BJP leaders should speak out about the delay in NREGA grants: Minister Lakshmi Hebbalkar
x

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

ನರೇಗಾ ಅನುದಾನ ವಿಳಂಬದ ಬಗ್ಗೆ ಬಿಜೆಪಿ ನಾಯಕರು ಮಾತನಾಡಲಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

ದುಡಿಯುವ ಕೈಗಳಿಗೆ ಹಣ ಸಿಗಲಿ ಎಂಬ ಉದ್ದೇಶದಿಂದ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ನರೇಗಾ ಯೋಜನೆ ಆರಂಭಿಸಿದರು. ಆದರೆ, ಕೇಂದ್ರ ಸರ್ಕಾರ ಅನುದಾನ ನೀಡದೆ ನರೇಗಾ ನೌಕರರಿಗೆ ಸಂಬಳ ನೀಡಲಾಗುತ್ತಿಲ್ಲ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕಾರ್‌ ತಿಳಿಸಿದರು.


ಗೃಹಲಕ್ಷ್ಮಿ ಯೋಜನೆಯ ಹಣ ಫಲಾನುಭವಿಗಳಿಗೆ ತಲುಪಲು ಒಂದು ತಿಂಗಳು ತಡವಾದರೂ ಟೀಕಿಸುವ ಬಿಜೆಪಿ ನಾಯಕರು, ದುಡಿಯುವ ಕೈಗಳಿಗೆ ಸಿಗುವ ನರೇಗಾ ಅನುದಾನ ನೀಡದ ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಲಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಆಗ್ರಹಿಸಿದ್ದಾರೆ.

ಉಡುಪಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದುಡಿಯುವ ಕೈಗಳಿಗೆ ಹಣ ಸಿಗಲಿ ಎಂಬ ಉದ್ದೇಶದಿಂದ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ನರೇಗಾ ಯೋಜನೆ ಆರಂಭಿಸಿದರು. ಆದರೆ, ಕಳೆದ ಐದು ತಿಂಗಳಿಂದ ನರೇಗಾ ಯೋಜನೆಯಲ್ಲಿ ಕೆಲಸ ಮಾಡುತ್ತಿರುವ ನೌಕರರಿಗೆ ಕೇಂದ್ರ ಸರ್ಕಾರ ಅನುದಾನ ನೀಡದೆ ಸಂಬಳ ನೀಡಲಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗೃಹಲಕ್ಷ್ಮಿ ಯೋಜನೆ ನಿರಂತರವಾಗಿ ನಡೆಯುತ್ತಿದ್ದು, ಒಂದು ತಿಂಗಳು ಹಣ ಬರುವುದು ತಡವಾದರೂ "ಲಕ್ಷ್ಮೀ ಅಕ್ಕ ಗೃಹಲಕ್ಷ್ಮಿ ದುಡ್ ಎಲ್ಲಿ ಅಕ್ಕ ಎಂದು ಬಿಜೆಪಿಯವರು ಕೇಳುತ್ತಾರೆ." ಕೇಂದ್ರದ ನಾಯಕರೊಂದಿಗೆ ಮಾತನಾಡಿ ರಾಜ್ಯ ಬಿಜೆಪಿ ನಾಯಕರು ನರೇಗಾ ಯೋಜನೆಯ ಹಣ ಬಿಡುಗಡೆ ಮಾಡಿಸಲಿ ಎಂದು ಸವಾಲು ಹಾಕಿದರು.

960 ಕೋಟಿ ರೂ. ಕೂಲಿ ಅನುದಾನ ಬಾಕಿ

ಮಹಾತ್ಮಾಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ (ನರೇಗಾ) ಕರ್ನಾಟಕಕ್ಕೆ ಕೇಂದ್ರ ಸರ್ಕಾರವು ಮಾರ್ಚ್‌ ಅಂತ್ಯಕ್ಕೆ 960 ಕೋಟಿ ರೂ. ಕೂಲಿ ಅನುದಾನ ಬಾಕಿ ಉಳಿಸಿಕೊಂಡಿದೆ. ಈ ಯೋಜನೆಯ ಶೇ 100ರಷ್ಟು ಕೂಲಿ ಮೊತ್ತವನ್ನು ಕೇಂದ್ರ ಸರ್ಕಾರವೇ ಭರಿಸುತ್ತಿದ್ದು ಮೊತ್ತವು ಫಲಾನುಭವಿಯ ಖಾತೆಗೆ ನೇರವಾಗಿ ವರ್ಗಾವಣೆಯಾಗುತ್ತದೆ. ಬಿಡುಗಡೆಯಾದ ಅನುದಾನದಲ್ಲಿ ಶೇ 75ರಷ್ಟು ವೆಚ್ಚವಾದ ಬಳಿಕ ರಾಜ್ಯ ಸರ್ಕಾರವು ಕೇಂದ್ರಕ್ಕೆ ಹಣ ಬಳಕೆ ಪ್ರಮಾಣಪತ್ರ ಸಲ್ಲಿಸುತ್ತದೆ.

960 ಕೋಟಿ ರೂ. ಹಣ ಬಳಕೆ ಪ್ರಮಾಣಪತ್ರವನ್ನು ರಾಜ್ಯ ಸರ್ಕಾರ ಸಲ್ಲಿಸಿದೆ. ಆದರೆ, ಅನುದಾನ ಬಿಡುಗಡೆಯಾಗಿಲ್ಲ. ಶೀಘ್ರ ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಇಲಾಖೆಯು ಕೇಂದ್ರಕ್ಕೆ ಇತ್ತೀಚೆಗೆ ಪತ್ರ ಬರೆದಿತ್ತು.

11.68 ಕೋಟಿ ಮಾನವ ದಿನ ಸೃಜನೆ

ನರೇಗಾ ಯೋಜನೆಯಡಿ ರಾಜ್ಯ ಸರ್ಕಾರ 2022 ಹಾಗೂ 23ರಲ್ಲಿ 12.57 ಕೋಟಿ, 2023 ಹಾಗೂ 24ರಲ್ಲಿ 13.84 ಕೋಟಿ ಹಾಗೂ 2024 ಹಾಗೂ 25ನೇ ಸಾಲಿನಲ್ಲಿ 11.68 ಕೋಟಿ ಮಾನವ ದಿನಗಳನ್ನು ಸೃಜಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಇಲಾಖೆ ಮೂಲಗಳು ತಿಳಿಸಿವೆ.

Read More
Next Story