ಸಂವಿಧಾನ ಬದಲಾವಣೆ  ಹೇಳಿಕೆ ವಿವಾದ | ಸ್ವಪಕ್ಷೀಯರು, ಪ್ರತಿಪಕ್ಷಗಳಿಂದ ಡಿ.ಕೆ. ಶಿವಕುಮಾರ್‌ಗೆ ಉಭಯಸಂಕಟ
x
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ

ಸಂವಿಧಾನ ಬದಲಾವಣೆ ಹೇಳಿಕೆ ವಿವಾದ | ಸ್ವಪಕ್ಷೀಯರು, ಪ್ರತಿಪಕ್ಷಗಳಿಂದ ಡಿ.ಕೆ. ಶಿವಕುಮಾರ್‌ಗೆ ಉಭಯಸಂಕಟ

ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ನೀಡಿರುವ ʼಸಂವಿಧಾನ ಬದಲಾವಣೆʼ ಹೇಳಿಕೆ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಮುಜುಗರ ಸೃಷ್ಟಿಸಿರುವ ನಡುವೆಯೇ, ಆ ವಿವಾದಕ್ಕೆ ಮತ್ತಷ್ಟು ಬಲ ನೀಡಲು ಅವರದೇ ಪಕ್ಷದ ವಿರೋಧಿ ಬಣ ಹಾಗೂ ಪ್ರತಿಪಕ್ಷ ಬಿಜೆಪಿ ಪಣತೊಟ್ಟಿವೆ.


ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ನೀಡಿರುವ ʼಸಂವಿಧಾನ ಬದಲಾವಣೆʼ ಹೇಳಿಕೆ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಮುಜುಗರ ಸೃಷ್ಟಿಸಿರುವ ನಡುವೆಯೇ, ಆ ವಿವಾದಕ್ಕೆ ಮತ್ತಷ್ಟು ಬಲ ನೀಡಲು ಅವರದೇ ಪಕ್ಷದ ವಿರೋಧಿ ಬಣ ಹಾಗೂ ಪ್ರತಿಪಕ್ಷ ಬಿಜೆಪಿ ಪಣತೊಟ್ಟಿವೆ.

ಒಂದೆಡೆ ಡಿ.ಕೆ. ಶಿವಕುಮಾರ್ ಆಡಿರುವ ಮಾತುಗಳನ್ನು ಇಟ್ಟುಕೊಂಡು ದೇಶಾದ್ಯಂತ ಚರ್ಚೆ ಹುಟ್ಟುಹಾಕಲು ಬಿಜೆಪಿ ಸಿದ್ಧತೆ ಮಾಡಿಕೊಳ್ಳುತ್ತಿದೆ ಹಾಗೂ ಈ ಹಿಂದೆ ತನ್ನ ಮೇಲೆ ಕಾಂಗ್ರೆಸ್ ಮಾಡಿದ್ದ ತಂತ್ರವನ್ನೇ ಪ್ರತಿತಂತ್ರವಾಗಿ ಉಪಯೋಗಿಸಿಕೊಳ್ಳಲು ಬಿಜೆಪಿ ಮುಂದಾಗಿದೆ. ಈ ಬಗ್ಗೆ ರಾಜ್ಯ ಬಿಜೆಪಿಗೆ ದೆಹಲಿಯಿಂದ ನಿರ್ದೇಶನವೂ ಬಂದಿದೆ ಎನ್ನಲಾಗಿದೆ.

