
Tax Injustice | ತೆರಿಗೆ ಹಂಚಿಕೆ ಕಡಿತಕ್ಕೆ ಮುಂದಾದ ಕೇಂದ್ರ; ಸಚಿವ ಪ್ರಿಯಾಂಕ್ ಖರ್ಗೆ ಕಿಡಿ
ದಕ್ಷಿಣದ ರಾಜ್ಯಗಳಿಗೆ ತೆರಿಗೆ ಹಂಚಿಕೆಯಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂಬ ದೂರುಗಳಿವೆ. ಇದೇ ವೇಳೆ ಮುಂದಿನ ಹಣಕಾಸು ವರ್ಷದಿಂದ ರಾಜ್ಯಗಳಿಗೆ ಕೊಡಬೇಕಾದ ಅನುದಾನದಲ್ಲಿ 35 ಸಾವಿರ ಕೋಟಿ ರೂ. ಕಡಿತ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ.
ಕೇಂದ್ರ ಸರ್ಕಾರ ರಾಜ್ಯಗಳಿಂದ ಸಂಗ್ರಹಿಸುವ ತೆರಿಗೆಯಲ್ಲಿ ರಾಜ್ಯಗಳಿಗೆ ಕೊಡುವ ಪಾಲಿನಲ್ಲಿ ಶೇ.1 ರಷ್ಟನ್ನು ಕಡಿಮೆ ಮಾಡಲು ಮುಂದಾಗಿರುವುದಕ್ಕೆ ಐಟಿ-ಬಿಟಿ ಹಾಗೂ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರ ಈಗಾಗಲೇ ತೆರಿಗೆ ಹಂಚಿಕೆಯಲ್ಲಿ ರಾಜ್ಯಗಳ ಗಾಯದ ಮೇಲೆ ಬರೆ ಎಳೆದಿದ್ದಲ್ಲದೆ, ಈಗ ಬಿಸಿನೀರನ್ನೂ ಸುರಿಯುತ್ತಿದೆ. ಅನುದಾನ ಹಂಚಿಕೆಯಲ್ಲಿ ಕೇಂದ್ರ ಸರ್ಕಾರದಿಂದ ದಕ್ಷಿಣ ರಾಜ್ಯಗಳಿಗೆ ಅನ್ಯಾಯವಾಗುತ್ತಿದೆ. ಅದರಲ್ಲಿಯೂ ತೆರಿಗೆ ಪಾಲಿನ ವಿಚಾರದಲ್ಲಿ ಕರ್ನಾಟಕಕ್ಕೆ ದೊಡ್ಡ ದ್ರೋಹವಾಗುತ್ತಿದೆ. ಅದರೊಂದಿಗೆ ತೆರಿಗೆ ಪಾಲಿನ ಹಂಚಿಕೆಯಲ್ಲಿ ರಾಜ್ಯಗಳ ಪಾಲನ್ನು ಕಡಿತಗೊಳಿಸಲು ಹಣಕಾಸು ಆಯೋಗಕ್ಕೆ ಕೋರಿಕೆ ಸಲ್ಲಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಇದರಿಂದ ಅತಿ ಹೆಚ್ಚು ಅನ್ಯಾಯಕ್ಕೊಳಗಾಗುವುದು ದಕ್ಷಿಣ ಭಾರತದ ರಾಜ್ಯಗಳು, ಅದರಲ್ಲಿಯೂ ಕರ್ನಾಟಕಕ್ಕೆ ದೊಡ್ಡ ಅನ್ಯಾಯವಾಗಲಿದೆ ಎಂದು ಪ್ರಿಯಾಂಕ್ ಖರ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರದ ಈ ಹುನ್ನಾರದ ಹಿಂದೆ ಹಂತ ಹಂತವಾಗಿ ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಹಾಗೂ ಆರ್ಥಿಕ ಸ್ವಾತಂತ್ರ್ಯವನ್ನು ಕಸಿಯುವ ಈ ದುಷ್ಟ ನಡೆ ಇದೆ. ಇದಕ್ಕೆ ರಾಜ್ಯದ ಬಿಜೆಪಿ ನಾಯಕರ ಮೌನವು ಅವರ ಜನದ್ರೋಹವನ್ನು ಸಾಬೀತು ಮಾಡುತ್ತದೆ.
‘ರಾಜ್ಯ ಸರ್ಕಾರವನ್ನು ಪ್ರಶ್ನಿಸುವ ವಿಪಕ್ಷ ನಾಯಕ ಆರ್. ಅಶೋಕ್ ಅವರೇ, ರಾಜ್ಯಗಳ ಅನುದಾನ ಕಡಿತದ ಕೇಂದ್ರದ ತೀರ್ಮಾನದ ಬಗ್ಗೆ ತಾವೇಕೆ ನಿಮ್ಮ ಮೋದಿ ಅವರನ್ನು ಪ್ರಶ್ನೆ ಮಾಡಬಾರದು? ರಾಜ್ಯದಿಂದಲೇ ಆಯ್ಕೆಯಾಗಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ರಾಜ್ಯ ಬಿಜೆಪಿ ನಿಯೋಗ ಭೇಟಿಯಾಗಿ ಈ ತೀರ್ಮಾನದಿಂದ ಹಿಂದೆ ಸರಿಯಲು ಏಕೆ ಒತ್ತಾಯಿಸುತ್ತಿಲ್ಲ?’ ಎಂದು ರಾಜ್ಯ ಬಿಜೆಪಿಯನ್ನು ಪ್ರಿಯಾಂಕ್ ಖರ್ಗೆ ತರಾಟೆಗೆ ತೆಗೆದುಕೊಂಡಿದ್ದಾರೆ.
