Chemotherapy centers to be opened in 16 district hospitals in the state: Minister Dinesh Gundu Rao
x

ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌

ಕ್ಯಾನ್ಸರ್‌ಪೀಡಿತರ ನೆರವಿಗೆ ಧಾವಿಸಿದ ಸರ್ಕಾರ; 16 ಜಿಲ್ಲಾಸ್ಪತ್ರೆಗಳಲ್ಲಿ ಕೀಮೋಥೆರಪಿ ಕೇಂದ್ರ ಆರಂಭಿಸಲು ನಿರ್ಧಾರ

ರಾಜ್ಯದಲ್ಲಿ ಸುಮಾರು 70 ಸಾವಿರದಷ್ಟು ಹೊಸ ಕ್ಯಾನ್ಸರ್‌ ಪ್ರಕರಣಗಳು ವರದಿಯಾಗಿವೆ. ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ (ಎಸ್‌ಎಎಸ್‌ಟಿ) ಅಡಿ ನೋಂದಾಯಿತ ಕ್ಯಾನ್ಸರ್‌ ಆಸ್ಪತ್ರೆಯಲ್ಲಿ ಪ್ರಾರಂಭಿಕ ಚಿಕಿತ್ಸೆ ಪಡೆದ ಬಳಿಕ ಮುಂದುವರೆದ ಕೀಮೋಥೆರಪಿ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗಳಲ್ಲಿ ಕೀಮೊಥೆರಪಿ ಕೇಂದ್ರ ಆರಂಭಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದ್ದಾರೆ.


ಕ್ಯಾನ್ಸರ್‌ ರೋಗಿಗಳಿಗೆ ಗುಣಮಟ್ಟದ ಕೀಮೋಥೆರಪಿ ಚಿಕಿತ್ಸೆ ಒದಗಿಸುವ ಉದ್ದೇಶದಿಂದ ರಾಜ್ಯದ 16 ಜಿಲ್ಲಾಸ್ಪತ್ರೆಗಳಲ್ಲಿ ಇಂದಿನಿಂದ (ಶುಕ್ರವಾರ) ಡೇ ಕೇರ್‌ ಕೀಮೋಥೆರಪಿ ಕೇಂದ್ರಗಳನ್ನು ಆರಂಭಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದರು.

ಕೀಮೋಥೆರಪಿ ಕೇಂದ್ರಗಳ ಸ್ಥಾಪನೆ ಕುರಿತು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕೀಮೋಥೆರಪಿ ಕೇಂದ್ರಗಳಿಗೆ ಹಸಿರು ನಿಶಾನೆ ನೀಡಲಿದ್ದಾರೆ. ಬೆಂಗಳೂರು, ವಿಜಯಪುರ, ಉಡುಪಿ, ಬಳ್ಳಾರಿ ಧಾರವಾಡ, ದಾವಣಗೆರೆ, ಬಾಗಲಕೋಟೆ ಸೇರಿದಂತೆ ರಾಜ್ಯದ 16 ಜಿಲ್ಲಾಸ್ಪತ್ರೆಗಳಲ್ಲಿ ಖಾಸಗಿ ಆಸ್ಪತ್ರೆಗಳ ಸಹಯೋಗದೊಂದಿಗೆ ಡೇ ಕೇರ್‌ ಕೀಮೋಥೆರಪಿ ಕೇಂದ್ರಗಳನ್ನು ಪ್ರಾರಂಭಿಸಲಾಗುತ್ತಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಸುಮಾರು 70 ಸಾವಿರದಷ್ಟು ಹೊಸ ಕ್ಯಾನ್ಸರ್‌ ಪ್ರಕರಣಗಳು ವರದಿಯಾಗಿವೆ. ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ (ಎಸ್‌ಎಎಸ್‌ಟಿ) ಅಡಿ ನೋಂದಾಯಿತ ಕ್ಯಾನ್ಸರ್‌ ಆಸ್ಪತ್ರೆಯಲ್ಲಿ ಪ್ರಾರಂಭಿಕ ಚಿಕಿತ್ಸೆ ಪಡೆದ ಬಳಿಕ ಮುಂದುವರೆದ ಕೀಮೋಥೆರಪಿ ಚಿಕಿತ್ಸೆಗಾಗಿ ಈ ಕೇಂದ್ರಗಳು ಸಹಕಾರಿಯಾಗಲಿವೆ ಎಂದರು.

ಕೀಮೋಥೆರಪಿ ಚಿಕಿತ್ಸೆಗಾಗಿ ಶೇ 60 ರಷ್ಟುರೋಗಿಗಳು ಬೆಂಗಳೂರು, ಹುಬ್ಬಳ್ಳಿ, ಕಲಬುರಗಿ, ಬೆಳಗಾವಿ ಮತ್ತು ಮೈಸೂರಿಗೆ 100 ಕಿ.ಮೀ. ಗಿಂತ ಹೆಚ್ಚು ದೂರದಿಂದ ಪ್ರಯಾಣಿಸುತ್ತಾರೆ. ಇಂತವರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಜಿಲ್ಲಾಸ್ಪತ್ರೆಗಳಲ್ಲಿ ಚಿಕಿತ್ಸಾ ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ. ಕ್ಯಾನ್ಸರ್‌ ಆರೈಕೆಯಲ್ಲಿ ನಗರ, ಗ್ರಾಮೀಣ ಅಸಮಾನತೆ ಕಡಿಮೆ ಮಾಡಬೇಕು. ಪರಿಣಾಮಕಾರಿ ಆರೈಕೆ, ರೋಗಿಗಳಿಗೆ ಪ್ರಯಾಣ ಹಾಗೂ ಆಸ್ಪತ್ರೆ ವೆಚ್ಚ ಕಡಿಮೆ ಮಾಡುವುದು ಇದರ ಉದ್ದೇಶವಾಗಿದೆ ಎಂದು ಮಾಹಿತಿ ನೀಡಿದರು.

ಏನಿದು ಕೀಮೋಥೆರಪಿ ?

ಕೀಮೋಥೆರಪಿ ಸಾಮಾನ್ಯ ಕ್ಯಾನ್ಸರ್ ಚಿಕಿತ್ಸೆಯಾಗಿದೆ. ಇದು ಕ್ಯಾನ್ಸರ್ ಕೋಶಗಳನ್ನು ನಾಶಮಾಡಲು ಮತ್ತು ಗೆಡ್ಡೆಯ ಬೆಳವಣಿಗೆ ತಡೆಯುವ ಪರಿಣಾಮಕಾರಿ ಚಿಕಿತ್ಸಾ ವಿಧಾನವಾಗಿದೆ. ವಿಕಿರಣ ಚಿಕಿತ್ಸೆ ಅಥವಾ ಶಸ್ತ್ರಚಿಕಿತ್ಸೆಯಂತಹ ಇತರ ಕ್ಯಾನ್ಸರ್ ಚಿಕಿತ್ಸೆಗಳೊಂದಿಗೆ ನೀಡಬಹುದಾಗಿದೆ. ಕೀಮೋಥೆರಪಿಯನ್ನು ಸಾಮಾನ್ಯವಾಗಿ ಅಭಿದಮನಿ ಮೂಲಕ ನೀಡಲಾಗುತ್ತದೆ.

Read More
Next Story