The Federal Interview|  ಸ್ಥಳೀಯ ಸಂಸ್ಥೆ ಚುನಾವಣೆಗೆ ಬ್ಯಾಲೆಟ್‌ ಪೇಪರ್‌, ಬಿಹಾರ ಮಾದರಿಯ SIR: ಜಿ.ಎಸ್. ಸಂಗ್ರೇಶಿ
x

The Federal Interview| ಸ್ಥಳೀಯ ಸಂಸ್ಥೆ ಚುನಾವಣೆಗೆ ಬ್ಯಾಲೆಟ್‌ ಪೇಪರ್‌, ಬಿಹಾರ ಮಾದರಿಯ SIR: ಜಿ.ಎಸ್. ಸಂಗ್ರೇಶಿ

ರಾಜ್ಯ ಚುನಾವಣಾ ಆಯೋಗ ಇವಿಎಂ ಬದಲಿಗೆ ಮತಪತ್ರಕ್ಕೆ ಮುಂದಾಗಿದೆ. ಹೊಸ ಮತದರಾರರ ಪಟ್ಟಿಯನ್ನು ಬಿಹಾರದ SR ಮಾದರಿಯನ್ನು ವಿಶೇಷ ಮತಪಟ್ಟಿ ಪರಿಷ್ಕರಣೆಯ ಮೂಲಕ ನಡೆಸಲು ಯೋಚಿಸಿದೆ.


ಕೇಂದ್ರ ಚುನಾವಣಾ ಆಯೋಗದ ಮತದಾರರ ಪಟ್ಟಿ ಹಾಗೂ ಎಲೆಕ್ಟ್ರಾನಿಕ್‌ ಮತಪೆಟ್ಟಿಗೆ (ಇವಿಎಂ) ವಿರುದ್ಧ ಬಿಜೆಪಿಯ ವಿರೋಧ ಪಕ್ಷಗಳು, ಅದರಲ್ಲೂ ಪ್ರಮುಖವಾಗಿ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರು ನೇರವಾಗಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಮಹದೇವಪುರ ವ್ಯಾಪ್ತಿಯಲ್ಲಿ ಒಂದೇ ಮನೆಯಲ್ಲಿ ಸುಮಾರು 80 ಮತದಾರರಿರುವ ಬಗ್ಗೆ ಉಲ್ಲೇಖ ಸೇರಿದಂತೆ ಹಲವು ಉದಾಹರಣೆಗಳ ಮೂಲಕ ಅವರು ಆರೋಪ ಮಾಡುತ್ತಿದ್ದಾರೆ.

ಈಗ ರಾಹುಲ್‌ ಗಾಂಧಿ ಅವರ ಆರೋಪಗಳಿಗೆ ಬೆಂಬಲವಾಗಿ ಕಾಂಗ್ರೆಸ್‌ ಅಧಿಕಾರದಲ್ಲಿರುವ ಕರ್ನಾಟಕ ಇವಿಎಂ ಬದಲಿಗೆ ಮತಪತ್ರ (ಬ್ಯಾಲೆಟ್‌ ಪೇಪರ್‌) ಮತ್ತು ಹೊಸ ಮತದರಾರರ ಪಟ್ಟಿಯನ್ನು ಬಿಹಾರದ ಎಸ್‌ಐಆರ್‌ ಮಾದರಿಯಲ್ಲೇ ವಿಶೇಷ ಮತಪಟ್ಟಿ ಪರಿಷ್ಕರಣೆಯ ಮೂಲಕ ಬಿಬಿಎಂಪಿ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ನಡೆಸಲು ಮುಂದಾಗಿದೆ. ಈ ಮೂಲಕ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ, ಪರೋಕ್ಷವಾಗಿ ಬಿಜೆಪಿಗೆ ಹಾಗೂ ಕೇಂದ್ರ ಚುನಾವಣಾ ಆಯೋಗಕ್ಕೆ ಸವಾಲು ಹಾಕಿದೆ.

ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣಾ ವ್ಯವಸ್ಥೆಯು ಒಂದು ಮಹತ್ವದ ಬದಲಾವಣೆಯ ಹೊಸ್ತಿಲಲ್ಲಿದೆ. ಇವಿಎಂಗಳಿಗೆ ವಿದಾಯ ಹೇಳಿ, ಸಾಂಪ್ರದಾಯಿಕ ಬ್ಯಾಲೆಟ್ ಪೇಪರ್ ಪದ್ಧತಿಗೆ ಮರಳುವ ಸರ್ಕಾರದ ಚಿಂತನೆ ಹಾಗೂ ರಾಜ್ಯದ್ದೇ ಆದ ಪ್ರತ್ಯೇಕ, ದೋಷಮುಕ್ತ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವ ನಿರ್ಧಾರಗಳು ಚುನಾವಣಾ ಪ್ರಕ್ರಿಯೆಯ ಬಗ್ಗೆ ಹೊಸ ಚರ್ಚೆಯನ್ನು ಹುಟ್ಟುಹಾಕಿವೆ. ಮತದಾರರ ಪಟ್ಟಿಯಲ್ಲಿನ ಲೋಪಗಳ ಕುರಿತ ರಾಜಕೀಯ ಆರೋಪ-ಪ್ರತ್ಯಾರೋಪಗಳ ನಡುವೆ, ಈ ಐತಿಹಾಸಿಕ ಸುಧಾರಣೆಗಳನ್ನು ಕಾರ್ಯಗತಗೊಳಿಸುವ ಗುರುತರ ಜವಾಬ್ದಾರಿ ರಾಜ್ಯ ಚುನಾವಣಾ ಆಯೋಗದ ಹೆಗಲೇರಿದೆ.

ಈ ಹಿನ್ನೆಲೆಯಲ್ಲಿ, ಈ ಎಲ್ಲ ನಿರ್ಣಾಯಕ ಬದಲಾವಣೆಗಳ ರೂವಾರಿ, ರಾಜ್ಯ ಚುನಾವಣಾ ಆಯುಕ್ತರಾದ ಜಿ.ಎಸ್. ಸಂಗ್ರೇಶಿ ಅವರನ್ನು 'ದ ಫೆಡರಲ್ ಕರ್ನಾಟಕ'ಕ್ಕೆ ಮಾತನಾಡಿಸಿತು.

ವಿಶೇಷ ಸಂದರ್ಶನದಲ್ಲಿ ಆಯೋಗದ ಸಿದ್ಧತೆ, ಸವಾಲುಗಳು ಮತ್ತು ಮುಂದಿನ ಹಾದಿಯ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಮತಪಟ್ಟಿ ಪರಿಷ್ಕರಣೆಯ 'ಬಿಹಾರ ಮಾದರಿ'ಯಿಂದ ಹಿಡಿದು, ಚುನಾವಣಾ ಸವಾಲುಗಳನ್ನು ಎದುರಿಸುವಲ್ಲಿ ಆಯೋಗದ ದೃಢ ನಿಲುವಿನವರೆಗೆ ಹಲವು ವಿಷಯಗಳ ಕುರಿತು ಅವರು ಮುಕ್ತವಾಗಿ ಮಾತನಾಡಿದ್ದಾರೆ. ಆ ಸಂದರ್ಶನದ ಪೂರ್ಣ ವಿವರ ಇಲ್ಲಿದೆ

ದ ಫೆಡರಲ್ ಕರ್ನಾಟಕ : ರಾಜ್ಯ ಚುನಾವಣಾ ಆಯೋಗವು ಮತದಾರರ ಪಟ್ಟಿ ಸಿದ್ಧಪಡಿಸುವಾಗ ಯಾವ ಮಾನದಂಡಗಳನ್ನು ಹಾಕಿಕೊಳ್ಳಲಿದೆ?

