
BWSSB | ಬೋರ್‌ವೆಲ್‌ಗಳು, ಆರ್‌ಒ ಪ್ಲಾಂಟ್‌ಗಳನ್ನು ಜಲಮಂಡಳಿಗೆ ಹಸ್ತಾಂತರಿಸಲಿದೆ ಬಿಬಿಎಂಪಿ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ತನ್ನ ಮಾಲೀಕತ್ವದಲ್ಲಿರುವ ಬೋರ್‌ವೆಲ್‌ಗಳನ್ನು ಹಾಗೂ ಕುಡಿಯುವ ನೀರಿನ ಘಟಕಗಳನ್ನು ಬಿಡಬ್ಲ್ಯೂಎಸ್ಎಸ್‌ಎಸ್‌ಬಿಗೆ ವರ್ಗಾಯಿಸಲು ಪ್ರಾರಂಭಿಸಿದೆ.
ಕಾವೇರಿ ಹಂತ 5 ನೀರು ಸರಬರಾಜು ಯೋಜನೆ ಈಗಾಗಲೇ ಕಾರ್ಯರೂಪಕ್ಕೆ ಬಂದಿದ್ದು, ಕುಡಿಯುವ ನೀರು ಸರಬರಾಜಿನ ಜವಾಬ್ದಾರಿಯನ್ನು ಏಪ್ರಿಲ್ 1, 2025 ರಿಂದ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್ಎಸ್‌ಎಸ್‌ಬಿ ) ಗೆ ಸಂಪೂರ್ಣವಾಗಿ ವರ್ಗಾಯಿಸಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ತಿಳಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿರುವ ಅವರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ತನ್ನ ನಿಯಂತ್ರಣದಲ್ಲಿರುವ ಬೋರ್‌ವೆಲ್‌ಗಳನ್ನು ಹಾಗೂ ಕುಡಿಯುವ ನೀರಿನ ಘಟಕಗಳನ್ನು ಬಿಡಬ್ಲ್ಯೂಎಸ್ಎಸ್‌ಎಸ್‌ಬಿಗೆ ವರ್ಗಾಯಿಸಲು ಪ್ರಾರಂಭಿಸಿದೆ. ನೀರು ಪೂರೈಕೆಗಾಗಿ ಕೇಂದ್ರ ಮತ್ತು ರಾಜ್ಯ ಹಣಕಾಸು ಆಯೋಗಗಳಿಂದ ಬರುವ ಹಣಕಾಸಿನ ಅನುದಾನವನ್ನು ಸಹ ಬಿಡಬ್ಲ್ಯೂಎಸ್ಎಸ್‌ಎಸ್‌ಬಿಗೆ ಮರು ನಿರ್ದೇಶಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ನೀರಿನ ಘಟಕಗಳ ಸಮೀಕ್ಷೆ
ಬಿಬಿಎಂಪಿ ಮಿತಿಯೊಳಗಿನ ಎಂಟು ವಲಯಗಳಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳ ಸಮೀಕ್ಷೆ ಮಾಡಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ. ಈ ಸಮೀಕ್ಷೆಯು ಎಷ್ಟು ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯನಿರ್ವಹಿಸುತ್ತಿವೆ, ಎಷ್ಟು ಕಾರ್ಯನಿರ್ವಹಿಸುತ್ತಿಲ್ಲ ಮತ್ತು ಪ್ರಸ್ತುತ ಸ್ಥಗಿತಗೊಂಡಿರುವ ಘಟಕಗಳ ಸ್ಥಿತಿಯ ಕುರಿತು ಸಮಗ್ರ ವರದಿಯನ್ನು ಒದಗಿಸುತ್ತದೆ. ಒಂದು ವಾರದೊಳಗೆ ಈ ವರದಿಯನ್ನು ಪೂರ್ಣಗೊಳಿಸಲು ನಾವು ಅಧಿಕಾರಿಗಳಿಗೆ ಸೂಚಿಸಿದ್ದೇವೆ ಎಂದು ಅವರು ಹೇಳಿದ್ದಾರೆ.
