‘ದುನಿಯಾ’ ವಿಜಯ್‍ ಎರಡನೇ ಮಗಳು ಚಿತ್ರರಂಗಕ್ಕೆ; ‘ಸಿಟಿ ಲೈಟ್ಸ್’ ಪ್ರಾರಂಭ
x
ರಿತನ್ಯಾ

‘ದುನಿಯಾ’ ವಿಜಯ್‍ ಎರಡನೇ ಮಗಳು ಚಿತ್ರರಂಗಕ್ಕೆ; ‘ಸಿಟಿ ಲೈಟ್ಸ್’ ಪ್ರಾರಂಭ

‘ಸಿಟಿ ಲೈಟ್ಸ್’ ಕುರಿತು ಮಾತನಾಡುವ ವಿಜಯ್‍, ‘ಈ ಚಿತ್ರದ ಮೂಲಕ ನನ್ನ ಮಗಳು ಮೊನೀಷಾ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾಳೆʼ ಎಂದಿದ್ದಾರೆ


ಕಳೆದ ವರ್ಷ ‘ದುನಿಯಾ’ ವಿಜಯ್‍ ಮೊದಲನೇ ಮಗಳು ರಿತನ್ಯಾ, ‘ಲ್ಯಾಂಡ್‍ ಲಾರ್ಡ್’ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಈ ಚಿತ್ರದಲ್ಲಿ ಅವರು ವಿಜಯ್‍ ಮಗಳಾಗಿಯೇ ಕಾಣಿಸಿಕೊಳ್ಳುತ್ತಿದ್ದು, ಚಿತ್ರ ಇನ್ನಷ್ಟೇ ಬಿಡುಗಡೆಯಾಗಬೇಕಿದೆ. ಹೀಗಿರುವಾಗಲೇ, ವಿಜಯ್ ತಮ್ಮ ಎರಡನೇ ಮಗಳು ಮೊನೀಷಾಳನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. ಇತ್ತೀಚೆಗೆ ಪ್ರಾರಂಭವಾದ ‘ಸಿಟಿ ಲೈಟ್ಸ್’ ಚಿತ್ರದಲ್ಲಿ ಮೊನಿಷಾ ನಟಿಸುತ್ತಿದ್ದು, ಈ ಚಿತ್ರವನ್ನು ವಿಜಯ್‍ ಅವರೇ ನಿರ್ದೇಶನ ಮಾಡುತ್ತಿದ್ದಾರೆ.

‘ಭೀಮ’ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ವಿಜಯ್, ‘ಸಿಟಿ ಲೈಟ್ಸ್’ ಎಂಬ ಚಿತ್ರವನ್ನು ಘೋಷಿಸಿದ್ದರು. ಅದರಲ್ಲಿ ಮಗಳನ್ನು ನಿರ್ದೇಶಿಸುತ್ತಿರುವುದಾಗಿ ಹೇಳಿದ್ದರು. ಆ ನಂತರ ವಿನಯ್‍ ರಾಜಕುಮಾರ್ ಚಿತ್ರತಂಡಕ್ಕೆ ಸೇರ್ಪಡೆಯಾಗಿದ್ದರು. ಈಗ ಚಿತ್ರದ ಮುಹೂರ್ತವಾಗಿದೆ. ಇತ್ತೀಚೆಗೆ ಬಂಡೆ ಮಹಾಂಕಾಳಿ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತವಾಗಿದ್ದು, ರಾಘವೇಂದ್ರ ರಾಜಕುಮಾರ್ ಮೊದಲ ದೃಶ್ಯಕ್ಕೆ ಕ್ಲಾಪ್‍ ಮಾಡುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿದ್ದಾರೆ.

‘ಸಿಟಿ ಲೈಟ್ಸ್’ ಕುರಿತು ಮಾತನಾಡುವ ವಿಜಯ್‍, ‘ಈ ಚಿತ್ರದ ಮೂಲಕ ನನ್ನ ಮಗಳು ಮೊನೀಷಾ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾಳೆ. ನನ್ನ ಜವಾಬ್ದಾರಿಯನ್ನು ದೀಪಗಳಾಗಿ ಮಕ್ಕಳಿಗೆ ಕೊಟ್ಟಿದ್ದೇನೆ. ಅವರು ಮುನ್ನಡೆಸಿಕೊಂಡು ಹೋಗಬೇಕು. ಆ ಬೆಳಕು ಇನ್ನೂ ಬೆಳಗಬೇಕು’ ಎನ್ನುತ್ತಾರೆ.