ಜಿ.ಎಸ್. ಸಂಗ್ರೇಶಿ : ಮಾನದಂಡಗಳ ಬಗ್ಗೆ ಚರ್ಚೆಯ ಹಂತದಲ್ಲಿದ್ದೇವೆ. ಯಾರಿಗೂ ಅನ್ಯಾಯವಾಗದಂತೆ ಕ್ರಮಬದ್ಧವಾಗಿ ಮತಪಟ್ಟಿ ಸಿದ್ಧಪಡಿಸಲಾಗುವುದು.

ದ ಫೆಡರಲ್ ಕರ್ನಾಟಕ: ಅಕ್ರಮ ಮತದಾರರನ್ನು, ಲೋಪಗಳನ್ನು ತೆಗೆಯಲು ಚುನಾವಣಾ ಆಯೋಗ ಯಾವ ರೀತಿ ಸಿದ್ಧತೆ ಮಾಡಿಕೊಳ್ಳಲಿದೆ?

ಜಿ.ಎಸ್. ಸಂಗ್ರೇಶಿ : ಈ ಬಗ್ಗೆ ಚರ್ಚೆ ಮಾಡುತ್ತೇವೆ. ಒಂದು ರೂಪುರೇಷೆ ಸಿದ್ಧಪಡಿಸುತ್ತೇವೆ ಮತ್ತು ಅದಕ್ಕಾಗಿ ಒಂದು ನಿರ್ದಿಷ್ಟ ಕಾರ್ಯಾಚರಣಾ ವಿಧಾನವನ್ನು (SOP) ರೂಪಿಸುತ್ತೇವೆ.

ದ ಫೆಡರಲ್ ಕರ್ನಾಟಕ: ಮತದಾರರ ಪಟ್ಟಿ ತಯಾರಿಕೆಯಲ್ಲಿ ಅಕ್ರಮ ಮತಗಳನ್ನು ತೆಗೆದುಹಾಕಲು, ಬಿಹಾರದಲ್ಲಿ ಕೇಂದ್ರ ಚುನಾವಣಾ ಆಯೋಗವು ಅನುಸರಿಸುತ್ತಿರುವ 'ಎಸ್‌ಐಆರ್' (SIR) ಮಾದರಿಯನ್ನು ನೀವು ಅನುಸರಿಸುತ್ತೀರಾ?

ಜಿ.ಎಸ್. ಸಂಗ್ರೇಶಿ :ಸ್ಪೆಷಲ್ ಇಂಟೆನ್ಸಿವ್ ರಿವಿಷನ್ (SIR) ಮತ್ತು ಸಮ್ಮರಿ ರಿವಿಷನ್ ಎಂದು ಎರಡು ವಿಧಾನಗಳಿವೆ. ನಾವು ಚರ್ಚಿಸಿ ಒಂದು ಎಸ್‌ಒಪಿ (SOP) ರಚಿಸಿ, ನಂತರ ಎಸ್‌ಐಆರ್ ಮಾಡಬೇಕೇ ಅಥವಾ ಸಮ್ಮರಿ ರಿವಿಷನ್ ಮಾಡಬೇಕೇ ಎಂದು ತೀರ್ಮಾನಿಸುತ್ತೇವೆ.

ದ ಫೆಡರಲ್ ಕರ್ನಾಟಕ: ಮತದಾರರ ಪಟ್ಟಿಯಲ್ಲಿನ ಲೋಪಗಳು, ಒಂದೇ ಮನೆಯಲ್ಲಿ ನೂರಾರು ಮತಗಳಿವೆ ಎಂಬಂತಹ ರಾಜಕೀಯ ಆರೋಪಗಳು ಕೇಳಿಬಂದಿವೆ. ಇದನ್ನು ಗಮನದಲ್ಲಿಟ್ಟುಕೊಂಡು ಮತದಾರರ ಪಟ್ಟಿ ಸಿದ್ಧಪಡಿಸುತ್ತೀರಾ?

