Lok Sabha Election | ಬಿಜೆಪಿ ಪರಿಶೀಲನಾ ಸಭೆಯಲ್ಲಿ  ಆತಂಕ ತಂದ ಫಲಿತಾಂಶದ ಲೆಕ್ಕಾಚಾರ
x

Lok Sabha Election | ಬಿಜೆಪಿ ಪರಿಶೀಲನಾ ಸಭೆಯಲ್ಲಿ ಆತಂಕ ತಂದ ಫಲಿತಾಂಶದ ಲೆಕ್ಕಾಚಾರ

ಕರಾವಳಿ, ಮಲೆನಾಡು, ಹಳೇ ಮೈಸೂರು ಪ್ರದೇಶ, ಮಧ್ಯ ಮತ್ತು ಉತ್ತರ ಕರ್ನಾಟಕ ಸೇರಿದಂತೆ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾದ ಅಂಶಗಳನ್ನು ಪತ್ತೆಮಾಡಲು ಯತ್ನಿಸಲಾಗಿದೆ. ಮುಖ್ಯವಾಗಿ ಬಿ.ಎಸ್‌. ಯಡಿಯೂರಪ್ಪ ಪಾಳೆಯ ಮತ್ತು ಬಿಎಸ್‌ವೈ ವಿರೋಧಿ ಪಾಳಯದ ಚಟುವಟಿಕೆಗಳೂ ಋಣಾತ್ಮಕ ಪರಿಣಾಮಗಳನ್ನು ಬೀರಿದೆ ಎಂದು ಪಕ್ಷದ ಆಂತರಿಕ ಪರಿಶೀಲನಾ ಸಭೆಯಲ್ಲಿ ಅಂದಾಜಿಸಲಾಗಿದೆ.


ಕರ್ನಾಟಕದಲ್ಲಿ ಇತ್ತೀಚೆಗೆ ನಡೆದ ಎರಡು ಹಂತದ ಲೋಕಸಭೆ ಚುನಾವಣೆಯಲ್ಲಿ ಮೇಲ್ನೋಟಕೆ ಹಿನ್ನಡೆಯಾಗಿದೆ ಎಂದು ರಾಜ್ಯ ಬಿಜೆಪಿ ಇತ್ತೀಚೆಗೆ ನಡೆಸಿದ ಪರಿಶೀಲನಾ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ. ಕ್ಷೇತ್ರವಾರು ಹಿನ್ನಡೆಗೆ ಐದು ಪ್ರಮುಖ ಕಾರಣಗಳನ್ನು ನಾಯಕರು ಪಟ್ಟಿ ಮಾಡಿದ್ದು ಮತ್ತು ಪಕ್ಷದೊಳಗಿನ ಬಣಗಳನ್ನು ಮತ್ತು ರಾಜ್ಯದಲ್ಲಿ ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳ ಪ್ರಮುಖವಾದವುಗಳು ಎಂದು ಗುರುತಿಸಲಾಗಿದೆ ಎನ್ನಲಾಗಿದೆ.