ಇನ್ನೊಂದೆಡೆ ಡಿ.ಕೆ. ಶಿವಕುಮಾರ್‌ ವಿರುದ್ಧ ತೊಡೆತಟ್ಟಿರುವ ಅವರ ಪಕ್ಷದವರೇ ಅದ ಹಲವು ನಾಯಕರು, "ಸಂವಿಧಾನ ಬದಲಾವಣೆ" ವಿವಾದ ಇನ್ನಷ್ಟು ಹೆಚ್ಚಾಗುವಂತೆ ನೋಡಿಕೊಳ್ಳುವ ಹಾಗೂ ಡಿ.ಕೆ. ಶಿವಕುಮಾರ್‌ ಘನತೆಗೆ ಇನ್ನಷ್ಟು ಧಕ್ಕೆಯಾಗುವಂತೆ ನೋಡಿಕೊಳ್ಳುವ ಪಣತೊಟ್ಟಿದೆ ಎಂದು ಹೇಳಲಾಗಿದೆ. ಹಾಗಾಗಿ ಡಿ.ಕೆ. ಶಿವಕುಮಾರ್ ಪರ ಮಾತನಾಡದೆ ಸದ್ಯಕ್ಕೆ ಸುಮ್ಮನಿದ್ದು, ಆದಷ್ಟು ʼಡಿಕೆಶಿ ಅವರ ಇಮೇಜ್‌ ಡ್ಯಾಮೇಜ್‌ʼ ಆಗಲಿ ಎಂಬ ಇರಾದೆ ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ

ದೆಹಲಿಯಲ್ಲಿ ನಡೆದ ಖಾಸಗಿ ಸುದ್ದಿ ವಾಹಿನಿಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಡಿಸಿಎಂ ಡಿ.ಕೆ. ಶಿವಕುಮಾರ್, ಮುಸ್ಲಿಮರಿಗೆ ಮೀಸಲಾತಿ ಕೊಡಲು ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಹೇಳಿದ್ದಾರೆಂದು ಬಿಜೆಪಿ ಆರೋಪಿಸಿದೆ. ಆದರೆ ಬಿಜೆಪಿ ಆರೋಪವನ್ನು ತಳ್ಳಿ ಹಾಕಿರುವ ಡಿಕೆ ಶಿವಕುಮಾರ್, ತಾವು ಸಂವಿಧಾನ ಬದಲಾವಣೆ ಕುರಿತು ಮಾತನಾಡಿಲ್ಲ. ಬಿಜೆಪಿ ನಾಯಕರು ತಮ್ಮ ಹೇಳಿಕೆಯನ್ನು ತಿರುಚಿದ್ದಾರೆ. ಹೀಗಾಗಿ ಬಿಜೆಪಿ ವಿರುದ್ಧ ಕಾನೂನು ಹೋರಾಟ ಮಾಡುವುದಾಗಿ ಸ್ಪಷ್ಟನೆ ಕೊಟ್ಟಿದ್ದಾರೆ.

