
BJP Infighting | ವಿಜಯೇಂದ್ರ ಬದಲಾವಣೆ ಖಚಿತ: ವಿ. ಸೋಮಣ್ಣ ಬಿಜೆಪಿ ಮುಂದಿನ ರಾಜ್ಯಾಧ್ಯಕ್ಷ?
ರಾಜ್ಯ ಬಿಜೆಪಿಯಲ್ಲಿನ ಗೊಂದಲಗಳು ಕೊನೆಯಾಗುತ್ತಿಲ್ಲ. ಇನ್ನು 8-10 ದಿನಗಳಲ್ಲಿ ಎಲ್ಲ ಗೊಂದಲಗಳಿಗೆ ತೆರೆ ಎಳೆಯಲು ಬಿಜೆಪಿ ಹೈಕಮಾಂಡ್ ಮುಂದಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಬದಲಾವಣೆ ಖಚಿತ ಎನ್ನಲಾಗುತ್ತಿದೆ. ವಿ. ಸೋಮಣ್ಣ ಆಗಲಿದ್ದಾರಾ ಬಿಜೆಪಿ ಮುಂದಿನ ರಾಜ್ಯಾಧ್ಯಕ್ಷ?
ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನದ ಗೊಂದಲ ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ಬಜೆಪಿ ಅಧ್ಯಕ್ಷರಾಗಿ ಬಿ.ವೈ. ವಿಜಯೇಂದ್ರ ಮುಂದುವರೆಯುತ್ತಾರೋ? ಅಥವಾ ಬೇರೆಯವರ ನೇಮಕ ಆಗುತ್ತದೆಯಾ ಎಂಬ ಚರ್ಚೆ ರಾಜ್ಯ ಬಿಜೆಪಿಯಲ್ಲಿ ಜೀವಂತವಾಗಿದೆ. ಒಂದು ರೀತಿಯಲ್ಲಿ ಈ ವಿಷಯವನ್ನು ಹೈಕಮಾಂಡ್ ಮುಚ್ಚಿದ ಲಕೋಟೆಯಲ್ಲಿ ಇಟ್ಟಂತಾಗಿದೆ ಎಂಬ ಚರ್ಚೆಗಳು ಬಿಜೆಪಿ ವಲಯದಲ್ಲಿಯೇ ಕೇಳಿ ಬರುತ್ತಿವೆ.
ಹೀಗಾಗಿ ಬಿ.ವೈ. ವಿಜಯೇಂದ್ರ ಅವರನ್ನು ಬದಲಾವಣೆ ಮಾಡಿದರೆ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಯಾರು ನೇಮಕವಾಗುತ್ತಾರೆ? ಎಂಬ ಚರ್ಚೆ ಮತ್ತಷ್ಟು ಕುತೂಹಲ ಮೂಡಿಸಿದೆ. ಇದೇ ಸಂದರ್ಭದಲ್ಲಿ ಎಲ್ಲರನ್ನೂ ಸರಿದೂಗಿಸಿಕೊಂಡು ಹೋಗುವಂತಹ ಸಾಮರ್ಥ್ಯವಿರುವ ನಾಯಕನನ್ನು ಆಯ್ಕೆ ಮಾಡಲು ದೆಹಲಿ ವರಿಷ್ಠರು ಪ್ರಯತ್ನ ನಡೆಸಿದ್ದಾರೆ ಎಂಬ ಮಾಹಿತಿಯಿದೆ.
ಅಮಿತ್ ಶಾ ಭೇಟಿ ಮಾಡಿದ ರಾಜ್ಯ ನಾಯಕರು
ಇದಕ್ಕೆ ಪೂರಕವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೇಂದ್ರ ಜಲಶಕ್ತಿ ಸಚಿವಾಲಯ ಮತ್ತು ರೈಲ್ವೆ ಸಚಿವಾಲಯದ ರಾಜ್ಯ ಸಚಿವ ವಿ. ಸೋಮಣ್ಣ ಅವರೊಂದಿಗೆ ಫೆ.11ರಂದು ಚರ್ಚೆ ಮಾಡಿದ್ದಾರೆ. ಜೊತೆಗೆ ಮಾಜಿ ಡಿಸಿಎಂ ಹಾಗೂ ಸಂಸದ ಗೋವಿಂದ್ ಕಾರಜೋಳ ಅವರೂ ಕೂಡ ಅಮಿತ್ ಶಾ ಭೇಟಿ ಮಾಡಿರುವುದು ಈ ಕುತೂಹಲ ಮತ್ತಷ್ಟು ಹೆಚ್ಚಾಗಲು ಕಾರಣವಾಗಿದೆ.