2019 ರ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ 25 ಕ್ಷೇತ್ರಗಳನ್ನು ಗೆದ್ದಿರುವ ಪಕ್ಷವು ಈಗ ಸಂಖ್ಯಾಬಲದ ಕುಸಿತ ಸಾಧ್ಯತೆ ಬಗ್ಗೆ ಚಿಂತಿಸುವಂತಾಗಿದೆ.ಮೈತ್ರಿಕೂಟದ ಪಾಲುದಾರ ಜೆಡಿಎಸ್ ಸಹ ಕಾಂಗ್ರೆಸ್ ಅಭ್ಯರ್ಥಿಗಳಿಂದ ಕಠಿಣ ಸವಾಲನ್ನು ಎದುರಿಸುತ್ತಿದೆ ಮತ್ತು ಇದು ಬಿಜೆಪಿ ಮತ್ತು ಜೆಡಿಎಸ್ 14 ಸ್ಥಾನಗಳನ್ನು ಕಳೆದುಕೊಳ್ಳಲು ಕಾರಣವಾಗಬಹುದು. ಅಲ್ಲದೆ, ಇನ್ನು 8 ಸ್ಥಾನಗಳ ಅವಕಾಶಗಳು ಬಿಜೆಪಿಗೆ ಅಷ್ಟೇನೂ ಹಿತಕರವಾಗಿಲ್ಲ ಎನ್ನಲಾಗಿದೆ. "ನಾವು ಋಣಾತ್ಮಕ ಅಂಶಗಳನ್ನು ಹೆಚ್ಚಾಗಿ ಗಮನಿಸುದ್ದೇವೆ, ಆದರೆ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.‌ ಆದರೆ ಹಿಂದಿನ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಸಂಖ್ಯೆಗಳು ಕಡಿಮೆಯಾಗುವ ಸಂಭವ ಹೆಚ್ಚಿದೆ ಎಂದು ಹೆಸರು ಹೇಳಲು ಇಚ್ಛಿಸದ ನಾಯಕರೊಬ್ಬರು ದ ಫೆಡರಲ್‌ ಕರ್ನಾಟಕಕ್ಕೆ ತಿಳಿಸಿದ್ದಾರೆ.

ಆದಾಗ್ಯೂ, ಕರಾವಳಿ, ಮಲೆನಾಡು, ಹಳೇ ಮೈಸೂರು ಪ್ರದೇಶ, ಮಧ್ಯ ಮತ್ತು ಉತ್ತರ ಕರ್ನಾಟಕ ಸೇರಿದಂತೆ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾದ ಅಂಶಗಳನ್ನು ಪತ್ತೆಮಾಡಲು ಯತ್ನಿಸಲಾಗಿದೆ. ಮುಖ್ಯವಾಗಿ ಬಿ.ಎಸ್‌. ಯಡಿಯೂರಪ್ಪ ಪಾಳೆಯದ ಮತ್ತು ಬಿಎಸ್‌ವೈ ವಿರೋಧಿ ಪಾಳಯದ ಚಟುವಟಿಕೆಗಳೂ ಋಣಾತ್ಮಕ ಪರಿಣಾಮಗಳನ್ನು ಬೀರಿದೆ. ಇದು ಚುನಾವಣೆ ಮೇಲೆ ನೇರ ಪರಿಣಾಮ ಬೀರಿರುವ ಸಾಧ್ಯತೆ ಇಲ್ಲದಿಲ್ಲ ಎಂದು ಪಕ್ಷದ ಆಂತರಿಕ ಪರಿಶೀಲನಾ ಸಭೆಯಲ್ಲಿ ಅಂದಾಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪ್ರದೇಶವಾರು ಸಮಸ್ಯೆಗಳು