ಜಿ.ಎಸ್. ಸಂಗ್ರೇಶಿ :ಖಂಡಿತ. ಮನೆ ಮನೆಗೆ ಭೇಟಿ ನೀಡಿ, ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಮತಪಟ್ಟಿಯನ್ನು ತಯಾರು ಮಾಡಲಾಗುವುದು.

ದ ಫೆಡರಲ್ ಕರ್ನಾಟಕ: ರಾಜ್ಯ ಚುನಾವಣಾ ಆಯೋಗಕ್ಕೆ ಸ್ವಂತ ಕಟ್ಟಡವಿಲ್ಲ, ಈ ಬಗ್ಗೆ ಏನನ್ನಿಸುತ್ತದೆ?

ಜಿ.ಎಸ್. ಸಂಗ್ರೇಶಿ : ಸಂವಿಧಾನಾತ್ಮಕ ಸಂಸ್ಥೆಗೆ ಸ್ವಂತ ಕಟ್ಟಡ ಇಲ್ಲದಿರುವುದು ಬೇಸರದ ಸಂಗತಿ. ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದು ಒಂದು ನಿವೇಶನ ನೀಡುವಂತೆ ಕೋರಲಾಗಿದೆ. ಸರ್ಕಾರ ಏನು ಮಾಡುತ್ತದೆ ಎಂದು ನೋಡೋಣ.

ದ ಫೆಡರಲ್ ಕರ್ನಾಟಕ: ಗ್ರಾಮ ಪಂಚಾಯತ್ ಚುನಾವಣೆ ನಡೆದು ನಾಲ್ಕು ವರ್ಷಗಳಾಗಿವೆ. ಚುನಾಯಿತ ಆಡಳಿತ ಇಲ್ಲದ ಕಾರಣ 15ನೇ ಹಣಕಾಸು ಆಯೋಗದ ಅನುದಾನ ಸ್ಥಗಿತವಾಗಿದೆ ಅಲ್ಲವೇ?

ಜಿ.ಎಸ್. ಸಂಗ್ರೇಶಿ :ಹೌದು, ಗ್ರಾಮ ಪಂಚಾಯತ್ ಚುನಾವಣೆ ಮಾಡದಿದ್ದರೆ ಪ್ರತಿ ವರ್ಷ ಬರಬೇಕಾದ ಸುಮಾರು 2,000 ಕೋಟಿ ರೂಪಾಯಿ ಅನುದಾನವನ್ನು ನಿಲ್ಲಿಸಿಬಿಡುತ್ತಾರೆ. ಹಾಗಾಗಿ, ಚುನಾವಣೆ ನಡೆಸಲೇಬೇಕು ಎಂದು ನಾನು ಹೇಳಿದ್ದೇನೆ.

ದ ಫೆಡರಲ್ ಕರ್ನಾಟಕ: ಇವಿಎಂ ಬದಲು ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸಲು ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ಚುನಾವಣಾ ಆಯೋಗದ ಪ್ರತಿಕ್ರಿಯೆ ಏನು?

ಜಿ.ಎಸ್. ಸಂಗ್ರೇಶಿ : ರಾಜ್ಯ ಸರ್ಕಾರಕ್ಕೆ ಶಾಸನ ಮಾಡುವ ಅಧಿಕಾರವಿದೆ. ಅವರು ಶಾಸನ ಮಾಡಿ ಕಳುಹಿಸಿಕೊಟ್ಟಾಗ ನಾವು ಅದನ್ನು ಅನುಸರಿಸಲೇಬೇಕಾಗುತ್ತದೆ. ಶಾಸನಾತ್ಮಕ ಕಾಯ್ದೆಗಳನ್ನು ರಾಜ್ಯ ಚುನಾವಣಾ ಆಯೋಗ ಪಾಲಿಸಲೇಬೇಕು.