ಈ ಭೇಟಿಗೂ ಮೊದಲು ಫೆ.10 ರಂದು ವಿ. ಸೋಮಣ್ಣ ಅವರನ್ನು ಭೇಟಿ ಮಾಡಿದ್ದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಇತರರು ಚರ್ಚೆ ನಡೆಸಿದ್ದರು. ಜೊತೆಗೆ ಶೋಕಾಸ್ ನೋಟಿಸ್ ಹೊರತಾಗಿಯೂ ಬಿಜೆಪಿ ರೆಬೆಲ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಟೀಮ್ ತಮ್ಮ ಪಟ್ಟನ್ನು ಈವರೆಗೂ ಸಡಿಲಿಸಿಲ್ಲ. ವಿಜಯೇಂದ್ರ ಬದಲಾವಣೆ ಆಗಲೇಬೇಕು ಎಂಬ ಒತ್ತಡ ಹೈಕಮಾಂಡ್ ಮೇಲೆ ಹೆಚ್ಚಾಗುತ್ತಲಿದೆ. ಹೀಗಾಗಿ ಅಮಿತ್ ಶಾ ರಾಜ್ಯ ಬಿಜೆಪಿ ನಾಯಕರನ್ನು ಭೇಟಿ ಮಾಡಿ ರಾಜ್ಯ ಬಿಜೆಪಿಯಲ್ಲಿನ ಅಸಮಾಧಾನದ ಕುರಿತು ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ.
ಸದ್ಯಕ್ಕೆ ಅಸಮಾಧಾನ ಶಮನವಾಗಬೇಕು
ಸದ್ಯಕ್ಕೆ ಯಾವುದೇ ಮಹತ್ವದ ಚುನಾವಣೆಗಳು ಬಿಜೆಪಿ ಮುಂದಿಲ್ಲ. ಬಿಬಿಎಂಪಿ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಹೊರತುಪಡಿಸಿದರೆ ರಾಜಕೀಯವಾಗಿ ದೊಡ್ಡ ಸವಾಲುಗಳು ಬಿಜೆಪಿ ಹೈಕಮಾಂಡ್ ಮುಂದಿಲ್ಲ. ಆದರೆ 2028 ರ ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ಸಿದ್ಧತೆ ಮಾಡಿಕೊಂಡರೆ ಉತ್ತಮ ಎಂಬ ಮುಂದಾಲೋಚನೆ ದೆಹಲಿ ಬಿಜೆಪಿ ವರಿಷ್ಠರದ್ದಾಗಿದೆ.
ಆದರೆ ಯಾರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದರೆ ಎಲ್ಲರೂ ಒಪ್ಪುತ್ತಾರೆ ಎಂಬ ತೀರ್ಮಾನಕ್ಕೆ ಹೈಕಮಾಂಡ್ ಬಂದಿದೆ ಎನ್ನಲಾಗಿದೆ. ಆದ್ದರಿಂದಲೇ ವಿಜಯೇಂದ್ರ ಅವರ ಸ್ಥಾನಕ್ಕೆ ಲಿಂಗಾಯತ ಸಮುದಾಯದ ನಾಯಕರೊಬ್ಬರನ್ನು ಕೂರಿಸಲು ಹೈಕಮಾಂಡ್ ಮುಂದಾಗಿದೆ. ಈ ಹಿನ್ನೆಲೆಯಲ್ಲೇ ವಿ. ಸೋಮಣ್ಣ ಹಾಗೂ ಗೋವಿಂದ ಕಾರಜೋಳ ಅವರೊಂದಿಗೆ ಅಮಿತ್ ಶಾ ಮಾತನಾಡಿದ್ದಾರೆ. ಭೇಟಿ ಸಂದರ್ಭದಲ್ಲಿ ರಾಜ್ಯ ಬಿಜೆಪಿಯ ಆಂತರಿಕ ವಿಚಾರಗಳನ್ನು ಕೂಲಂಕುಷವಾಗಿ ಚರ್ಚೆ ಮಾಡಿದ್ದಾರೆ ಎಂಬ ಮಾಹಿತಿಯಿದೆ.
ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ವಿ. ಸೋಮಣ್ಣ ಆಯ್ಕೆ?
ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ವಿ. ಸೋಮಣ್ಣ ಅವರನ್ನು ರಾಜ್ಯ ಬಿಜೆಪಿ ಅಧ್ಯಕ್ಷರನ್ನಾಗಿ ಮಾಡಲು ಬಿಜೆಪಿ ಹೈಕಮಾಂಡ್ ತೀರ್ಮಾನಿಸಿದೆ ಎಂಬ ಮಾಹಿತಿಯಿದೆ. ಸೋಮಣ್ಣ ಹಿರಿಯ ನಾಯಕರಾಗಿರುವುದರಿಂದ ಅವರ ನೇಮಕಕ್ಕೆ ಬಹುತೇಕ ಯಾರ ವಿರೋಧವೂ ಬರುವುದಿಲ್ಲ. ಮಾಜಿ ಸಿಎಂ ಯಡಿಯೂರಪ್ಪ ವಿರೋಧಿಸಿದರೂ ಅವರನ್ನು ಸಮಾಧಾನ ಮಾಡಲು ಹೈಕಮಾಂಡ್ ಮಾತುಕತೆ ಮಾಡುವ ಸಾಧ್ಯತೆಯಿದೆ. ಚುನಾವಣೆ ವರ್ಷದಲ್ಲಿ ಮತ್ತೆ ರಾಜ್ಯ ಬಿಜೆಪಿ ಅಧ್ಯಕ್ಷರ ನೇಮಕ ಮಾಡುವಾಗ ವಿಜಯೇಂದ್ರಗೆ ಮತ್ತೆ ಅವಕಾಶ ಕೊಡುವ ಭರವಸೆ ಹೈಕಮಾಂಡ್ ಕೊಡಲಿದೆ ಎನ್ನಲಾಗಿದೆ.
ಜೊತೆಗೆ ಸಂಘಟನೆಯಲ್ಲಿ ವಿ. ಸೋಮಣ್ಣ ಅವರಿಗೆ ಅಗಾಧವಾದ ಶಕ್ತಿ ಇರುವುದು ಬಿಜೆಪಿ ಹೈಕಮಾಂಡ್ಗೆ ಗೊತ್ತಿರದ ವಿಚಾವೇನಲ್ಲ. ಹೀಗಾಗಿ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದರೆ ಎಲ್ಲರನ್ನೂ ಸರಿದೂಗಿಸಿಕೊಂಡು ಹೋಗುತ್ತಾರೆ ಎಂಬ ಚಿಂತನೆ ದೆಹಲಿ ನಾಯಕರಲ್ಲಿದೆ. ಜೊತೆಗೆ ಯತ್ನಾಳ್ ಹಾಗೂ ಬಿಜೆಪಿ ತಟಸ್ಥ ಬಣವನ್ನೂ ವಿಶ್ವಾಸಕ್ಕೆ ತೆಗೆದುಕೊಂಡಂತೆ ಆಗುತ್ತದೆ ಎಂಬ ತೀರ್ಮಾನಕ್ಕೆ ಬಿಜೆಪಿ ಹೈಕಮಾಂಡ್ ಬಂದಿದೆ ಎಂದು ಹೆಸರು ಹೇಳಲು ಇಚ್ಛಿಸದ ರಾಜ್ಯ ಬಿಜೆಪಿ ನಾಯಕರು ಮಾಹಿತಿ ನೀಡಿದ್ದಾರೆ.
ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿಗೆ ಸಹಾಯ
ವಿ. ಸೋಮಣ್ಣ ಹಿರಿಯ ನಾಯಕ ಆಗಿರುವುದರಿಂದ, ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಿದರೆ ಬಹುತೇಕ ಅಸಮಾಧಾನ ತಣಿಯುತ್ತದೆ. ಜೊತೆಗೆ ಬಿಬಿಎಂಪಿ ಚುನಾವಣೆ ಗೆಲ್ಲಲು ಕೂಡ ಸಹಾಯವಾಗುತ್ತದೆ ಎಂಬ ಲೆಕ್ಕಚಾರ ಬಿಜೆಪಿ ಹೈಕಮಾಂಡ್ ಮಾಡಿಕೊಂಡಿದೆ.
ಬಿಬಿಎಂಪಿ ಚುನಾವಣೆಯಲ್ಲಿ ವಿಪಕ್ಷ ನಾಯಕ ಆರ್. ಅಶೋಕ್ ಹಾಗೂ ವಿ. ಸೋಮಣ್ಣ ಬಿಜೆಪಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಹೀಗಾಗಿ ಅದರಿಂದ ಪಕ್ಷಕ್ಕೆ ಲಾಭವಾಗುತ್ತದೆ. ನಂತರ 2028ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮತ್ತೆ ರಾಜ್ಯಾಧ್ಯಕ್ಷರ ಬದಲಾವಣೆ ಮಾಡುವುದು ಸದ್ಯದ ಬಿಜೆಪಿ ಹೈಕಮಾಂಡ್ ಲೆಕ್ಕಾಚಾರ.
ಹತ್ತು ದಿನಗಳಲ್ಲಿ ಎಲ್ಲವೂ ಪರಿಹಾರವಾಗಲಿದೆ
ಇದೇ ವಿಚಾರಕ್ಕೆ ಸಂಬಂಧಿಸಿದಂತೆ 'ದ ಫೆಡರಲ್ ಕರ್ನಾಟಕ'ದೊಂದಿಗೆ ಮಾತನಾಡಿರುವ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್, 'ಮುಂದಿನ 8-10 ದಿನಗಳಲ್ಲಿ ರಾಜ್ಯ ಬಿಜೆಪಿಯಲ್ಲಿನ ಎಲ್ಲ ಗೊಂದಲಗಳು ಕೊನೆಯಾಗಲಿವೆ. ಅದಕ್ಕಿಂತ ಹೆಚ್ಚು ಏನೂ ಇಲ್ಲ' ಎಂದು ಸೂಕ್ಷ್ಮವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಹೀಗಾಗಿ ಅಸಮಾಧಾನಕ್ಕೆ ಇತಿಶ್ರೀ ಹಾಡಲು ಬಿಜೆಪಿ ಹೈಕಮಾಂಡ್ ಸಿದ್ಧವಾಗಿದೆ. ವಿ. ಸೋಮಣ್ಣ ಕೇಂದ್ರ ಸರ್ಕಾರದಲ್ಲಿ ರಾಜ್ಯ ಖಾತೆ ಸಚಿವರಾಗಿದ್ದಾರೆ. ಅದಕ್ಕಿಂತ ಹೆಚ್ಚಿನ ಜವಾಬ್ದಾರಿ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ್ದಾಗಿದೆ. ಅದರೊಂದಿಗೆ ಲಿಂಗಾಯತ ಸಮುದಾಯದ ಬೆಂಬಲ ಕೂಡ ವಿ. ಸೋಮಣ್ಣ ಅವರಿಗಿದೆ. ಈ ಎಲ್ಲ ಲೆಕ್ಕಾಚಾರಗಳ ಹಿನ್ನೆಲೆಯಲ್ಲಿ ವಿ. ಸೋಮಣ್ಣ ರಾಜ್ಯ ಬಿಜೆಪಿ ಅಧ್ಯಕ್ಷರಾಗುವುದು ಬುಹತೇಕ ಖಚಿತವಾಗಿದೆ ಎನ್ನಲಾಗುತ್ತಿದೆ.