ಕರಾವಳಿ ಪ್ರದೇಶದಲ್ಲಿ ಬಿಜೆಪಿಗೆ ಸಾಂಪ್ರದಾಯಿಕವಾಗಿ ನಿಷ್ಠಾವಂತ ಬೆಂಬಲಿಗರಾದ ಬಿಲ್ಲವ ಸಮುದಾಯದಿಂದ ಮಹತ್ವದ ಸವಾಲು ಎದುರಾಗಿದೆ. ಆದಾಗ್ಯೂ, ನಾಯಕತ್ವ ಸಿಗದೆ ಆ ಸಮೂದಾಯದೊಳಗಿನ ಆಂತರಿಕ ಅಸಮಾಧಾನವು ಅದರ ವಿಭಜನೆಗೆ ಕಾರಣವಾಗಿರುವ ಸಾಧ್ಯತೆ ಇದೆ. ಉಮಾನಾಥ ಕೋಟ್ಯಾನ್ ಸೇರಿದಂತೆ ಸ್ಥಳೀಯ ಬಿಜೆಪಿ ಮುಖಂಡರು ಪಕ್ಷ ಭೇದವಿಲ್ಲದೆ ಬಿಲ್ಲವ ನಾಯಕರನ್ನು ಬೆಂಬಲಿಸುವಂತೆ ಬಹಿರಂಗವಾಗಿ ಪ್ರತಿಪಾದಿಸಿದ್ದರು. ಈ ಬೆಳವಣಿಗೆ ಬಿಜೆಪಿಯ ಚುನಾವಣಾ ಭದ್ರಕೋಟೆಗೆ ಧಕ್ಕೆ ತರುವ ಸಾಧ್ಯತೆ ಇದೆ. ಹೆಚ್ಚುವರಿಯಾಗಿ, ಉತ್ತರ ಕನ್ನಡದಲ್ಲಿ ಬಿಜೆಪಿ ನಾಯಕ ಅನಂತ್ ಕುಮಾರ್ ಹೆಗಡೆಯವರ ಭಿನ್ನಾಭಿಪ್ರಾಯವು ಪಕ್ಷದ ಅಭ್ಯರ್ಥಿಗೆ ಹಾನಿಕಾರಕವೆಂದು ಗ್ರಹಿಸಲಾಗಿದೆ ಎಂದು ಅಂದಾಜಿಸಲಾಗಿದೆ.

ಮಲೆನಾಡು ಭಾಗದಲ್ಲಿ ನಾಯಕತ್ವದ ಬಿಕ್ಕಟ್ಟು ಬಿಜೆಪಿ ನಾಯಕರ ನಡುವೆ ಘರ್ಷಣೆಗೆ ಕಾರಣವಾಗಿದೆ. ಬಿಎಸ್ ಯಡಿಯೂರಪ್ಪ ನೇತೃತ್ವದ ಬಣಕ್ಕೆ ಸವಾಲೆಸೆದ ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಮತ್ತು ಡಿಸಿಎಂ ಕೆಎಸ್ ಈಶ್ವರಪ್ಪ ಅವರು ಬಿಜೆಪಿ ಅಭ್ಯರ್ಥಿ ಬಿವೈ ರಾಘವೇಂದ್ರ ವಿರುದ್ಧ ಬಂಡಾಯದ್ದು ಸ್ಪರ್ಧಿಸಿದ್ದಾರೆ. ಬಿಎಸ್‌ವೈ ಪುತ್ರರಾದ ರಾಘವೇಂದ್ರ ಮತ್ತು ವಿಜಯೇಂದ್ರ ಇಬ್ಬರೂ ಪಕ್ಷದೊಳಗೆ ಪ್ರಮುಖ ಸ್ಥಾನಗಳನ್ನು ಹೊಂದಿದ್ದು ಈಶ್ವರಪ್ಪ ಅವರು ಯಡಿಯೂರಪ್ಪ ಕುಟುಂಬದ ಸೋಲಿಗೆ ಪಣತೊಟ್ಟಿದ್ದಾರೆ. ಇದು ಕಾಂಗ್ರೆಸ್‌ಗೆ ಸಹಕಾರಿಯಾಗುವ ಸಾಧ್ಯತೆ ಇದೆ.

