
ಕನ್ನಡ ಓದಲು, ಬರೆಯಲು ಬಾರದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ
ಅವರ ಕೂದಲು ನೋಡಿದರೆ ಭ್ರಮನಿರಸನವಾಗುತ್ತದೆ. ಅವರ ತಂದೆಗೆ ಕನ್ನಡ ಚೆನ್ನಾಗಿ ಗೊತ್ತಿತ್ತು. ಆದರೆ ಮಧು ಅವರಿಗೆ ಸಚಿವರು ಹೇಗಿರಬೇಕು ಎಂಬ ಕಾಮನ್ ಸೆನ್ಸ್ ಇಲ್ಲ. ಈ ಸಚಿವರನ್ನು ಬದಲಾಯಿಸಬೇಕು ಎಂದು ಕುಂವೀ ಒತ್ತಾಯಿಸಿದರು.
ಕನ್ನಡ ಓದಲು, ಬರೆಯಲು ಬಾರದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸರಕಾರಕ್ಕೆ ಕಪ್ಪು ಚುಕ್ಕೆ ಎಂದು ಖ್ಯಾತ ಸಾಹಿತಿ ಕುಂ ವೀರಭದ್ರಪ್ಪ ಟೀಕಿಸಿದ್ದಾರೆ.
ಬಾಗಲಕೋಟೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನಿಂದ ಶನಿವಾರ ಆಯೋಜಿಸಲಾಗಿದ್ದ 11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ ದರಿದ್ರ ಸ್ಥಿತಿ ಈಗ ನಿರ್ಮಾಣವಾಗಿದೆ. ಶಿಕ್ಷಣ ಸಚಿವರು ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತಿದ್ದಾರೆ. ಅವರಿಗೆ ಕನ್ನಡ ಬರುವುದಿಲ್ಲ. ಅವರ ಕೂದಲು ನೋಡಿದರೆ ಭ್ರಮನಿರಸನವಾಗುತ್ತದೆ. ಅವರ ತಂದೆಗೆ ಕನ್ನಡ ಚೆನ್ನಾಗಿ ಗೊತ್ತಿತ್ತು. ಆದರೆ ಮಧು ಅವರಿಗೆ ಸಚಿವರು ಹೇಗಿರಬೇಕು ಎಂಬ ಕಾಮನ್ ಸೆನ್ಸ್ ಇಲ್ಲ. ಈ ಸಚಿವರನ್ನು ಬದಲಾಯಿಸಬೇಕು ಎಂದು ಒತ್ತಾಯಿಸಿದರು.
"ನಮ್ಮ ರಾಜಕಾರಣಿಗಳು ಕನ್ನಡ ಉಳಿಸುವ ಬಗ್ಗೆ ಮಾತನಾಡುತ್ತಾರೆ. ಆದರೆ ಅವರ ಮಕ್ಕಳು ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತು ವಿದೇಶದಲ್ಲಿ ವಾಸಿಸುತ್ತಾರೆ. ಕನ್ನಡ ಕಲಿತರೆ ಅನ್ನಕ್ಕೆ ತೊಂದರೆಯಿಲ್ಲ ಎಂಬುದಕ್ಕೆ ನನ್ನ ಮಕ್ಕಳು ಉದಾಹರಣೆ. ನನ್ನ ಮೂವರು ಮಕ್ಕಳೂ ಕನ್ನಡ ಮಾಧ್ಯಮದಲ್ಲಿ ಕಲಿತು ಒಳ್ಳೆಯ ಹುದ್ದೆಯಲ್ಲಿದ್ದಾರೆ. ಒಬ್ಬ ಮಗ ತಂದೆ, ತಾಯಿ ನೋಡಿಕೊಳ್ಳಲು ಊರಿನಲ್ಲೇ ವ್ಯಾಪಾರ ನಡೆಸುತ್ತಿದ್ದಾನೆ. ತಂದೆ, ತಾಯಿ ಗೌರವಿಸುವ ಗುಣವನ್ನೂ ಕನ್ನಡ ಕಲಿಸುತ್ತದೆ. ಮಾಜಿ ಮುಖ್ಯಮಂತ್ರಿ ಗುಂಡೂರಾವ್ ಇಂಗ್ಲಿಷ್ ಕಲಿಯಲು ಶಿಕ್ಷರನ್ನಿಟ್ಟುಕೊಂಡರೂ ಕಲಿಯಲು ಸಾಧ್ಯವಾಗಲಿಲ್ಲ," ಎಂದರು.
"ಕೇರಳ, ತಮಿಳುನಾಡಿನಲ್ಲಿ ರಾಜಕಾರಣಿಗಳು ಆಯಾ ಭಾಷೆಯ ಸಮ್ಮೇಳನಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ. ನಮ್ಮಲ್ಲಿ ಮಾನಸಿಕ ದಾರಿದ್ರ್ಯವಿದೆ. ಸಾಹಿತ್ಯ ಸಮ್ಮೇಳನ ಎಂದರೆ ರಾಜಕಾರಣಿಗಳು ಬರುವುದಿಲ್ಲ. ಯುರೋಪ್‌ನಲ್ಲಿ ಇಂಗ್ಲಿಷ್ ಭಾಷೆ ಮಾತನಾಡುವುದಿಲ್ಲ. ಇಂಗ್ಲಿಷ್ ಎಂದರೆ ಡಾಲರ್ ಸೃಷ್ಟಿಸುವ ಭಾಷೆ ಮಾತ್ರ. ವಿಶ್ವವಿದ್ಯಾಲಯಗಳಲ್ಲಿ 88 ಪ್ರಾಧ್ಯಾಪಕರ ಹುದ್ದೆಗಳು ಖಾಲಿಯಿವೆ. ಇದು ಕನ್ನಡದ ಸ್ಥಿತಿಗತಿ," ಎಂದು ಬೇಸರ ವ್ಯಕ್ತಪಡಿಸಿದರು.