Establishment of yoga temples in government hospitals: Minister Dinesh Gundu Rao
x

ವಿಧಾನಸೌಧದ ಮುಂಭಾಗ ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಯಿತು.

ಸರ್ಕಾರಿ ಆಸ್ಪತ್ರೆಗಳಿಗೆ ಹೋಗಿ ಯೋಗ ಮಾಡಿ; ಸರ್ಕಾರದಿಂದಲೇ ಸೌಲಭ್ಯ

ರಾಜ್ಯದ ಎಲ್ಲಾ ಜಿಲ್ಲಾಸ್ಪತ್ರೆಗಳು, ತಾಲೂಕು ಆಸ್ಪತ್ರೆಗಳು ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಯೋಗ ಪರಿಚಯಿಸುವ 'ಯೋಗ ಮಂದಿರ'ಗಳನ್ನ ಪ್ರಾರಂಭಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.


ರಾಜ್ಯದ ಜನರಿಗೆ ಯೋಗವನ್ನು ಇನ್ನಷ್ಟು ಹತ್ತಿರ ಮಾಡುವ ಮಹತ್ವದ ಹೆಜ್ಜೆಯಾಗಿ, ರಾಜ್ಯದಾದ್ಯಂತ ಇರುವ ಸರ್ಕಾರಿ ಆಸ್ಪತ್ರೆಗಳಲ್ಲಿ 'ಯೋಗ ಮಂದಿರ'ಗಳನ್ನು ಸ್ಥಾಪಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಬೆಂಗಳೂರಿನ ವಿಧಾನ ಸೌಧದಲ್ಲಿ ಶನಿವಾರ (ಜೂನ್ 21) ನಡೆದ 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಈ ವಿಷಯವನ್ನು ಪ್ರಕಟಿಸಿದರು.

ವಿಶ್ವಮಟ್ಟದಲ್ಲಿ ಮನ್ನಣೆ ಪಡೆದಿರುವ ಯೋಗವನ್ನು ಹೆಚ್ಚಿನ ಜನರಿಗೆ ಪರಿಚಯಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದು ಸಚಿವ ಗುಂಡೂರಾವ್ ಹೇಳಿದರು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ. "ರಾಜ್ಯದ ಎಲ್ಲಾ ಜಿಲ್ಲಾಸ್ಪತ್ರೆಗಳು, ತಾಲೂಕು ಆಸ್ಪತ್ರೆಗಳು ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಯೋಗವನ್ನು ಪರಿಚಯಿಸುವ 'ಯೋಗ ಮಂದಿರ'ಗಳನ್ನು ಪ್ರಾರಂಭಿಸಲಾಗುವುದು" ಎಂದು ಅವರು ಘೋಷಿಸಿದರು.

ಮೈಸೂರನ್ನು 'ಯೋಗ ಜಿಲ್ಲೆ'ಯನ್ನಾಗಿ ರೂಪಿಸುವ ಮಹತ್ವಾಕಾಂಕ್ಷೆ

ಮೈಸೂರು ಜಿಲ್ಲೆಯನ್ನು ದೇಶದಲ್ಲೇ ಪ್ರಥಮ ಬಾರಿಗೆ ಸಂಪೂರ್ಣವಾಗಿ 'ಯೋಗ ಜಿಲ್ಲೆ'ಯನ್ನಾಗಿ ನಿರ್ಮಿಸುವತ್ತ ಈಗಾಗಲೇ ಯೋಜನೆ ರೂಪಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದೂ ತಿಳಿಸಿದರು. ಮೈಸೂರು ಜಿಲ್ಲೆಯ ಪ್ರತಿ ಮನೆಗಳಲ್ಲಿ ಒಬ್ಬರಾದರೂ ಯೋಗಾಭ್ಯಾಸ ನಡೆಸುವ ರೀತಿಯಲ್ಲಿ ವ್ಯವಸ್ಥೆ ಕಲ್ಪಿಸಲು ಗುರಿ ಹೊಂದಲಾಗಿದೆ. ರಾಜ್ಯದಲ್ಲಿ ಪರಂಪರಾಗತವಾಗಿ ಬಂದಿರುವ ಅಷ್ಟಾಂಗ ಯೋಗಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.

ವಿಶ್ವ ಯೋಗ ದಿನಾಚರಣೆಯ ವಿಶೇಷ ಕಾರ್ಯಕ್ರಮಗಳು

ಈ ಬಾರಿಯ ವಿಶ್ವ ಯೋಗ ದಿನಾಚರಣೆಯನ್ನು 'ಒಂದು ಭೂಮಿ ಒಂದು ಆರೋಗ್ಯಕ್ಕಾಗಿ ಯೋಗ' ಎಂಬ ಘೋಷವಾಕ್ಯದೊಂದಿಗೆ ಆಚರಿಸಲಾಯಿತು. ರಾಜ್ಯದ 10 ಸಾವಿರ ಸ್ಥಳಗಳಲ್ಲಿ 5 ಲಕ್ಷಕ್ಕೂ ಹೆಚ್ಚು ಜನರಿಗೆ ಯೋಗಾಭ್ಯಾಸ ಮಾಡಲು ಸರ್ಕಾರ ಅವಕಾಶ ಕಲ್ಪಿಸಿತ್ತು. ಯೋಗ ದಿನಾಚರಣೆಯ ಪ್ರಯುಕ್ತ ಆಯುಷ್ ಇಲಾಖೆಯಿಂದ 'ಯೋಗ ಪಾರ್ಕ್', 'ಯೋಗ ಧನುಷ್', 'ಹಸಿರು ಯೋಗ', 'ಯೋಗ ಮಹಾಕುಂಭ', 'ಯೋಗ ಸಂಯೋಗ', 'ಯೋಗ ಅನ್‌ಪ್ಲಗ್ಡ್‌' ನಂತಹ ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. 'ಯೋಗ ಧನುಷ್' ಕಾರ್ಯಕ್ರಮದ ಮೂಲಕ ರಾಜ್ಯದಾದ್ಯಂತ 5 ಲಕ್ಷ ಜನರಿಗೆ ಯೋಗ ಹೇಳಿಕೊಡಲಾಗಿದ್ದು, 5,000 ಶಾಲೆಗಳಲ್ಲಿ ಯೋಗ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ವಿವರಿಸಿದರು. ಅಲ್ಲದೆ, 'ಹಸಿರು ಯೋಗ' ಕಾರ್ಯಕ್ರಮದಡಿಯಲ್ಲಿ 1 ಲಕ್ಷ ಗಿಡಗಳನ್ನು ನೆಡಲಾಗುವುದು ಎಂದು ಮಾಹಿತಿ ನೀಡಿದರು.

Read More
Next Story