ಮಧ್ಯ ಕರ್ನಾಟಕದಲ್ಲಿ ದಾವಣಗೆರೆ ಕ್ಷೇತ್ರ ಸೇರಿದಂತೆ ಹಲವೆಡೆ ಲಿಂಗಾಯತ ಮತಗಳ ವಿಭಜನೆ ಮತ್ತು ಕುರುಬ ಮತ್ತು ದಲಿತ ಮತಗಳು ಕಾಂಗ್ರೆಸ್‌ನತ್ತ ಕ್ರೋಢೀಕರಿಸುವುದು ಬಿಜೆಪಿಯ ಅವಕಾಶಗಳಿಗೆ ಹೊಡೆತ ನೀಡಬಹುದು. ಚಿತ್ರದುರ್ಗದಂತಹ ಕ್ಷೇತ್ರಗಳಲ್ಲಿಯೂ ದಲಿತರು (ಎಡ) ಮತ್ತು ದಲಿತ (ಬಲ) ಒಗ್ಗಟ್ಟಾಗಿ ಒಂದೇ ಪಕ್ಷಕ್ಕೆ ಬೆಂಬಲ ನೀಡಿರುವ ಲಕ್ಷಣಗಳು ಕಂಡುಬಂದಿದೆ.ಅಲ್ಲದೆ, ದಲಿತ ಎಡಗೈ ಮುಖಂಡ ಮತ್ತು ಕೇಂದ್ರ ರಾಜ್ಯ ಸಚಿವ ಎ ನಾರಾಯಣ ಸ್ವಾಮಿ ಅವರಿಗೆ ಚಿತ್ರದುರ್ಗದಿಂದ ಟಿಕೆಟ್ ನಿರಾಕರಿಸಲಾಗಿದ್ದು, ಅವರ ದಲಿತ (ಎಡ) ಸಮುದಾಯಗಳು ಪಕ್ಷದ ವಿರುದ್ಧ ಹೋಗಬಹುದು ಎಂದು ಬಿಜೆಪಿಯ ಮಾಜಿ ಸಚಿವರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಉತ್ತರ ಕರ್ನಾಟಕದಲ್ಲಿ, ಕಾಂಗ್ರೆಸ್ ತನ್ನ ಭದ್ರಕೋಟೆಯನ್ನು ಉಳಿಸಿಕೊಂಡಿದೆ, ವಿಶೇಷವಾಗಿ ಲಿಂಗಾಯತ ಸಮುದಾಯದ ಒಂದು ಭಾಗ 2023 ರ ವಿಧಾನಸಭಾ ಚುನಾವಣೆಯಲ್ಲಿ ನಿಷ್ಠೆಯನ್ನು ಬದಲಾಯಿಸಿದ್ದು, ಇದು ಮುಂದುವರಿದಿದ್ದೇ ಆದಲ್ಲಿ ಬಿಜೆಪಿಗೆ ಸವಾಲಾಗಿದೆ. ಧಾರವಾಡದಲ್ಲಿ ‘ಬ್ರಾಹ್ಮಣ’ ಅಭ್ಯರ್ಥಿ ವಿಚಾರವಾಗಿ ಲಿಂಗಾಯತ ಸ್ವಾಮೀಜಿ ದಿಂಗಾಲೇಶ್ವರ ಅವರ ಬಿಜೆಪಿಗಿದ್ದ ಲಿಂಗಾಯಿತರ ಬೆಂಬಲವನ್ನು ಮತ್ತಷ್ಟು ದುರ್ಬಲಗೊಳಿಸುತ್ತದೆ. ಮೇಲಾಗಿ ಧಾರವಾಡ ಕ್ಷೇತ್ರದ ಆಕಾಂಕ್ಷಿಯಾಗಿದ್ದ ಮಾಜಿ ಸಿಎಂ ಜಗದೀಶ ಶೆಟ್ಟರ್‌ಗೆ ಟಿಕೆಟ್ ನಿರಾಕರಿಸಿರುವುದು ಬಿಜೆಪಿಯ ಅಧಿಕೃತ ಅಭ್ಯರ್ಥಿ ಪ್ರಲ್ಹಾದ ಜೋಶಿ ವಿರುದ್ಧ ಲಿಂಗಾಯಿತರು ನಿಲ್ಲಬಹುದ ಎಂದು ತರ್ಕಿಸಲಾಗಿದೆ. ಉತ್ತರ ಕರ್ನಾಟಕದಲ್ಲಿ ದಲಿತ ಮತ್ತು ಮುಸ್ಲಿಂ ಮತಗಳನ್ನು ಕ್ರೋಢೀಕರಿಸುವಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಪ್ರಭಾವದ ಜೊತೆಗೆ ಈ ಡೈನಾಮಿಕ್ಸ್ ಬಿಜೆಪಿಗೆ ಗಮನಾರ್ಹ ಸವಾಲುಗಳನ್ನು ಒಡ್ಡುತ್ತದೆ.

