Caste Census Report | ಜಾತಿಗಣತಿ ವರದಿ ಯಥಾವತ್ತು ಅನುಷ್ಠಾನಕ್ಕೆ ಒತ್ತಾಯ
ಜಾತಿ ಗಣತಿ ವರದಿಯನ್ನು ಪರಿಗಣಿಸಬೇಕು ಮತ್ತು ಕಾಂತರಾಜು ಆಯೋಗದ ಶಿಫಾರಸುಗಳನ್ನು ಜಾರಿಗೆ ತರಬೇಕು ಎಂಬ ಕೂಗು ಎದ್ದಿದ್ದು, ಜಾತಿ ಗಣತಿ ವರದಿಯ ಕುರಿತು ಮುಂದಿನ ಸಂಪುಟ ಸಭೆಯಲ್ಲಿ ಸರ್ಕಾರ ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿವೆ ಎನ್ನಲಾಗಿದೆ.
ರಾಜ್ಯದಲ್ಲಿ ಮತ್ತೆ ಜಾತಿಗಣತಿ ವರದಿ ಮುನ್ನೆಲೆಗೆ ಬಂದಿದ್ದು, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ (ಜಾತಿಗಣತಿ) ಸಂಬಂಧಿಸಿದಂತೆ ಎಚ್.ಕಾಂತರಾಜು ಆಯೋಗದ ವರದಿಯು ವೈಜ್ಞಾನಿಕವಾಗಿಯೇ ಇದ್ದು, ಅದನ್ನು ಸರ್ಕಾರವು ಯಥಾವತ್ತಾಗಿ ಅಂಗೀಕರಿಸಬೇಕು ಮತ್ತು ಶಿಫಾರಸುಗಳನ್ನು ಅನುಷ್ಠಾನಕ್ಕೆ ತರಬೇಕು' ಎಂದು ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಪ್ರಧಾನ ಸಂಚಾಲಕ ಕೆ.ಎಂ.ರಾಮಚಂದ್ರಪ್ಪ ಒತ್ತಾಯಿಸಿದ್ದಾರೆ.
ಕರ್ನಾಟಕ ಹಿಂದುಳಿದ ಜಾತಿಗಳ ಒಕ್ಕೂಟ ಮತ್ತು ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟವು ಮಂಗಳವಾರ ಆಯೋಜಿಸಿದ್ದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಲಕ್ಷಾಂತರ ಸಿಬ್ಬಂದಿ ಮನೆ-ಮನೆಗೆ ಭೇಟಿ ನೀಡಿ ದತ್ತಾಂಶಗಳನ್ನು ಕಲೆ ಹಾಕಿದ್ದಾರೆ. ಆ ದತ್ತಾಂಶವನ್ನು ಬಿಇಎಲ್ ಡಿಜಿಟಲೀಕರಿಸಿದೆ. ಈ ವರದಿಯ ದತ್ತಾಂಶಗಳು ವೈಜ್ಞಾನಿಕವಾಗಿ ಇವೆ ಎಂದು ಐಐಎಂ-ಬಿ ದೃಢೀಕರಿಸಿದೆ' ಎಂದು ಅವರು ತಿಳಿಸಿದರು.
'ಈ ವರದಿಯ ಬಗ್ಗೆ ಮಾಹಿತಿ ಇಲ್ಲದ ಕೆಲವರು, ಅದು ವೈಜ್ಞಾನಿಕವಾಗಿ ಇಲ್ಲ ಎನ್ನುತ್ತಿದ್ದಾರೆ. ಸರ್ಕಾರವು ಇದನ್ನೇ ಅಂಗೀಕರಿಸಬೇಕು. ನಿಜವಾಗಿಯೂ ಹಿಂದುಳಿದಿರುವ ಶೋಷಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸಬೇಕು' ಎಂದರು.
ಮಹಾ ಒಕ್ಕೂಟದ ಸಂಚಾಲಕ ಎಣ್ಣೆಗೆರೆ ಆರ್.ವೆಂಕಟರಾಮಯ್ಯ, 'ಕೆಲ ಸಮುದಾಯಗಳ ಮುಖಂಡರು ಈ ವರದಿಯ ಬಗ್ಗೆ ಇಲ್ಲಸಲ್ಲದ ಮಾತುಗಳನ್ನು ಆಡುತ್ತಿದ್ದಾರೆ. ಈ ಬಗ್ಗೆ ಅರಿವು ಮೂಡಿಸಲು ಮತ್ತು ಸರ್ಕಾರವನ್ನು ಒತ್ತಾಯಿಸಲು ರಾಜ್ಯದಾದ್ಯಂತ ಸಭೆಗಳನ್ನು ನಡೆಸುತ್ತೇವೆ' ಎಂದರು.
ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆ ಹಾಗೂ ಬಿಬಿಎಂಪಿ ಚುನಾವಣೆಗಳ ಹಿನ್ನೆಲೆಯಲ್ಲಿ ರಾಜಕೀಯ ಮೀಸಲಾತಿ ನಿಗದಿ ಮಾಡಲು ಜಾತಿ ಗಣತಿ ವರದಿಯನ್ನು ಪರಿಗಣಿಸಬೇಕು ಮತ್ತು ಕಾಂತರಾಜು ಆಯೋಗದ ಶಿಫಾರಸುಗಳನ್ನು ಜಾರಿಗೆ ತರಬೇಕು ಎಂಬ ಕೂಗು ಎದ್ದಿದ್ದು, ಜಾತಿ ಗಣತಿ ವರದಿಯ ಕುರಿತು ಮುಂದಿನ ಸಂಪುಟ ಸಭೆಯಲ್ಲಿ ಸರ್ಕಾರ ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿವೆ ಎನ್ನಲಾಗಿದೆ.