ʼಗುಡ್ಡದಭೂತʼದ ನಿರ್ಮಾಪಕ ಸದಾನಂದ ಸುವರ್ಣ ಇನ್ನಿಲ್ಲ
ಮಂಗಳೂರಿನ ಹವ್ಯಾಸಿ ರಂಗಭೂಮಿಗೆ ಹೊಸ ಸ್ಪರ್ಶ ನೀಡಿದ ಸದಾನಂದ ಸುವರ್ಣರು ಮೂಲ್ಕಿ ಮೂಲದವರಾಗಿದ್ದು, ಬಹಳ ವರ್ಷದಿಂದ ಮುಂಬಯಿಯಲ್ಲಿ ವಾಸವಾಗಿದ್ದರು.
ʼಗುಡ್ಡದಭೂತʼ ಟಿವಿ ಸೀರಿಯಲ್‌ನಿಂದ ಹಿಡಿದು ʼಘಟಶ್ರಾದ್ಧʼದಂತಹ ಅಂತಾರಾಷ್ಟ್ರೀಯ ಖ್ಯಾತಿಯ ಸಾಲು-ಸಾಲು ಸಿನಿಮಾಗಳನ್ನು ನಿರ್ಮಿಸಿದ ಹಿರಿಯ ಚಿತ್ರ ನಿರ್ಮಾಪಕ, ಲೇಖಕ, ರಂಗಕರ್ಮಿ ಸದಾನಂದ ಸುವರ್ಣ (92) ಅವರು ಮಂಗಳವಾರ (ಜು.16) ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಕನ್ನಡ ರಂಗಭೂಮಿಯಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿ ಧರ್ಮಚಕ್ರ, ಸುಳಿ, ಡೊಂಕುಬಾಲದ ನಾಯಕರು, ಕೋರ್ಟ್ ಮಾರ್ಷಲ್, ಉರುಳು ಮೊದಲಾದ ಜನಪ್ರಿಯ ನಾಟಕ ರಚಿಸಿದ್ದಾರೆ. ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಇವರ ನಿರ್ಮಾಣದ ʼಗುಡ್ದದ ಭೂತʼ ಧಾರಾವಾಹಿ ಪ್ರಕಾಶ್ ರೈ ಅವರಂಥ ನಟರಿಗೆ ವೇದಿಕೆ ಒದಗಿಸಿತ್ತು.
ಮಂಗಳೂರಿನ ಹವ್ಯಾಸಿ ರಂಗಭೂಮಿಗೆ ಹೊಸ ಸ್ಪರ್ಶ ನೀಡಿದ ಸದಾನಂದ ಸುವರ್ಣ ಅವರು ಮಂಗಳೂರಿನ ಮೂಲ್ಕಿ ಮೂಲದವರಾಗಿದ್ದು, ಬಹಳ ವರ್ಷದಿಂದ ಮುಂಬಯಿಯಲ್ಲಿ ವಾಸವಾಗಿದ್ದರು.
ಸದಾನಂದ ಸುವರ್ಣರ ನಿಧನಕ್ಕೆ ಸಿ.ಎಂ ಸಂತಾಪ
ಮುಖ್ಯಮಂತ್ರಿ ಸಿದ್ದರಾಮಯ್ಯ ಸದಾನಂದ ಸುವರ್ಣರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಹಿರಿಯ ರಂಗಕರ್ಮಿ, ಚಲನಚಿತ್ರ ನಿರ್ದೇಶಕ- ನಿರ್ಮಾಪಕ ಸದಾನಂದ ಸುವರ್ಣರ ನಿಧನದ ಸುದ್ದಿ ಕೇಳಿ ದುಃಖವಾಯಿತು.
ಸದಾನಂದ ಸುವರ್ಣರು ನಿರ್ಮಿಸಿದ್ದ ʼಘಟಶ್ರಾದ್ಧʼ ಚಿತ್ರ ಮತ್ತು ನಿರ್ದೇಶಿಸಿದ್ದ ಕೆ.ಪಿ ಪೂರ್ಣಚಂದ್ರ ತೇಜಸ್ವಿಯವರ ʼಕುಬಿ ಮತ್ತು ಇಯಾಲʼ ಕತೆಯನ್ನಾಧರಿಸಿದ ಚಿತ್ರಗಳೆರಡೂ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿಗಳಿಗೆ ಭಾಜನವಾಗಿವೆ.
ಹಿರಿಯ ರಂಗಕರ್ಮಿ, ಚಲನಚಿತ್ರ ನಿರ್ದೇಶಕ- ನಿರ್ಮಾಪಕ ಸದಾನಂದ ಸುವರ್ಣರ ನಿಧನದ ಸುದ್ದಿ ಕೇಳಿ ದು:ಖವಾಯಿತು.ಸದಾನಂದ ಸುವರ್ಣರು ನಿರ್ಮಿಸಿದ್ದ ‘‘ಘಟಶ್ರಾದ್ಧ’’ ಚಿತ್ರ ಮತ್ತು ನಿರ್ದೇಶಿಸಿದ್ದ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ‘’ಕುಬಿ ಮತ್ತು ಇಯಾಲ’’ ಕತೆಯನ್ನಾಧರಿಸಿದ ಚಿತ್ರಗಳೆರಡೂ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿಗಳಿಗೆ ಭಾಜನವಾಗಿವೆ.… pic.twitter.com/JiVMZiQK2a
— CM of Karnataka (@CMofKarnataka) July 16, 2024
ನೂರಾರು ಕನ್ನಡ ಮತ್ತು ತುಳು ನಾಟಕಗಳನ್ನು ನಿರ್ದೇಶಿಸಿದ್ದ ಸುವರ್ಣರ ರಂಗ ಗರಡಿಯಿಂದ ಬಂದಿರುವ ಹಲವಾರು ಪ್ರತಿಭಾವಂತ ನಟ-ನಟಿಯರು ಕಲಾಜಗತ್ತಿನಲ್ಲಿ ಬದುಕು ಕಟ್ಟಿಕೊಂಡಿದ್ದಾರೆ.
ಸದಾನಂದ ಸುವರ್ಣರನ್ನು ಕಳೆದುಕೊಂಡಿರುವ ಅವರ ಶಿಷ್ಯವರ್ಗ ಮತ್ತು ಅಭಿಮಾನಿ ಬಳಗದ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.