ಹಳೆ ಮೈಸೂರು ಭಾಗದಲ್ಲಿ ಬಿಜೆಪಿಗೆ ಮತ್ತೆ ಸ್ಥಳೀಯ ನಾಯಕತ್ವದ ಸಮಸ್ಯೆ ಎದುರಾಗಿದ್ದು, ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆ. ಈ ಪ್ರದೇಶದಲ್ಲಿ ಡಿಕೆ ಶಿವಕುಮಾರ್ ಅವರ ಒಕ್ಕಲಿಗ ನಾಯಕತ್ವ ಮತ್ತು ಅಹಿಂದ ನಾಯಕ ಮತ್ತು ಸಿಎಂ ಸಿದ್ದರಾಮಯ್ಯನವರ ನೆಲೆಯು ಬಿಜೆಪಿಗೆ ಆತಂಕಕಾರಿ ಅಂಶವಾಗಿದೆ. ಈ ಭಾಗದಲ್ಲಿ ಬಿಜೆಪಿಗೆ ಉತ್ತಮ ನಾಯಕತ್ವ ಇಲ್ಲದಿರುವುದರಿಂದ ಇದರ ಪರಿಣಾಮ ಬಿಜೆಪಿ-ಜೆಡಿಎಸ್ ಮೈತ್ರಿ ಮೇಲೆ ಬೀಳಲಿದೆ ಎನ್ನಲಾಗಿದೆ. ಬಿಜೆಪಿಯಿಂದ ಪ್ರತಾಪ್ ಸಿಂಹ, ಸುಮಲತಾ ಸೇರಿದಂತೆ ಟಿಕೆಟ್ ವಂಚಿತ ನಾಯಕರಲ್ಲಿ ಅತೃಪ್ತಿ ಮೂಡಿದ್ದು, ಅವರ ಮೌನ ಬಿಜೆಪಿ-ಜೆಡಿಎಸ್ ಮೈತ್ರಿಗೆ ದಕ್ಕೆಯಾಗಿದೆ ಎಂದು ಸಭೆಯಲ್ಲಿ ಪರಾಮರ್ಶಿಸಲಾಗಿದೆ ಎನ್ನಲಾಗಿದೆ.

ಬಣಗಳು

ಪಕ್ಷವು ಎರಡು ಬಣಗಳನ್ನು ಅಂದರೆ ಬಿಎಸ್ ಯಡಿಯೂರಪ್ಪ ಪಾಳಯ ಮತ್ತು ಬಿಎಸ್‌ವೈ ವಿರೋಧಿ ಪಾಳೆಯವನ್ನು ಹೊಂದಿದೆ. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋತ ನಂತರ ಪಕ್ಷದ ಹೈಕಮಾಂಡ್ ಯಡಿಯೂರಪ್ಪ ಅವರಿಗೆ ಪ್ರಾಮುಖ್ಯತೆಯನ್ನು ನೀಡಿದ್ದು, ಇದು ಪಕ್ಷಕ್ಕೆ ಕನಿಷ್ಠ ಲಿಂಗಾಯತ ಮತಗಳನ್ನು ಕ್ರೋಢೀಕರಿಸಲು ಸಹಾಯ ಮಾಡುತ್ತದೆ. ಆದರೆ, ಬಿಎಸ್ ವೈಗೆ ಪ್ರಾಮುಖ್ಯತೆ ನೀಡಿ ಮಗನನ್ನು ರಾಜ್ಯ ಬಿಜೆಪಿ ಅಧ್ಯಕ್ಷರನ್ನಾಗಿ ಮಾಡಿರುವುದು ಸಿ.ಟಿ.ರವಿ, ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ ಮೊದಲಾದ ಬಿಎಸ್ ವೈ ವಿರೋಧಿ ತಂಡಕ್ಕೆ ಅಸಮಾಧಾನ ತಂದಿದೆ. ಎರಡು ಬಣಗಳ ನಡುವೆ ಸಮನ್ವಯತೆ ಇಲ್ಲ ಎಂದು ಪರಿಶೀಲನಾ ವರದಿ ವಿಶ್ಲೇಷಿಸಿದೆ. ಇದರ ಪರಿಣಾಮ ರಾಜ್ಯಮಟ್ಟದಲ್ಲಿ ಪಕ್ಷಕ್ಕೆ ಅನನುಕೂಲ ವಾತಾವರಣ ಸೃಷ್ಟಿ ಮಾಡಿದೆ ಎಂದು ವ್ಯಾಖ್ಯಾನಿಸಲಾಗಿದೆ.