ತಿರುಗುಬಾಣವಾಗಿದ್ದ ಸಂವಿಧಾನ ಬದಲಾವಣೆ ಹೇಳಿಕೆ

ಡಿಸಿಎಂ ಡಿಕೆ ಶಿವಕುಮಾರ್ ಸ್ಪಷ್ಟನೆಯನ್ನು ಒಪ್ಪದ ಬಿಜೆಪಿ, ಇಡೀ ಪ್ರಕರಣವನ್ನು ದೇಶಾದ್ಯಂತ ಜೀವಂತ ಇಡಲು ರಾಜಕೀಯ ತಂತ್ರಗಾರಿಕೆ ಮಾಡುತ್ತಿದೆ. ಅದರಲ್ಲಿಯೂ ಕೂಡ ಕರ್ನಾಟಕದಲ್ಲಿ ಈ ವಿಷಯವನ್ನು ಹೆಚ್ಚು ಪ್ರಚಾರ ಮಾಡುವಂತೆ ರಾಜ್ಯ ಬಿಜೆಪಿಗೆ ರಾಷ್ಟ್ರೀಯ ಬಿಜೆಪಿಯಿಂದ ಸೂಚನೆ ಬಂದಿದೆ ಎಂದು ಹೇಳಲಾಗಿದೆ. ಈ ಹಿಂದೆ ಅನಂತಕುಮಾರ್ ಹೆಗಡೆ ಅವರು ಕೇಂದ್ರ ಸಚಿವರಾಗಿದ್ದಾಗ ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂಬ ಹೇಳಿಕೆಯನ್ನು ಕೊಟ್ಟಿದ್ದರು. ಕೇಂದ್ರ ಸಚಿವರಾಗಿದ್ದೂ ಸಂವಿಧಾನ ಬದಲಾವಣೆ ಹೇಳಿಕೆ ನೀಡಿದ್ದರಿಂದ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಅವರು ಸ್ಥಾನ ವಂಚಿತರಾಗಿದ್ದರು ಹಾಗೂ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಅವಕಾಶವೂ ಸಿಗಲಿಲ್ಲ. ಅಷ್ಟರಲ್ಲಾಗಲೇ 'ಸಂವಿಧಾನ ಬದಲಾವಣೆ' ವಿಷಯವನ್ನು ಕಾಂಗ್ರೆಸ್ ದೇಶಾದ್ಯಂತ ಮುನ್ನಲೆಗೆ ತಂದು, ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾಯಿಸಿ ಎಸ್​ಟಿ, ಎಸ್​ಟಿ ಹಾಗೂ ಹಿಂದುಳಿದ ವರ್ಗಗಳಿಗೆ ಸಂವಿಧಾನ ಕೊಟ್ಟಿರುವ ಮೀಸಲಾತಿಯನ್ನು ರದ್ದು ಮಾಡುತ್ತದೆ ಎಂದು ಬಿಜೆಪಿ ಮೇಲೆ ಆರೋಪ ಮಾಡತೊಗಿತ್ತು. ಅದರ ಪರಿಣಾಮ ಲೋಕಸಭಾ ಚುನಾವಣೆಯಲ್ಲಿ ಕಂಡುಬಂದಿತ್ತು. ಈಗ ಅದೇ ರೀತಿಯ ಸವಾಲನ್ನು ಡಿ.ಕೆ. ಶಿವಕುಮಾರ್ ಅವರ ಹೇಳಿಕೆಯಿಂದ ಕಾಂಗ್ರೆಸ್ ಎದುರಿಸುವಂತಾಗಿದೆ.

ಕಾಂಗ್ರೆಸ್ ಹಿಡನ್ ಅಜೆಂಡಾ ಎಂದು ಬಿಂಬಿಸಲು ತಯಾರಿ

ಮುಸ್ಲಿಮರಿಗಾಗಿ ಇಡೀ ಸಂವಿಧಾನವನ್ನೇ ಬದಲಾಯಿಸಲು ಕಾಂಗ್ರೆಸ್ ಪಕ್ಷ ಮುಂದಾಗಿದೆ. ಅದನ್ನು ತನ್ನ ರಾಜ್ಯ ಘಟಕದ ಅಧ್ಯಕ್ಷರಿಂದ ಹೇಳಿಸಿದೆ. ಒಂದೊಮ್ಮೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಪರಿಶಿಷ್ಟ ಜಾತಿ, ಪಂಗಡದ ಮೀಸಲಾತಿಯನ್ನು ಕಿತ್ತು ಅದನ್ನು ಮುಸ್ಲಿಮರಿಗೆ ಕೊಡಲು ಪಕ್ಷ ತಂತ್ರಗಾರಿಕೆ ರೂಪಿಸಿದೆ. ಈ ವಿಚಾರವನ್ನು ಪ್ರತಿ ಮತದಾರರಿಗೂ ತಲುಪಿಸಿ ಎಂಬ ಯೋಜನೆಯನ್ನು ಬಿಜೆಪಿ ಮಾಡಿಕೊಂಡಿದೆ ಎನ್ನಲಾಗಿದೆ. ಜೊತೆಗೆ ಕರ್ನಾಟಕದಲ್ಲಿ ಈ ರೀತಿ ಮಾಡುವುದರಿಂದ ಅದರ ಪರಿಣಾಮ ರಾಜ್ಯ ಕಾಂಗ್ರೆಸ್ ಸರ್ಕಾರದ ಮೇಲಾಗುತ್ತದೆ ಎಂಬ ಲೆಕ್ಕಾಚಾರ ಬಿಜೆಪಿಗೆ ಇದೆ.

