
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಎದುರಾಯಿತು ಮತ್ತೊಂದು ಸಂಕಷ್ಟ
ಮುಡಾ ಆಸ್ತಿಯ ಅಕ್ರಮ ಡಿನೋಟಿಫಿಕೇಶನ್ ಸಂಬಂಧ ಸಿದ್ದರಾಮಯ್ಯ ಹಾಗೂ ಬಸವೇಗೌಡ ವಿರುದ್ಧ ತನಿಖೆಗೆ ಅನುಮತಿ ನೀಡಬೇಕು ಎಂದು ಕೋರಿ ಬಿಜೆಪಿ ಮುಖಂಡ ಎನ್ಆರ್ ರಮೇಶ್ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರಿಗೆ ಪತ್ರ ಬರೆದಿದ್ದಾರೆ.
ಮುಡಾ ಪ್ರಕರಣದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಮುಡಾ ಆಸ್ತಿಯ ಅಕ್ರಮ ಡಿನೋಟಿಫಿಕೇಶನ್ ಸಂಬಂಧ ಸಿದ್ದರಾಮಯ್ಯ ಹಾಗೂ ಬಸವೇಗೌಡ ವಿರುದ್ಧ ತನಿಖೆಗೆ ಅನುಮತಿ ನೀಡಬೇಕು ಎಂದು ಕೋರಿ ಬಿಜೆಪಿ ಮುಖಂಡ ಎನ್ಆರ್ ರಮೇಶ್ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರಿಗೆ ಪತ್ರ ಬರೆದಿದ್ದಾರೆ.
ಮೈಸೂರಿನ ವಿಜಯನಗರ ಎರಡನೇ ಹಂತದ ಬಡಾವಣೆ ನಿರ್ಮಾಣ ಮಾಡುವುದಕ್ಕಾಗಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮೈಸೂರಿನ ಹಿಣಕಲ್ ಗ್ರಾಮದ ಸರ್ವೆ ನಂಬರ್ 70/4 ಎ ಜಾಗವನ್ನು ಸ್ವಾಧೀನಪಡಿಸಿಕೊಂಡಿತ್ತು. ಆ ಭೂಮಿಯನ್ನು ಡಿ ನೋಟಿಫಿಕೇಶನ್ ಮಾಡುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾನೂನು ಉಲ್ಲಂಘಿಸಿದ್ದಾರೆ. ಅಲ್ಲದೆ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಇದು ಭ್ರಷ್ಟಾಚಾರವಾಗಿದೆ ಎಂದು ರಾಜ್ಯಪಾಲರಿಗೆ ನೀಡಿದ ದೂರಿನಲ್ಲಿ ರಮೇಶ್ ಉಲ್ಲೇಖಿಸಿದ್ದಾರೆ.
ಪ್ಲಾಟ್ ನಂ 3161 ಸೇರಿದಂತೆ ಕಾನೂನಿನ ಪ್ರಕಾರ ಸ್ವಾಧೀನಪಡಿಸಿಕೊಂಡ ಭೂಮಿಯಿಂದ ವಿವಿಧ ಅರ್ಜಿದಾರರಿಗೆ ಮುಡಾ ನಿಗದಿಪಡಿಸಿದ ಪ್ಲಾಟ್‌ಗಳನ್ನು ಸುಂದರ್ ರಾಜ್ ಎಂಬವರಿಗೆ ನೀಡಲಾಗಿತ್ತು. ಅವರು ಅನುಮೋದನೆಗಳನ್ನು ಪಡೆದ ನಂತರ ಮನೆ ನಿರ್ಮಿಸಿದ್ದರು. ಆದಾಗ್ಯೂ, ಕಾನೂನು ಅವಶ್ಯಕತೆಗಳನ್ನು ಅನುಸರಿಸಿದರೂ, ಅವರ ಮನೆಯನ್ನು ಕಾನೂನುಬಾಹಿರವಾಗಿ ನೆಲಸಮ ಮಾಡಲಾಯಿತು. ಇದು ಆಸ್ತಿ ಹಕ್ಕುಗಳ ಉಲ್ಲಂಘನೆ ಮತ್ತು ಸರಿಯಾದ ಪ್ರಕ್ರಿಯೆಯ ಬಗ್ಗೆ ಗಂಭೀರ ಕಳವಳ ಮೂಡಿಸಿತ್ತು ಎಂದು ಎನ್ಆರ್ ರಮೇಶ್ ರಾಜ್ಯಪಾಲರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಅಧಿಸೂಚನೆಯ ವಿರುದ್ಧದ ಸ್ಪಷ್ಟ ತೀರ್ಪಿನ ಹೊರತಾಗಿಯೂ, ಡಿಇ -23/10/1997 ರಂದು, ಅಂದಿನ ಮುಡಾ ಅಧ್ಯಕ್ಷ ಸಿ. ಬಸವೇಗೌಡ ಅವರು ರಾಜ್ಯ ಸರ್ಕಾರದ ಅನುಮೋದನೆಯಿಲ್ಲದೆ, ಎಲ್ಲಾ ಶಾಸನಬದ್ಧ ಮಾನದಂಡಗಳನ್ನು ಉಲ್ಲಂಘಿಸಿ ಸರ್ವೇ ನಂಬರ್ 70/4 ಎ ಗಾಗಿ ಅಕ್ರಮ ಡಿ-ನೋಟಿಫಿಕೇಶನ್ ಆದೇಶವನ್ನು ನೀಡಿದ್ದರು ಎಂದು ಪತ್ರದಲ್ಲಿ ಆರೋಪಿಸಲಾಗಿದೆ.
ಈ ಡಿನೋಟಿಫಿಕೇಶನ್ ಆದ ಕೇವಲ 27 ದಿನಗಳ ನಂತರ, 26/11/1997 ರಂದು, ಆ ಸಮಯದಲ್ಲಿ ಉಪ ಮುಖ್ಯಮಂತ್ರಿ, ಹಣಕಾಸು ಸಚಿವ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಿದ್ದರಾಮಯ್ಯ ಅವರು ಪ್ಲಾಟ್ ಸಂಖ್ಯೆ 3161 (80×120 ಅಡಿ, 9,600 ಚದರ ಅಡಿ) ಅನ್ನು ಸಂಕಮ್ಮ ಎಂಬವರಿಂದ 6.72 ಲಕ್ಷ ರೂ.ಗೆ ಖರೀದಿಸಿದ್ದರು. ಮುಡಾ ಕಾನೂನುಬದ್ಧವಾಗಿ ಸ್ವಾಧೀನಪಡಿಸಿಕೊಂಡ 12 ವರ್ಷಗಳ ನಂತರ ಈ ವ್ಯವಹಾರ ನಡೆದಿತ್ತು ಎಂದು ಪತ್ರದಲ್ಲಿ ದೂರಿದ್ದಾರೆ.