ಕಾಂಗ್ರೆಸ್ ಒಗ್ಗಟ್ಟು:

ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರ ಆಕ್ರಮಣಕಾರಿ ಚುನಾವಣಾ ಪ್ರಚಾರದ ವೇಳೆ ಬಿಜೆಪಿ 28 ರಲ್ಲಿ 25 ಸ್ಥಾನಗಳನ್ನು ಹೊಂದಿದ್ದರೂ ಆ ಪಕ್ಷದ ಸಂಸದರು ಕರ್ನಾಟಕವನ್ನು ನಿರ್ಲಕ್ಷಿಸಿದ್ದಾರೆ ಎಂದು ಟೀಕಿಸಿರುವುದು ಜನರ ಮೇಲೆ ಪ್ರಭಾವ ಸೃಷ್ಟಿಸುವ ಅವಕಾಶವಿದೆ. ಅವರು ಕೇಂದ್ರ ಸರ್ಕಾರದ ನಿಧಿ ಹಂಚಿಕೆ ಮತ್ತು ತೆರಿಗೆ ಹಂಚಿಕೆಯಲ್ಲಿ ಕರ್ನಾಟಕವನ್ನು ಅವಗಣನೆ ಮಾಡಿರುವುದನ್ನು ಗುರಿಯಾಗಿಸಿ ಬಿಜೆಪಿ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಿದರು. ಆದರೆ ಯಶಸ್ವಿ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಚುನಾವಣೆ ವೇಳೆ ಹೆಚ್ಚು ಗಮನಸೆಳೆಯುವಂತೆ ಮಾಡಿರುವುದು ಹಾಗೂ ಚುನಾವಣಾ ಸಂಪನ್ಮೂಲವನ್ನು ಕಾಂಗ್ರೆಸ್‌ ಕ್ರೋಢೀಕರಿಸಿರುವ ರೀತಿ ಕಾಂಗ್ರೆಸ್‌ಗೆ ವರದಾನವಾದಂತಿದೆ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ ಎಂದು ಮೂಲಗಳು ತಿಳಿಸಿವೆ. ಜತೆಗೆ ಒಂಬತ್ತು ಲೋಕಸಭಾ ಅಭ್ಯರ್ಥಿಗಳು ನೇರವಾಗಿ ಕಾಂಗ್ರೆಸ್‌ ಸರ್ಕಾರದ ಮಂತ್ರಿಗಳ ಸಂಬಂಧಿಕರಾಗಿದ್ದು, ಚುನಾವಣಾ ಸಂಪನ್ಮೂಲ ಹೊಂದಾಣಿಕೆಗೆ ಹೆಚ್ಚು ಅನುಕೂಲ ಮಾಡಿಕೊಟ್ಟಿದೆ ಎನ್ನಲಾಗಿದೆ.

