಂಗ್ ಟರ್ಮಿನಲ್ ಸ್ಥಾಪಿಸುವ ಗುರಿ ಹೊಂದಲಾಗಿದೆ. ಹೊಸ ಟೌನ್‌ಶಿಪ್‌ಗಳು ನಿರ್ಮಾಣವಾಗಲಿವೆ. ಉಪನಗರ ರೈಲು ಯೋಜನೆ ಜತೆಗೆ ಹೊರ ವರ್ತುಲ ರೈಲು ಯೋಜನೆಯು ಅಗತ್ಯವಿದೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
ಮೊದಲ ಹಂತದ ಸರ್ವೇ ಪೂರ್ಣ
ವರ್ತುಲ ರೈಲ್ವೆ ಯೋಜನೆಯ ವಡ್ಡರಹಳ್ಳಿ - ದೇವನಹಳ್ಳಿ ನಡುವಿನ ಮೊದಲ ಹಂತದ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧವಾಗಿದ್ದು, ಶೀಘ್ರವೇ ರೈಲ್ವೆ ಮಂಡಳಿಗೆ ಸಲ್ಲಿಸಲು ನೈರುತ್ಯ ರೈಲ್ವೆ ಇಲಾಖೆ ನಿರ್ಧರಿಸಿದೆ.
ಯೋಜನೆ ಪೂರ್ಣಗೊಳ್ಳಲು ಕನಿಷ್ಠ 5-8 ವರ್ಷ ಬೇಕು. ಪ್ರಸ್ತುತ ಅಂತಿಮ ಸ್ಥಳ ಸಮೀಕ್ಷೆ, ಡಿಪಿಆರ್ ಕಾರ್ಯಗಳು ನಡೆಯುತ್ತಿದ್ದು, ಎರಡು ವರ್ಷಗಳಲ್ಲಿ ಪ್ರಕ್ರಿಯೆಗಳು ಮುಗಿಯಲಿವೆ.
ಮೊದಲ ಹಂತದ ವಡ್ಡರಹಳ್ಳಿ - ದೇವನಹಳ್ಳಿ ನಡುವಿನ 24 ಕಿ.ಮೀ ಸರ್ವೇಯನ್ನು ಬೆಂಗಳೂರು ಮೂಲದ ಸಿ-ಕಾನ್ ಸಂಸ್ಥೆ ಮುಗಿಸಿದೆ. ಎರಡನೇ ಹಂತದ ಸರ್ವೇಯನ್ನು ಹೈದರಾಬಾದ್ ಮೂಲದ ಆರ್.ಸಿ.ಅಸೋಸಿಯೇಟ್ಸ್ ಕಂಪನಿ ನಡೆಸುತ್ತಿದೆ.