
Jayalalitha's Seized Assets | ಮಾಜಿ ಸಿಎಂ ಜಯಲಲಿತಾಗೆ ಸೇರಿದ ಆಸ್ತಿ ಪತ್ರ, ಆಭರಣ ತಮಿಳುನಾಡಿಗೆ ಹಸ್ತಾಂತರ; ಹಿಂತಿರುಗಿಸಿದ ಒಡವೆ ಎಷ್ಟು ಗೊತ್ತಾ?
ಜಯಲಲಿತಾ ಅವರಿಗೆ ಸಂಬಂಧಿಸಿದ ಆಸ್ತಿಪತ್ರಗಳು, ರೇಷ್ಮೆ ಸೀರೆಗಳು, ಏಳು ಕೆ.ಜಿ.ಗೂ ಮೇಲ್ಪಟ್ಟ ಚಿನ್ನ ಹಾಗೂ ವಜ್ರ ಖಚಿತ ಆಭರಣಗಳು ಹಾಗೂ ಚಪ್ಪಲಿಗಳು, ವಾಚ್‌ಗಳು ಸೇರಿದಂತೆ ಇನ್ನಿತರ ಬೆಲೆಬಾಳುವ ವಸ್ತುಗಳನ್ನು ತಮಿಳುನಾಡು ಸರ್ಕಾರದ ಅಧಿಕಾರಿಗಳ ಸುಪರ್ದಿಗೆ ನೀಡಲಾಯಿತು.
ತಮಿಳುನಾಡು ಮಾಜಿ ಸಿಎಂ ದಿವಂಗತ ಜಯಲಲಿತಾ ಅವರಿಗೆ ಸಂಬಂಧಿಸಿದ ಆಸ್ತಿಪತ್ರಗಳು, ಅಪಾರ ಒಡವೆ ಮತ್ತು ವಸ್ತುಗಳನ್ನು ಶನಿವಾರ ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರ ಮಾಡಲಾಯಿತು.
ಜಯಲಲಿತಾ ಅವರಿಗೆ ಸಂಬಂಧಿಸಿದ ಆಸ್ತಿಪತ್ರಗಳು, ರೇಷ್ಮೆ ಸೀರೆಗಳು, ಏಳು ಕೆ.ಜಿ.ಗೂ ಮೇಲ್ಪಟ್ಟ ಚಿನ್ನ ಹಾಗೂ ವಜ್ರ ಖಚಿತ ಆಭರಣಗಳು ಹಾಗೂ ಚಪ್ಪಲಿಗಳು, ವಾಚ್‌ಗಳು ಸೇರಿದಂತೆ ಇನ್ನಿತರ ಬೆಲೆಬಾಳುವ ವಸ್ತುಗಳನ್ನು ತಮಿಳುನಾಡು ಸರ್ಕಾರದ ಅಧಿಕಾರಿಗಳ ಸುಪರ್ದಿಗೆ ನೀಡಲಾಯಿತು.
ಭಾರೀ ಗಾತ್ರದ ಟ್ರಂಕ್ ಗಳೊಂದಿಗೆ ಬಿಗಿ ಭದ್ರತೆಯಲ್ಲಿ ಬಂದ ತಮಿಳುನಾಡಿನ ಅಧಿಕಾರಿಗಳು ನ್ಯಾಯಾಧೀಶರ ಸಮ್ಮುಖದಲ್ಲಿ ಜಯಲಲಿತಾ ಅವರಿಗೆ ಸೇರಿದ ಬೆಲೆ ಬಾಳುವ ವಸ್ತುಗಳನ್ನು ವಶಕ್ಕೆ ಪಡೆದರು. ಈ ವೇಳೆ ತಮಿಳುನಾಡು ಅಧಿಕಾರಿಗಳು ನ್ಯಾಯಾಧೀಶರ ಮುಂದೆಯೇ ಮಾಹಿತಿ ನೀಡಿ ಚಿನ್ನದ ಒಡವೆಗಳನ್ನು ತೂಕ ಹಾಕಿದರು ಎಂದು ತಿಳಿದುಬಂದಿದೆ.
ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ದಿವಂಗತ ಜೆ. ಜಯಲಲಿತಾ ಅವರಿಂದ ಮುಟ್ಟುಗೋಲು ಹಾಕಿಕೊಂಡಿದ್ದ ಬೆಲೆ ಬಾಳುವ ವಸ್ತುಗಳು ಮತ್ತು ಆಸ್ತಿಗಳನ್ನು ಹರಾಜು ಹಾಕುವ ಬದಲು ತಮಿಳುನಾಡು ಸರ್ಕಾರದ ಸುಪರ್ದಿಗೆ ನೀಡುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಈ ಹಿಂದೆ ಆದೇಶಿಸಿತ್ತು.
ಒಡವೆಗಳನ್ನು ಹಿಂದಿರುಗಿಸಲು 2024 ರ ಫೆ.19ಕ್ಕೆ ದಿನಾಂಕ ನಿಗದಿಪಡಿಸಿತ್ತು. ಈ ನಡುವೆ ಜಯಲಲಿತಾ ಅವರ ಸಂಬಂಧಿಕರು ಎಂದು ಹೇಳಿಕೊಂಡಿದ್ದ ದೀಪಾ ಮತ್ತು ದೀಪಕ್ ಅವರು ವಿಶೇಷ ನ್ಯಾಯಾಲಯದ ಆದೇಶದ ವಿರುದ್ಧ ಕರ್ನಾಟಕ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರಿಂದ ಆದೇಶವನ್ನು ತಡೆಹಿಡಿಯಲಾಗಿತ್ತು.