ಕುರ್ಚಿ ಕಿತ್ತಾಟಕ್ಕಾಗಿ ದಿನಕ್ಕೊಬ್ಬೊಬ್ಬರು ದೆಹಲಿ ಯಾತ್ರೆ ಮಾಡುವ ರಾಜ್ಯ ಬಿಜೆಪಿ ನಾಯಕರು ರಾಜ್ಯದ ಹಿತಾಸಕ್ತಿಯ ವಿಷಯದಲ್ಲಿ ದೆಹಲಿ ನಾಯಕರನ್ನು ಯಾಕೆ ಭೇಟಿ ಮಾಡುವುದಿಲ್ಲ? ನಿಮಗೆ ಕರ್ನಾಟಕದ ಹಿತಾಸಕ್ತಿ ಮುಖ್ಯವೊ, ನಿಮ್ಮ ರಾಜಕೀಯ ಹಿತಾಸಕ್ತಿ ಮುಖ್ಯವೋ? ರಾಜ್ಯದ ಏಳಿಗೆಗೆ ಕೇಂದ್ರ ಸರ್ಕಾರ ಪೆಟ್ಟು ನೀಡುತ್ತಿದ್ದರೂ ನಡುಬಗ್ಗಿಸಿ ಶರಣಾಗತಿ ಸೂಚಿಸುವುದನ್ನು 'ಜನದ್ರೋಹಿ ಗುಲಾಮಗಿರಿ' ಎನ್ನದೆ ಬೇರೆ ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ ಎಂದು ಅವರು ಕಿಡಿಕಾರಿದ್ದಾರೆ.
ದೇಶದ ಬೆಳವಣಿಗೆಯಲ್ಲಿ ರಾಜ್ಯಗಳ ಪಾತ್ರ ಪ್ರಮುಖವಾಗಿರುತ್ತದೆ, ಜನಹಿತದ ಯೋಜನೆಗಳ ಜಾರಿ ಮಾಡುವುದು ರಾಜ್ಯಗಳ ಹೊಣೆಗಾರಿಕೆ, ರಾಜ್ಯದ ಸಂಪನ್ಮೂಲವನ್ನು ಕೇಂದ್ರ ಸರ್ಕಾರ ಹೀಗೆ ಕೊಳ್ಳೆ ಹೊಡೆದರೆ ರಾಜ್ಯ ಸರ್ಕಾರಗಳು ಏಕಿರಬೇಕು? ಏನು ಮಾಡಬೇಕು? ಬಿಜೆಪಿಗರಿಗೆ ಈ ಪ್ರಶ್ನೆಗಳು ಉದ್ಭವಿಸುವುದಿಲ್ಲವೇ? ಎಂದು ತಮ್ಮ ಎಕ್ಸ್ ಖಾತೆಯಲ್ಲಿ ರಾಜ್ಯ ಬಿಜೆಪಿ ನಾಯಕರನ್ನು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನೆ ಮಾಡಿದ್ದಾರೆ.
ಕೇಂದ್ರ ಸರ್ಕಾರವು ರಾಜ್ಯಕ್ಕೆ ಹಂಚಿಕೆ ಮಾಡುವ ತೆರಿಗೆ ಮತ್ತು ಅನುದಾನದಲ್ಲಿ ಕೇಂದ್ರ ಸರ್ಕಾರ ಮುಂದಾಗಿದೆ. ಬರುವ ಹಣಕಾಸು ವರ್ಷದಿಂದ ಶೇ.1 ರಷ್ಟನ್ನು ಅಂದರೆ ಈಗ ಕೊಡುತ್ತಿರುವ ಶೇ.41ರ ಬದಲಿಗೆ ಶೇ. 40ಕ್ಕೆ ಇಳಿಸಲು ಶಿಫಾರಸು ಮಾಡುವಂತೆ ಹಣಕಾಸು ಆಯೋಗಕ್ಕೆ ಕೊರಿಕೆ ಸಲ್ಲಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಹಣಕಾಸು ಆಯೋಗ ಅದನ್ನು ಪಾಲಿಸಿದಲ್ಲಿ ಈಗ ರಾಜ್ಯಗಳಿಗೆ ಕೇಂದ್ರದಿಂದ ಬರುತ್ತಿರುವ ತೆರಿಗೆ ಪಾಲಿನಲ್ಲಿ 35 ಸಾವಿರ ಕೋಟಿ ರೂಪಾಯಿಗಳಷ್ಟು ಕಡಿಮೆಯಾಗಲಿದೆ. ಹೀಗಾಗಿ ಕೇಂದ್ರಕ್ಕೆ ಹೆಚ್ಚಿನ ತೆರಿಗೆ ಕೊಡುತ್ತಿರುವ ದಕ್ಷಿಣ ಭಾರತದ ರಾಜ್ಯಗಳಲ್ಲಿ ಕೇಂದ್ರದ ಈ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.