ದ ಫೆಡರಲ್ ಕರ್ನಾಟಕ: ಗ್ರೇಟರ್ ಬೆಂಗಳೂರು ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆಗಳನ್ನು ಬ್ಯಾಲೆಟ್ ಪೇಪರ್ ಮೂಲಕ ನಡೆಸಲು ಚುನಾವಣಾ ಆಯೋಗ ಸಿದ್ಧವಿದೆಯೇ?

ಜಿ.ಎಸ್. ಸಂಗ್ರೇಶಿ : ನಾವು ಸಿದ್ಧವಿದ್ದೇವೆ. ಆದರೆ ಮೊದಲು ಮೀಸಲಾತಿ ಪಟ್ಟಿ ಮತ್ತು ಕ್ಷೇತ್ರ ಪುನರ್ವಿಂಗಡಣೆ (ಡಿಲಿಮಿಟೇಷನ್) ಆಗಬೇಕು. ಅದು ಪೂರ್ಣಗೊಂಡ ನಂತರ ನಾವು ಚುನಾವಣೆಗೆ ಸಿದ್ಧ.

ದ ಫೆಡರಲ್ ಕರ್ನಾಟಕ: ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸುವುದು ಒಂದು ಸವಾಲಲ್ಲವೇ? ಅದನ್ನು ಸುಲಭವಾಗಿ ನಡೆಸಲು ಸಾಧ್ಯವೇ?

ಜಿ.ಎಸ್. ಸಂಗ್ರೇಶಿ : ಯಾವುದು ಸುಲಭ ಹೇಳಿ? ಎಲ್ಲವೂ ಸವಾಲುಗಳೇ. ಯಾವುದೇ ಕ್ರಮದಲ್ಲಿ ಸವಾಲು ಇದ್ದೇ ಇರುತ್ತದೆ, ನಾವು ಆ ಸವಾಲನ್ನು ಎದುರಿಸಬೇಕಾಗುತ್ತದೆ.

ದ ಫೆಡರಲ್ ಕರ್ನಾಟಕ: ಇವಿಎಂ ಬದಲು ಮತಪತ್ರಗಳ ಮೂಲಕ ಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗದ ಅನುಮತಿ ಬೇಕಾಗುತ್ತದೆಯೇ?

ಜಿ.ಎಸ್. ಸಂಗ್ರೇಶಿ :ಇಲ್ಲ, ಕೇಂದ್ರ ಚುನಾವಣಾ ಆಯೋಗದ ಅನುಮತಿ ಬೇಕಾಗಿಲ್ಲ.

ದ ಫೆಡರಲ್ ಕರ್ನಾಟಕ: ಮತಪತ್ರಗಳಲ್ಲೂ ಅಕ್ರಮ ಮತದಾನಕ್ಕೆ ಅವಕಾಶವಿದೆ. ಈ ತಂತ್ರಜ್ಞಾನ ಯುಗದಲ್ಲಿ ಇವಿಎಂ ಬದಲು ಹಳೆಯ ಪದ್ಧತಿಯಾದ ಮತಪತ್ರಕ್ಕೆ ಯಾಕೆ ಹೋಗಬೇಕು?

ಜಿ.ಎಸ್. ಸಂಗ್ರೇಶಿ : ಪ್ರಜಾಪ್ರಭುತ್ವದಲ್ಲಿ ಮತದಾನಕ್ಕೆ ಎರಡು ವಿಧಗಳಿವೆ: ಒಂದು ಇವಿಎಂ, ಮತ್ತೊಂದು ಬ್ಯಾಲೆಟ್. ಈ ಎರಡೂ ಪದ್ಧತಿಗಳನ್ನು ಬಿಟ್ಟು ಬೇರೆ ದಾರಿಯಿಲ್ಲ. ಅಮೆರಿಕದಂತಹ ಮುಂದುವರಿದ ದೇಶಗಳಲ್ಲೂ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸುತ್ತಿದ್ದಾರೆ. ಹಾಗಾಗಿ, ಅದನ್ನು ಹಳೆ ಪದ್ಧತಿ ಎಂದು ಯಾಕೆ ಕರೆಯಬೇಕು?