ಪೆನ್‌ಡ್ರೈವ್ ಕೇಸ್:

ಹಿಂದೂ ಯುವತಿಯೊಬ್ಬಳಿಗೆ ಮುಸ್ಲಿಂ ಯುವಕ ಚಾಕುವಿನಿಂದ ಇರಿದ ಘಟನೆಯ ನಂತರ ಬಿಜೆಪಿ ಹಿಂದುತ್ವದ ವಿಚಾರಗಳನ್ನು ಎತ್ತಿ ಚುನಾವಣಾ ವಿಷಯವನ್ನಾಗಿ ಮಾಡಲು ಪ್ರಯತ್ನಿಸಿದಾಗ, ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಪೆನ್ ಡ್ರೈವ್ ಸೆಕ್ಸ್ ಹಗರಣ ಕಾಂಗ್ರೆಸ್‌ಗೆ ವರದಾನವಾದಂತೆ ಮಾಡಿದೆ. ಇದು ಹಾಸನ ಲೋಕಸಭಾ ಚುನಾವಣೆಯ ಮೇಲೆ ಮಾತ್ರ ಪರಿಣಾಮ ಬೀರಿಲ್ಲ,ಆದರೆ ಕರ್ನಾಟಕದಾದ್ಯಂತ ವಿಶೇಷವಾಗಿ ಮಹಿಳಾ ಸಮೂಹಗಳ ಮೇಲೆ ಪ್ರಭಾವ ಬೀರಿದೆ. ಇದು ಖಂಡಿತವಾಗಿಯೂ ಬಿಜೆಪಿ ಮತಗಳಿಕೆಗೆ ಹೊಡೆತ ನೀಡಲಿದೆ ಎಂದು ಅದೇ ಪಕ್ಷದ ನಾಯಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಖಾತರಿ ಯೋಜನೆಗಳು:

ಐದು ಖಾತರಿ ಯೋಜನೆಗಳು, ವಿಶೇಷವಾಗಿ ಮಹಿಳೆಯರಿಗೆ ಉಚಿತ ಬಸ್ ಮತ್ತು ಕುಟುಂಬದ ಮಹಿಳಾ ಮುಖ್ಯಸ್ಥರಿಗೆ ರೂ 2000, ಗ್ರಾಮೀಣ ಮಹಿಳಾ ಜನಸಾಮಾನ್ಯರ ಮೇಲೆ ದೊಡ್ಡ ಪ್ರಭಾವವನ್ನು ಸೃಷ್ಟಿಸಿತು. ಅಲ್ಲದೆ, ನಿರುದ್ಯೋಗಿ ಡಿಪ್ಲೊಮಾ ಹೊಂದಿರುವವರು ಮತ್ತು ಪದವಿ ಹೊಂದಿರುವವರಿಗೆ ಕ್ರಮವಾಗಿ ರೂ 1,500 ಮತ್ತು ರೂ 3000 ಹಾಗೂ ಬಡವರಿಗೆ ಉಚಿತ ಅಕ್ಕಿ (10 ಕೆಜಿ), ತನ್ನದೇ ಆದ ಪರಿಣಾಮವನ್ನು ಉಂಟುಮಾಡಿದೆ. ಅಲ್ಲದೆ, ಉಚಿತ ವಿದ್ಯುತ್ (200 ಯೂನಿಟ್‌ಗಿಂತ ಕಡಿಮೆ) ಗ್ರಾಮೀಣ ನೆಲೆಯನ್ನು ಕಾಂಗ್ರೆಸ್‌ ಪರವಾಗಿ ನಿಲ್ಲಿಸಲು ಸಹಾಯ ಮಾಡಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಈಗಾಗಲೇ ಮಾದರಿ (ಐದು ಖಾತರಿ ಯೋಜನೆಗಳು) ಇರುವುದರಿಂದ, ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಗ್ಯಾರಂಟಿಯನ್ನು ಗ್ರಾಮೀಣ ಜನತೆ ಬಹುತೇಕ ಸ್ವಾಗತಿಸಿದ್ದಾರೆ ಮತ್ತು ಇದು ಪಕ್ಷದ ಆಸೆಗೆ ತಣ್ಣೀರು ಎರಚುವ ಸಾಧ್ಯತೆ ಇದೆ ಎಂದು ಅಂದಾಜಿಸಾಗಿದೆ.

Read More
Next Story