ಖರ್ಗೆ ನಿವಾಸಕ್ಕೆ ಸಿಎಂ ಭೇಟಿ; ಚರ್ಚೆ ಡಿಕೆಶಿ ಬಣದ ಶಾಸಕರ ಹೇಳಿಕೆಗೆ ಕಡಿವಾಣ ಹಾಕಲು ಒತ್ತಾಯ?
x

ಖರ್ಗೆ ನಿವಾಸಕ್ಕೆ ಸಿಎಂ ಭೇಟಿ; ಚರ್ಚೆ ಡಿಕೆಶಿ ಬಣದ ಶಾಸಕರ ಹೇಳಿಕೆಗೆ ಕಡಿವಾಣ ಹಾಕಲು ಒತ್ತಾಯ?

ಮೂಲಗಳ ಪ್ರಕಾರ, ಈ 'ಮುಖಾಮುಖಿ' ಭೇಟಿಯ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗೆ ಕಾಂಗ್ರೆಸ್ ಶಾಸಕರು ನಾಯಕತ್ವ ಬದಲಾವಣೆ ಕುರಿತು ನೀಡುತ್ತಿರುವ ಸಾರ್ವಜನಿಕ ಹೇಳಿಕೆಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.


Click the Play button to hear this message in audio format

ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆಗಳು ಜೋರಾಗಿರುವ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ್ದಾರೆ. ಬೆಂಗಳೂರಿನ ಸದಾಶಿವನಗರದಲ್ಲಿರುವ ಖರ್ಗೆ ಅವರ ನಿವಾಸದಲ್ಲಿ ನಡೆದ ಈ ದಿಢೀರ್ ಭೇಟಿ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ. ಸುಮಾರು 30 ನಿಮಿಷಗಳ ಕಾಲ ನಡೆದ ಈ 'ಕ್ಲೋಸ್ ಡೋರ್' ಸಭೆಯಲ್ಲಿ ಸಿಎಂ ಬದಲಾವಣೆ ಮತ್ತು ಸಂಪುಟ ಪುನಾರಚನೆಯ ವಿಷಯಗಳೇ ಪ್ರಮುಖವಾಗಿ ಚರ್ಚೆಯಾಗಿವೆ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ, ಈ 'ಮುಖಾಮುಖಿ' ಭೇಟಿಯ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗೆ ಕಾಂಗ್ರೆಸ್ ಶಾಸಕರು ನಾಯಕತ್ವ ಬದಲಾವಣೆ ಕುರಿತು ನೀಡುತ್ತಿರುವ ಸಾರ್ವಜನಿಕ ಹೇಳಿಕೆಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಕೆಲವು ಶಾಸಕರು, ಸಿಎಂ ಬದಲಾವಣೆ ಕುರಿತು ಪದೇ ಪದೇ ಹೇಳಿಕೆ ನೀಡುತ್ತಿರುವುದನ್ನು ಖರ್ಗೆ ಅವರ ಗಮನಕ್ಕೆ ತಂದಿದ್ದಾರೆ. ಇಂತಹ ಹೇಳಿಕೆಗಳು ಅನಗತ್ಯ ಗೊಂದಲವನ್ನು ಸೃಷ್ಟಿಸುತ್ತಿದ್ದು, ತಕ್ಷಣವೇ ಇದಕ್ಕೆ ಕಡಿವಾಣ ಹಾಕಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರು ಎಐಸಿಸಿ ಅಧ್ಯಕ್ಷರಲ್ಲಿ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಆಡಳಿತದ ಮೇಲೆ ದುಷ್ಪರಿಣಾಮದ ಆತಂಕ

ಪಕ್ಷದ ಆಂತರಿಕವಾಗಿ ನಡೆಯುತ್ತಿರುವ ಈ ನಾಯಕತ್ವದ ಗೊಂದಲವು ಕೇವಲ ಪಕ್ಷದ ವರ್ಚಸ್ಸಿಗೆ ಮಾತ್ರವಲ್ಲದೆ, ಸರ್ಕಾರದ ಆಡಳಿತದ ಮೇಲೂ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದ್ದಾರೆ. ಆಡಳಿತ ಪಕ್ಷದ ಶಾಸಕರೇ ಇಂತಹ ಗೊಂದಲಕಾರಿ ಹೇಳಿಕೆಗಳನ್ನು ನೀಡುವುದರಿಂದ, ಅಧಿಕಾರಿ ವರ್ಗದಲ್ಲಿ ಅಸ್ಥಿರತೆಯ ಭಾವನೆ ಮೂಡುತ್ತಿದೆ. ಅಲ್ಲದೆ, ಇದು ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್‌ಗೆ ಟೀಕೆ ಮಾಡಲು ಅಸ್ತ್ರವನ್ನು ಒದಗಿಸಿದಂತಾಗುತ್ತಿದೆ. ಆದ್ದರಿಂದ ಹೈಕಮಾಂಡ್ ಮಟ್ಟದಲ್ಲೇ ಶಾಸಕರಿಗೆ ಕಠಿಣ ಸೂಚನೆ ನೀಡಬೇಕು ಎಂದು ಸಿಎಂ ಆಗ್ರಹಿಸಿದ್ದಾರೆ ಎಂದು ತಿಳಿದುಬಂದಿದೆ.

ಸಂಪುಟ ಪುನಾರಚನೆಗೆ ಸಿಎಂ ಒಲವು?

ಇದೇ ವೇಳೆ, ರಾಜ್ಯ ಸಚಿವ ಸಂಪುಟ ಪುನಾರಚನೆಯ ವಿಷಯವೂ ಈ ಹೈವೋಲ್ಟೇಜ್ ಸಭೆಯಲ್ಲಿ ಪ್ರಮುಖವಾಗಿ ಚರ್ಚೆಯಾಗಿದೆ. ಪ್ರಸ್ತುತ ರಾಜಕೀಯ ಸನ್ನಿವೇಶ ಮತ್ತು ಆಡಳಿತಾತ್ಮಕ ದೃಷ್ಟಿಯಿಂದ ಸಂಪುಟ ಪುನಾರಚನೆ ಮಾಡುವುದು ಸೂಕ್ತ ಎಂಬ ಅಭಿಪ್ರಾಯವನ್ನು ಸಿದ್ದರಾಮಯ್ಯ ಅವರು ಖರ್ಗೆ ಅವರ ಮುಂದಿಟ್ಟಿದ್ದಾರೆ. ನಿಷ್ಕ್ರಿಯರಾಗಿರುವ ಅಥವಾ ಪಕ್ಷದ ಕೆಲಸಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕಾದ ಸಚಿವರನ್ನು ಕೈಬಿಟ್ಟು, ಹೊಸಬರಿಗೆ ಅವಕಾಶ ನೀಡುವ ಮೂಲಕ ಪಕ್ಷದಲ್ಲಿನ ಅಸಮಾಧಾನವನ್ನು ತಣಿಸಬಹುದು ಎಂಬ ಲೆಕ್ಕಾಚಾರವನ್ನು ಸಿಎಂ ವಿವರಿಸಿದ್ದಾರೆ. ಸಂಪುಟ ಪುನಾರಚನೆಯ ಅಗತ್ಯವನ್ನು ಮನವರಿಕೆ ಮಾಡಿಕೊಡುವಲ್ಲಿ ಸಿಎಂ ಯಶಸ್ವಿಯಾಗಿದ್ದು, ಹೈಕಮಾಂಡ್ ಅಂತಿಮವಾಗಿ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.

Read More
Next Story