ದ ಫೆಡರಲ್ ಕರ್ನಾಟಕ: ಇವಿಎಂ ಮತ್ತು ಮತಪತ್ರದ ಮತದಾನಕ್ಕೂ ಏನು ವ್ಯತ್ಯಾಸ? ಮತಪತ್ರದಲ್ಲಿ ಫಲಿತಾಂಶ ವಿಳಂಬವಾಗುವುದಿಲ್ಲವೇ?

ಜಿ.ಎಸ್. ಸಂಗ್ರೇಶಿ :ಇವಿಎಂನಲ್ಲಿ ಫಲಿತಾಂಶ ಬೇಗ ಬರುತ್ತದೆ, ಮತಪತ್ರಗಳಲ್ಲಿ ವಿಳಂಬವಾಗುತ್ತದೆ. ಆದರೆ, ಸಮಯ ಉಳಿತಾಯವೇ ಮುಖ್ಯವಲ್ಲ. ಅಮೆರಿಕದವರು ಯಾಕೆ ಬ್ಯಾಲೆಟ್ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ ಎಂಬುದನ್ನು ನಾವು ಗಮನಿಸಬೇಕು.

ದ ಫೆಡರಲ್ ಕರ್ನಾಟಕ: ಮತದಾರರ ಪಟ್ಟಿಯನ್ನು ಮೊದಲ ಬಾರಿಗೆ ರಾಜ್ಯ ಚುನಾವಣಾ ಆಯೋಗವು ಸಿದ್ಧಪಡಿಸುತ್ತಿರುವುದರ ಬಗ್ಗೆ ಏನನ್ನಿಸುತ್ತದೆ?

ಜಿ.ಎಸ್. ಸಂಗ್ರೇಶಿ :ಚುನಾವಣೆ ನಡೆಸುವುದು ನಮ್ಮ ಕೆಲಸ. ನಾವು ಕೂಡ ಮನೆ ಮನೆಗೆ ಹೋಗಿ ಕ್ರಮಬದ್ಧವಾದ ಮತದಾರರ ಪಟ್ಟಿಯನ್ನು ತಯಾರು ಮಾಡುತ್ತೇವೆ.

ದ ಫೆಡರಲ್ ಕರ್ನಾಟಕ: ಪ್ರತ್ಯೇಕ ಮತದಾರರ ಪಟ್ಟಿ ತಯಾರಿಸಲು ರಾಜ್ಯ ಚುನಾವಣಾ ಆಯೋಗ ಹೇಗೆ ಸಿದ್ಧವಾಗಿದೆ? ಅದಕ್ಕೆ ಬೇಕಾದ ಸಿಬ್ಬಂದಿ ಮತ್ತು ಮಾನವ ಸಂಪನ್ಮೂಲ ಇದೆಯೇ?

ಜಿ.ಎಸ್. ಸಂಗ್ರೇಶಿ : ರಾಜ್ಯ ಸರ್ಕಾರವು ಕೇಂದ್ರ ಚುನಾವಣಾ ಆಯೋಗಕ್ಕೆ ಯಾವ ರೀತಿ ಮಾನವ ಸಂಪನ್ಮೂಲವನ್ನು ಒದಗಿಸುತ್ತದೆಯೋ, ಅದೇ ಮಾನವ ಸಂಪನ್ಮೂಲವನ್ನು ನಮಗೂ ಒದಗಿಸುತ್ತದೆ.