ಯುಗಾದಿ ಬಳಿಕ ತೀವ್ರವಾಗಲಿದೆ ಹೋರಾಟ

ಡಿ.ಕೆ. ಶಿವಕುಮಾರ್ ಅವರ ಸಂವಿಧಾನ ಬದಲಾವಣೆ ಹೇಳಿಕೆ ನಂತರ ಬಿಜೆಪಿ ಹೋರಾಟದ ಕುರಿತು ದ ಫೆಡರಲ್ ಕರ್ನಾಟಕದೊಂದಿಗೆ ಮಾತನಾಡಿದ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್, 'ಯಾವುದೇ ಕಾರಣಕ್ಕೂ ನಾವು ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಈಗಾಗಲೇ ನಾವು ಹೋರಾಟವನ್ನು ಶುರು ಮಾಡಿದ್ದೇವೆ. ಯುಗಾದಿ ನಂತರ ಮತ್ತಷ್ಟು ತೀವ್ರಗೊಳಿಸುತ್ತೇವೆ. ಏ. 1, 2 ಹಾಗೂ 3 ರಂದು ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತೇವೆ. ಸಂವಿಧಾನ ಬದಲಾವಣೆ ಕುರಿತು ಕೆಪಿಸಿಸಿ ಅಧ್ಯಕ್ಷರ ಹೇಳಿಕೆ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡಬೇಕು. ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂವಿಧಾನಕ್ಕೆ ವಿರುದ್ಧವಾಗಿ ಮುಸ್ಲಿಮರಿಗೆ ವಿಶೇಷ ಮೀಸಲಾತಿ ಘೋಷಣೆ ಮಾಡಿದ್ದಾರೆ. ಅವರೂ ಕೂಡ ಸಂವಿಧಾನ ಬದಲಾವಣೆ ಕುರಿತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿಕೆ ಕುರಿತು ಮಾತನಾಡಬೇಕು. ಈ ವಿಚಾರವನ್ನು ನಾವು ರಾಜ್ಯದ ಮೂಲೆಮೂಲೆಗೂ ತೆಗೆದುಕೊಂಡು ಹೋಗುತ್ತೇವೆ' ಎಂದಿದ್ದಾರೆ.

ಕಾಂಗ್ರೆಸ್ ಅಸ್ತ್ರಕ್ಕೆ ಈಗ ಬಿಜೆಪಿ ಬತ್ತಳಿಕೆಯಲ್ಲಿ ಪ್ರತ್ಯಸ್ತ್ರ

ಹಿಂದೆ ಬಿಜೆಪಿ ಮೇಲೆ ಕಾಂಗ್ರೆಸ್ ಪ್ರಯೋಗಿಸಿದ್ದ ಸಂವಿಧಾನ ಬದಲಾವಣೆ ಅಸ್ತ್ರವನ್ನೇ ಈಗ ಪ್ರತ್ಯಾಸ್ತ್ರವಾಗಿ ಬಳಸಲು ರಾಜ್ಯ ಬಿಜೆಪಿ ಮುಂದಾಗಿದೆ. ಜೊತೆಗೆ ಈ ವಿಷಯವನ್ನು ಆಗಾಗ ಇದನ್ನು ಪ್ರಸ್ತಾಪಿಸುವ ಮೂಲಕ ವಿಷಯವನ್ನು ಜೀವಂತವಾಗಿಡಿ ಎಂಬ ಸಂದೇಶ ಕೂಡ ರಾಷ್ಟ್ರೀಯ ನಾಯಕರಿಂದ ರಾಜ್ಯ ಬಿಜೆಪಿಗೆ ಬಂದಿದೆ.

ಒಟ್ಟಿನಲ್ಲಿ ಡಿ.ಕೆ. ಶಿವಕುಮಾರ್ ಅವರ ಹೇಳಿಕೆ ಅವರ ಪಾಲಿಗಂತೂ ಸ್ವಪಕ್ಷೀಯರಿಂದ ಹಾಗೂ ಪ್ರತಿಪಕ್ಷ ನಾಯಕರಿಂದ ಬಳಕೆಯಾಗುವ ಆತಂಕವಿದ್ದು, ಉಭಯಸಂಕಟವಾಗಿ ಪರಿಣಮಿಸಿದೆ.

Read More
Next Story