ಹೈಕೋರ್ಟ್ ಪೀಠ, ಮೇಲ್ಮನವಿಯನ್ನು ವಜಾಗೊಳಿಸಿದ ಹಿನ್ನೆಲೆಯಲ್ಲಿ ವಿಶೇಷ ನ್ಯಾಯಾಲಯವು ಆಸ್ತಿ ಮತ್ತು ಆಭರಣಗಳನ್ನು ಹಸ್ತಾಂತರಿಸುವ ಪ್ರಕ್ರಿಯೆ ಕೈಗೊಂಡಿತು.
ಯಾವ್ಯಾವ ವಸ್ತುಗಳ ಹಸ್ತಾಂತರ
7,040 ಗ್ರಾಂ ತೂಕದ 468 ಬಗೆಯ ಚಿನ್ನ, ವಜ್ರಖಚಿತ ಆಭರಣಗಳು, 700 ಕೆ.ಜಿ ತೂಕದ ಬೆಳ್ಳಿ ಆಭರಣಗಳು, 740 ದುಬಾರಿ ಚಪ್ಪಲಿಗಳು,11,344 ರೇಷ್ಮೆ ಸೀರೆಗಳು, 250 ಶಾಲು, 12 ರೆಫ್ರಿಜರೇಟರ್, 10 ಟಿವಿ ಸೆಟ್, 8 ವಿಸಿಆರ್, 1 ವಿಡಿಯೋ ಕ್ಯಾಮೆರಾ, 4ಸಿಡಿ ಪ್ಲೇಯರ್, 2 ಆಡಿಯೋ ಡೆಕ್, 24 ಟೂ-ಇನ್ ಒನ್ ಟೇಪ್ ರೆಕಾರ್ಡರ್ ಹಾಗೂ 1040 ವಿಡಿಯೋ ಕ್ಯಾಸೆಟ್, 3 ಐರನ್ ಲಾಕರ್‌ಗಳು ತಮಿಳುನಾಡು ಸರ್ಕಾರದ ಸುಪರ್ದಿಗೆ ಕಳುಹಿಸಿಕೊಡಲಾಗಿದೆ.
2,20,384 ರೂಪಾಯಿಯ ಹಳೆಯ ನೋಟುಗಳು, 10.18 ಕೋಟಿ ಮೊತ್ತದ ಬ್ಯಾಂಕ್ ನ ನಿಶ್ಚಿತ ಠೇವಣಿಗಳು, ತಮಿಳುನಾಡು ಪೊಲೀಸರ ವಶದಲ್ಲಿರುವ ಜಯಲಲಿತಾ ಅವರು ಬಳಸುತ್ತಿದ್ದ ಐಷಾರಾಮಿ ಬಸ್ಸನ್ನು ಹರಾಜು ಹಾಕುವಂತೆ ಸೂಚನೆ ನೀಡಲಾಗಿದೆ. ತಮಿಳುನಾಡಿನ ಚೆನ್ನೈ, ತಂಜಾವೂರು, ಚೆಂಗಲಪಟ್ಟು, ಕಾಂಚಿಪುರಂ, ತಿರುವಳ್ಳೂರ್, ತಿರುವರೂರ್, ತೂತುಕುಡಿಯಲ್ಲಿರುವ 1526 ಎಕರೆ ಜಮೀನನ್ನು ಹರಾಜು ಹಾಕುವ ಬದಲು ಸಾರ್ವಜನಿಕ ಬಳಕೆಗೆ ಮೀಸಲಿಡುವಂತೆ ನ್ಯಾಯಾಲಯ ಸಲಹೆ ನೀಡಿದೆ.
ಸಮಾಜಮುಖಿ ಕೆಲಸಕ್ಕೆ ಬಳಸಲು ಸೂಚನೆ
ಜಯಲಲಿತಾ ಅವರಿಗೆ ಸೇರಿದ ಸಾವಿರಾರು ಕೋಟಿ ಮೌಲ್ಯದ ಸ್ಥಿರಾಸ್ತಿಗಳನ್ನು ಹರಾಜು ಮಾಡಬೇಕು. ಚಿನ್ನಾಭರಣಗಳನ್ನು ಆರ್‌ಬಿಐಗೆ ಮಾರಾಟ ಮಾಡಿ, ಆ ಹಣವನ್ನು ಜನರಿಗಾಗಿ ಬಳಸಬೇಕು. ತಮಿಳುನಾಡಿನಲ್ಲಿ ಗ್ರಾಮೀಣ ಮೂಲಸೌಕರ್ಯ, ಶಿಕ್ಷಣ, ಆರೋಗ್ಯಕ್ಕೆ ಬಳಸಿದರೆ ಸಂವಿಧಾನದ ಆಶಯ ಈಡೇರಲಿದೆ. ಅಧಿಕಾರದಲ್ಲಿರುವವರಿಗೂ ಇಂತಹ ಕೃತ್ಯ ಮಾಡದಂತೆ ಎಚ್ಚರಿಕೆ ಸಂದೇಶ ರವಾನಿಸಿದಂತಾಗುತ್ತದೆ ಎಂದು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಹೆಚ್.ಎ.ಮೋಹನ್ ಅಭಿಪ್ರಾಯಪಟ್ಟಿದ್ದಾರೆ.