ದ ಫೆಡರಲ್ ಕರ್ನಾಟಕ: ಪ್ರತ್ಯೇಕ ಮತದಾರರ ಪಟ್ಟಿ ತಯಾರಿಸಲು ಎಷ್ಟು ಸಮಯ ಬೇಕಾಗಬಹುದು? ಸರ್ಕಾರಕ್ಕೆ ಆಯೋಗದಿಂದ ಏನು ಮನವಿ ಮಾಡುತ್ತೀರಿ ಮತ್ತು ಸರ್ಕಾರದಿಂದ ಯಾವ ಸಹಕಾರ ನಿರೀಕ್ಷಿಸುತ್ತೀರಿ?

ಜಿ.ಎಸ್. ಸಂಗ್ರೇಶಿ : ಇದಕ್ಕೆ ಸುಮಾರು 3 ತಿಂಗಳ ಸಮಯ ಬೇಕಾಗುತ್ತದೆ. ಉದಾಹರಣೆಗೆ, ಬೆಂಗಳೂರಿನಲ್ಲಿ 18,000 ಬೂತ್ ಮಟ್ಟದ ಅಧಿಕಾರಿಗಳನ್ನು (BLO) ನೀಡಿದರೆ ನಾವು ಮತದಾರರ ಪಟ್ಟಿಯನ್ನು ಸಿದ್ಧಪಡಿಸುತ್ತೇವೆ. ಮೊದಲಿಗೆ ಬೆಂಗಳೂರಿನ ಮತದಾರರ ಪಟ್ಟಿಯನ್ನು ಸಿದ್ಧಪಡಿಸುತ್ತೇವೆ.

ದ ಫೆಡರಲ್ ಕರ್ನಾಟಕ: ಕೇಂದ್ರ ಚುನಾವಣಾ ಆಯೋಗವು ಮತದಾರರ ಪಟ್ಟಿ ಸಿದ್ಧಪಡಿಸುವಾಗ, ಈಗ ರಾಜ್ಯ ಚುನಾವಣಾ ಆಯೋಗವೂ ಪ್ರತ್ಯೇಕ ಪಟ್ಟಿ ಸಿದ್ಧಪಡಿಸಿದರೆ ಗೊಂದಲ ಉಂಟಾಗುವುದಿಲ್ಲವೇ?

ಜಿ.ಎಸ್. ಸಂಗ್ರೇಶಿ : ಇಲ್ಲ, ದೇಶದಲ್ಲಿ ಉತ್ತರ ಪ್ರದೇಶ ಮತ್ತು ಕೇರಳ ರಾಜ್ಯಗಳಲ್ಲಿ ಈಗಾಗಲೇ ಪ್ರತ್ಯೇಕ ಮತದಾರರ ಪಟ್ಟಿ ಸಿದ್ಧಪಡಿಸಲಾಗುತ್ತಿದೆ. ಇದರಿಂದ ಯಾವುದೇ ಗೊಂದಲ ಉಂಟಾಗುವುದಿಲ್ಲ.

ದ ಫೆಡರಲ್ ಕರ್ನಾಟಕ: ಬೆಂಗಳೂರಿನ ಮಹದೇವಪುರದಲ್ಲಿ ಮತದಾರರ ಪಟ್ಟಿಯಲ್ಲಿ ಲೋಪವಾಗಿರುವ ಬಗ್ಗೆ ಆರೋಪಗಳು ಬಂದಿವೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಜಿ.ಎಸ್. ಸಂಗ್ರೇಶಿ : ಈ ಆರೋಪಗಳಿಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಆ ಮತಪಟ್ಟಿಯನ್ನು ಸಿದ್ಧಪಡಿಸಿದ್ದು ಕೇಂದ್ರ ಚುನಾವಣಾ ಆಯೋಗ, ಹಾಗಾಗಿ ಅದರ ಬಗ್ಗೆ ನಾನು ಮಾತನಾಡುವುದಿಲ್ಲ.


ಸಂದರ್ಶನದ ಪೂರ್ಣ ಪಾಠಕ್ಕಾಗಿ ಈ ವಿಡಿಯೋ ಲಿಂಕ್‌ ಕ್ಲಿಕ್‌ ಮಾಡಿ..


Read More
Next Story