ಕುಡಿಯುವ ನೀರಿನ ಘಟಕಗಳ ನಿರ್ವಹಣೆಗೆ ಸಂಬಂಧಿಸಿದಂತೆ, ಪ್ರತಿ ವಲಯದಲ್ಲಿ ಈಗಾಗಲೇ ಟೆಂಡರ್‌ಗಳನ್ನು ಕರೆಯಲಾಗಿದೆ. ಶುದ್ಧ ಕುಡಿಯುವ ನೀರಿನ ಘಟಕಗಳ ಕಾರ್ಯನಿರ್ವಹಣೆಯನ್ನು ಮೇಲ್ವಿಚಾರಣೆ ಮಾಡಲು ಗುತ್ತಿಗೆದಾರರನ್ನು ನೇಮಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಕೇಂದ್ರ ಮತ್ತು ರಾಜ್ಯ ಹಣಕಾಸು ಆಯೋಗಗಳಿಂದ ನೀರು ಸರಬರಾಜಿಗೆ ನಿಗಮವು ಪಡೆದ ಅನುದಾನಗಳು ಸೇರಿದಂತೆ ಕುಡಿಯುವನೀರಿಗೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ಜಲಮಂಡಳಿ ನೋಡಿಕೊಳ್ಳುತ್ತದೆ. ಈ ಹಣವನ್ನು ಜಲಮಂಡಳಿಗೆ ವರ್ಗಾಯಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಅನಗತ್ಯವಾಗಿ ನೀರು ಪೋಲು ಮಾಡಿದರೆ 5000 ರೂಪಾಯಿ ದಂಡ
ತಾಪಮಾನ ಏರಿಕೆ ಮತ್ತು ಅಂತರ್ಜಲ ಮಟ್ಟ ಕಡಿಮೆಯಾಗುತ್ತಿರುವುದರಿಂದ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್ಎಸ್ಬಿ) ಕುಡಿಯುವ ನೀರಿನ ಬಳಕೆಯನ್ನು ಅನಗತ್ಯ ಚಟುವಟಿಕೆಗಳಿಗೆ ನಿರ್ಭಂಧಿಸಿದ್ದು, ಈ ಆದೇಶವನ್ನು ಉಲ್ಲಂಘಿಸಿದವರಿಗೆ 5,000 ರೂ. ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.
ಈ ಬಗ್ಗೆ ಪ್ರಕಟಣೆಯನ್ನು ಹೊರಡಿಸಿರುವ ಬಿಡಬ್ಲ್ಯೂಎಸ್ಎಸ್‌ಎಸ್‌ಬಿ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಕಾಯ್ದೆ 1964 ರ ಸೆಕ್ಷನ್ 33 ಮತ್ತು 34 ರ ಅಡಿಯಲ್ಲಿ, ಬೆಂಗಳೂರು ನಗರದಲ್ಲಿ ವಾಹನಗಳನ್ನು ಸ್ವಚ್ಛಗೊಳಿಸಲು, ತೋಟಗಾರಿಕೆ, ಕಟ್ಟಡಗಳು ಮತ್ತು ರಸ್ತೆಗಳ ನಿರ್ಮಾಣ, ಮನರಂಜನಾ ಉದ್ದೇಶಗಳಿಗಾಗಿ ಅಥವಾ ಕಾರಂಜಿಗಳಂತಹ ಅಲಂಕಾರಕ್ಕಾಗಿ ಕುಡಿಯುವ ನೀರನ್ನು ಬಳಸುವುದನ್ನು ಬಿಡಬ್ಲ್ಯುಎಸ್ಎಸ್ ನಿಷೇಧಿಸಿದೆ. ಮಾಲ್‌ಗಳು ಮತ್ತು ಸಿನಿಮಾ ಮಂದಿರಗಳಲ್ಲಿ ನೀರನ್ನು ಕುಡಿಯಲು ಮಾತ್ರ ಬಳಸಲು ಅನುಮತಿಸಲಾಗಿದೆ.
ನಿಷೇಧಿತ ಆದೇಶವನ್ನು ಉಲ್ಲಂಘಿಸಿದರೆ, ಮೊದಲ ಬಾರಿಗೆ ಅಪರಾಧಕ್ಕೆ 5,000 ರೂ. ದಂಡ ಅನ್ವಯಿಸುತ್ತದೆ ಮತ್ತು ಈ ಉಲ್ಲಂಘನೆ ಪುನರಾವರ್ತನೆಯಾದಲ್ಲಿ ದಿನಕ್ಕೆ 500 ರೂ. ಹೆಚ್ಚುವರಿ ದಂಡದೊಂದಿಗೆ 5,000 ರೂ. ದಂಡ ವಿಧಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಸ್ತುತ ನಗರದಲ್ಲಿ ತಾಪಮಾನ ಪ್ರತಿದಿನ ಏರುತ್ತಿದೆ ಮತ್ತು ಇತ್ತೀಚಿನ ದಿನಗಳಲ್ಲಿ ಮಳೆಯ ಕೊರತೆಯಿಂದಾಗಿ ಅಂತರ್ಜಲ ಮಟ್ಟ ಕಡಿಮೆಯಾಗಿದೆ ಎಂದು BWSSB ಹೇಳಿದೆ. ಆದ್ದರಿಂದ, ಬೆಂಗಳೂರು ನಗರದಲ್ಲಿ ನೀರಿನ ವ್ಯರ್ಥವನ್ನು ತಡೆಯುವುದು ಅವಶ್ಯಕ. ಸಾರ್ವಜನಿಕರು ಕುಡಿಯುವ ನೀರನ್ನು ಮಿತವಾಗಿ ಬಳಸುವುದು ಅಗತ್ಯವಾಗಿದೆ . ಸಾರ್ವಜನಿಕರು ನೀರನ್ನು ವಿವೇಚನೆಯಿಂದ ಬಳಸುವಂತೆ ಮತ್ತು ನಿಷೇಧಿತ ಆದೇಶವನ್ನು ಉಲ್ಲಂಘಿಸುವವರು ಕಂಡುಬಂದರೆ ತಕ್ಷಣ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಾಲ್ ಸೆಂಟರ್ 1916 ಗೆ ತಿಳಿಸುವಂತೆ ಕೋರಲಾಗಿದೆ.