
ನಟಿ ಸೌಂದರ್ಯ
Soundarya Death | ನಟಿ ಸೌಂದರ್ಯ ಸಾವು ಪ್ರಕರಣ: 21ವರ್ಷಗಳ ಬಳಿಕ ತೆಲುಗು ನಟನ ವಿರುದ್ಧ ದಾಖಲಾಯ್ತು ದೂರು
ತೆಲಂಗಾಣದ ಖಮ್ಮಾ ಜಿಲ್ಲೆಯ ಸಾಮಾಜಿಕ ಕಾರ್ಯಕರ್ತ ಚಿಟ್ಟಿಮಲ್ಲು ಎನ್ನುವವರು ತೆಲುಗು ಚಿತ್ರರಂಗದ ದಿಗ್ಗಜ ನಟ ಮೋಹನ್ ಬಾಬು ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.
ಕನ್ನಡ, ತೆಲುಗು, ತಮಿಳು ಸೇರಿದಂತೆ ದಕ್ಷಿಣ ಭಾರತದ ಸಿನಿಮಾಗಳಲ್ಲಿ 1990ರ ದಶಕದಲ್ಲಿ ಅತ್ಯಂತ ಬೇಡಿಕೆಯನ್ನು ಹೊಂದಿದ್ದ ನಟಿ ಸೌಂದರ್ಯ ಅವರು 2004 ಏಪ್ರಿಲ್ 7ರಂದು ಹೆಲಿಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಅವರ ದಾರುಣ ಸಾವಿನ 21 ವರ್ಷಗಳ ಬಳಿಕ ಇದೀಗ ಆ ಘಟನೆ ಅಪಘಾತವಲ್ಲ; ಕೊಲೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ತೆಲಂಗಾಣದ ಖಮ್ಮಾ ಜಿಲ್ಲೆಯ ಸಾಮಾಜಿಕ ಕಾರ್ಯಕರ್ತ ಚಿಟ್ಟಿಮಲ್ಲು ಎನ್ನುವವರು ತೆಲುಗು ಚಿತ್ರರಂಗದ ದಿಗ್ಗಜ ನಟ ಮೋಹನ್ ಬಾಬು ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಮೋಹನ್ ಬಾಬು ಪ್ರಸ್ತುತ ವಾಸಿಸುತ್ತಿರುವ ಜಲಪಲ್ಲಿ ಟೌನ್‌ಶಿಪ್ ಆಸ್ತಿಗಾಗಿ ನಟಿ ಸೌಂದರ್ಯ ಅವರ ಕೊಲೆ ನಡೆದಿದೆ ಎಂದು ಆರೋಪಿಸಿ ತೆಲಂಗಾಣದ ಖಮ್ಮಂ ಜಿಲ್ಲೆಯ ಪೊಲೀಸ್ ಅಧಿಕಾರಿ ಹಾಗೂ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.
ದೂರಿನಲ್ಲಿ ಏನಿದೆ?
ಸೌಂದರ್ಯ ಸಾವಿಗೆ ಮೋಹನ್ ಬಾಬು ಕಾರಣ. ಮೋಹನ್ ಬಾಬು ವಾಸವಿರುವ ಹೈದರಾಬಾದಿನ ಜಲಪಲ್ಲಿ ಬಳಿಯ ಟೌನ್‌ಶಿಪ್ ಸೌಂದರ್ಯಾ ಅವರಿಗೆ ಸೇರಿದ್ದು, ಆ ಜಾಗದಿಂದ ಕೂಡಲೇ ಮೋಹನ್ ಬಾಬು ಅವರನ್ನು ಖಾಲಿ ಮಾಡಿಸಿ ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.
ಇಷ್ಟೇ ಅಲ್ಲ; ಸೌಂದರ್ಯ ನಟಿಸಿದ ಕೊನೆಯ ಸಿನಿಮಾ ಶಿವ ಶಂಕರ. ಈ ಸಿನಿಮಾದ ನಾಯಕ ಮೋಹನ್ ಬಾಬು. ಅದೇ ಸಮಯದಲ್ಲಿ ಸೌಂದರ್ಯ ಜಲಪಲ್ಲಿ ಬಳಿ 6 ಎಕರೆ ಜಮೀನು ಖರೀದಿ ಮಾಡಿದ್ದರು. ಈ ವಿಷಯವನ್ನು ಮೋಹನ್ ಬಾಬು ಬಳಿ ಸೌಂದರ್ಯ ಹೇಳಿಕೊಂಡಿದ್ದರು. ಆಗ ಮೋಹನ್ ಬಾಬು ಸೌಂದರ್ಯ ಕಡೆಯಿಂದ ಆ ಜಮೀನು ಖರೀದಿ ಮಾಡಲು ಮುಂದಾದರು. ಅದಕ್ಕೆ ಸೌಂದರ್ಯ ಒಪ್ಪಲಿಲ್ಲ. ಹೀಗಾಗಿ ಮೋಹನ್ ಬಾಬು ಸೌಂದರ್ಯ ಅವರನ್ನು ಹತ್ಯೆ ಮಾಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಸೌಂದರ್ಯ ತೆಲಂಗಾಣದ ಕರೀಂನಗರದಲ್ಲಿ ಬಿಜೆಪಿ ಮತ್ತು ತೆಲುಗು ದೇಶಂ ಪಕ್ಷದ ರಾಜಕೀಯ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು 2004ರ ಜುಲೈ 7ರಂದು ಬೆಂಗಳೂರಿನಿಂದ ಲಘು ವಿಮಾನದಲ್ಲಿ ಪ್ರಯಾಣ ಆರಂಭಿಸಿದರು. ಈ ವಿಮಾನ ಟೇಕ್ಆಫ್ ಆದ ಕೆಲವೇ ನಿಮಿಷಗಳಲ್ಲಿ ಹೊತ್ತಿ ಉರಿಯಿತು. ಈ ವೇಳೆ ಅವರು ನಿಧನ ಹೊಂದಿದರು. ಈ ದುರಂತದಲ್ಲಿ ಅವರ ಸಹೋದರನೂ ಸಾವನ್ನಪ್ಪಿದ್ದು, ಇಬ್ಬರೂ ಸುಟ್ಟು ಕರಕಲಾಗಿದ್ದರು. ಇಬ್ಬರ ಮೃತ ದೇಹವನ್ನೂ ಪಡೆಯಲು ಕುಟುಂಬಕ್ಕೆ ಸಾಧ್ಯವಾಗಿರಲಿಲ್ಲ.