ಈ ಚಿತ್ರದಲ್ಲಿ ಒಂದು ಹೊಸ ವಿಷಯ ಹೇಳುವ ಪ್ರಯತ್ನ ಮಾಡುತ್ತಿರುವುದಾಗಿ ಹೇಳಿದ ವಿಜಯ್, ‘ಇದು ನನ್ನ ಮಟ್ಟಿಗೆ ವಿಶೇಷವಾದ ಸಿನಿಮಾ. ಅಳಿವಿನಂಚಿನಲ್ಲಿರುವ ಸಮಾಜವೊಂದರ ಕುರಿತು ಈ ಚಿತ್ರ ಮಾಡುತ್ತಿದ್ದೇನೆ. ಹಾಗಂತ ಇಡೀ ಚಿತ್ರದಲ್ಲಿ ಅದೇ ಇರುವುದಿಲ್ಲ. ಅದು ಒಂದಂಶ ಅಷ್ಟೇ. ಚಿತ್ರದಲ್ಲಿ ಸಾಕಷ್ಟು ವಿಷಯಗಳಿವೆ. ಹಲವು ದಿನಗಳ ಕಾಲ ರೀಸರ್ಚ್ ಮಾಡಿ ಕಥೆ ಮಾಡಿದ್ದೇವೆ. ನನ್ನ ನಿರ್ದೇಶನದ ಪ್ರತೀ ಚಿತ್ರದಲ್ಲೂ ಜಾನಪದದ ಅಂಶವಿರುತ್ತದೆ. ಇಲ್ಲೂ ಈ ತರಹದ ಪ್ರಯತ್ನ ಇರುತ್ತದೆ. ಈ ಚಿತ್ರದಲ್ಲಿ ಮುಖ್ಯವಾಗಿ ವಿನಯ್‍ ಮತ್ತು ಮೊನಿಷಾ ಇರುತ್ತಾರೆ. ಮಿಕ್ಕಂತೆ ಸಾಕಷ್ಟು ಹೊಸಬರು ಇರುತ್ತಾರೆ’ ಎಂದರು.

ಈ ಚಿತ್ರದಲ್ಲಿ ವಿಜಯ್‍ ಸಹ ನಟಿಸುತ್ತಾರಾ? ಇಲ್ಲ ಎಂಬ ಉತ್ತರ ಅವರಿಂದ ಬರುತ್ತದೆ. ಈ ಚಿತ್ರಕ್ಕೆ ಅವರು ಬರೀ ನಿರ್ದೇಶಕರಷ್ಟೇ. ‘ಸಿಟಿ ಲೈಟ್ಸ್’ ಚಿತ್ರಕ್ಕೆ ವಿಜಯ್‍ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುವುದರ ಜೊತೆಗೆ ನಿರ್ಮಾಣದಲ್ಲೂ ತೊಡಗಿಸಿಕೊಂಡಿದ್ದಾರೆ. ನಿರ್ಮಾಣದಲ್ಲಿ ವಿಕ್ರಮ್‍ ಆರ್ಯ ಕೈಜೋಡಿಸಿದ್ದಾರೆ.

ಅಪ್ಪನ ನಿರ್ದೇಶನದಲ್ಲಿ ನಟಿಸುತ್ತಿದ್ದರೂ ಸೆಟ್‍ನಲ್ಲಿ ಅವರು ನಿರ್ದೇಶಕರು, ತಾನು ನಟಿ ಎಂದ ಮೊನಿಷಾ, ‘ನಟನೆ ತರಬೇತಿ ಪಡೆದು ಚಿತ್ರರಂಗಕ್ಕೆ ಬಂದಿದ್ದೇನೆ. ಈ ಚಿತ್ರದಲ್ಲಿ ನಟಿಸುವುದಕ್ಕೆ ಸಾಕಷ್ಟು ತಯಾರಿ ಮಾಡಿಕೊಳ್ಳುತ್ತಿದ್ದೇನೆ. ಮನೆಯಲ್ಲಿ ನಾವಿಬ್ಬರೂ ಅಪ್ಪ-ಮಗಳಾಗಿದ್ದರೂ, ಸೆಟ್‍ನಲ್ಲಿ ಅವರು ನಿರ್ದೇಶಕರು, ನಾನೊಬ್ಬ ನಟಿ’ ಎಂದರು.

‘ಸಿಟಿ ಲೈಟ್ಸ್’ ಚಿತ್ರಕ್ಕೆ ಹರ್ಷ ಗೌಡ ಛಾಯಾಗ್ರಹಣ, ಚರಣ್‍ರಾಜ್‍ ಸಂಗೀತ ಮತ್ತು ಮಾಸ್ತಿ ಮಂಜು ಅವರ ಸಂಭಾಷಣೆ ಇದೆ. ಚಿತ್ರದಲ್ಲಿ ‘ಕಾಕ್ರೋಚ್’ ಸುಧಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Read More
Next Story